ಸಮೀಕ್ಷೆಯ ಅಂಕಿ-ಅಂಶ ಮತ್ತು ಮಾಹಿತಿಯನ್ನು ಹೊಸ ಆಯೋಗಕ್ಕೆ ನೀಡಬಹುದು: ಸಿದ್ದರಾಮಯ್ಯ

4 years ago

ಹಿರಿಯ ವಕೀಲ ಕಾಂತರಾಜ್ ನೇತೃತ್ವದ ಹಿಂದುಳಿದ ವರ್ಗಗಳ ಆಯೋಗ ರಾಜ್ಯದ ಎಲ್ಲ ಜಾತಿ ಜನರ ರಾಜಕೀಯ ಪ್ರಾತಿನಿಧ್ಯದ ಮಾಹಿತಿಯನ್ನು ಕೂಡಾ ಸಂಗ್ರಹಿಸಿದೆ. ರಾಜ್ಯ ಸರ್ಕಾರ ಈ ಅಂಶವನ್ನು ಸುಪ್ರೀಂ ಕೋರ್ಟ್ ಗಮನಕ್ಕೆ ತಂದರೆ ಅದು ಗಣನೆಗೆ ತೆಗೆದುಕೊಳ್ಳಬಹುದು.
ಸಾಮಾಜಿಕ-ಆರ್ಥಿಕ ಸಮೀಕ್ಷೆಗಾಗಿ ಪ್ರತ್ಯೇಕ ಆಯೋಗ ರಚಿಸಲು ಹೇಳಿರುವ ಸುಪ್ರೀಂ ಕೋರ್ಟ್ ‘’ ರಾಜ್ಯ ಸರ್ಕಾರಗಳು ಈಗಾಗಲೇ ನಡೆಸಿರುವ ಸಮೀಕ್ಷೆಯ ಅಂಕಿ-ಅಂಶ ಮತ್ತು ಮಾಹಿತಿಯನ್ನು ಹೊಸ ಆಯೋಗಕ್ಕೆ ನೀಡಬಹುದು. ಆ ಮಾಹಿತಿಯನ್ನು ಆಧರಿಸಿ ಎರಡು ವಾರಗಳ ಅವಧಿಯೊಳಗೆ ಆಯೋಗ ಹಿಂದುಳಿದ ಜಾತಿಗಳ ಮೀಸಲಾತಿ ಬಗ್ಗೆ ಮಧ್ಯಂತರ ವರದಿಯನ್ನು ನೀಡಬಹುದು..” ಎಂದು ಕೂಡಾ ಹೇಳಿದೆ.
2019-20 ರಲ್ಲಿ ಮಹಾರಾಷ್ಟ್ರದಲ್ಲಿ ಜಿಲ್ಲಾ ಮತ್ತು ಗ್ರಾಮ ಪಂಚಾಯತಿಗಳಿಗೆ ಚುನಾವಣೆ ಘೋಷಣೆ ಮಾಡಿತ್ತು. ಪಂಚಾಯತ್ ಕಾಯ್ದೆ 1961 ರ ಸೆಕ್ಷನ್ 12 ಕ್ಲಾಸ್ (2) ಸಬ್ ಕ್ಲಾಸ್ (c) ಚುನಾವಣಾ ಆಯೋಗ ಜಾರಿ ಮಾಡಿದ್ದ ಅಧಿಸೂಚನೆಯನ್ವಯ ಹಿಂದುಳಿದ ಜಾತಿ, ಪರಿಶಿಷ್ಟ ಜಾತಿ ಹಾಗೂ ವರ್ಗಗಳಿಗೆ ಪಂಚಾಯತಿ ಸಮಿತಿ ಮತ್ತು ಜಿಲ್ಲಾ ಪಂಚಾಯತಿಗಳಲ್ಲಿ ಕೊಡುತ್ತಿದ್ದ ಮೀಸಲಾತಿಯನ್ನು ಪ್ರಶ್ನಿಸಿ ವಿಕಾಸ್ ಕೃಷ್ಣರಾವ್ ಗೌಳಿ ಎಂಬುವವರು ನಾಲ್ಕು ಮೇಲ್ಮನವಿಯನ್ನು ಸುಪ್ರೀಂ ಕೋರ್ಟ್ ನಲ್ಲಿ ಸಲ್ಲಿಸಿದ್ದರು. ಈ ನಾಲ್ಕು ಮೇಲ್ಮನವಿಗಳನ್ನು ಒಟ್ಟುಗೂಡಿಸಿ ಸುಪ್ರೀಂ ಕೋರ್ಟ್ ನ ತ್ರಿಸದಸ್ಯ ಪೀಠ 4 ಮಾರ್ಚ್ 2021 ರಲ್ಲಿ ತನ್ನ ಆದೇಶ ನೀಡಿದೆ.
