ಎಲ್ಲಾ ವಿಷಯದಲ್ಲೂ ರಾಜಕಾರಣ ಮಾಡುವುದು ಬಿಜೆಪಿ ಹುಟ್ಟು ಗುಣ: ಡಾ.ಜಿ.ಪರಮೇಶ್ವರ್

2 years ago

ಬೆಂಗಳೂರು: ಎಲ್ಲಾ ವಿಷಯದಲ್ಲೂ ರಾಜಕಾರಣ ಮಾಡುವುದು ಬಿಜೆಪಿಯ ಹುಟ್ಟು ಗುಣ. ಬೆಳಗಾವಿ ಜಿಲ್ಲೆಯಲ್ಲಿ ನಡೆದ ಮಹಿಳೆ ವಿವಸ್ತ್ರ ಪ್ರಕರಣವನ್ನು ಮುಂದಿಟ್ಟುಕೊಂಡು  ಪ್ರತಿಭಟನೆ ಮಾಡುತ್ತಿರುವುದು ಕೂಡ ಇದರ ರಾಜಕಾರಣದ ಭಾಗ ಎಂದು ಗೃಹಸಚಿವ ಡಾ.ಜಿ.ಪರಮೇಶ್ವರ್ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಳಗಾವಿಯ ವಂಟಮೂರಿ ಗ್ರಾಮದಲ್ಲಿ ನಡೆದ ಘಟನೆಯನ್ನು ಮುಂದಿಟ್ಟುಕೊಂಡು ಬಿಜೆಪಿ ರಾಜಕೀಯಕ್ಕಾಗಿ ಪ್ರತಿಭಟನೆ ನಡೆಸುತ್ತಿದೆ. ಇದಕ್ಕೆ ಏನು ಹೇಳಬೇಕೊ ಗೊತ್ತಿಲ್ಲ. ವಿರೋಧಪಕ್ಷ ಬಿಜೆಪಿ ವಿಷಯವನ್ನು ಆಯ್ದುಕೊಳ್ಳುವುದರಲ್ಲೇ ಲೋಪವಿದೆ. ಘಟನೆ ನಡೆದಿರುವುದರಲ್ಲಿ ಸರ್ಕಾರದ ಪಾತ್ರ ಏನಿದೆ ಎಂದರು.

ಘಟನೆ ನಡೆಯಬಾರದಿತ್ತು. ದುರದೃಷ್ಟಕರವಾಗಿ ನಡೆದಿದೆ. ಊರಿನಲ್ಲಿ ಒಂದು ವರ್ಗದ ಜನ ನಾಗರಿಕ ಸಮಾಜ ತಲೆ ತಗ್ಗಿಸುವಂತಹ ಘಟನೆ ಮಾಡಿದ್ದಾರೆ. ಇದರಲ್ಲಿ ಸರ್ಕಾರದ ಲೋಪ ಏನಿದೆ? ರಾತ್ರಿ 1.30 ಗಂಟೆ ಸುಮಾರಿಗೆ ದುಷ್ಕೃತ್ಯ ನಡೆದಿದೆ. ಪೊಲೀಸರಿಗೆ ಮಾಹಿತಿ ದೊರೆಯುತ್ತಿದ್ದಂತೆ ಸ್ಥಳಕ್ಕೆ ಹೋಗಿದ್ದಾರೆ. ಮಹಿಳೆಯನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ ಎಂದು ಹೇಳಿದರು.

7 ಆರೋಪಿಗಳನ್ನು ತಕ್ಷಣ ಬಂಧಿಸಿದ್ದಾರೆ. ಇಬ್ಬರು ನಾಪತ್ತೆಯಾಗಿದ್ದಾರೆ. ಅದರಲ್ಲಿ ಹೆಚ್ಚು ಮಂದಿ ಮಹಿಳೆಯರೇ ಇದ್ದಾರೆ. ತಕ್ಷಣ ಪೊಲೀಸರು ಬಾರದೆ ಇದ್ದರೆ ನನಗೆ ಬೇರೆ ರೀತಿಯ ತೊಂದರೆಯಾಗುತ್ತಿದ್ದವು ಎಂದು ಸಂತ್ರಸ್ತರು ಮಾಹಿತಿ ನೀಡಿದ್ದಾರೆ. ಬೆಳಿಗ್ಗೆ ಮಾಹಿತಿ ನನಗೆ ತಿಳಿಯುತ್ತಿದ್ದಂತೆ ನಾನು ಸಂತ್ರಸ್ತೆಯನ್ನು ಭೇಟಿ ಮಾಡಿ ಸರ್ಕಾರ ನಿಮ್ಮ ಜೊತೆ ಇದೆ ಎಂದು ಆತ್ಮಸ್ಥೈರ್ಯ ತುಂಬಿದ್ದೇನೆ ಎಂದು ಹೇಳಿದರು.

ಘಟನೆಯ ಸ್ಥಳಕ್ಕೂ ಹೋಗಿ ಮನೆ ಒಡೆದಿರುವುದು, ಸಾಮಾನು ಚೆಲ್ಲಾಡಿರುವುದು, ಕಂಬಕ್ಕೆ ಕಟ್ಟಿದ ಸ್ಥಳ ಈ ಎಲ್ಲವನ್ನೂ ವೀಕ್ಷಿಸಿ ಬಂದಿದ್ದೇನೆ. ಕುಟುಂಬಕ್ಕೆ 5 ಲಕ್ಷ ರೂ. ಪರಿಹಾರ ಘೋಷಿಸಿದ್ದು, ವೈದ್ಯಕೀಯ ವೆಚ್ಚವನ್ನು ಸರ್ಕಾರವೇ ಭರಿಸುವುದಾಗಿ ತಿಳಿಸಿದ್ದೇವೆ. ಬುಡಕಟ್ಟು ಸಮುದಾಯ ಅಭಿವೃದ್ಧಿ ಆಯೋಗದಿಂದ 2 ಎಕರೆ ಭೂಮಿ ನೀಡಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.

ಪ್ರೀತಿಸಿ ಓಡಿಹೋಗಿದ್ದ ಜೋಡಿಯನ್ನು ಪತ್ತೆ ಹಚ್ಚಲು ತ್ವರಿತ ಕ್ರಮಕೈಗೊಂಡಿತ್ತು. ಅಷ್ಟರಲ್ಲಿ ಆ ಜೋಡಿಯೇ ಪೊಲೀಸ್ ಆಯುಕ್ತರ ಬಳಿ ಬಂದಿದೆ. ಅವರಿಗೂ ತೊಂದರೆಯಾಗದಂತೆ ರಕ್ಷಣೆ ನೀಡಿದ್ದೇವೆ ಎಂದರು.

ಬಿಜೆಪಿಯವರು ರಾಜಕೀಯ ಮಾಡುತ್ತಿದ್ದಾರೆ. ವಿರೋಧಪಕ್ಷವಾಗಿ ಅವರು ಅವರ ಕರ್ತವ್ಯ ಮಾಡುವುದಕ್ಕೆ ನಮ್ಮ ಆಕ್ಷೇಪಣೆಯಿಲ್ಲ. ಆದರೆ ಇದರಲ್ಲಿ ಸರ್ಕಾರದ ವೈಫಲ್ಯ ಎಲ್ಲಿದೆ? ಬಿಜೆಪಿಯವರು ದೆಹಲಿಯಿಂದ ನಿಯೋಗ ಬಂದ ಮೇಲಾದರೂ ಏನಾದರೂ ನೆರವು ನೀಡಿದ್ದಾರೆಯೇ? ಕೇಂದ್ರದ ಬುಡಕಟ್ಟು ಆಯೋಗದಿಂದ ಯಾವುದಾದರೂ ಸಹಾಯ ಮಾಡಿದ್ದಾರೆಯೇ? ರಾಜಕೀಯಕ್ಕಾಗಿ ಬಂದರು. ಇದರಲ್ಲಿ ಸರ್ಕಾರದ ವೈಫಲ್ಯ, ಗೃಹಸಚಿವರು ರಾಜೀನಾಮೆ ನೀಡಬೇಕೆಂದು ಆಗ್ರಹಿಸಿದರೆ ಏನಾದರೂ ಪ್ರಯೋಜನವಿದೆಯೇ? ಸಂತ್ರಸ್ತರಿಗೆ ಏನು ಉಪಯೋಗವಾಯಿತು? ಎಂದು ಸರಣಿ ಪ್ರಶ್ನೆಗಳನ್ನು ಕೇಳಿದರು.

Leave a Reply