ನೋವಲ್ಲೂ ನಗುತಿರುವ ಕಲಾವಿದ ಮಂಡ್ಯ ರಮೇಶ್ ಜೊತೆಗೊಂದು ತಾಸು

2 years ago

#artist #MandyaRamesh #smiles #pain #ShashikantYadalli

ಇಂಡಿಯಾ ತುಂಬಾ ಫೇಮಸ್ ಆಗಿರುವ ಮಂಡ್ಯಾ ರಮೇಶ್ ಮೈಕೈ ಎಲ್ಲಾ ಬ್ಯಾಂಡೇಜ್ ಹಾಕಿಕೊಂಡು ಅಲ್ಲಾಡದೇ ಅಂಗಾತ ಬಿದ್ದ ಬಂಡೇ ಕಲ್ಲಂತೆ ಮಲಗಿದ್ದನ್ನು ಕಂಡಾಗ ಕರುಳಲ್ಲಿ ಕೆಂಡ ಕದಲಿದಂತಾ ಅನುಭವ.

ಪಾದರಸದಂತಾ ಚಟುವಟಿಕೆಯ ಕಲಾವಿದನಿಗೆ ಕದಲದೇ ಮಲಗುವ ಶಿಕ್ಷೆ ಸ್ವಯಂಕೃತ ಅಪರಾಧಕ್ಕೋ ಇಲ್ಲಾ ಸೀರಿಯಲ್ ನವರ ಬೇಜವಾಬ್ದಾರಿಯ ಒತ್ತಡಕ್ಕೋ ಗೊತ್ತಿಲ್ಲ.

ಕ್ಯಾಮರಾ ಆಕ್ಷನ್ ಅಂತಾ ಸೀರಿಯಲ್ ನಿರ್ದೇಶಕ ಹೇಳಿದ್ದೇ ತಡ ಪಾತ್ರದೊಳಗೆ ಪ್ರವೇಶಿಸಿ ಕಣ್ಣ ಮುಂದಿನ ಅಪಾಯವನ್ನು ನಿರ್ಲಕ್ಷಿಸಿ ಅಭಿನಯದಲ್ಲಿ ತಲ್ಲೀನರಾದ ರಮೇಶರವರಿಗೆ  ಕ್ವಾರಿಯಂತಹ ಕಣಿವೆಗೆ ಬಿದ್ದಿದ್ದಷ್ಟೇ ಗೊತ್ತು ಎಚ್ಚರಾದಾಗ ಇದ್ದಿದ್ದು ಆಸ್ಪತ್ರೆಯಲ್ಲಿ.

ಮುಳ್ಳು ಗಾಜು ತರಚಿ ಹೊಟ್ಟೆಯ ಚರ್ಮ ಹರಿದಿತ್ತು, ತಲೆಗೆ ಹೊಲಿಗೆ ಹಾಕಲಾಗಿತ್ತು, ಬಲಗೈಗೆ ಮೆಶ್ ಹಾಕಿ  ಬ್ಯಾಂಡೇಜ್ ಸುತ್ತಲಾಗಿತ್ತು, ಎಡಗಾಲಿನ ಮೊನಕಾಲ ಕೆಳಗಿನ ಮೂಳೆ ಮುರಿದು ಇಬ್ಬಾಗವಾಗಿ ಹೊರಗೆ ಬಂದಿದ್ದನ್ನು ಮತ್ತೆ ಒಳಗೆ ಒತ್ತಿ ಮರುಜೋಡಿಸಿ ನಟ್ಟು ಬೋಲ್ಟು ಹಾಕಿ ಮೇಲೆ ಬ್ಯಾಂಡೇಜ್ ಬಿಗಿದು ಕಟ್ಟಲಾಗಿತ್ತು. ಬಲಗಾಲಿಗೂ ಅಂತದೇ ಸ್ಥಿತಿ. ಬೇರೆ ಯಾರಾದರೂ ಆಗಿದ್ದರೆ ಎಚ್ಚರ ಬಂದಾಗ ನೋಡಿಕೊಂಡಿದ್ದರೆ ಎದೆಯೊಡೆದುಕೊಳ್ಳುವುದಂತೂ ಗ್ಯಾರಂಟಿ. ಆದರೆ ರಮೇಶ್ ಮಂಡ್ಯದ ಗಂಡು. ಬಲು ಬಂಡ ಧೈರ್ಯದ ತುಂಡು. ಆರಂಭದಲ್ಲಿ ಎದೆಗುಂದಿದರೂ ಪರಿಸ್ಥಿತಿಯನ್ನು ಎದುರಿಸಲು ಮಾನಸಿಕವಾಗಿ ಸಿದ್ದಗೊಂಡರು. ಈಡೀ ದೇಹ ಗಾಯಗೊಂಡರೇನಾಯ್ತು ಮುಖಕ್ಕೆ ಏನೂ ಆಗಿಲ್ಲವಲ್ಲ ಎನ್ನುವ  ಸಮಾಧಾನ. ಎಲ್ಲದಕ್ಕೂ ಅನ್ಯರನ್ನೇ ಅವಲಂಬಿಸಬೇಕಲ್ಲಾ ಎನ್ನುವ ಅತೀವ ಅಸಮಾಧಾನ.