ಚುನಾವಣಾ ಆಯೋಗದ ಅಧಿಸೂಚನೆಯನ್ನು ಪ್ರಶ್ನಿಸುವ ಜೊತೆಗೆ ಅವರು ಅನುಚ್ಛೇದ 243(D), 243(T), 14, 16 ನ್ನು ಪ್ರಶ್ನಿಸಿದ್ದರು. ಮಹಾರಾಷ್ಟ್ರ ಸರ್ಕಾರ 27% ಹಿಂದುಳಿದ ಜಾತಿಗಳಿಗೆ, 18% ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಮೀಸಲಾತಿ ನೀಡಿತ್ತು. ಆದರೆ ಚುನಾವಣಾ ಅಧಿಸೂಚನೆಯಲ್ಲಿ ವಾಸಿಂ, ಬಂದಾರಾ, ಅಕೋಲಾ, ನಾಗ್ಪುರ್ ಮತ್ತು ಗೋಂಡಿಯಾ ಜಿಲ್ಲೆಗಳಲ್ಲಿ ಮೀಸಲಾತಿ ಪ್ರಮಾಣ 50% ಗಡಿ ದಾಟಿತ್ತು. ಆದರೆ 1992 ರ ಇಂದಿರಾ ಸಹಾನಿ ಪ್ರಕರಣದಲ್ಲಿ ಮೀಸಲಾತಿ ಪ್ರಮಾಣ 50% ಗಿಂತ ಹೆಚ್ಚಿರಬಾರದು ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಮೇಲ್ಮನವಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ತನ್ನ ಅಂತಿಮ ಆದೇಶ ಚುನಾವಣಾ ಫಲಿತಾಂಶಕ್ಕೆ ಅನ್ವಯವಾಗುತ್ತದೆ ಎಂದು ಹೇಳಿ ಚುನಾವಣೆ ನಡೆಸಲು ಅವಕಾಶ ನೀಡಿತ್ತು.
ಚುನಾವಣೆ ಮುಗಿದ ನಂತರ ಸುಪ್ರೀಂ ಕೋರ್ಟ್ ಅಂತಿಮ ಆದೇಶ ನೀಡಿತ್ತು, ಆ ಆದೇಶದಲ್ಲಿ ಮೂರು ಹಂತದಲ್ಲಿ ವಿಶ್ಲೇಷಣೆ ಆಗಬೇಕು, ಮೊದಲನೆಯದಾಗಿ ಚುನಾವಣೆಯಲ್ಲಿ ಮೀಸಲಾತಿ ನಿಗದಿಗಾಗಿ ಒಂದು ಪ್ರತ್ಯೇಕ ಆಯೋಗ ರಚನೆಯಾಗಬೇಕು, ಅವರು ಹಿಂದುಳಿದ ವರ್ಗಗಳ ಜನರ ಪರಿಸ್ಥಿತಿಯನ್ನು ಪ್ರಾಯೋಗಿಕವಾಗಿ ಮತ್ತು ವಸ್ತುಸ್ಥಿತಿಯ ತನಿಖೆ ಮಾಡಬೇಕು. ಎರಡನೆಯದಾಗಿ ಈ ಸಮಿತಿ ಶಿಫಾರಸ್ಸು ಮಾಡುವುದಕ್ಕೆ ಅನುಗುಣವಾಗಿ ಮೀಸಲಾತಿ ಪ್ರಮಾಣ ಇರಬೇಕು, ಮೀಸಲಾತಿ ಪ್ರಮಾಣ ತನ್ನ ಮಿತಿಗಿಂತ ಹೆಚ್ಚಾಗಬಾರದು. ಮೂರನೆಯದಾಗಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಹಿಂದುಳಿದ ವರ್ಗಗಳಿಗೆ ನೀಡುವ ಒಟ್ಟು ಸ್ಥಾನಗಳು 50% ಗಿಂತ ಹೆಚ್ಚಿರಬಾರದು ಎಂದು ಹೇಳಿತು.
