ಜನತಾ ಪರಿವಾರದಿಂದ ಮೂಡಿ ಬಂದ ಗಟ್ಟಿ ನಾಯಕತ್ವದ ದಕ್ಷ ಆಡಳಿತಗಾರ ಪಿ ಜಿ ಆರ್ ಸಿಂಧ್ಯಾ

7 months ago

ಇಂದಿಗೂ ಕರ್ನಾಟಕ ರಾಜ್ಯದಲ್ಲಿ ಅನೇಕ ದಕ್ಷ ಮತ್ತು ಜನಪರ ಕಾಳಜಿಯ ನಾಯಕರುಗಳ ಸಾಲಿನಲ್ಲಿ ಜನತಾ ಪರಿವಾರದ ಮುಖಂಡರುಗಳ ಹೆಸರು ಹೆಚ್ಚು ಹೆಚ್ಚು ಪ್ರಚಲಿತವಾಗಿರುತ್ತದೆ. ರಾಮಕೃಷ್ಣ ಹೆಗಡೆ, ಎಚ್ ಡಿ ದೇವೇಗೌಡರು, ಎಸ್ ಆರ್ ಬೊಮ್ಮಾಯಿ, ಜೆಎಚ್ ಪಟೇಲ್ ಮುಂತಾದಂತಹ ಅನುಭವಿ ನಾಯಕರುಗಳ ಮಾರ್ಗದರ್ಶನದಲ್ಲಿ ಬೆಳೆದಂತಹ ಜನತಾ ಪರಿವಾರದ ಮುಖಂಡರು ತಮ್ಮ ಆಡಳಿತ ವೈಖರಿ, ಜನಪರ ನಿರ್ಣಯಗಳು, ಜವಾಬ್ದಾರಿಯುತ ನಡವಳಿಕೆಗಳ ಮೂಲಕ ರಾಜಕೀಯ ವಿಮರ್ಶಕರ ಲೇಖನಗಳಲ್ಲಿ ಪ್ರಸ್ತಾಪಿಸಲ್ಪಡುತ್ತಾರೆ.

ಜನತಾ ಪರಿವಾರದ ಅನೇಕ ನಾಯಕರುಗಳು ಈ ರಾಜ್ಯದ ಮುಖ್ಯಮಂತ್ರಿ ಆಗಬಲ್ಲಂತಹ ಸಾಮರ್ಥ್ಯವನ್ನು ಹೊಂದಿದ್ದರು ಮತ್ತು ಇಡೀ ರಾಜ್ಯದ ಜನರ ಬದುಕಿನ ಪರಿಚಯವೂ ಅವರಿಗಿತ್ತು, ರಾಜಕೀಯ, ಸಾಮಾಜಿಕ, ಪರಿಸ್ಥಿತಿಗಳ ಪರಿಚಯವು ಅವರಿಗೆ ಚೆನ್ನಾಗಿಯೇ ಇತ್ತು, ಈ ಹಿನ್ನೆಲೆಯಲ್ಲಿ ಅವರುಗಳು ಅವಕಾಶ ಸಿಕ್ಕಾಗ ಜನರ ಮನಸ್ಸಿನಲ್ಲಿ ಉಳಿಯುವ ರೀತಿಯಲ್ಲಿ ಹೆಜ್ಜೆ ಗುರುತುಗಳನ್ನ ಮೂಡಿಸಿರುತ್ತಾರೆ, ಇಂತಹವರ ಸಾಲಿನಲ್ಲಿ ಪಿ ಜಿ ಆರ್ ಸಿಂಧ್ಯಾರವರು ಒಬ್ಬರು.

ಕನಕಪುರದ ಗ್ರಾಮೀಣ ಪ್ರದೇಶದಿಂದ ಬಂದಂತಹ ಇವರು ತಮ್ಮ ಜಾತಿಯ ಜನರು ಹೆಚ್ಚಿನ ಸಂಖ್ಯೆಯಲ್ಲಿ  ಇಲ್ಲದ ಕನಕಪುರ ಕ್ಷೇತ್ರದಲ್ಲಿ 1983ರಿಂದ ಸತತವಾಗಿ ಆರು ಬಾರಿ ಕ್ಷೇತ್ರದ ಶಾಸಕರಾಗಿ, ರಾಮಕೃಷ್ಣ ಹೆಗಡೆ, ಎಸ್ ಆರ್ ಬೊಮ್ಮಾಯಿ, ಹೆಚ್ ಡಿ ದೇವೇಗೌಡ,  ಜೆ ಹೆಚ್ ಪಟೇಲ್, ಮತ್ತು ಧರ್ಮಸಿಂಗ್ ರವರ ಸಂಪುಟದಲ್ಲಿ ಪ್ರಮುಖವಾದಂತಹ ಖಾತೆಗಳ ಸಚಿವರಾಗಿ ತಮ್ಮ ದಕ್ಷವಾದ ಅಂತಹ ಆಡಳಿತದ ಮೂಲಕ ಇಂದಿಗೂ ಸಹ ಸುದ್ದಿಯಲ್ಲಿದ್ದಾರೆ.

