ಸಿದ್ದರಾಮಯ್ಯ ಅವರ ಮೇಲಿನ ರಾಜಕೀಯ ಪ್ರೇರಿತ ದಾಳಿ

2 years ago

ಸಿದ್ದರಾಮಯ್ಯ ಅವರ ಮೇಲಿನ ರಾಜಕೀಯ ಪ್ರೇರಿತ ದಾಳಿಯು ನನಗೆ ಹೀಗೆ ಅರ್ಥವಾಗಿದೆ :

ಬಾಬಾ ಸಾಹೇಬರು ಹೇಳಿದಂತೆ ಮೇಲ್ವರ್ಗದ ಮನುವಾದಿಗಳು ಹಿಂದುಳಿದ ವರ್ಗಗಳ ಏಳಿಗೆಯನ್ನು ಸಹಿಸುವುದಿಲ್ಲ.

ಹಿಂದುಳಿದ ವರ್ಗದವರು ಉತ್ತಮ ಬಟ್ಟೆ ಹಾಕುವಂತಿಲ್ಲ, ಉತ್ತಮ ಚಪ್ಪಲಿ ಅಥವಾ ವಾಚ್ ಧರಿಸುವಂತಿಲ್ಲ, ಉನ್ನತ ಶಿಕ್ಷಣ ಪಡೆಯುವಂತಿಲ್ಲ. ಸ್ವಂತ ಭೂಮಿಯನ್ನು ಹೊಂದಬಾರದು ಮತ್ತು ಅವರು ಸದಾ ಬೇಡುವ ಸ್ಥಿತಿಯಲ್ಲೇ ಇರಬೇಕು.

ಇನ್ನು ರಾಜಕೀಯವಾಗಿ ನೋಡುವುದಾದರೆ, ಹಿಂದುಳಿದ ವರ್ಗದ ನಾಯಕರು ಎಷ್ಟೇ ಜ್ಞಾನ ಮತ್ತು ಸಾಮರ್ಥ್ಯ  ಇದ್ದರೂ ಕೂಡಾ ಅವರು ಮೇಲು ಸ್ತರದ  ಮತ್ತು ಫ್ಯೂಡಲ್ ಜಾತಿಗಳಿಗೆ ಬಹಳ ವಿನಯವಂತಿಕೆಯಿಂದಲೇ ಇರಬೇಕು.

ನೈತಿಕ ಕಾರಣಕ್ಕೆ ಸ್ವಯಂ ಕೋಪ ಮತ್ತು ಬೇಸರ ಬಂದರೂ ಅದನ್ನು ವ್ಯಕ್ತಪಡಿಸಬಾರದು, ಅವರು ತಮಗಿಂತ ಎತ್ತರದ ಸ್ಥಾನಕ್ಕೆ ಏರಬಾರದು. ಅವರು ಅಧಿಕಾರ ಇಲ್ಲದೇ, ಹೆಚ್ಚಿನ ಜನ ಬೆಂಬಲ ಹೊಂದದೆ ಎಲ್ಲೋ ಒಂದು ಮೂಲೆಯಲ್ಲಿ ಇವರು ಹಕ್ಕುದಾರರಂತೆ ಮಾಡುವ ಅರಾಜಕತೆಗಳನ್ನು ಕಾಣುತ್ತಾ ಸುಮ್ಮನೆ ಇರಬೇಕು.

ಮತ್ತು ಇವರ ಮೂಢ ನಂಬಿಕೆ ಮತ್ತು ಅವೈಜ್ಞಾನಿಕ ಆಷಾಢಭೂತಿ ತನವನ್ನು ಸಹಿಸಿಕೊಂಡು ಅದಕ್ಕೆ ಸಂಸ್ಕೃತಿಯ ಹೆಸರಲ್ಲಿ ಜೈಕಾರ ಹಾಕಬೇಕು ಮತ್ತು ಜನಪರತೆಯನ್ನು ಮರೆತು ನಾವೇ ಅವರಂತೆ ಬದಲಾಗಬೇಕು ಎನ್ನುವ ಕಾರಣಕ್ಕೇ ಈ ದಿನ ಸಿದ್ದರಾಮಯ್ಯ ಅವರ ವಿರುದ್ಧ ಈ ರೀತಿಯಾಗಿ ಕೆಳಮಟ್ಟದ ರಾಜಕೀಯ ಮಾಡುತ್ತಿದ್ದಾರೆ.

