ಸಂವೇದನಾಶೀಲ ಕಥೆಗಾರ, ಸಿನಿಮಾ ನಿರ್ದೇಶಕ, ನನ್ನ ಆತ್ಮೀಯ ಗೆಳೆಯನಾದ ಪ್ರಕಾಶರಾಜ್ ಮೇಹು Prakasharaj Mehu Prakasharaj Mehu ಅವರ ಒತ್ತಾಸೆಯಿಂದ “ಫೋಟೋ” ಸಿನಿಮಾ ನೋಡಿದೆ. ‘Public memory is short’ ಎಂಬ ಆಂಗ್ಲ ಮಾತೊಂದಿದೆ. ಕೋವಿಡ್ ಕಾಲದಲ್ಲಿ ದೇಶದ ಬಡ ಜನತೆ ಜೀವನಾವಶ್ಯಕವಾದ ಅನ್ನಾಹಾರ, ಔಷಧ ಮತ್ತಿತರ ಅಗತ್ಯ ವಸ್ತುಗಳು ಸಿಗದೆ ಎದುರಿಸಿದ ಸಂಕಟಗಳನ್ನು ಸಾವುನೋವುಗಳನ್ನು ಹಾಗೂ ಆಳುವ ವರ್ಗಗಳು ಎಸಗಿದ ಕ್ರೌರ್ಯಗಳನ್ನು ಮರೆಯದಿರುವಂತೆ ಎಚ್ಚರಿಸುವ ಸಿನಿಮಾ “ಫೋಟೋ”.
- ಭಾರತದ 72% IAS ಅಧಿಕಾರಿಗಳು, 90% ಹೈಕೋರ್ಟ್ ನ್ಯಾಯಮೂರ್ತಿಗಳು ಬ್ರಾಹ್ಮಣರೇ?
- ಪ್ರವಾಸಿ ಮಾರ್ಗದರ್ಶಿ ತರಬೇತಿಗೆ ಅರ್ಜಿ ಆಹ್ವಾನ
- ಬೆಂಗಳೂರು ನಗರಾಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಅವರಿಂದ ‘ಫ್ರೀಡಂ ಹಬ್ಬ’ ಘೋಷಣೆ
- ರಾಜೀನಾಮೆ ಸಲ್ಲಿಸುವ ಮೂಲಕ ಅಸಮಾಧಾನ ವ್ಯಕ್ತಪಡಿಸಿದ ಬಿ.ಆರ್.ಪಾಟೀಲ್
- ಫೆಲೋಶಿಪ್ಗೆ ಅರ್ಜಿ ಆಹ್ವಾನ
ಕಲ್ಯಾಣ ಕರ್ನಾಟಕದ ಪ್ರಾದೇಶಿಕ ಕನ್ನಡ ಭಾಷಾ ಸೊಗಡಿನಲ್ಲಿ, ಯುವ ನಿರ್ದೇಶಕ ಉತ್ಸವ್ ಗೋನವಾರ ನಿರ್ದೇಶಿಸಿರುವ “ಫೋಟೊ” ನೀವು ನೋಡಲೇಬೇಕಾದ ಸಿನಿಮಾ ಎಂದರೆ ತಪ್ಪಾಗಲಾರದು. 138 ನಿಮಿಷಗಳ ಈ ಸಿನಿಮಾ, ಕೋವಿಡ್ ಕಾಲದಲ್ಲಿ ಜಾರಿಗೊಳಿಸಿದ್ದ ಲಾಕ್ ಡೌನ್ ನ ಪರಿಣಾಮಗಳನ್ನು ಚಿತ್ರಿಸಿದೆ. ರಾಯಚೂರು ಜಿಲ್ಲೆಯ ಮಸ್ಕಿ ತಾಲ್ಲೂಕಿನ ಹತ್ತು ವರ್ಷದ ಶಾಲಾ ಬಾಲಕ ದುರ್ಗ್ಯಾನಿಗೆ ಬೆಂಗಳೂರಿನ ವಿಧಾನಸೌಧ ನೋಡುವ ಮತ್ತು ಅದರ ಎದುರು ನಿಂತು ಫೋಟೋ ತೆಗೆಸಿಕೊಳ್ಳುವ ತೀವ್ರ ಆಸೆ ಹುಟ್ಟುತ್ತದೆ. ದುರ್ಗ್ಯಾನ ಅಪ್ಪ ಬೆಂಗಳೂರಿನಲ್ಲಿ ಕಟ್ಟಡ ಕಾರ್ಮಿಕನಾಗಿ ಕೆಲಸ ಮಾಡುತ್ತಿರುತ್ತಾನೆ. ಮಸ್ಕಿಯಲ್ಲಿರುವ ತನ್ನ ಹೆಂಡತಿ ಮತ್ತು ಮಗನನ್ನು ನೋಡಲು ತಿಂಗಳಿಗೊಮ್ಮೆ ಬಂದು ದುಡ್ಡುಕಾಸು ಕೊಟ್ಟು ಬೆಂಗಳೂರಿಗೆ ವಾಪಸ್ಸಾಗುತ್ತಿರುತ್ತಾನೆ. ವಿಧಾನಸೌಧ ನೋಡುವಾಸೆಯನ್ನು ಈಡೇರಿಸಲು ದುರ್ಗ್ಯಾನ ತಾಯಿ ಶಾಲೆಯ ರಜಾ ಅವಧಿಯಲ್ಲಿ ಮಗನನ್ನು ಅಪ್ಪನ ಬಳಿಗೆ ಕಳಿಸುತ್ತಾಳೆ.
ಬೆಂಗಳೂರಿಗೆ ಬಂದ ದುರ್ಗ್ಯಾ ಇನ್ನೇನು ನಾಳೆ ಬೆಳಗ್ಗೆ ಅಪ್ಪನ ಜೊತೆ ಹೋಗಿ ವಿಧಾನಸೌಧ ನೋಡಿ ಅದರೆದುರು ಫೋಟೋ ತೆಗೆಸಿಕೊಳ್ಳಬೇಕೆನ್ನುವಷ್ಟರಲ್ಲಿ ಇದ್ದಕ್ಕಿದ್ದಂತೆ ರಾತ್ರಿಯೇ “ಲಾಕ್ ಡೌನ್” ಘೋಷಣೆಯಾಗಿಬಿಡುತ್ತದೆ. ವಿಧಾನಸೌಧವನ್ನು ನೋಡಬೇಕೆಂಬ ದುರ್ಗ್ಯಾನ ಆಸೆ ಭಗ್ನವಾಗುತ್ತದೆ. ಲಾಕ್ ಡೌನ್ ಹೊತ್ತಿನಲ್ಲಿ ಬೆಂಗಳೂರಿನಲ್ಲಿ ಕೂಲಿನಾಲಿ ಸಿಗದೆ ಬದುಕುವುದು ಕಷ್ಟವೆನ್ನಿಸಿ ಅಪ್ಪ ಮತ್ತು ಮಗ ಇಬ್ಬರೂ ಮಸ್ಕಿಯ ದಾರಿ ಹಿಡಿಯುತ್ತಾರೆ. ದುಡಿದು ಬದುಕು ಕಟ್ಟಿಕೊಂಡೇವೆಂದು ದುಡಿಮೆಯ ಆಸರೆಗಳನ್ನು ಅರಸಿ ಹಳ್ಳಿಗಳನ್ನು ತೊರೆದು ಬೆಂಗಳೂರಿಗೆ ಬಂದು ಆಸರೆ ಕಳೆದುಕೊಂಡ ಲಕ್ಷಾಂತರ ಜನರ ದುರಂತಮಯ ಪ್ರಯಾಣವನ್ನು ತಂದೆ-ಮಗನ ಕಾಲ್ನಡಿಗೆಯ ಪ್ರಯಾಣ ಒಂದು ರೂಪಕವಾಗಿ ಸಂಕೇತಿಸುತ್ತದೆ. ನೂರಾರು ಕಿಲೋಮೀಟರ್ ಬಿಸಿಲು ದಾರಿ ನಡೆದು ಮಾರ್ಗ ಮಧ್ಯದಲ್ಲಿ ಜ್ವರ ಪೀಡಿತನಾಗಿ ದುರ್ಗ್ಯಾ ಸತ್ತು ಹೋಗುತ್ತಾನೆ.