ಇಷ್ಟೆಲ್ಲಾ ಆದರೂ ಯಾರಿಗೂ ಏನೂ ತಿಳಿಸದೇ ಗುಟ್ಟಾಗಿಯೇ ಇಟ್ಟದ್ದನ್ನು ನಾನು ಫೇಸ್ಬುಕ್ನಲ್ಲಿ ರಟ್ಟು ಮಾಡಿದ್ದೇ ತಡ ಆತಂಕದ ಕರೆಗಳ ಸುರಿಮಳೆ. ನಾನು ಸುಮ್ಮನೇ ಇದ್ದಿದ್ದರೆ ರಮೇಶ್ ರವರ ಕುಟುಂಬ ಪರಿವಾರ ಹೇಗೋ ಪೋನ್ ಮೆಸೇಜ್ ಗಳ ರಗಳೆ ಇಲ್ಲದೇ ಒಂದಿಷ್ಟು ನೆಮ್ಮದಿಯಾಗಿ ಇರಬಹುದಾಗಿತ್ತು. ವಿಷಯ ಗೊತ್ತಿದ್ದೂ ಸುಮ್ಮನಿರದೇ ಮಂಡ್ಯ ರಮೇಶ್ ಬೇಗ ಗುಣಮುಖರಾಗಲಿ ಎಂದು ವಾಟ್ಸಾಪ್ ಮೂಲಕ ಸಾರ್ವಜನಿಕವಾಗಿ ಹಾರೈಸಿದ್ದೇ ತಪ್ಪಾಯ್ತೇನೋ. ಗಾಯದ ಮೇಲೆ ಉಪ್ಪು ಸವರಿದಂತಾಯ್ತು. ಎಲ್ಲರೂ ಆತಂಕದಿಂದ ವಿಚಾರಿಸುವವರೇ. ಏನಾಯಿತು? ಯಾಕಾಯಿತು? ಎಲ್ಲಿ ಆಯ್ತು? ಎಲ್ಲೆಲ್ಲಿ ಏನೇನು ಡ್ಯಾಮೇಜ್ ಆಯ್ತು ಅಂತಾ ಕರೆ ಮಾಡಿ ಕೇಳುವವರೇ. ಹೇಳಿದ ಉತ್ತರ ಹೇಳಿ ಸಾಕಾದ ಪತ್ನಿ ಸರೋಜಾರವರು ಹಾಗೂ ಮಗಳು ದಿಶಾ ಕರೆ ಎತ್ತಲಾಗದೇ ನಿರುತ್ತರರಾದರು.

