ಗದಗ: ರಾಜ್ಯದಲ್ಲಿ ಯಾವುದೇ ಭ್ರಷ್ಟಾಚಾರದ ಪ್ರಕರಣಗಳಿದ್ದರೆ ಅದನ್ನು ಸುಮ್ಮನೆ ನೋಡುತ್ತಾ ಕುಳಿತುಕೊಳ್ಳುವುದಿಲ್ಲ. ತನಿಖೆ ಮಾಡಿಸಿ ತಪ್ಪಿತಸ್ಥರ ವಿರುದ್ದ ಕ್ರಮ ಕೈಗೊಳ್ಳಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.
ಗದಗಿನಲ್ಲಿ ಬಾಲಕಿಯರ ಬಾಲಮಂದಿರ ಕಟ್ಟಡದ ಉದ್ಘಾಟನೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಾರಿಗೆ ನಿಗಮದಲ್ಲಿ ಸಾಕಷ್ಟು ಬಸ್ ಕೆಟ್ಟು ನಿಂತಿದ್ದು ಚಾಲಕರಿಗೆ ಡ್ಯೂಟಿ ಸಿಗುತ್ತಿಲ್ಲ. ಡ್ಯೂಟಿ ಹಾಕಲು ಅಧಿಕಾರಿಗಳು ಹಣ ಕೇಳುತ್ತಾರೆ ಎಂದು ಚಾಲಕರೇ ಆರೋಪಿಸುವ ಬಗ್ಗೆ ಪ್ರತಿಕ್ರಿಯಿಸಿದರು.
ಈಗಾಗಲೇ ನಾವು ಹಿಂದಿನ ಸರ್ಕಾರದ 40% ಭ್ರಷ್ಟಾಚಾರ ಪ್ರಕರಣವನ್ನು ತನಿಖೆ ಮಾಡಿಸುತ್ತಿದ್ದೇವೆ. ಆರೋಪಗಳು ಸಾಬೀತಾದ ಮೇಲೆ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಡ್ಯೂಟಿ ಹಾಕಲು ಲಂಚ ಕೇಳಿದ ಪ್ರಕರಣವನ್ನೂ ತನಿಖೆ ಮಾಡಿಸಲಾಗುವುದು ಎಂದರು.
ಜಾತಿ ಜನಗಣತಿ ವರದಿ ಬರುವ ಮುನ್ನವೇ ವೈಜ್ಞಾನಿಕವಲ್ಲ ಎನ್ನುವುದು ಸರಿಯಲ್ಲ. ವರದಿ ಇನ್ನೂ ಸಲ್ಲಿಸಿಲ್ಲವಾದ್ದರಿಂದ ಸ್ವೀಕಾರ ಮಾಡುವುದು ಹೇಗೆ ಎಂದರು.
ವರದಿ ಕೊಟ್ಟ ಮೇಲೆ ಸ್ವೀಕಾರ ಮಾಡುವ ಪ್ರಶ್ನೆ ಉದ್ಭವವಾಗುತ್ತದೆ. ಶಾಶ್ವತ ಹಿಂದುಳಿದ ವರ್ಗಗಳ ಆಯೋಗ ವರದಿ ಕೊಟ್ಟಿಲ್ಲ. ಕೊಡಲು ಬಂದಾಗ ವಿಚಾರ ಮಾಡುತ್ತೇವೆ. ವರದಿ ವೈಜ್ಞಾನಿಕವಲ್ಲ ಎಂದು ಕೆಲವರು ವಿಚಾರ ಮಾಡುತ್ತಿದ್ದು, ವರದಿ ಬರದೆ, ಏನಿದೆ ಎಂದು ತಿಳಿಯದೇ ಊಹಾಪೋಹದ ಮೇಲೆ ನಿರ್ಧಾರ ಮಾಡುತ್ತಿದ್ದಾರೆ. ವರದಿ ಬರಲಿ ನೋಡೋಣ ಎಂದರು.