ಅನುಚ್ಛೇದ 15(4), 16(4) ಗಳು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರಿಗೆ ಉದ್ಯೋಗ ಮತ್ತು ಶಿಕ್ಷಣದಲ್ಲಿ ನೀಡುವ ಮೀಸಲಾತಿಗೆ ಸಂಬಂಧಿಸಿದವು. ರಾಜಕೀಯ ಮೀಸಲಾತಿಗೂ ಇದಕ್ಕೂ ಸಂಬಂಧವಿಲ್ಲ ಎಂದು ಹೇಳಿದೆ. ಜೊತೆಗೆ ಮಹಾರಾಷ್ಟ್ರದಲ್ಲಿ ಹಿಂದುಳಿದ ವರ್ಗಗಳಿಗೆ ಚುನಾವಣೆಯಲ್ಲಿ ನೀಡಲಾಗಿದ್ದ 27% ಮೀಸಲಾತಿ ಸಂವಿಧಾನ ಬದ್ಧವಾಗಿಲ್ಲ, ಹಾಗಾಗಿ ಈ ಮೇಲಿನ ಮೂರು ಹಂತದ ವಿಶ್ಲೇಷಣೆ ಆಗುವವರೆಗೆ ಇವರನ್ನು ಸಾಮಾನ್ಯ ವರ್ಗದಲ್ಲಿ ಸೇರಿಸಿ ಹೊಸದಾಗಿ ಚುನಾವಣೆ ನಡೆಸಬೇಕು ಎಂದು ಸುಪ್ರೀಂ ಕೋರ್ಟ್ ಆದೇಶ ನೀಡಿತ್ತು. ಈ ನಿರ್ಣಯದಿಂದಾಗಿ ದೇಶದ ಎಲ್ಲಾ ರಾಜ್ಯಗಳಲ್ಲಿ ಹಿಂದುಳಿದ ಜಾತಿಗಳಿಗೆ ಸ್ಥಳೀಯ ಸಂಸ್ಥೆಗಳಲ್ಲಿ ಮೀಸಲಾತಿ ಸೌಲಭ್ಯ ಸಿಗುವುದಿಲ್ಲ.
ಈಗ ನಮ್ಮಲ್ಲಿ ಬೆಂಗಳೂರು ಮಹಾನಗರ ಪಾಲಿಕೆ, ಜಿಲ್ಲಾ ಮತ್ತು ತಾಲೂಕು ಪಂಚಾಯತ್ ಚುನಾವಣೆ ನಡೆಯಬೇಕಿದ್ದು, ಈ ಚುನಾವಣೆಯಲ್ಲಿ ಹಿಂದುಳಿದ ಜಾತಿಗಳಿಗೆ ಮೀಸಲಾತಿ ಸೌಲಭ್ಯ ತಪ್ಪಿ ಹೋಗಲಿದೆ. ನಮ್ಮ ರಾಜ್ಯದಲ್ಲಿ ಹಿಂದುಳಿದ ಜಾತಿಗಳಿಗೆ 33% ಮೀಸಲಾತಿ ಇದೆ, ಆದರೆ ಇದು ಮುಂಬರುವ ಬೆಂಗಳೂರು ಮಹಾನಗರ ಪಾಲಿಕೆ, ತಾಲೂಕು ಹಾಗೂ ಜಿಲ್ಲಾ ಪಂಚಾಯತ್ ಚುನಾವಣೆಗಳಿಗೆ ಅನ್ವಯವಾಗಲ್ಲ.