ಅಧಿಕಾರ ಸಿಕ್ಕಿದ್ದ ಸಂದರ್ಭದಲ್ಲಿ ಶಾಲೆಯೊಳಗೆ ಮಕ್ಕಳಿಗೆ ಮೊಟ್ಟೆ ವಿತರಣೆ ಬೇಡ ಎಂದಿದ್ದ ಈ ಮನುವಾದಿಗಳು,  ಈ ಹಿಂದೆ ಅದನ್ನು ಸಿದ್ದರಾಮಯ್ಯ ಅವರಿಗೇ ಹೊಡೆಯಲು ಬಳಸಿದ್ದನ್ನು ಮರೆಯಲಾದೀತೇ?

ಜನರ ಆಹಾರ ಕ್ರಮವನ್ನು ಅವಮಾನ ಮಾಡಲು ಬಳಸುವುದು, ಭೂಗಳ್ಳರು ಮತ್ತು ಅತ್ಯಾಚಾರಿಗಳನ್ನು ಮನ್ನಿಸಿ ಅವರಿಗೇ ಸನ್ಮಾನ ಮಾಡುವುದು, ಈ ದುಷ್ಟ ಮನುವಾದಿಗಳೇ ಎಂಬುದನ್ನು ನಾವಿಲ್ಲಿ ಮುಖ್ಯವಾಗಿ ಗಮನಿಸಬೇಕಾದ ಸಂಗತಿಯಾಗಿದೆ

ಇನ್ನು ರಾಜಕೀಯ ಅಸಹನೆಯ ಕಾರಣಕ್ಕೆ ಸಿದ್ದರಾಮಯ್ಯ ಅವರ ಮೇಲೆ ನಡೆಯುತ್ತಿರುವ ದಾಳಿ ಬರೀ ದಾಳಿಯಲ್ಲ, ಅದು, ಕೆಳವರ್ಗದವರನ್ನು ಕಂಡರೆ ನಮಗೆ ಇಷ್ಟವೇ ಇಲ್ಲ ಎಂಬ  ಫ್ಯೂಡಲ್ ಮನುವಾದಿಗಳ ಮೂರನೇ ದರ್ಜೆಯ ಮನೋ ಧೋರಣೆ!

ಆದರೆ ಇಂತಹದ್ದಕ್ಕೆಲ್ಲಾ ಸೊಪ್ಪು ಹಾಕುವ ಮಂದಿ ನಾವಲ್ಲ, ನಮ್ಮೊಳಗೆ ಇರುವುದು ಬಾಬಾ ಸಾಹೇಬರು ಹಚ್ಚಿದ ಅರಿವಿನ ದೀಪವೇ ವಿನಃ, ಮನುವಾದಿಗಳು ಬಿತ್ತಿದ ವಿಷದ ಬೀಜಗಳಲ್ಲ.

( ಯಾವ ತಪ್ಪೂ ಮಾಡದೇ, ಬೇಕಂತಲೇ ಅಸಹನೆಯ ಕಾರಣಕ್ಕೆ ಕಿತಾಪತಿ ಮಾಡುತ್ತಿರುವ ಇವರ ಪ್ರಯತ್ನಗಳನ್ನು ನೋಡುವಾಗ ಇವೆಲ್ಲಾ ನೆನಪಾಯಿತು)

– ಡಾ ಎಚ್ ಸಿ ಮಹದೇವಪ್ಪ, ಸಮಾಜ ಕಲ್ಯಾಣ ಸಚಿವ

Leave a Reply