ನಾಲ್ಕು ದಿನಗಳ ಅಸಾಧ್ಯ ನೋವನುಂಡು ಸಹಿಸಿಕೊಂಡ ನಂತರ ಬೆಂಗಳೂರಿನ  ಆಸ್ಪತ್ರೆಯಿಂದ ಮೈಸೂರಿನ ಮನೆಗೆ ರಮೇಶರವರನ್ನು ಸ್ಥಳಾಂತರಿಸಲಾಯ್ತು. ಅದರ ಮಾರನೆಯ ದಿನ ಡಿಸೆಂಬರ್ 1 ರಂದು ನಾನು ಮತ್ತು ಪತ್ರಕರ್ತ ಮಿತ್ರ ಗಣೇಶ್ ಅಮಿನಗಡ ಇಬ್ಬರೂ ರಮೇಶರವರ ಮನೆಗೆ ಹೋಗಿದ್ದು.  ಗಾಯಗೊಂಡು ಗಾದಿಯ ಮೇಲೆ ಅರೆಬೆತ್ತಲಾಗಿ ಅಂಗಾತ ಮಲಗಿದ್ದ ರಮೇಶರವರನ್ನು ನೋಡಿ ಸಂಕಟವಾಗಿದ್ದಂತೂ ನಿಜ. ಸದಾ ಚಟುವಟಿಕೆಯಿಂದ ಚುರುಕಾಗಿದ್ದ ರಂಗಜೀವ ಅದು, ಎಂದೂ ಹೀಗೆ ಮಲಗಿದ್ದೇ ಇಲ್ಲಾ. ಆಸ್ಪತ್ರೆಯಲ್ಲಿ ದಾಖಲಾಗಿದ್ದೇ ನೆನಪಿಲ್ಲ. ಈಗ ಹೀಗೆ ಮಲಗದೇ ಬೇರೆ ದಾರಿ ಇಲ್ಲ. ದೇಹದ ನೋವಿಗೆ ಮನಸ್ಸು ಕಲ್ಲಾಗಿದೆ. ಘಾಸಿಗೊಂಡ ಮನಸಿಗೆ ದೇಹ ಸ್ಪಂದಿಸದಾಗಿದೆ. ಆದರೂ ಅಚ್ಚರಿಯ ಸಂಗತಿ ಎಂದರೆ  ಮುಖದಲ್ಲಿ ನಗು ಹಾಗೆಯೇ ಇದೆ. ಇಂತಹ ಪರಿಸ್ಥಿತಿಯಲ್ಲೂ ರಮೇಶರವರ ಹಾಸ್ಯಪ್ರಜ್ಞೆ ಜಾಗೃತವಾಗಿದೆ.

ಆಸ್ಪತ್ರೆಯ ಹಾಸ್ಯ ಪ್ರಸಂಗಗಳನ್ನು ರಮೇಶರವರು ಇಂತಹ ವಿಷಾದಮಯ ಸಂದರ್ಭದಲ್ಲೂ ವಿನೋದಮಯವಾಗಿ ಹೇಳುವುದನ್ನು ಕೇಳುತ್ತಾ ಕುಳಿತೆ. ಆಸ್ಪತ್ರೆಯಲ್ಲಿ ಸರ್ಜರಿ ಭರ್ಜರಿಯಾಗಿಯೇ ಮುಗೀತಂತೆ. ವೈದ್ಯರಿಗೆ ತಮ್ಮ ಪೇಶಂಟಾಗಿ ಬಂದವರು ದೊಡ್ಡ ಕಲಾವಿದ ಎಂದು ಗೊತ್ತಾಗಿದ್ದೇ ತಡ ಅವರ ಸಂಭ್ರಮ ಹೆಚ್ಚಾಯ್ತಂತೆ. “ನೀವು ನಮ್ಮ ಆಸ್ಪತ್ರೆಗೆ ಬಂದು ಎಡ್ಮಿಟ್ ಆಗಿದ್ದು ನಮ್ಮ ಸೌಭಾಗ್ಯ” ಎಂದು ವೈದ್ಯರು ಆನಂದದಿಂದ ರಮೇಶರವರ ಮುಂದೆಯೇ ಹೇಳಿಕೊಂಡರಂತೆ. ಇದಕ್ಕೆ ಹೇಳೋದು ವೈದ್ಯರಿಗೆ ಚೆಲ್ಲಾಟ ರೋಗಿಗೆ ಪ್ರಾಣ ಸಂಕಟ ಎಂದು. ಅಲ್ಲಾ ಮೈಯೆಲ್ಲಾ ಗಾಯ ಮಾಡಿಕೊಂಡು ಬ್ಯಾಂಡೇಜ್ ನೊಳಗೆ ಬಂಧಿಯಾಗಿ ನೋವಿನಲ್ಲಿ ನರಳಾಡುತ್ತಿದ್ದ ರಮೇಶರವರ ಮುಂದೇನೇ “ನೀವು ಎಡ್ಮಿಟ್ ಆಗಿದ್ದು ನಮ್ಮ ಸೌಭಾಗ್ಯ” ಎಂದು ಹೇಳಿದರೆ ಹೇಗಾಗಬೇಡ. ಯಾವುದೇ ರೋಗಿ ಆಸ್ಪತ್ರೆಗೆ ಬಂದರೂ ಅದು ವೈದ್ಯರಿಗೆ ಸೌಭಾಗ್ಯವಾದರೆ ರೋಗಿ ಹಾಗೂ ಅವರ ಕುಟುಂಬಕ್ಕೆ ದೌರ್ಭಾಗ್ಯ ಎಂದು ಎಲ್ಲರಿಗೂ ಗೊತ್ತಿರುವ ಸಂಗತಿಯೇ. ಆದರೆ ಸೆಲಿಬ್ರಿಟಿಯೊಬ್ಬರು ತಮ್ಮ ಆಸ್ಪತ್ರೆಗೆ ಬಂದಿದ್ದಕ್ಕೆ ಈ ವೈದ್ಯರ ಸೌಭಾಗ್ಯ ಸೌ ಪಾಲು ಹೆಚ್ಚಾಗಿರಬೇಕು. ಈ ಸೌಭಾಗ್ಯದ ಘಟನೆಯನ್ನು ಹೇಳುತ್ತಾ ನೋವಿನಲ್ಲೂ ನಕ್ಕ ರಮೇಶರವರ ಹಾಸ್ಯಪ್ರಜ್ಞೆ ನಿಜಕ್ಕೂ ವಿಸ್ಮಯಕಾರಿ.

