ಹೊಸ ಬಾಳಿನ ಹೊಸಿಲಲಿ ನಿಂತಿರುವ
ಹೊಸ ಜೋಡಿಗೆ ಶುಭವಾಗಲಿ…
ಹೊಸ ಆಸೆಯ ಕಡಲಲಿ ತೇಲುತಿಹ
ಹೊಸ ಜೋಡಿಗೆ ಶುಭವಾಗಲಿ….
ನಟಿ ಪೂಜಾಗಾಂಧಿ ಸಖತ್ ಸುದ್ಧಿಯಲ್ಲಿದ್ದಾರೆ. ಪೂಜಾ ಮೂಲತಃ ಉತ್ತರಪ್ರದೇಶದವರು. ಕನ್ನಡ ಚಿತ್ರರಂಗಕ್ಕೆ ಬಂದು ಮಳೆಹುಡುಗಿ ಎಂದೇ ಹೆಸರಾದರು. ಕಾಮಿಡಿ ಟೈಮ್ ಗಣೇಶ್ ಎಂಬ ಹುಡುಗನ ಜೊತೆ ಅವರು ‘ಮುಂಗಾರುಮಳೆ’ ಎಂಬ ಚಲಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದರು. ಅದೇನು ಅದೃಷ್ಟವೋ ಈ ಇಬ್ಬರೂ ಹೊಸಬರ ಆ ಮೊದಲ ಚಿತ್ರ ಕರ್ನಾಟಕದಲ್ಲಿ ದೊಡ್ಡ ದಾಖಲೆಯನ್ನೇ ಬರೆಯಿತು. ಇಬ್ಬರಿಗೂ ಚಿತ್ರರಂಗದಲ್ಲಿ ಭದ್ರವಾಗಿ ಪಾದ ನೆಲೆ ನಿಲ್ಲಲು ಕಾರಣವಾಯಿತು.
ಆ ಮುಂಗಾರು ಮಳೆಯ ಹನಿಗಳ ಲೀಲೆ ಇಂದಿಗೂ ತಾನನಗೈಯ್ಯುತ್ತಲೇ ಇದೆ. ಆ ಸಿನಿಮಾ ಮುಂದೆ ಇಬ್ಬರಿಗೂ ಅವಕಾಶಗಳ ಮಹಾಪೂರವನ್ನೇ ಹರಿಸಿತು. ಪೂಜಾ ಅವರೂ ಮರಳಿ ತವರಿನೆಡೆಗೆ ಹೋಗಲೂ ಇಲ್ಲ. ಕರ್ನಾಟಕದಲ್ಲೇ ನಮ್ಮ ಬೆಂಗಳೂರನ್ನೆ ನೆಲೆವನೆಯಾಗಿಸಿಕೊಂಡರು. ಕನ್ನಡ ಕಲಿತರು ಕನ್ನಡತಿಯಾದರು. ಇಲ್ಲಿಗೆ ಬಂದು ಇಲ್ಲಿಯೇ ಬದುಕು ಕಟ್ಟಿಕೊಂಡೂ ಕನ್ನಡ ಕಲಿಯಲಾರದ ಎಷ್ಟೋ ಅಸಡ್ಡೆಯ ಉತ್ತರದ ದೌಲತ್ತಿನ ವ್ಯಾಪಾರಿ ಬುದ್ಧಿಯ ಜನರ ನಡುವೆ ಪೂಜಾ ಕನ್ನಡ ಕಲಿತದ್ದು ಕನ್ನಡತಿಯಾದದ್ದು ಹೊರಗಿನವರಿಗೂ ಒಳಗಿನವರಿಗೂ ಒಂದು ಒಳ್ಳೆಯ ಸಂದೇಶವೇ.
ಹೀಗೆ ಇಲ್ಲಿಗೆ ಬಂದು ಇಲ್ಲಿಯವರೇ ಆಗಿಹೋದ ಅನೇಕರ ಉದಾಹರಣೆಗಳಿವೆ ನಮ್ಮಲ್ಲಿ. ಆದರೆ ನಮ್ಮವರಿಗೆ ನಮ್ಮ ಭಾಷೆ ಬೇಡವಾಗಿದೆ. ಇದಂತಿರಲಿ ಪೂಜಾ ನಟನೆ ಮಾತ್ರವಲ್ಲ ರಾಜಕೀಯ ಕ್ಷೇತ್ರಕ್ಕೂ ಅಡಿಯಿಟ್ಟರು. ಬಿಜೆಪಿ ಇಂದ ಹೊರಬಂದು BSR ಕಾಂಗ್ರೆಸ್ ಎಂಬ ಹೊಸ ಪಕ್ಷ ಕಟ್ಟಿದ್ದ ಶ್ರೀರಾಮುಲು ಅವರ ಪಕ್ಷದ ಅಭ್ಯರ್ಥಿಯಾಗಿ ರಾಯಚೂರು ನಗರ ವಿಧಾನಸಭಾ ಕ್ಷೇತ್ರಕ್ಕೆ ಆ ಪಕ್ಷದಿಂದ ಪ್ರತಿನಿಧಿಸಿದರು.
