ಲೋಕಸಭೆ ಚುನಾವಣೆಯಲ್ಲಿ ಕನಿಷ್ಠ 20 ಸ್ಥಾನಗಳನ್ನು ಗೆಲ್ಲಲು ಯೋಜನೆ

2 years ago

#Congress #Plan #win #seats #LokSabha #elections

ಬೆಂಗಳೂರು: ರಾಜ್ಯದಲ್ಲಿ ಅಧಿಕಾರದಲ್ಲಿರುವ ಕಾಂಗ್ರೆಸ್ ಲೋಕಸಭಾ ಚುನಾವಣೆಯಲ್ಲಿ ಅತ್ಯಧಿಕ ಸ್ಥಾನ ಗೆಲ್ಲಲು ಸಿದ್ಧತೆ ನಡೆಸಿದೆ. ವಿಧಾನಸಭೆ ಚುನಾವಣೆಯಲ್ಲಿ 136 ಸ್ಥಾನ ಗಳಿಸುವ ಮೂಲಕ ಅಧಿಕಾರಕ್ಕೆ ಬಂದ ಕಾಂಗ್ರೆಸ್, ಇದೇ ಯಶಸ್ಸಿನ ಆಧಾರದಲ್ಲಿ ಲೋಕಸಭೆ ಚುನಾವಣೆಯಲ್ಲಿ ಕನಿಷ್ಠ 20 ಸ್ಥಾನಗಳನ್ನು ಗೆಲ್ಲಲು ಯೋಜನೆಗಳನ್ನು ರೂಪಿಸುತ್ತಿದೆ.

ಒಂದು ಕಾಲದಲ್ಲಿ ಕಾಂಗ್ರೆಸ್ ಭದ್ರಕೋಟೆ ಎನಿಸಿದ್ದ ಕ್ಷೇತ್ರಗಳು ಬಿಜೆಪಿಯ ಗಟ್ಟಿತಾಣಗಳಾಗಿ ಪರಿವರ್ತನೆಯಾಗಿವೆ. ಇಂತಹ ಕ್ಷೇತ್ರಗಳನ್ನು ಮತ್ತೊಮ್ಮೆ ಗೆಲ್ಲಲು ಕಾಂಗ್ರೆಸ್ ಗೆಲ್ಲುವ ಸೂಕ್ತ ಅಭ್ಯರ್ಥಿಗಳ ಹುಡುಕಾಟ ನಡೆಸಿದೆ.

ರಾಜ್ಯದ ಎಲ್ಲ 28 ಕ್ಷೇತ್ರಗಳಿಗೂ ಸಚಿವರನ್ನು ಉಸ್ತುವಾರಿಗಳಾಗಿ ನೇಮಕ ಮಾಡಿದ್ದು,ಅಭ್ಯರ್ಥಿಗಳ ಆಯ್ಕೆ ಮತ್ತು ಚುನಾವಣೆ ಕಾರ್ಯತಂತ್ರ ರೂಪಿಸಲು ಸೂಚನೆ ನೀಡಲಾಗಿದೆ. ಈ ಉಸ್ತುವಾರಿಗಳು ಕ್ಷೇತ್ರದ ಮುಖಂಡರ ಸಭೆ ನಡೆಸುತ್ತಿದ್ದು,ರಾಜ್ಯದ ಮೇಲ್ಮಟ್ಟದ ಸಮಿತಿಗೆ ವರದಿ ನೀಡುತ್ತಿದ್ದಾರೆ.

ಉಸ್ತುವಾರಿಗಳು ನೀಡಿದ ವರದಿಯನ್ನು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸರ್ಜೇವಾಲಾ, ಕೆ.ಸಿ.ವೇಣುಗೋಪಾಲ್ ನೇತೃತ್ವದ ತಂಡ ಪರಿಶೀಲನೆ ನಡೆಸಿದೆ. ಕಳೆದ ಮೂರು ಚುನಾವಣೆಗಳಲ್ಲಿ ಕಣಕ್ಕಿಳಿದ ಅಭ್ಯರ್ಥಿಗಳು, ಅವರು ಗಳಿಸಿರುವ ಮತಗಳು, ಚುನಾವಣೆಯಲ್ಲಿ ರೂಪಿಸಿದ ಕಾರ್ಯತಂತ್ರಗಳ ಮಾಹಿತಿಯನ್ನು ಪರಿಶೀಲಿಸಿ ಕ್ಷೇತ್ರಗಳಲ್ಲಿ ಗೆಲುವು ಸಾಧಿಸುವ ಅಭ್ಯರ್ಥಿಗಳೇ ಇಲ್ಲ ಎಂದು ಹೇಳಿದ್ದು, ಗೆಲ್ಲುವ ಅಭ್ಯರ್ಥಿಗಳನ್ನು ಹುಡುಕಿ ಸೂಕ್ತ ಕಾರ್ಯ ತಂತ್ರ ರೂಪಿಸುವಂತೆ ಹೇಳಿರುವುದಾಗಿ ವರದಿಯಾಗಿದೆ.

