ಬೆಂಗಳೂರು: ಬಿಜೆಪಿ ಕಾರ್ಯಕರ್ತರಿಗೆ ತೊಂದರೆ, ಕಿರುಕುಳ, ನೀಡಿದರೆ ಅವರಿಗೆ ಕಾನೂನಿನ ನೆರವು ನೀಡಲು ಅನುಕೂಲವಾಗುವಂತೆ ದಿನದ 24 ಗಂಟೆಯೂ ಕಾರ್ಯ ನಿರ್ವಹಿಸುವ ಕಂಟ್ರೋಲ್ ರೂಮ್ನ್ನು ತೆರೆಯುವುದಾಗಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಘೋಷಿಸಿದ್ದಾರೆ.
ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಈ ವಿಷಯವನ್ನು ಪೋಸ್ಟ್ ಮಾಡಿರುವ ಅವರು, ಸಂವಿಧಾನ ನಮಗೆ ಕೊಡ ಮಾಡಿರುವ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕಲು, ಕಾನೂನು ಪೋಲಿಸರಿಗೆ ಅಧಿಕಾರ ನೀಡಿಲ್ಲ, ಈ ನಿಟ್ಟಿನಲ್ಲಿ ರಾಜ್ಯದ ಯಾವುದೇ ಮೂಲೆಯಲ್ಲೂ ನಮ್ಮ ಕಾರ್ಯಕರ್ತ ಬಂಧುಗಳಿಗೆ ತೊಂದರೆ, ಬೆದರಿಕೆ, ಕಿರುಕುಳಗಳು ಎದುರಾದರೆ ಅವರ ನೆರವಿಗೆ ಪಕ್ಷ ತಕ್ಷಣ ನೆರವಿಗೆ ಬರಲಿದೆ ಎಂದು ಭರವಸೆ ನೀಡಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿರುವ ನಮ್ಮ ಬಿಜೆಪಿ ಕಾರ್ಯಕರ್ತರನ್ನು ಗುರಿಯಾಗಿಟ್ಟುಕೊಂಡು ಪೊಲೀಸ್ ಕಿರುಕುಳ ನೀಡುತ್ತಿರುವ ಬಗ್ಗೆ ದೂರುಗಳು ಕೇಳಿಬರುತ್ತಿವೆ. ಇಷ್ಟರಲ್ಲೇ ರಾಜ್ಯ ಹಾಗೂ ಜಿಲ್ಲೆಯ ಪಕ್ಷದ ಕಛೇರಿಗಳಲ್ಲಿ ಕಾನೂನು ನೆರವಿಗಾಗಿ ದಿನದ 24 ಗಂಟೆಯೂ ಕಾರ್ಯ ನಿರ್ವಹಿಸಲು ಕಂಟ್ರೋಲ್ ರೂಂ ತೆರೆಯುವ ಬಗ್ಗೆ ನಿರ್ಧರಿಸಲಾಗುವುದು ಎಂದಿದ್ದಾರೆ.
ಸಾಮಾಜಿಕ ಜಾಲತಾಣ ಸೇರಿದಂತೆ ಯಾವುದೇ ವೇದಿಕೆಗಳಲ್ಲಿ ಕಾಂಗ್ರೆಸ್ ಸರ್ಕಾರದ ಜನವಿರೋಧಿ ಧೋರಣೆಯ ವಿರುದ್ಧ ಹಾಗೂ ಸರ್ಕಾರದ ವೈಫಲ್ಯಗಳ ವಿರುದ್ಧ ದನಿ ಎತ್ತಲು ಕಾರ್ಯಕರ್ತರು ಯಾವುದಕ್ಕೂ ಅಂಜಬೇಕಿಲ್ಲ, ಎದೆಗುಂದ ಬೇಕಿಲ್ಲ ಎಂದು ಕಾರ್ಯಕರ್ತರಿಗೆ ಬೆಂಬಲ ಘೋಷಿಸಿದ್ದಾರೆ.