ಕನ್ನಡದ ಜನ ಸಿನಿಮಾ ಮಂದಿಗೆ ರಾಜಕೀಯ ವಿಚಾರದಲ್ಲಿ ಒಲಿದಿದ್ದು ತುಂಬಾ ಕಡಮೆ. ನಮ್ಮವರು ತಮಿಳು ತೆಲುಗರಂತಲ್ಲ. ಅಲ್ಲಿ ಜನರ ಹಾಗೆ ಸಿನಿಮಾ ನಟರ ಬಗ್ಗೆ ಭ್ರಮೆಗಳನ್ನು ಬೆಳೆಸಿಕೊಂಡವರಲ್ಲ. ತಮ್ಮ ಮೆಚ್ಚಿನ ಹೀರೋ ಅಥವಾ ಹೀರೋಯಿನ್ ಗಳು ಕಲಾಕ್ಷೇತ್ರ ಬಿಟ್ಟು ರಾಜಕೀಯ ಪ್ರವೇಶಿಸಿದಾಗ ಅವರನ್ನು ಸೋಲಿಸಿದ್ದೇ ಹೆಚ್ಚು. ಪೂಜಾಗಾಂಧಿ ಈ ಚುನಾವಣೆಯಲ್ಲಿ ಹೀನಾಯವಾಗಿ ಸೋತರು. ಸೋಲು ಗೆಲುವು ಒಂದು ನಾಣ್ಯದ ಎರಡು ಮುಖಗಳು. ಬದುಕಿನ ಸಹಜ ಸತ್ಯಗಳು. ಅದೇನೇ ಇರಲಿ. ಪೂಜಾಗಾಂಧಿ ನನ್ನ ತುಂಬಾ ಇಷ್ಟವಾದದ್ದು ಮಿಲನ ಚಿತ್ರದಲ್ಲಿ.. ಅಪ್ಪು ಅವರ ಜೊತೆ ‘ನಿನ್ನಿಂದಲೇ ನಿನ್ನಿಂದಲೇ ಕನಸೊಂದು ಶುರುವಾಗಿದೆ’ ಹಾಡಿನಲ್ಲಿ. ಆ ಕಣ್ಣುಗಳ ನೋಟಕ್ಕೆ ಮಾರುಹೋಗಿಬಿಟ್ಟಿದ್ದೆ. ‘ಬಿಲ್ಲಿನಂತೆ ಹುಬ್ಬು ನೋಡು ಲಕ್ಕುಯ್ ಲಕ್ಕುದಯ್ ಬಾಣದಂತೆ ನೋಟ ನೋಡು ಲಕ್ಕುದಯ್ ಲಕ್ಕುದಯ್’ ಎನ್ನುವಂತೆ ಆ ಗೀತೆಯಲ್ಲಿ ಪೂಜಾ ಮಿಂಚಿದ್ದಾಳೆ.
ಪೂಜಾಗಾಂಧಿ ಸಿನಿಮಾ ಕ್ಷೇತ್ರದಲ್ಲಿ ಮುಗ್ಗರಿಸಿ ಬಿದ್ದಿದ್ದು ಎಲ್ಲಿ ಗೊತ್ತಾ? ‘ನನಗನಿಸಿದಂತೆ ಎರೋಟಿಕ್ ಹಸಿಬಿಸಿ ಚಿತ್ರ ‘ದಂಡುಪಾಳ್ಯ’ ನಟಿಸಿದ್ದರಿಂದ. ನಾಯಕ ನಟಿಯಾಗಿ ಕನ್ನಡಿಗರ ಮನಮೆಚ್ಚಿದ ಹುಡುಗಿಯಾಗಿದ್ದ ಪೂಜಾ ತನ್ನ ಹೆಸರಿನ ಮುಂದಿರುವ ಗಾಂಧಿ ಎಂಬ ಉಪನಾಮಕ್ಕೆ ತದ್ವಿರುದ್ಧವಾದ ಅತಿರೇಕದ ಹಿಂಸೆ, ಅತಿರೇಕದ ಅಸಹ್ಯ ಹುಟ್ಟಿಸುವ ಹಸಿಬಿಸಿ ಸನ್ನಿವೇಶಗಳಿಂದ ತುಂಬಿದ ‘ದಂಡುಪಾಳ್ಯ’ ಎಂಬ ಆ ನಟೋರಿಯಸ್ ಚಿತ್ರವೊಂದರಲ್ಲಿ ಕೊಲೆಪಾತಕಿಗಳ ಗುಂಪಿನ ಮಹಿಳೆ ಪುಟ್ಟಲಕ್ಷ್ಮಿಯ ಪಾತ್ರದಲ್ಲಿ ನಟಿಸಿ ಅವರ ಅಭಿಮಾನಿಗಳಿಗೆ ಆಶಾಭಂಗ ಉಂಟು ಮಾಡಿದ್ದರಿಂದ. ಅಲ್ಲಿ ಆಕೆಯ ನಟನೆಯೇನೋ ತುಂಬಾ ಅದ್ಭುತವಾಗಿದೆ. ಹೊಸ ರೀತಿಯ ಪ್ರಯೋಗ ಅಂತಲೋ ಪ್ರಯತ್ನ ಅಂತಲೋ ಭಾವಿಸಿದರೂ ಅಲ್ಲಿಯವರೆಗೆ ಒಂದು ಮುದ್ದಾದ ಗೊಂಬೆಯಂತಿದ್ದ ಹುಡುಗಿ ಹೀಗೊಂದು ರಕ್ತಸಿಕ್ತ ಅಧ್ಯಾಯದ ಕಟುಕರ ಗುಂಪಿನ ಬರ್ಬರವಾದ ಪಾತ್ರದಲ್ಲಿ ನಟಿಸಿದ್ದು ಯಾರಿಗೂ ಹಿಡಿಸಲಿಲ್ಲ.