ತಮಗೆ ಬಯಸದೇ ಬಂದ ಸೌಭಾಗ್ಯವನ್ನು ಅನುಭವಿಸುತ್ತಾ ಸಂತಸಗೊಂಡ ವೈದ್ಯರು ಮಾರನೆಯ ದಿನ ಮೆತ್ತಗೇ ಹತ್ತಿರ ಬಂದು “ನೀವೀಗ ಬಂದು ಹತ್ತು ನಿಮಿಷ ಭಾಷಣ ಮಾಡಬೇಕು ರಮೇಶರವರೇ” ಎಂದಾಗ ದಂಗಾದ ರಮೇಶರವರಿಗೆ ಮಾತೇ ಬರದಂತಾಯ್ತಂತೆ. ನಿನ್ನೆ ತಾನೇ ಇದೇ ವೈದ್ಯ ಮಹೋದಯರು “ಇನ್ನು ಆರು ವಾರಗಳ ಕಾಲ ನೀವು ಹಾಸಿಗೆಯಿಂದ ಅಲ್ಲಾಡುವಂತಿಲ್ಲ ಎಂದು ಹೇಳಿದ್ದವರು  ಇವತ್ತು ಎದ್ದು ಬಂದು ಭಾಷಣ ಮಾಡಬೇಕು ಎಂದು ಆಗ್ರಹಿಸುತ್ತಿದ್ದಾರಲ್ಲಾ, ಇದೇನು ಗ್ರಹಚಾರವಪ್ಪಾ” ಎಂದು ಪಿಳಿಪಿಳಿ ಕಣ್ಣು ಬಿಟ್ಟು ಆತಂಕದಿಂದ ವೈದ್ಯರನ್ನೇ ರಮೇಶರವರು ದುರುಗುಟ್ಟಿದಾಗ ” ಅದೇ ರಮೇಶರವರೆ ನಮ್ಮ ಆಸ್ಪತ್ರೆಯಲ್ಲಿ ಇವತ್ತು ಕನ್ನಡ ರಾಜ್ಯೋತ್ಸವ ಇದೆ. ನೀವೇ ಮುಖ್ಯ ಅತಿಥಿಗಳು. ನಿಮ್ಮದೇ ಮುಖ್ಯ ಭಾಷಣ. ಸಾವಕಾಶವಾಗಿ ಎದ್ದು ಬಂದು ನಾಲ್ಕಾರು ಮಾತುಗಳನ್ನಾಡಿ ಮತ್ತೆ ಬಂದು ಹೀಗೆಯೇ ಅಂಗಾತ ಆಕಾಶ ನೋಡುತ್ತಾ ಮಲಗುವಿರಂತೆ” ಎಂದೆಲ್ಲಾ ಆಗ್ರಹಿಸಿದ ವೈದ್ಯರು ನೋವುಂಡು ಮಲಗಿದ ಸೆಲೆಬ್ರಿಟಿಯನ್ನು ತಮ್ಮ ಸೆಲಿಬ್ರೇಶನ್ನಿಗೆ ಬಳಸಿಕೊಳ್ಳಲು ಸ್ಕೆಚ್ ಹಾಕಿದ್ದರು. ಹೇಗೋ ನೋವುನಿವಾರಕ ಡೋಜ್ ಕೊಟ್ಟು, ಅನಾಮತ್ತಾಗಿ ಎತ್ತಿಕೊಂಡು ಹೋಗಿ ವೇದಿಕೆಯಲ್ಲಿ ಮೈಕ್ ಮುಂದೆ ರಮೇಶರವರನ್ನು ನಿಲ್ಲಿಸಿದಾಗ ನರಕ  ಮಾರು ದೂರವಿದ್ದಂತೆ ಭಾಸವಾಯ್ತಂತೆ. ಆದರೂ ಕಲಾವಿದರಿಗೆ ಮಾತಿನ ಉನ್ಮಾದ ಮೈಕ್ ಮುಂದೆ ನಿಂತಾಗ ಹೆಚ್ಚಾಗುವುದು ಗ್ಯಾರಂಟಿ. ಆ ಅಸಾಧ್ಯ ನೋವಿನಲ್ಲೂ ಕಲೆ ರಂಗಭೂಮಿ ಬಗ್ಗೆ ಮಾತಾಡಿದ ರಮೇಶರವರ ಧೈರ್ಯವನ್ನು ಮೆಚ್ಚಲೇಬೇಕು. ವೈದ್ಯರ ಸಮಯಸಾಧಕತನದ ಸಂಭ್ರಮದ ಸೌಭಾಗ್ಯದ ಫಲವನ್ನು ಮತ್ತೆ ಬೆಡ್ ಮೇಲೆ ಅಂಗಾತ ಮಲಗಿದ ರಮೇಶರವರು ವರ್ಣಿಸುವ ಪರಿ ಕೇಳಿ ಆನಂದಿಸಬೇಕೋ ಆತಂಕಪಡಬೇಕೋ ಗೊತ್ತಾಗಲಿಲ್ಲ.