ನಮ್ಮ ಸರ್ಕಾರದ ಅವಧಿಯಲ್ಲಿ ಕಾಂತರಾಜ್ ಅವರ ಅಧ್ಯಕ್ಷತೆಯಲ್ಲಿ ಹಿಂದುಳಿದ ವರ್ಗಗಳ ಶಾಶ್ವತ ಆಯೋಗ ಮನೆ ಮನೆಗೆ ತೆರಳಿ ಆರ್ಥಿಕ, ಸಾಮಾಜಿಕ ಹಾಗೂ ಶೈಕ್ಷಣಿಕ ಸ್ಥಿತಿಗತಿಗಳ ಬಗ್ಗೆ ಸಮೀಕ್ಷೆ ಮಾಡಿದೆ‌. ಹೀಗಾಗಿ ರಾಜ್ಯ ಸರ್ಕಾರ ತಕ್ಷಣ ಸುಪ್ರೀಂ ಕೋರ್ಟ್ ಹೇಳಿರುವ ಮೂರು ಹಂತದ ವಿಶ್ಲೇಷಣೆಯನ್ನು ಪೂರ್ಣಗೊಳಿಸಿರುವ ವರದಿ ನಮ್ಮ ಬಳಿಯಿದೆ, ಈ ಆಧಾರದ ಮೇಲೆ ಮೀಸಲಾತಿ ನೀಡಲು ಅವಕಾಶ ಕೇಳಬೇಕು. ಸರ್ಕಾರ ಇದನ್ನು ಮಾಡದೆ ಹೋದರೆ ಚುನಾವಣೆಯಲ್ಲಿ ಹಿಂದುಳಿದ ವರ್ಗಗಳ ಜನರ ಮೀಸಲಾತಿ ಸೌಲಭ್ಯ ಕೈತಪ್ಪಿಹೋಗುತ್ತೆ.
ಸರ್ಕಾರ ಈ ವಿಷಯದಲ್ಲಿ ನಿರ್ಲಕ್ಷ್ಯ ವಹಿಸಿದಂತೆ ಕಾಣುತ್ತಿದೆ. ಈಶ್ವರಪ್ಪ ಅವರು ಒಮ್ಮೆ ಈ ವಿಷಯವನ್ನು ಉಲ್ಲೇಖಿಸಿದ್ದು ಬಿಟ್ಟರೆ ಸರ್ಕಾರ ಯಾವತ್ತೂ ಈ ಬಗ್ಗೆ ಚರ್ಚೆ ನಡೆಸಿರುವ ಮಾಹಿತಿ ಇಲ್ಲ. ಕೂಡಲೇ ರಾಜ್ಯ ಸರ್ಕಾರ ಕಾನೂನು ತಜ್ಞರು ಹಾಗೂ ವಿರೋಧ ಪಕ್ಷದವರನ್ನು ಕರೆದು ಚರ್ಚೆ ಮಾಡಿ ಪರಿಹಾರ ಕಂಡುಕೊಳ್ಳಬೇಕು. ಇಲ್ಲದಿದ್ದರೆ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರು ಸಂವಿಧಾನಕ್ಕೆ 73 ಹಾಗೂ 74 ನೇ ತಿದ್ದುಪಡಿ ತಂದು ಹಿಂದುಳಿದ ವರ್ಗ, ಮಹಿಳೆಯರಿಗೆ ನೀಡಿದ್ದ ಮೀಸಲಾತಿ ಮಣ್ಣುಪಾಲಾಗುತ್ತದೆ.
  • ಸಿದ್ದರಾಮಯ್ಯ, ಮಾಜಿ ಸಿಎಂ

Leave a Reply