ಅವರ ಇಮೇಜಿಗೆ ಅದು ದೊಡ್ಡ ಹೊಡೆತ ಕೊಟ್ಟಿತು. ಅಲ್ಲಿಂದಲೇ ಪೂಜಾ ಅವರ ಬೀಳ್ಗೆ ಮೊದಲಿಟ್ಟಿತ್ತೆಂದು ನನ್ನ ಅಭಿಪ್ರಾಯ. ಪೂಜಾ ದಂಡುಪಾಳ್ಯದಲ್ಲಿ ನಟಿಸಬಾರದಿತ್ತು. ಅಂತಹ ಅನಿವಾರ್ಯತೆ ಅವಳಿಗೇನಿತ್ತೊ ಗೊತ್ತಿಲ್ಲ. ಕೆಲವೊಮ್ಮೆ ಒತ್ತಡಗಳಿಗೆ ಸೋಲಬೇಕಾಗುತ್ತದೆ.
ಕನ್ನಡತಿ ಪೂಜಾ ಕನ್ನಡವನ್ನಷ್ಟೆ ಕಲಿಯಲಿಲ್ಲ. ಕನ್ನಡದ ವೈಚಾರಿಕ ಪ್ರಜ್ಞೆಯ ಕಡೆಗೆ ದೊಡ್ಡ ಹೆಜ್ಜೆ ಇಟ್ಟಿದ್ದಾರೆ. ಅವರು ಒಂದು ಮಹತ್ವದ ನಿರ್ಧಾರಕ್ಕೆ ಸಾಕ್ಷಿಯಾಗಿದ್ದಾರೆ. ಕನ್ನಡದ ಮಹಾ ಮೇರು ಕವಿ ಕುವೆಂಪು ಅವರ ಮಂತ್ರ ಮಾಂಗಲ್ಯದ ಪ್ರಕಾರ ಸರಳವಾಗಿ ತಾವು ಪ್ರೀತಿಸಿದ ಹುಡುಗನೊಂದಿಗೆ ಮದುವೆ ಆಗಿದ್ದಾರೆ. ಇದು ಮಂತ್ರಮಾಂಗಲ್ಯಕ್ಕೆ ಉಳಿದವರಿಗೂ ಪ್ರೇರಣೆಯಾಗುವ ಮಾದರಿ ನಡೆ. ಪೂಜಾ ಈಗ ಈ ಕಾರಣಕ್ಕೆ ದೊಡ್ಡ ಸುದ್ದಿ. ಅರಚು ಕೂಗುಮಾರಿ ಮಾಧ್ಯಮಗಳನ್ನು ದೂರವಿಟ್ಟು ಅವರಿಗೆ ತಾನೇ ತನ್ನ ಮದುವೆ ಚಿತ್ರಗಳನ್ನು ಒದಗಿಸಿ ಮಂತ್ರಮಾಂಗಲ್ಯದ ಮೂಲಕ ಹೊಸ ಜೀವನದ ಹೊಸ ಸಂದೇಶವನ್ನು ಇಡೀ ಕನ್ನಡಿಗರಿಗೆ ನೀಡಿದ್ದಾಳೆ.
ಮದುವೆ ಎಂದರೆ ಕೋಟಿ ಕೋಟಿ ದುಂದು ವೆಚ್ಚದ ಉಳ್ಳವರ ಪ್ರದರ್ಶನ ಮೆರವಣಿಗೆ ಆಗಿರುವಾಗ ಪ್ರಸಿದ್ಧ ನಟಿಯೊಬ್ಬಳು ಯಾವುದೋ ಉತ್ತರದ ನಾಡೊಂದರಿಂದ ಇಲ್ಲಿಗೆ ಬಂದು ಇಲ್ಲಿಯ ಪಂಚಭೂತದ ಭಾಗವಾಗುವುದಿದೆಯಲ್ಲ ಅದು ಸಣ್ಣ ಸಂಗತಿಯಲ್ಲ. ಇದಕ್ಕಾಗಿ ಪೂಜಾ ಅವರಿಗೆ ಪ್ರೀತಿಯ ಅಭಿನಂದನೆಗಳು…
- ಸುರೇಶ ಎನ್ ಶಿಕಾರಿಪುರ ಶಿಕಾರಿಪುರ, ಬಹುಮುಖಿ ಚಿಂತಕರು



