ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷರಾಗಿ ಬಿ.ವೈ.ವಿಜಯೇಂದ್ರ ಮತ್ತು ವಿಧಾನಸಭೆಯ ಪ್ರತಿಪಕ್ಷದ ನಾಯಕರಾಗಿ ಆರ್.ಅಶೋಕ್ ಅವರನ್ನು ನೇಮಕ ಮಾಡಿರುವುದಕ್ಕೆ ಅಸಮಾಧಾನಗೊಂಡಿರುವ ನಾಯಕರ ತಂಡ ವರಿಷ್ಠರನ್ನು ಭೇಟಿ ಮಾಡಿ, ತಮ್ಮ ನಿಲುವು ಸ್ಪಷ್ಟಪಡಿಸಲು ತೀರ್ಮಾನ ಮಾಡಿದೆ.
ನೇಮಕ ಕುರಿತು ವರಿಷ್ಠರ ನಿರ್ಧಾರ ವಿರೋಧಿಸಿ ಪಕ್ಷ ತೊರೆಯಲು ಸಿದ್ಧತೆ ನಡೆಸಿರುವ ಮಾಜಿ ಸಚಿವ ವಿ.ಸೋಮಣ್ಣ, ಅರವಿಂದ ಲಿಂಬಾವಳಿ ವರಿಷ್ಠರಿಗೆ ತಮ್ಮ ನಿಲುವು ತಿಳಿಸಲು ಮುಂದಾಗಿದ್ದಾರೆ. ಇವರಿಗೆ ಮಾಜಿ ಸಚಿವರಾದ ರಮೇಶ್ ಜಾರಕಿಹೊಳಿ, ಬಸನಗೌಡ ಪಾಟೀಲ್ ಯತ್ನಾಳ್ ಸೇರಿದಂತೆ ಹಲವರು ಸಾಥ್ ನೀಡುವ ಸಾಧ್ಯತೆ ಇದೆ ಎಂದು ವರದಿಯಾಗಿದೆ.
ಪಕ್ಷದ ನೂತನ ರಾಜ್ಯಾಧ್ಯಕ್ಷರ ಆಯ್ಕೆ ಮಾಡುವ ಮುನ್ನ ವರಿಷ್ಠರು ಸೌಜನ್ಯಕ್ಕಾದರೂ ರಾಜ್ಯ ನಾಯಕರ ಜೊತೆ ಮಾತುಕತೆ ನಡೆಸಿಲ್ಲ. ಹಿರಿಯರನ್ನು ಕಡೆಗಣಿಸಿ ಕೇವಲ ಯಡಿಯೂರಪ್ಪ ಪುತ್ರ ಎಂಬ ಒಂದೇ ಕಾರಣಕ್ಕಾಗಿ ವಿಜಯೇಂದ್ರ ಅವರನ್ನು ರಾಜ್ಯಾಧ್ಯಕ್ಷರನ್ನಾಗಿ ನೇಮಕ ಮಾಡಿದ್ದಕ್ಕೆ ವಿರೋಧಿ ಬಣ ಅಸಮಾಧಾನ ವ್ಯಕ್ತಪಡಿಸಿದೆ.
ಇದರ ನಡುವೆಯೇ ಅತ್ಯಂತ ಮಹತ್ವದ ಪ್ರತಿಪಕ್ಷದ ನಾಯಕನ ಸ್ಥಾನಕ್ಕೆ ಆರ್.ಅಶೋಕ್ ಅವರನ್ನು ನೇಮಕ ಮಾಡಿರುವುದಕ್ಕೂ ವಿರೋಧಿ ಬಣ ಅಸಮಾಧಾನಗೊಂಡಿದೆ. ಈ ಹಿನ್ನೆಲೆಯಲ್ಲಿ ಸೋಮಣ್ಣ ಮತ್ತು ಅರವಿಂದ ಲಿಂಬಾವಳಿ ಪಕ್ಷ ತೊರೆಯಲು ಮುಂದಾಗಿದ್ದಾರೆ ಎಂಬ ವರದಿಗಳು ಹೈಕಮಾಂಡ್ ತಲುಪಿವೆ. ಈ ಹಿನ್ನೆಲೆಯಲ್ಲಿ ಸಂಧಾನಕ್ಕೆ ಮುಂದಾಗಿರುವ ನಾಯಕರು ಅಸಮಧಾನಗೊಂಡ ನಾಯಕರ ಮುನಿಸು ಶಮನಕ್ಕೆ ಮುಂದಾಗಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಮಾಜಿ ಸಚಿವ ವಿ.ಸೋಮಣ್ಣ, ಕಳೆದ ರಾತ್ರಿ ವರಿಷ್ಠರಿಂದ ಒಂದು ಸಂದೇಶ ಬಂದಿದ್ದು, ಅದರಂತೆ ದೆಹಲಿಗೆ ಹೋಗುತ್ತಿದ್ದೇವೆ. ಡಿ. 7ರಿಂದ 10ರ ವರೆಗೆ ನಾಲ್ಕು ದಿನಗಳ ಕಾಲ ದೆಹಲಿಯಲ್ಲಿ ಇದ್ದು, ವರಿಷ್ಠರನ್ನು ಭೇಟಿಯಾಗುತ್ತೇವೆ ಎಂದು ಹೇಳಿದರು.
ಮಗು ಅತ್ತರೆ ತಾಯಿ ಹಾಲು ಕೊಡುವುದು. ಇಲ್ಲದೆ ಇದ್ದರೆ ತಾಯಿ ಸಹ ಹಾಲು ಕೊಡುವುದಿಲ್ಲ. ನಾವು ಹಿರಿಯರು. ನಮ್ಮದೇ ಆದ ಸೇವೆ, ಅನುಭವ, ಆಲೋಚನೆಗಳು ಇವೆ. ಎಲ್ಲವೂ ನಮ್ಮದೇ ಸರಿ ಎಂದೂ ಹೇಳುವುದಿಲ್ಲ. ಏನೆಲ್ಲ ಆಗಿದೆ ಎಂಬ ವಿಚಾರಗಳನ್ನು ಹೈಕಮಾಂಡ್ ಮುಂದೆ ಇಡಲಾಗುವುದು. ವರಿಷ್ಠರ ನಿರ್ಧಾರದ ಮೇಲೆ ನನ್ನ ನಡೆ ನಿಂತಿದೆ ಎಂದರು.
ನನ್ನ ಜೊತೆಯಲ್ಲಿ ಬಸನಗೌಡ ಪಾಟೀಲ ಯತ್ನಾಳ್, ರಮೇಶ್ ಜಾರಕಿಹೊಳಿ, ಅರವಿಂದ ಲಿಂಬಾವಳಿ, ಅರವಿಂದ್ ಬೆಲ್ಲದ್ ಅವರನ್ನು ಕರೆದುಕೊಂಡು ಡಿ.7ರಂದು ದೆಹಲಿಗೆ ಹೋಗುತ್ತೇನೆ. ವರಿಷ್ಠರನ್ನು ಭೇಟಿಮಾಡಿ ನನ್ನ ಅಭಿಪ್ರಾಯಗಳನ್ನು ತಿಳಿಸುತ್ತೇನೆ. ನಮ್ಮ ನೋವುಗಳನ್ನು ಹೇಳಿಕೊಳ್ಳುತ್ತೇವೆ. ವರಿಷ್ಠರು ಮುಂದಿನ ನಿರ್ಧಾರ ಮಾಡುತ್ತಾರೆ ಎಂದರು.