ತಮಗೆ ರಾಜಕೀಯ ಬದುಕನ್ನು ಕೊಟ್ಟ ತಮ್ಮ ಕ್ಷೇತ್ರದ ಜನರ ಬಗ್ಗೆ ಪ್ರೀತಿ ಮತ್ತು ಕಾಳಜಿಯನ್ನ ತೋರಿಸುತ್ತಾ ಕೃತಜ್ಞತೆಯನ್ನು ಹಲವಾರು ಸಂದರ್ಭಗಳಲ್ಲಿ ಮೆರೆದಿರುತ್ತಾರೆ.

ಅವಕಾಶಗಳು ದೊರೆತಾಗ ತಮ್ಮ ಕ್ಷೇತ್ರದ ಜನರಿಗೆ ಉದ್ಯೋಗಗಳನ್ನ ಕಲ್ಪಿಸಿಕೊಟ್ಟು ಅವರ ಕುಟುಂಬಗಳಿಗೆ ಶಾಶ್ವತ ನೆಲೆಯನ್ನು ಒದಗಿಸಿದ್ದಾರೆ, ಕುಡಿಯುವ ನೀರು, ರಸ್ತೆ, ಆಸ್ಪತ್ರೆ ಶಾಲಾ ಕಟ್ಟಡಗಳು ಮುಂತಾದವುಗಳನ್ನ ನಿರ್ಮಿಸಿಕೊಟ್ಟು ಜನರ ದೈನಂದಿನ ಬದುಕಿಗೆ ಸಹಕಾರಿಯಾಗಿದ್ದಾರೆ.

ಸಾಮಾನ್ಯವಾಗಿ ರಾಜಕಾರಣದಲ್ಲಿ ಯಾವುದೇ ಕ್ಷೇತ್ರದಲ್ಲಿ ಒಬ್ಬ ವ್ಯಕ್ತಿ ಚುನಾವಣೆಯಲ್ಲಿ ಗೆಲ್ಲಬೇಕಾದರೆ ಅವರ ಜಾತಿಯ ಜನರು ಹೆಚ್ಚಾಗಿ ಇರಬೇಕು ಎನ್ನುವ ಅಭಿಪ್ರಾಯಗಳಿವೆ. ಆದರೆ ಕನಕಪುರದ ಕ್ಷೇತ್ರದ ಜನತೆ ಉತ್ತರ ಕನ್ನಡದ ಹಳಿಯಾಳ ಕ್ಷೇತ್ರದ ಜನತೆ ಕೋಲಾರದ ಶ್ರೀನಿವಾಸಪುರದ ಜನತೆ ಅಭಿಪ್ರಾಯಗಳನ್ನು ಕನಕಪುರದಲ್ಲಿ ಸಿಂಧ್ಯಾರವರನ್ನ ಆರು ಬಾರಿ ಗೆಲ್ಲಿಸಿ, ಹಳಿಯಾಳದಲ್ಲಿ ದೇಶಪಾಂಡೆಯವರನ್ನು 9 ಬಾರಿ ಗೆಲ್ಲಿಸಿ ಶ್ರೀನಿವಾಸಪುರದಲ್ಲಿ ರಮೇಶ್ ಕುಮಾರ್ ಅವರನ್ನ ಐದು ಬಾರಿ ಗೆಲ್ಲಿಸಿ ತಮ್ಮ ಜಾತ್ಯತೀತ ಮನೋಭಾವ ಮತ್ತು ತಮ್ಮ ವಿಶಾಲತೆಯನ್ನು ಮೆರೆದಂತಹ ಮತದಾರರ ನಿರ್ಣಯಗಳು ರಾಜ್ಯಕ್ಕೆ ಮಾದರಿಯಾಗಿದೆ.

ವಿದ್ಯಾರ್ಥಿ ನಾಯಕರಾಗಿ ಸಾರ್ವಜನಿಕ ಬದುಕಿಗೆ ಬಂದಂತಹ ಇವರು ಯುವಜನತಾದಳದ ಪದಾಧಿಕಾರಿಯಾಗಿ, ಜೊತೆಗೆ ಲೋಕ ನಾಯಕ ಜಯಪ್ರಕಾಶ್ ನಾರಾಯಣ್ ರವರ ಸಂಪೂರ್ಣ ಕ್ರಾಂತಿಯಲ್ಲಿ ಹೋರಾಟಗಾರರಾಗಿ ತಮ್ಮನ್ನು ತೊಡಗಿಸಿಕೊಂಡು ಸೆರೆಮನೆ ವಾಸವನ್ನು ತುರ್ತು ಪರಿಸ್ಥಿತಿಯ ದಿನಗಳಲ್ಲಿ ಅನುಭವಿಸಿ, ಮಹಾನ್ ನಾಯಕರ ಸೆರೆಮನೆಯಲ್ಲಿನ ಸಂಪರ್ಕ ಮತ್ತು ಅವರ ಅನುಭವದ ವಿಚಾರಧಾರೆಗಳ ವಿನಿಮಯ ಮೂಲಕ ಪ್ರಭುದ್ಧ ನಾಯಕರಾಗಿ ಹೊರಹೊಮ್ಮಲು ಪ್ರಮುಖ ಕಾರಣವಾಯಿತು.