ಆಡಳಿತಾರೂಢ ಪಕ್ಷ ಕಾಂಗ್ರೆಸ್ ಗೆ ಪ್ರಮುಖವಾಗಿ ರಾಜಧಾನಿ ಬೆಂಗಳೂರಿನ ಕೇಂದ್ರ, ದಕ್ಷಿಣ, ಉತ್ತರ, ಬೆಳಗಾವಿ, ಚಿಕ್ಕೋಡಿ, ಧಾರವಾಡ, ಹಾವೇರಿ, ವಿಜಯಪುರ, ಬಾಗಲಕೋಟೆ, ದಾವಣಗೆರೆ, ಶಿವಮೊಗ್ಗ, ದಕ್ಷಿಣ ಕನ್ನಡ, ಉತ್ತರ ಕನ್ನಡ ಕ್ಷೇತ್ರಗಳಿಗೆ ಇದುವರೆಗೆ ಸಮರ್ಥ ಅಭ್ಯರ್ಥಿಗಳು ಇಲ್ಲ. ಜೊತೆಗೆ ಮೈಸೂರು-ಕೊಡಗು ಕ್ಷೇತ್ರ, ಮಂಡ್ಯ, ಹಾಸನ, ಚಾಮರಾಜನಗರ, ಕೋಲಾರ, ತುಮಕೂರು ಕ್ಷೇತ್ರದಲ್ಲಿ ಕೂಡ ಕಾಂಗ್ರೆಸ್ ಗೆಲ್ಲುವ ಅಭ್ಯರ್ಥಿಗಳ ಬರ ಎದುರಿಸುತ್ತಿದೆ.

ಪಕ್ಷ ಆಡಳಿತ ನಡೆಸುತ್ತಿರುವ ಕಾರಣದಿಂದ ಕೆಲವರು ಚುನಾವಣೆ ಸ್ಪರ್ಧೆಗೆ ಆಸಕ್ತಿ ಹೊಂದಿದ್ದರೂ ಅಂತಹ ಬಹುತೇಕ ಅಭ್ಯರ್ಥಿಗಳಲ್ಲಿ ಗೆಲ್ಲುವ ಸಾಮರ್ಥ್ಯ ಇಲ್ಲವೆಂಬುದು ಈ ಹಿಂದಿನ ಚುನಾವಣಾ ಫಲಿತಾಂಶಗಳನ್ನು ನೋಡಿದರೆ ಅರಿವಾಗುತ್ತದೆ.

ಪಕ್ಷದ ಈ ಅಸಮರ್ಥತೆಯನ್ನು ನಿವಾರಿಸಲು ಬಿಜೆಪಿ ಹಾಗೂ ಜೆಡಿಎಸ್ ನಿಂದ ಪ್ರಭಾವಿ ನಾಯಕರನ್ನು ಕರೆತರುವ ಯತ್ನ ನಡೆದಿದೆ. ಈ ನಡುವೆ ಬಿಜೆಪಿ ನೇತೃತ್ವದ ಎನ್ ಡಿಎ ಮೈತ್ರಿಕೂಟವನ್ನು ಜೆಡಿಎಸ್ ಸೇರಿಕೊಂಡಿದ್ದು, ರಾಜ್ಯ ಬಿಜೆಪಿ ಅಧ್ಯಕ್ಷರಾಗಿ ಬಿ.ವೈ ವಿಜಯೇಂದ್ರ ನೇಮಕದಿಂದ ಕಾಂಗ್ರೆಸ್ ಗೆ ಹಿನ್ನಡೆಯಾದಂತೆ ತೋರುತ್ತಿದೆ.

ವಿಪಕ್ಷ ನಾಯಕನ ಆಯ್ಕೆ, ರಾಜ್ಯ ಅಧ್ಯಕ್ಷರ ನೇಮಕ ಮತ್ತು ರಾಜ್ಯದತ್ತ ಬಿಜೆಪಿ ಹೈಕಮಾಂಡ್ ತೋರಿದ್ದ ಅಸಡ್ಡೆಯ ಹಿನ್ನೆಲೆಯಲ್ಲಿ ಈ ಹಿಂದೆ ಕಾಂಗ್ರೆಸ್ ಸೇರಲು ಆಸಕ್ತಿ ತೋರಿಸಿದ್ದ ಕೆಲವು ನಾಯಕರನ್ನು ಹಿಡಿದಿಟ್ಟುಕೊಳ್ಳುವ ಯತ್ನಕ್ಕೆ ಹೈಕಮಾಂಡ್ ಮುಂದಾಗಿದ್ದು, ವಿ.ಸೋಮಣ್ಣ, ಬಸನಗೌಡ ಪಾಟೀಲ್ ಯತ್ನಾಳ್, ಅರವಿಂದ ಲಿಂಬಾವಳಿ ಮೊದಲಾದವರನ್ನು ದೆಹಲಿಗೆ ಬರುವಂತೆ ಕರೆನೀಡಿದೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ನತ್ತ ಮುಖಮಾಡಿದ್ದ ಬಿಜೆಪಿ ನಾಯಕರು ದೆಹಲಿಯತ್ತ ಮುಖತಿರುಗಿಸಿದ್ದಾರೆ. ಈ ನಡೆ ಕೂಡ ಕಾಂಗ್ರೆಸ್ ನಾಯಕರ ಉತ್ಸಾಹಕ್ಕೆ ತಣ್ಣೀರರಚಿದೆ.

ಈ ಎಲ್ಲ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಕಾಂಗ್ರೆಸ್ ಗೆಲ್ಲುವ ಅಭ್ಯರ್ಥಿಗಳ ಹುಡುಕಾಟ ನಡೆಸಿದೆ. ಪಂಚರಾಜ್ಯಗಳ ಚುನಾವಣೆ ಫಲಿತಾಂಶ ಘೋಷಣೆಯಾದ ನಂತರ ಬೇರೆ ಪಕ್ಷಗಳ ನಾಯಕರನ್ನು ಪಕ್ಷಕ್ಕೆ ಸೆಳೆಯುವತ್ತ ಕಾಂಗ್ರೆಸ್ ಮತ್ತಷ್ಟು ಸಕ್ರಿಯವಾಗುವ ಸಾಧ್ಯತೆ ಇದೆ.

Leave a Reply