ಯಾರೋ ಒಬ್ಬ ಮಹಾತ್ಮರು ರಮೇಶರವರ ಈ ನೋವುನಿವಾರಕ ಭಾಷಣವನ್ನು ಮೊಬೈಲಲ್ಲಿ ಸೆರೆಹಿಡಿದು ಯುಟ್ಯೂಬಿಗೆ ಅಪ್ಲೋಡ್ ಮಾಡಿ ಬಿಟ್ಟಿದ್ದರು. ಅದರ ಸೈಡ್ ಎಫೆಕ್ಟ್ ನನ್ನ ಮೇಲಾಯ್ತು. ಕೆಲವರು ಪೋನ್ ಮಾಡಿ “ನೀವು ನೋಡಿದ್ರೆ ಮಂಡ್ಯ ರಮೇಶರವರಿಗೆ ಸರ್ಜರಿ ಆಗಿದೆ ಅಂತೆಲ್ಲಾ ಬರೆದಿದ್ದೀರಿ, ಆದರೆ ಅಲ್ಲಿ ಆಸ್ಪತ್ರೆಯಲ್ಲಿ ರಮೇಶರವರು ಚೆಂದವಾಗಿ ಭಾಷಣ ಮಾಡ್ತಾ ಇದ್ದಾರೆ. ಸುಳ್ಳು ಬರೆದು ನಮ್ಮನ್ನ ಮಂಗ ಮಾಡ್ತೀರಾ?” ಅಂತಾ ನನಗೆ ತರಾಟೆಗೆ ತಗೆದುಕೊಂಡರು. ಇದನ್ನು ರಮೇಶರವರಿಗೆ ಹೇಳಿದಾಗ “ಅಯ್ಯೋ ಅಡಿಯಿಂದ ಮುಡಿಯವರೆಗೂ ನೋವು ಕಿತ್ತು ಬರುತ್ತಿತ್ತು ಗೆಳೆಯಾ, ಆದರೆ ಅಷ್ಟು ಜನರು ಸೇರಿರುವಾಗ ಅಳೋದು ಹೇಗೆ ಅದಕ್ಕೆ ನೋವು ತಡೆದುಕೊಂಡು ಹೇಗೋ ಮಾತಾಡಿದೆ ಏನ್ಮಾಡ್ಲಿ” ಅಂತಾ ಮತ್ತೆ ನಕ್ಕರು.

