ಮಂಗಳೂರು: ಆದಿವಾಸಿ ಬುಡಕಟ್ಟು ಸಮುದಾಯಗಳ ಶ್ರೇಯೋಭಿವೃದ್ಧಿಗಾಗಿ ಸದಾ ಶ್ರಮಿಸಬೇಕಾಗಿದ್ದ ಐಟಿಡಿಪಿ ಇಲಾಖೆ ತನ್ನ ಸಂವಿಧಾನ ಕರ್ತವ್ಯವನ್ನು ಮರೆತು ಜನ ವಿರೋಧಿಯಾಗಿ ವರ್ತಿಸುತ್ತಿದೆ ಎಂದು ಸಿಐಟಿಯು ಕಾರ್ಮಿಕ ಸಂಘಟನೆಯ ದಕ್ಷಿಣ ಕನ್ನಡ ಜಿಲ್ಲಾ ಪ್ರಧಾನ ಕಾರ್ಯದರ್ಶಿ, ಸುನಿಲ್ ಕುಮಾರ್ ಬಜಾಲ್ ರವರು ಆಕ್ರೋಶ ವ್ಯಕ್ತಪಡಿಸಿದರು.
ಕರ್ನಾಟಕ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿಯ ಕೆರೆಕಾಡು ಘಟಕದ ನೇತೃತ್ವದಲ್ಲಿ ಕೊಟ್ಟಾರದಲ್ಲಿರುವ ಐಟಿಡಿಪಿ ಕಛೇರಿಯ ಎದುರು ವಸತಿ ಯೋಜನೆಯ ಫಲಾನುಭವಿಗಳಿಗೆ ಕಳೆದ 8 ತಿಂಗಳಿನಿಂದ ಸಹಾಯಧನದ ಕಂತು ಬಿಡುಗಡೆ ಮಾಡದೆ ಸತಾಯಿಸುತ್ತಿರುವುದರ ವಿರುದ್ಧ ನಡೆದ ಪ್ರತಿಭಟನೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಸಮಗ್ರವಾಗಿ ಐಟಿಡಿಪಿ ಇಲಾಖೆಯ ಕಾರ್ಯವೈಖರಿ ಬದಲಾಗಬೇಕು.ಆದಿವಾಸಿ ಕೊರಗ ಸಮುದಾಯದ ಜನರ ಬದುಕಿನೊಂದಿಗೆ ಚೆಲ್ಲಾಟವಾಡುತ್ತಿರುವ ಐಟಿಡಿಪಿ ಇಲಾಖೆಯ ಧೋರಣೆಯು ಯಾವುದೇ ಕಾರಣಕ್ಕೂ ಸಹಿಸಲು ಸಾಧ್ಯವಿಲ್ಲ ಎಂದರು.
ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ DYFI ಜಿಲ್ಲಾಧ್ಯಕ್ಷ ಜಿ.ಕೆ.ಇಮ್ತಿಯಾಜ್, ಅತ್ಯಂತ ಶೋಷಿತ ಸಮುದಾಯವಾದ ಕೊರಗ ಸಮುದಾಯದ ಬದುಕನ್ನು ಉತ್ತಮ ಪಡಿಸಲು ಪ್ರಾಮಾಣಿಕ ಪ್ರಯತ್ನ ಪಡಬೇಕಾದ ಸರಕಾರಗಳು ಅವರ ಹಕ್ಕನ್ನು ಕಸಿಯಲು ಹೊರಟಿರುವುದು ತೀರಾ ಖಂಡನೀಯ ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಆದಿವಾಸಿ ಹಕ್ಕುಗಳ ಸಮಿತಿಯ ಗೌರವ ಸಲಹೆಗಾರ ಯೋಗೀಶ್ ಜಪ್ಪಿನಮೊಗರು, ಕೆರೆಕಾಡು ಪ್ರದೇಶದ ಕೊರಗ ಸಮುದಾಯದ ಮನೆ ನಿರ್ಮಾಣಕ್ಕೆ ಸಂಬಂಧಿಸಿ ಕಳೆದ 14 ತಿಂಗಳಿನಿಂದ ನೀಡಬೇಕಾದ ಸರಕಾರದ ಹಣವನ್ನು ವಿನಾ ಕಾರಣ ವಿಳಂಬಗೊಳಿಸುವ ಮೂಲಕ ಆದಿವಾಸಿ ವಿರೋಧಿ ಮನೋಭಾವವನ್ನು ತಳೆದಿರುವ ITDP ಯೋಜನೆಯ ಅಧಿಕಾರಿಗಳ ಕ್ರಮವನ್ನು ತೀವ್ರವಾಗಿ ಖಂಡಿಸಿದರು.
ಪ್ರತಿಭಟನೆ ಉದ್ದೇಶಿಸಿ ಆದಿವಾಸಿ ಹಕ್ಕುಗಳ ಸಮಿತಿಯ ನಾಯಕರಾದ ಕರಿಯ ಕೆ, ಕೃಷ್ಣ ಇನ್ನ, ರಶ್ಮಿ ವಾಮಂಜೂರು, ತುಳಸಿ ಪಡುಬಿದ್ರಿ ಮಾತನಾಡಿ ITDP ಯೋಜನೆಯ ಬೇಜಾವಬ್ದಾರಿತನವನ್ನು ಟೀಕಿಸಿದರು.
ಪ್ರತಿಭಟನೆಯಲ್ಲಿ ಕಾರ್ಮಿಕ ಮುಖಂಡರಾದ ಅಶೋಕ್ ಶ್ರೀಯಾನ್, ಕರ್ನಾಟಕ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿಯ ನಾಯಕರಾದ ಶೇಖರ್ ವಾಮಂಜೂರು, ಕೆರೆ ಕಾಡು ಘಟಕದ ಮುಖಂಡರಾದ ಅಭಿಜಿತ್, ಶಶಿಧರ್, ಕೇಶವ, ಮನೋಹರ್, ರಮೇಶ್ ಕೆರೆಕಾಡು ರವೀಂದ್ರ, ಕಿಶನ್, ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿಯ ಮಂಗಳೂರಿನ ಉಪಾಧ್ಯಕ್ಷ ಪ್ರಶಾಂತ್ ಕಂಕನಾಡಿ, ನವೀನ್ ಕಂಕನಾಡಿ, ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿಯ ಮಹಿಳಾ ಮುಖಂಡರಾದ ನಿಶ್ಚಿತ, ಮಂಜುಳಾ, ಪೂರ್ಣಿಮಾ, ಶ್ವೇತ, ಸುಶೀಲ ಮುಂತಾದವರು ಭಾಗವಹಿಸಿದ್ದರು.