ಶ್ರೀ ಶೈಲ ಜಗದ್ಗುರು ಚನ್ನಸಿದ್ಧರಾಮ ಸ್ವಾಮೀಜಿ 2 ವರ್ಷಗಳ ನಂತರ ವರದಿ ಬಿಡುಗಡೆ ಮಾಡಲಿ ಎಂದು ಹೇಳುತ್ತಿರುವ ಬಗ್ಗೆ ಪ್ರತಿಕ್ರಿಯೆ ನೀಡಿ, ಅವರಿಗಾಗಲಿ ನನಗಾಗಲಿ ವರದಿಯಲ್ಲಿ ಏನಿದೆ ಎಂದು ತಿಳಿದಿಲ್ಲ. ವರದಿ ಬರುವ ಮುನ್ನವೇ ವೈಜ್ಞಾನಿಕವಲ್ಲ ಎನ್ನುವುದು ಸರಿಯಲ್ಲ ಎಂದರು
ಘೋಷಿಸಿರುವ ಯೋಜನೆಗಳಿಗೆ ಅನುದಾನದ ಕೊರತೆ ಇಲ್ಲ. ಶಕ್ತಿ ಯೋಜನೆಗೆ ಪ್ರತಿ ವರ್ಷ ವೆಚ್ಚವಾಗುವ ಹಣವನ್ನು ಕೆ.ಎಸ್.ಆರ್.ಟಿ. ಸಿಗೆ ಸರ್ಕಾರ ತುಂಬಿ ಕೊಡಲಾಗುವುದು. ಬಸ್ಸುಗಳ ದುರಸ್ತಿ ಹಾಗೂ ಹೊಸ ಬಸ್ಸುಗಳ ಖರೀದಿಯೂ ಆಗಲಿದೆ. ರಿಪೇರಿಗೆ ಅನುದಾನವನ್ನು ಒದಗಿಸಲಾಗಿದೆ ಎಂದರು.
ನವೆಂಬರ್ ಅಂತ್ಯದವರೆಗೆ ಹಿಂದಿನ ಸರ್ಕಾರ 70,814 ಕೋಟಿ ರೂ.ಗಳನ್ನು ಅಭಿವೃದ್ಧಿಗೆ ಖರ್ಚು ಮಾಡಿತ್ತು. ನಮ್ಮ ಸರ್ಕಾರ 73, 928 ಕೋಟಿ ರೂ.ಗಳನ್ನು ವೆಚ್ಚ ಮಾಡಿದೆ. ಹಣವನ್ನು ಖರ್ಚು ಮಾಡಿಲ್ಲ ಎನ್ನುವುದು ಸುಳ್ಳು ಎಂದರು.
3000 ಕೋಟಿ ರೂ.ಗಳಷ್ಟು ಮೊತ್ತವನ್ನು ಹೆಚ್ಚು ವೆಚ್ಚ ಮಾಡಿದ್ದೇವೆ. ನಾವು ಸರ್ಕಾರ ರೂಪಿಸಿದ್ದು ಮೇ 20 ಕ್ಕೆ, ಬಜೆಟ್ ಮಂಡಿಸಿದ್ದು ಜುಲೈನಲ್ಲಿ, ಅದು ಜಾರಿಯಾಗಿದ್ದು ಆಗಸ್ಟ್ 1 ರಿಂದ. 4 ಗ್ಯಾರಂಟಿಗಳನ್ನು ಜಾರಿ ಮಾಡಿದ್ದು, 5ನೇ ಗ್ಯಾರಂಟಿ ಜನವರಿಯಲ್ಲಿ ಪ್ರಾರಂಭವಾಗಲಿದೆ. ಕೊಟ್ಟ ಮಾತಿನಂತೆ ನಡೆದಿದ್ದೇವೆ ಎಂದರು.
ಉನ್ನತ ಶಿಕ್ಷಣ ಮತ್ತು ಪ್ರಾಥಮಿಕ ಶಿಕ್ಷಣ ಇಲಾಖೆಗಳು ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಒಂದು ಸೂತ್ರ ರೂಪಿಸುತ್ತಿದ್ದಾರೆ. ಈ ಸಂಬಂಧ ಸಭೆ ನಡೆಸಿದ ನಂತರ ಪರಿಹಾರ ಸೂತ್ರವನ್ನು ಸರ್ಕಾರಕ್ಕೆ ನೀಡುತ್ತಾರೆ. ತದನಂತರ ಸರ್ಕಾರ ಪರಿಶೀಲನೆ ನಡೆಸಲಿದೆ. ಈ ಕೆಲಸವನ್ನು ತ್ವರಿತವಾಗಿ ನಡೆಸಲು ಸೂಚಿಸಲಾಗಿದೆ ಎಂದರು.




