ಬೆಂಗಳೂರು: ರಾಜ್ಯ ಹಿಂದುಳಿದ ವರ್ಗಗಳ ಶಾಶ್ವತ ಆಯೋಗ ನಡೆಸುತ್ತಿರುವ ಸಾಮಾಜಿಕ ಆರ್ಥಿಕ ಮತ್ತು ಶೈಕ್ಷಣಿಕ ಗಣತಿ ವೇಳೆ ಅಗತ್ಯವೆನಿಸಿದರೆ ಮಾತ್ರ ಮಾಹಿತಿ ನೀಡುವಂತೆ ಬಿಜೆಪಿ ನಾಯಕರು ಮಾಡಿರುವ ಮನವಿಗೆ ಸಿಎಂ ಸಿದ್ದರಾಮಯ್ಯ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
- ಬೆಂಗಳೂರಿನಲ್ಲಿ ಕನ್ನಡ ಗಜಲ್ ಯಾತ್ರೆ 100ರ ಸಂಭ್ರಮ
- ನಕಲಿ ದೇಶಪ್ರೇಮಿಗಳ ಆಟ ಇನ್ನೂ ರಾಜ್ಯದಲ್ಲಿ ನಡೆಯಲ್ಲ: ಬಿ ಕೆ ಹರಿಪ್ರಸಾದ್
- ಕಾಂಗ್ರೆಸ್ ಪಕ್ಷಕ್ಕೆ ತಕ್ಕ ಪಾಠ ಕಲಿಸುವುದು ನೂರು ಪರ್ಸೆಂಟ್ ಗ್ಯಾರೆಂಟಿ: ಆರ್ ಅಶೋಕ್
- ದರ್ಶನ್ ಪುಟ್ಟಣ್ಣಯ್ಯ ಅವರಿಗೆ ಸಚಿವ ಸ್ಥಾನ ನೀಡಿ
- ರಾಜಕೀಯ ಸಂತ ಶಾಂತವೇರಿ ಗೋಪಾಲಗೌಡ ಕೃತಿ ಲೋಕಾರ್ಪಣೆ
ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಸಂಸದ ತೇಜಸ್ವಿ ಸೂರ್ಯ ಅವರು ಸಮೀಕ್ಷೆ ಬಹಿಷ್ಕರಿಸುವಂತೆ ಬ್ರಾಹ್ಮಣ ಸಮುದಾಯಕ್ಕೆ ನೀಡಿರುವ ಕರೆಯನ್ನು ಖಂಡಿಸಿರುವ ಸಿದ್ದರಾಮಯ್ಯ, ಇದು ಬಿಜೆಪಿ ನಾಯಕರ ಮನುವಾದಿ ಸಿದ್ಧಾಂತವನ್ನು ತೋರಿಸುತ್ತದೆ ಎಂದು ಕಿಡಿಕಾರಿದ್ದಾರೆ.
ಈ ಕುರಿತಂತೆ ಹೇಳಿಕೆ ಬಿಡುಗಡೆ ಮಾಡಿರುವ ಅವರು, ನಮ್ಮ ಸರ್ಕಾರ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆಯನ್ನು ಪ್ರಾರಂಭಿಸುತ್ತಿದ್ದಂತೆಯೇ ‘’ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಎಂದು ಕೂಗು ಹಾಕುತ್ತಿರುವವರ ಆಂತರ್ಯದಲ್ಲಿರುವ ನಿಜ ಬಣ್ಣ ಬಯಲಾಗುತ್ತಿದೆ. ರಾಜ್ಯ ಬಿಜೆಪಿಯ ನಾಯಕರು ಒಬ್ಬೊಬ್ಬರಾಗಿ ಹೊರಗೆ ಬಂದು ನಮ್ಮ ಸಮೀಕ್ಷೆಯನ್ನು ಬಹಿಷ್ಕರಿಸುವಂತೆ ಕರೆನೀಡುವ ಮೂಲಕ ಸಾರ್ವಜನಿಕರ ಎದುರು ಬತ್ತಲಾಗುತ್ತಿದ್ದಾರೆ ಎಂದಿದ್ದಾರೆ.
ರಾಜ್ಯ ಹಿಂದುಳಿದ ವರ್ಗಗಳ ಶಾಶ್ವತ ಆಯೋಗ ನಡೆಸುತ್ತಿರುವ ಸಮೀಕ್ಷೆ ಯಾವುದೇ ಒಂದು ಜಾತಿ-ಧರ್ಮಗಳಿಗೆ ಸೀಮಿತವಾದುದಲ್ಲ. ಇದು ರಾಜ್ಯದ ಏಳು ಕೋಟಿ ಜನರ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆ. ಇದು ಯಾರ ವಿರುದ್ಧವೂ ಅಲ್ಲ, ಇದು ಎಲ್ಲರ ಪರವಾಗಿರುವ ಸಮೀಕ್ಷೆ. ಇದರ ಮುಖ್ಯ ಉದ್ದೇಶ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸಮಾನತೆಯನ್ನು ಸಾಧಿಸಿ ಸರ್ವರಿಗೂ ಸಮಪಾಲು, ಸಮಬಾಳು ನೀಡುವುದಾಗಿದೆ ಎಂದು ಹೇಳಿದ್ದಾರೆ.