ಈ ಸಲದ ಈ ಪಾಟಿ ಅಸಾಧ್ಯ ನೋವಿನ ಅವಗಡ ರಮೇಶರವರಿಗೆ ಅಭಿನಯದ ಪಾಠ ಕಲಿಸಿದ್ದೊಂದು ಸ್ವಾರಸ್ಯಕರ ಸಂಗತಿ. ಇಷ್ಟು ದಿನಗಳ ಕಾಲ ಎಲ್ಲಾ ರೀತಿಯ ನವರಸಭಾವಗಳನ್ನು ತಮ್ಮ ನಟನಾ ಶಾಲೆಯ ವಿದ್ಯಾರ್ಥಿಗಳಿಗೆ ಕಲಿಸಿಕೊಡುತ್ತಾ ಬಂದಿರುವ ರಮೇಶರವರಿಗೆ ಹೊಸಬಗೆಯ ಅಭಿನಯ ಪಾಠ ಹೇಳಿಕೊಡುವ ಐಡಿಯಾ ಆಸ್ಪತ್ರೆಯ ಬೆಡ್ ಮೇಲೆ ಹೊಳೆಯಿತಂತೆ. ಅದೇನೆಂದರೆ “ಎಕ್ಸಪೀರಿಯನ್ಸ್ ವುಯ್ತ ಪೇನ್”. ಅಂದರೆ ನೋವಿನ ವಿವಿಧ ಆಯಾಮಗಳನ್ನು ಅಭಿನಯದ ಪಾಠವಾಗಿ ಹೇಳಿಕೊಡಲು ತಮ್ಮ ಈ ನೋವಾನುಭವ ಪ್ರಯೋಜನಕ್ಕೆ ಬರುತ್ತದೆ ಎಂದು ರಮೇಶರವರು ಬಾಧೆಯ ನಡುವೆಯೂ ಹೇಳಿದಾಗ ನಗದೇ ಇರಲಾಗಲಿಲ್ಲ. ಕಲೆಯನ್ನು ಬದುಕಾಗಿಸಿಕೊಂಡವರಿಗೆ ಮಾತ್ರ ತನ್ನ ನೋವು ಹತಾಶೆ ದುಃಖಗಳನ್ನು ಅನುಭವಿಸಿ ಪಾಠವಾಗಿ ಹೇಳಿಕೊಡಲು ಸಾಧ್ಯ. ನೋವೆಂಬ ನರಕದ ನಡುವೆಯೂ ಹೊಸ ಬಗೆಯ ಪಾಠದ ಅವಿಷ್ಕಾರದ ಬಗ್ಗೆ ಯೋಚಿಸಲು ಸಾಧ್ಯ. ಈ ನಿಟ್ಟಿನಲ್ಲಿ ಮಂಡ್ಯ ರಮೇಶ್ ಅಪ್ಪಟ ಕಲಾವಿದ.

