ಕಟ್ಟಡ ನಕ್ಷೆ ಅನುಮೋದನೆ ಪಡೆಯದೇ ಯಾರೂ ಮನೆ ಕಟ್ಟಬೇಡಿ: ಡಿ ಕೆ ಶಿವಕುಮಾರ್

12 months ago

ಕಟ್ಟಡ ನಕ್ಷೆ ಅನುಮೋದನೆ ಪಡೆಯದೇ ಯಾರೂ ಮನೆ ಕಟ್ಟಬೇಡಿ: ಡಿ ಕೆ ಶಿವಕುಮಾರ್

ಸುಪ್ರೀಂ ಕೋರ್ಟ್ ನಿರ್ದೇಶನದ ಹಿನ್ನೆಲೆಯಲ್ಲಿ ಸಾರ್ವಜನಿಕರು ಮತ್ತೆ ಇಂತಹ ಸಾಹಸಕ್ಕೆ ಕೈ ಹಾಕಬೇಡಿ

ವಿಚಾರದಲ್ಲಿ ಅಕ್ರಮವಾಗಿ ಮನೆ ಕಟ್ಟಿದರೆ ಸಕ್ರಮ ಮಾಡುವುದು ಕಷ್ಟ

ನೀರು ಹಾಗೂ ವಿದ್ಯುತ್ ಸಂಪರ್ಕ ಸಿಗುವುದಿಲ್ಲ

ಬೆಂಗಳೂರು: ರಾಜ್ಯದಲ್ಲಿ ಇನ್ನು ಮುಂದೆ ಕಟ್ಟಡ ನಕ್ಷೆಗೆ ಅನುಮತಿ ಇಲ್ಲದೆ ಯಾರೂ ಕೂಡ ಕಟ್ಟಡ ನಿರ್ಮಾಣ ಮಾಡುವಂತಿಲ್ಲ. ಈ ಬಗ್ಗೆ ಸುಪ್ರೀಂ ಕೋರ್ಟ್ ಆದೇಶ ಸ್ಪಷ್ಟವಾಗಿ ತಿಳಿಸಿದೆ ಎಂದು ಡಿಸಿಎಂ ಡಿ ಕೆ ಶಿವಕುಮಾರ್ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಟ್ಟಡ ನಿರ್ಮಾಣದ ನಕ್ಷೆ ಅನುಮತಿ, ಸ್ವಾಧೀನ ಪ್ರಮಾಣ ಪತ್ರವಿಲ್ಲದೆ ನೀರು ಹಾಗೂ ವಿದ್ಯುತ್ ಸಂಪರ್ಕ ನೀಡುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ಇತ್ತೀಚೆಗೆ ತೀರ್ಪು ನೀಡಿದೆ. ಹೀಗಾಗಿ ಜನರು ಈ ಅನುಮತಿಗಳು ಇಲ್ಲದೆ ಮನೆ ಕಟ್ಟಬೇಡಿ ಎಂದು ರಾಜ್ಯದ ಜನರಲ್ಲಿ ಮನವಿ ಮಾಡಿದರು.

ಇಡೀ ದೇಶಕ್ಕೆ ಈ ತೀರ್ಪು ಆನ್ವಯವಾಗಲಿದೆ. ಇದರಿಂದ ಸಾರ್ವಜನಿಕರಿಗೆ ಸಾಕಷ್ಟು ಸಮಸ್ಯೆ ಎದುರಾಗಲಿದೆ. ಇದುವರೆಗೂ 2.50 ಲಕ್ಷ ಜನ ಹಳ್ಳಿಗಳು ಹಾಗೂ ನಗರ ಪ್ರದೇಶಗಳಲ್ಲಿ ಕಟ್ಟಡ ನಕ್ಷೆ ಅನುಮತಿ ಪಡೆಯದೇ ಮನೆ ಕಟ್ಟಿಕೊಂಡು, ವಿದ್ಯುತ್ ಹಾಗೂ ನೀರಿನ ಸಂಪರ್ಕಕ್ಕೆ ಅರ್ಜಿ ಹಾಕಿದ್ದಾರೆ. ಈ ವಿಚಾರವಾಗಿ ಕಾನೂನು ಸಲಹೆಗಾರರ ಜತೆ ಈ ವಿಚಾರವಾಗಿ ಚರ್ಚಿಸಿ, ಸಾರ್ವಜನಿಕರಿಗೆ ಹೇಗೆ ನೆರವಾಗಬಹುದು ಎಂದು ಅಭಿಪ್ರಾಯ ಕೇಳಿದ್ದೇನೆ ಎಂದರು.

ವಿದ್ಯುತ್ ಸಂಪರ್ಕಕ್ಕಾಗಿ ಕೆಲವು ಸಾರ್ವಜನಿಕರು ಎಸ್ಕಾಂಗಳಿಗೆ ಠೇವಣಿ ಪಾವತಿ ಮಾಡಿದ್ದಾರೆ. ಈ ವಿಚಾರವಾಗಿ ಯಾವ ರೀತಿ ಕ್ರಮ ಕೈಗೊಳ್ಳಬಹುದು ಎಂದು ಅಧಿಕಾರಿಗಳ ಜತೆಗೂ ಚರ್ಚೆ ಮಾಡುತ್ತಿದ್ದೇವೆ. ಕಾನೂನು ತಜ್ಞರು ಈ ಸಮಸ್ಯೆ ಯಾವ ರೀತಿ ಬಗೆಹರಿಸಬಹುದು ಎಂಬ ಬಗ್ಗೆ ವರದಿ ನೀಡಲಿದ್ದಾರೆ ಎಂದರು.

ಬೇರೆ ರಾಜ್ಯಗಳಲ್ಲಿ ಇದನ್ನು ಯಾವ ರೀತಿ ಬಗೆಹರಿಸಲಿದ್ದಾರೆ ಎಂದು ಮಾಹಿತಿ ಕಲೆಹಾಕುತ್ತೇವೆ. ಈ ಮಧ್ಯೆ ಕಟ್ಟಡ ನಕ್ಷೆ ಅನುಮೋದನೆ ಪಡೆಯದೇ ಯಾರೂ ಮನೆ ಕಟ್ಟಬೇಡಿ. ಸುಪ್ರೀಂ ಕೋರ್ಟ್ ನಿರ್ದೇಶನದ ಹಿನ್ನೆಲೆಯಲ್ಲಿ ಸಾರ್ವಜನಿಕರು ಮತ್ತೆ ಇಂತಹ ಸಾಹಸಕ್ಕೆ ಕೈ ಹಾಕಬೇಡಿ. ಈ ವಿಚಾರದಲ್ಲಿ ಅಕ್ರಮವಾಗಿ ಮನೆ ಕಟ್ಟಿದರೆ ಸಕ್ರಮ ಮಾಡುವುದು ಕಷ್ಟ. ನೀರು ಹಾಗೂ ವಿದ್ಯುತ್ ಸಂಪರ್ಕ ಸಿಗುವುದಿಲ್ಲ ಎಂದರು.

Leave a Reply