‘ಫೊಟೊ’ ಸಿನೆಮಾ ಮತ್ತು ನಮ್ಮ ಶಾಲೆಯ ದುರ್ಗ್ಯಾಗಳು, ದುರ್ಗವ್ವಗಳು’

2 years ago

‘ಫೋಟೊ’ ಸಿನೆಮಾದ ಹೀರೋ ದುರ್ಗ್ಯಾನಿಗೆ ವಿಧಾನ ಸೌಧದ ಮುಂದೆ ನಿಂತು ಫೋಟೊ ತೆಗೆಸಿಕೊಳ್ಳುವ ಆಸೆ, ಕನಸು. ಆದರೆ ಆತನ ಕನಸು ಆಸೆ ನೆರವೇರುವುದಿಲ್ಲ. ಇಂಥ ಅನೇಕ ಮಕ್ಕಳ ಕನಸುಗಳ ಕಾಲಿಗೆ ಸಾವಿರ ತೊಡರುಗಳಿರುತ್ತವೆ.

ಆದರೆ ನಮ್ಮ ಶಾಲೆಯ ದುರ್ಗವ್ವ, ದುರ್ಗ್ಯಾಗಳ ಕನಸು ನನಸಾದ ಖುಷಿ ನೆಮ್ಮದಿ ನಮ್ಮದು.

ಅಂದು ಸುವರ್ಣ ಸೌಧದ ಬಾಗಿಲಲ್ಲಿ ನಿಂತಾಗ ಒಳಗೆ ಬಿಟ್ಟುಕೊಳ್ಳುವುದಿಲ್ಲವೇನೋ ಎಂಬ ಆತಂಕದಲ್ಲಿದ್ದ ಮಕ್ಕಳಿಗೆ ಭುಜದ ಮೇಲೆ ಕೈಯಿಟ್ಟು ಖಂಡಿತ ನಿಮಗೆ ಸುವರ್ಣ ವಿಧಾನ ಸೌಧ ತೋರಿಸಿಕೊಂಡೇ ಹೋಗುತ್ತೇನೆ ಎಂದು ಮಾತುಕೊಟ್ಟಿದ್ದೆ.

ಅದರಂತೆ ನಾನು ಗೌರವಿಸುವ ಚಿಂತಕರೂ ಸ್ನೇಹಿತರೂ ಆದ Rishikesh Bahadur Desai ಯವರಿಗೆ ಮೆಸೇಜ್ ಹಾಕಿ ವಿಷಯ ತಿಳಿಸಿದೆ. ಅವರು ತಕ್ಷಣ ಸ್ಪಂದಿಸಿ ಸಂಬಂಧಿಸಿದವರಿಗೆ ತಿಳಿಸಿ ಅವಕಾಶ ಕೊಡಿಸಿದರು.

ನಮ್ಮ ಮಕ್ಕಳು ಸುವರ್ಣ ವಿಧಾನ ಸೌಧದಲ್ಲಿ ಅದ್ಭುತವಾದ ಕ್ಷಣಗಳನ್ನ ಕಳೆದರು, ಪಡೆದರು.

ಎರಡೂ ಸದನಗಳಲ್ಲಿ ಒಂದೂವರೆ ಗಂಟೆ ಪಾಠ ಮಾಡಿದೆ. ಪ್ರತಿ ಖುರ್ಚಿ ಮತ್ತು ಅವುಗಳ ಮಹತ್ತನ್ನ ಪರಿಚಯಿಸಿದೆ.

ಮಕ್ಕಳು ಅನೇಕ ಪ್ರಶ್ನೆಗಳನ್ನ ಕೇಳಿದರು , ಸಂವಾದಿಸಿದರು. ಅದರಲ್ಲೊಂದು ಪ್ರಶ್ನೆ ಹೀಗಿತ್ತು…

ಸಭಾಧ್ಯಕ್ಷರ ಹಿಂದಿನ ಗೋಡೆಯ ಮೇಲೆ ತಕ್ಕಡಿಯ ಚಿಹ್ನೆ ಏಕಿದೆ ಅಂತ ನಮ್ಮ ನಾಲ್ಕನೇ ತರಗತಿ ವಿದ್ಯಾರ್ಥಿನಿ ಅಭಿಲೇಶಾ ಕೇಳಿದಳು. ನಾನು ಸವಿವರವಾಗಿ ಸಮಾನತೆಯ ಮೌಲ್ಯಗಳ ಕುರಿತು ವಿವರಿಸಿದೆ.

ಹೊರಗಡೆ ಬಂದು ಸುವರ್ಣ ವಿಧಾನ ಸೌಧದ ನಾಲ್ಕೂ ಬಾಗಿಲುಗಳನ್ನ ಸುತ್ತಾಡಿಸಿ ಪರಿಚಯಿಸಿದೆವು.

ಶಸ್ತ್ರ ಸಜ್ಜಿತ ಪೋಲೀಸರೊಬ್ಬರ ನಮ್ಮ ಬೆನ್ನಹಿಂದೆಯೇ ಬರುತ್ತಿದ್ದರು. ಮಕ್ಕಳು ಆತಂಕದಿಂದ ಅವರೇಕೆ ನಮ್ಮನ್ನ ಹಿಂಬಾಲಿಸುತ್ತಿದ್ದಾರೆ ಸರ್ ಎಂದರು. ನಾನು ‘ನೀವು ಪುಟ್ಟ ಮಕ್ಕಳಲ್ವಾ… ನಿಮಗೆ ರಕ್ಷಣೆ ಕೊಡೋದಕ್ಕೆ ಅವರು ಹಿಂದೆ ಹಿಂದೆ ಬರ್ತಿದಾರೆ’ ಎಂದು ಹೇಳಿದೆ.

ಸುಮಾರು ಎರಡೂವರೆ ಗಂಟೆಗಳ ಕಾಲ ಸುವರ್ಣ ವಿಧಾನ ಸೌಧ ನಮ್ಮದಾಗಿತ್ತು.

ಹರ್ಷೋಲ್ಲಾಸದಿಂದ ಕೆಲವು ಮಕ್ಕಳು ಕಣ್ಣುತುಂಬಿಕೊಂಡು ಬಂದು ನಮ್ಮನ್ನ ತಬ್ಬಿಕೊಂಡರು.

ಕೆಲವು ಮಕ್ಕಳು ಭಾವುಕವಾಗಿ ‘ನಮ್ಮವ್ವ ನಮ್ಮಪ್ಪ ಸುವರ್ಣ ವಿಧಾನ ಸೌಧವನ್ನ ಹೊರಗಿನಿಂದಲೂ ನೋಡಿಲ್ರಿ ಸರ… ನಾವೆಲ್ಲಾರೂ ಒಳಗಡೆ ಹೋಗಿ ಕೂತು ನೋಡಿ ಬಂದು ಫೋಟೊ ತೆಗೆಸಿಕೊಂಡ್ವಿ’ ಎಂದು ಉದ್ಗಾರ ತೆಗೆದರು.

ತ್ಯಾಂಕ್ಯೂ ‘ಫೋಟೊ’. ಈ ಫೋಟೊದ ಮಹತ್ವ ಮನಗಾಣಿಸಿದ್ದಕ್ಕೆ.

  • ವೀರಣ್ಣ ಮಡಿವಾಳರ, ಕವಿಗಳು

Leave a Reply