ಗಾಯಾಳನ್ನು ಕಾಳಜಿಯಿಂದ ನೋಡಿಕೊಳ್ಳುವ ಜೊತೆಗೆ ಆತಂಕದಿಂದ ನೋಡಿ ಮಾತಾಡಿಸಿ ಸಂತೈಸಿ ಹೋಗುವವರಿಗೆ ಆತಿಥ್ಯ ಕೊಡಬೇಕಾದ ಹೆಚ್ಚುವರಿ ಕೆಲಸ ಕೇರ್ ಟೇಕರ್ ಆದ ಹೆಂಡತಿ ಸರೋಜಾರವರದ್ದು. ಐದು ನಿಮಿಷಕ್ಕೊಮ್ಮೆ ಬರುವ ಕಾಲ್ ಟೇಕಿಂಗ್ ಕೆಲಸ ಮಗಳು ದಿಶಾಳದ್ದು. ಬಂದವರಿಗೆ ಟೀ ಅಥವಾ ಕಾಫಿ ಮಾಡಿಕೊಡುವುದು. ಎರಡೂ ಬೇಡ ಎನ್ನುವವರಿಗೆ ಕಷಾಯ ಮಾಡಿಕೊಡುವ ಕೆಲಸಕ್ಕೆ ಓಡಾಡುತ್ತಿದ್ದ ಸರೋಜಾರವರನ್ನು ನಿಲ್ಲಿಸಿ ಒಂದು ಘಟನೆ ಹೇಳುತ್ತೇನೆ ಕೇಳಿ ಎಂದೆ. ನಿಮಗೆ ಅಪಘಾತ ಆಗಿದೆ ಎಂದು ರಮೇಶರವರು ನಮಗೆ ಈ ಹಿಂದೆ ಹೇಳಿದ್ದರು ಎಂದೆ. ಸರೋಜಾರವರಿಗೆ ಅಚ್ಚರಿ. ಯಾಕೆಂದರೆ ಸರೋಜಾರವರಿಗೆ ಎಂದೂ ಅಪಘಾತ ಆಗಿರಲಿಲ್ಲ. ಅದೂ ನನಗೂ ಗೊತ್ತಿತ್ತು. ಆದರೂ ರಮೇಶರವರು ಸುಳ್ಳು ಹೇಳಿದ್ದು ಸತ್ಯವಾಗಿತ್ತು. ಆಗಿದ್ದಾದರೂ ಏನೆಂದರೆ.

ಐದು ವರ್ಷಗಳ ಹಿಂದೆ ನನ್ನ ಸೃಷ್ಟಿ ಕಲಾ ಕೇಂದ್ರದ ವಾರ್ಷಿಕೋತ್ಸವ ನಯನಾ ಸಭಾಂಗಣದಲ್ಲಿ. ನನ್ನ ಗೆಳೆತನಕ್ಕೆ, ಆತ್ಮೀಯ ಆಹ್ವಾನಕ್ಕೆ ಮಾನ್ಯತೆ ಕೊಟ್ಟು ಶೂಟಿಂಗನ್ನೂ ಬಿಟ್ಟು ಅತಿಥಿಯಾಗಿ ಮಂಡ್ಯ ರಮೇಶ್ ಭಾಗವಹಿಸಿದ್ದರು. ರಮೇಶರವರ ಭಾಷಣ ಮುಗಿದ ನಂತರ ಅವರಿಗೆ ಸನ್ಮಾನ ಮಾಡಬೇಕು ಅಂತಾ ನೋಡಿದರೆ ವೇದಿಕೆಯಿಂದಲೇ ನಾಪತ್ತೆಯಾಗಿದ್ದರು. ‘ರಮೇಶರವರ ಪತ್ನಿಗೆ ಕಾರ್ ಅಪಘಾತ ಆಗಿದೆಯಂತೆ ಅದಕ್ಕೆ ಅವರು ಪೋನ್ ಬಂದ ತಕ್ಷಣ ಹೊರಟರು’ ಎಂದು ತಿಳಿಸಿ ಎಂದು ಪಕ್ಕದಲ್ಲಿದ್ದ ಇನ್ನೊಬ್ಬ ಅತಿಥಿಗಳಿಗೆ ಹೇಳಿ ರಮೇಶರವರು ಜಾಗ ಖಾಲಿ ಮಾಡಿದ್ದರು. ಅವರು ಸುಳ್ಳು ಹೇಳಿದ್ದರು ಎಂದು ನನಗೆ ಮಾರನೇ ದಿನವೇ ಗೊತ್ತಾಗಿತ್ತು. ಯಾಕೆಂದರೆ ಸರೋಜಾರವರು ರಂಗಾಯಣದ ನಾಟಕದಲ್ಲಿ ಮಾರನೇ ದಿನ ಅಭಿನಯಿಸಿದ್ದರು. ರಮೇಶರವರ ನೋವು ಕಡಿಮೆಯಾಗಲಿ ಎನ್ನುವ ಉದ್ದೇಶದಿಂದ ಈಗ ಈ ಘಟನೆ ನೆನಪಿಸಿದೆ. “ಎಲ್ಲರೂ ಅಜ್ಜಿ ಸತ್ತಳು, ಅತ್ತೆಗೆ ಅಪಘಾತ ಆಯ್ತು ಅಂತೆಲ್ಲಾ ಸುಳ್ಳು ಹೇಳೋದನ್ನ ಕೇಳಿದ್ದೆ, ಆದರೆ ನೋಡಿ ರಮೇಶರವರು ತಮ್ಮ ಹೆಂಡತಿಗೆ ಅಪಘಾತ ಆಗಿದೆ ಎಂದು ಸುಳ್ಳು ಹೇಳಿದ್ದರು” ಎಂದು ಕಿಚಾಯಿಸಿದೆ. ಆಗ ಸರೋಜಾರವರು ರಮೇಶರವರ ಕಡೆ ಒಂದು ನೋಟ ಬೀರಿದರು ನೋಡಿ ಅದು ” ಇರು ನಿನ್ನ ಆಮೇಲೆ ನೋಡಿ ಕೊಳ್ತೇನೆ” ಎನ್ನುವಂತಿತ್ತು. ಆದರೂ ಅವರೂ ನಕ್ಕರು, ರಮೇಶರವರೂ ನಕ್ಕರು, ನಾವೂ ನಕ್ಕೆವು. ನೋವಿನ ಕಡಲಲಿ ನಗೆಯ ಹಾಯ ದೋಣಿ ಸಾಗಿದಂತಾಯ್ತು.