ಇದೇನು ಕಾಲ್ಪನಿಕ ಕಥೆಯಲ್ಲ. ಜನರಿಗೆ ಅನ್ನಾಹಾರ, ಔಷಧಿ, ನೀರು, ನೆರಳಿನ ಯಾವುದೇ ಪೂರ್ವಸಿದ್ಧತೆಗಳಿರದೆ ಏಕಾಏಕಿ ಲಾಕ್ ಡೌನ್ ಘೋಷಣೆ ಮಾಡಿದ್ದರಿಂದಾಗಿ ಉಂಟಾದ ಕರಾಳ ಪರಿಣಾಮಗಳ ನೈಜ ಚಿತ್ರಣ ಇದು. ನಾವು ನಮ್ಮ ಕಣ್ಣೆದುರು ಕಂಡಂತೆ ಕೊರೋನಾ ವೈರಸ್ ನಿರ್ಮೂಲನೆ ಮಾಡಲು ವೈದ್ಯಕೀಯ ವ್ಯವಸ್ಥೆಗಳಿಗಿಂತಲೂ ದೀಪಗಳನ್ನು ಬೆಳಗುವ, ಚಪ್ಪಾಳೆ ಬಾರಿಸುವ ಮೌಢ್ಯಗಳನ್ನು ಬಿತ್ತಲಾಯಿತು. ಇದೇ ಹೊತ್ತಿನಲ್ಲಿ ಲಕ್ಷಾಂತರ ಬಡವರು, ದಿನಗೂಲಿ ಕಾರ್ಮಿಕರು ಹೊಟ್ಟೆಗೆ ಅನ್ನ, ಕುಡಿಯಲು ನೀರು, ಔಷಧ, ಆಕ್ಸಿಜನ್ ಇಲ್ಲದೆ ಹಾಗೂ ಸಾವುನೋವುಗಳಿಂದ ತತ್ತರಿಸಿ ಹೋದರು.
ಇಂತಹ ಕರಾಳ ಅನುಭವಗಳನ್ನು ನಾವು ಮರೆಯದಂತೆ ಎಚ್ಚರಿಸುವ “ಫೋಟೋ” ಎಂಬ ಸಿನಿಮಾವನ್ನು ಪ್ರತಿಭಾವಂತ ಯುವ ನಿರ್ದೇಶಕ ಉತ್ಸವ್ ಗೋನವಾರ ಮತ್ತು ಅವರ ಚಿತ್ರತಂಡ ನೀಡಿದೆ. ದುರ್ಗ್ಯಾನಂತಹ ಬಡವರ, ಅಮಾಯಕರ ಸಾವುಗಳ ಎದುರು ಫೋಟೋ ಕ್ಯಾಮೆರಾಕ್ಕೆ ಸದಾಕಾಲವೂ ಮುಖ ತೋರಿಸುವ ವ್ಯಸನವನ್ನು ಮುದ್ದಿಸುವ ಪ್ರವೃತ್ತಿಗೆ “ಫೋಟೋ” ಸಿನಿಮಾ ಕ್ಯಾಮೆರಾ ಹಿಡಿದಿದೆ.
- ಡಾ.ವಡ್ಡಗೆರೆ ನಾಗರಾಜಯ್ಯ, ಹಿರಿಯ ಸಾಹಿತಿಗಳು