ಸಂಪತ್ತು, ಅವಕಾಶ ಮತ್ತು ಪ್ರಾತಿನಿಧ್ಯ ಎಲ್ಲವೂ ಯಥಾಸ್ಥಿತಿಯಲ್ಲಿಯೇ ಇರಬೇಕು. ಬಡವರು ಬಡವರಾಗಿಯೇ ಉಳಿಯಬೇಕು, ಹಿಂದುಳಿದವರು ಹಿಂದೆಯೇ ಉಳಿಯಬೇಕು. ಮಹಿಳೆಯರು ಅವಕಾಶ ವಂಚಿತರಾಗಿಯೇ ಇರಬೇಕು. ವರ್ಣ ಮತ್ತು ವರ್ಗಗಳ ನಡುವಿನ ಅಸಮಾನತೆ ಮುಂದುವರಿಯಬೇಕು ಎನ್ನುವುದು ಮನುವಾದ. ಬಿಜೆಪಿಯ ನಾಯಕರ ಅಂತರಂಗದಲ್ಲಿರುವುದು ಇದೇ ಮನುವಾದಿ ಮನಸ್ಥಿತಿ ಎಂದಿದ್ದಾರೆ.
ನಮ್ಮ ಸರ್ಕಾರ ನಡೆಸುವ ಸಮೀಕ್ಷೆಯಿಂದ ಕೇವಲ ದಲಿತ, ಹಿಂದುಳಿದ ಜಾತಿ ಮತ್ತು ಅಲ್ಪಸಂಖ್ಯಾತ ಸಮುದಾಯಗಳ ಸ್ಥಿತಿ-ಗತಿ ಮಾತ್ರವಲ್ಲ, ಮುಂದುವರಿದ ಜಾತಿಗಳೊಳಗಿನ ಬಡವರು ಮತ್ತು ಅವಕಾಶ ವಂಚಿತರ ಸ್ಥಿತಿಗತಿಯೂ ಗೊತ್ತಾಗಲಿದೆ. ಈ ವಾಸ್ತವಸ್ಥಿತಿ ಅರಿವಾಗುವುದು ಬಿಜೆಪಿಯವರಿಗೆ ಬೇಡವಾಗಿದೆ. ಸಂಪತ್ತು, ಅವಕಾಶ ಮತ್ತು ಪ್ರಾತಿನಿಧ್ಯ ಪ್ರತಿಯೊಂದು ಜಾತಿ ಮತ್ತು ಧರ್ಮದೊಳಗಿನ ಉಳ್ಳವರ ಕೈಯಲ್ಲಿಯೇ ಇರಬೇಕು ಎನ್ನುವುದೇ ಅವರ ವಿರೋದಧ ಹಿಂದಿನ ದುರುದ್ದೇಶ ಎಂದಿದ್ದಾರೆ.
ಬಿಹಾರದಲ್ಲಿ ಇವರದ್ದೇ ಮೈತ್ರಿ ಸರ್ಕಾರ ಜಾತಿ ಆಧಾರಿತ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆ ನಡೆಸಿದೆ. ಇದೇ ರೀತಿ ತೆಲಂಗಾಣದಲ್ಲಿಯೂ ನಡೆದಿದೆ. ಅಲ್ಲಿಯೂ ಬಿಜೆಪಿ ನಾಯಕರು ಬಾಯಿ ಮುಚ್ಚಿಕೊಂಡಿದ್ದಾರೆ. ಇವೆಲ್ಲಕ್ಕಿಂತಲೂ ಮಿಗಿಲಾಗಿ ಈಗ ಕೇಂದ್ರದ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರವೇ ಜಾತಿ ಗಣತಿ ಮಾಡಲು ಹೊರಟಿದೆ. ಕರ್ನಾಟಕದಲ್ಲಿ ಜಾತಿಗಳನ್ನು ಪರಿಗಣಿಸಿ ನಡೆಸುತ್ತಿರುವ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆಯನ್ನು ವಿರೋಧಿಸುತ್ತಿರುವ ಬಿಜೆಪಿ ನಾಯಕರೇ, ನೀವು ಕೇಂದ್ರ ಸರ್ಕಾರದ ಜಾತಿ ಗಣತಿಯನ್ನೂ ವಿರೋಧಿಸುತ್ತೀರಾ? ಹಾಗೆ ವಿರೋಧಿಸುವುದಾದರೆ ಅದನ್ನು ಗಟ್ಟಿ ದನಿಯಲ್ಲಿ ಈಗಲೇ ಹೇಳಿಬಿಡಿ. ಪ್ರಧಾನಿಯ ಎದುರು ತಲೆ ಎತ್ತಿ ಮಾತನಾಡುವ ದಮ್ಮು-ತಾಕತ್ತು ಇಲ್ಲದ ನಿಮಗೆ ಇದನ್ನು ವಿರೋಧಿಸುವ ಧೈರ್ಯ ಇದೆಯೇ ಎಂದು ಪ್ರಶ್ನಿಸಿದ್ದಾರೆ.