ಇಷ್ಟೆಲ್ಲಾ ಆದರೂ ರಮೇಶರವರ ಆತ್ಮವಿಶ್ವಾಸ ಅಚ್ಚರಿದಾಯಕವಾಗಿತ್ತು. ವೈದ್ಯರು ಕನಿಷ್ಟ ಮೂರು ತಿಂಗಳುಗಳ ಕಾಲ ಬೆಡ್ ಬಿಟ್ಟು ನಡೆದಾಡುವಂತಿಲ್ಲ ಅಂತಾ ಹೇಳಿದ್ದರೂ, “ನೋಡು ಗೆಳೆಯಾ ಇನ್ನು ನಾಲ್ಕೈದು ವಾರದಲ್ಲಿ ಎದ್ದು ಓಡಾಡುವ ಹಾಗಾಗುತ್ತೇನೆ” ಎಂದು ಆತ್ಮವಿಶ್ವಾಸದಿಂದ ರಮೇಶ್ ನುಡಿದರು. ಅವರ ಬಯಕೆ ಈಡೇರಲಿ. ಬೇಗ ಗುಣಮುಖರಾಗಿ ಮೊದಲಿನಂತೆ ಚಲನಶೀಲರಾಗಲಿ. ಮತ್ತೆ ನಾಟಕಗಳನ್ನು ಕಟ್ಟಿ ಪ್ರದರ್ಶನ  ಕೊಡುತ್ತಲೇ ಇರಲಿ. ನೂರಾರು ರಂಗಾಸಕ್ತ ಯುವಜನರಿಗೆ, ಮಕ್ಕಳಿಗೆ ರಂಗಪಾಠ ಮಾಡುತ್ತಲೇ ಇರಲಿ. ನೂರಾರು ವರುಷ ಕಲೆಯನ್ನು ಬದುಕಾಗಿಸಿಕೊಂಡು ಆರೋಗ್ಯದಿಂದ ಬಾಳಲಿ ಎಂದು ಮನಸಲ್ಲೇ ಹಾರೈಸಿ, ಆದಷ್ಟು ಬೇಗ ಚೇತರಿಸಿಕೊಳ್ಳಲಿ ಎಂದು ಹೇಳಿ ರಮೇಶರವರ ಮನೆಯಿಂದ ಹೊರಗೆ ಬಂದೆ. ಮನಸಿನಲ್ಲೇ ಯಾವುದೇ ಕಲಾವಿದರಿಗೆ ಕಷ್ಟ ಎಂದೂ ಬರದೇ ಇರಲಿ ಎಂದೆ.

– ಶಶಿಕಾಂತ ಯಡಹಳ್ಳಿ, ರಂಗಕರ್ಮಿಗಳು

Leave a Reply