ಸಾರಿಗೆ ಸಚಿವರಾಗಿ ಇವರು ಅನೇಕ ರೀತಿಯ ಯೋಜನೆಗಳನ್ನು ಜಾರಿಗೆ ತಂದು ಸಾರಿಗೆ ವ್ಯವಸ್ಥೆಯನ್ನು ಗ್ರಾಮೀಣ ಪ್ರದೇಶದ ಕಟ್ಟ ಕಡೆಯ ಹಳ್ಳಿಗಳಿಗೂ ತಲುಪಿಸಿ ತಮಗೆ ಅವಕಾಶ ಬಂದ ಸಂದರ್ಭದಲ್ಲಿ ಸಾರ್ಥಕವೆನಿಸುವ ರೀತಿಯಲ್ಲಿ ಸಾರಿಗೆ ಇಲಾಖೆಯನ್ನ ನಿರ್ವಹಿಸಿ ದಕ್ಷತೆಯನ್ನು ಮೆರೆದಿದ್ದಾರೆ. ಆರೋಗ್ಯ ಸಚಿವರಾಗಿ ಇವರು ಸಾಕಷ್ಟು ಕೆಲಸವನ್ನು ಮಾಡಿದ್ದಾರೆ ಗೃಹ ಸಚಿವರಾಗಿ ಇವರು ಕರ್ತವ್ಯ ನಿರ್ವಹಿಸಿದ್ದು ಇವರ ದಕ್ಷಕತೆಗೆ ಮತ್ತೊಂದು ಸಾಕ್ಷಿಯಾಗಿದೆ. ಅಧಿಕಾರಿಗಳಿಂದ ಮಾಹಿತಿಯನ್ನ ಪಡೆಯುವುದು, ಅಧಿಕಾರಿಗಳಿಗೆ ಕೆಲಸ ನಿರ್ವಹಿಸಲು ಮಾರ್ಗದರ್ಶನ ಮಾಡುವುದು, ಇಲಾಖೆಯಲ್ಲಿನ ಪ್ರಗತಿಯ ಬಗ್ಗೆ ಗಮನಹರಿಸುವುದು, ಇವುಗಳಲ್ಲಿ ಇವರು ಅನೇಕರಿಗೆ ಮಾದರಿ ಎನಿಸುವ ರೀತಿಯಲ್ಲಿ ಆಡಳಿತಾತ್ಮಕವಾಗಿ ಕ್ರಿಯಾಶೀಲರಾಗಿದ್ದರು.

ಕ್ಷೇತ್ರಗಳ ಪುನರ್ ವಿಂಗಡಣೆ ಹಿನ್ನೆಲೆಯಲ್ಲಿ ಇವರಿಗೆ ರಾಜಕೀಯವಾಗಿ ಹಿನ್ನಡೆಯಾಯಿತು. ಆದರೂ ಇವರು ತಮ್ಮ ಕ್ರಿಯಾಶೀಲತೆಯನ್ನು ಬಿಟ್ಟು ಕೊಟ್ಟಿಲ್ಲ. ಇಂದಿಗೂ ಸಹ ರಾಜ್ಯದಾದ್ಯಂತ ಪ್ರವಾಸವನ್ನು ಮಾಡುತ್ತಾರೆ. ಜನರ ಸಂಪರ್ಕವನ್ನು ಹೊಂದಿದ್ದಾರೆ. ಒಳ್ಳೆಯವರ ಒಳ್ಳೆಯ ಕಾರ್ಯವನ್ನು ಪ್ರಶಂಸಿಸಿ ಮಾತನಾಡುತ್ತಾರೆ. ಭಾರತ್ ಸ್ಕೌಟ್ ಅಂಡ್ ಗೈಡ್ಸ್ ಸಂಸ್ಥೆಯ ಆಯುಕ್ತರಾಗಿ ಸಾಮಾಜಿಕವಾಗಿ ತಮ್ಮ ಜವಾಬ್ದಾರಿಯನ್ನ ನಿರ್ವಹಿಸುತ್ತಿದ್ದಾರೆ.

ಕೊಂಡಜ್ಜಿ ಬಸಪ್ಪ ಅವರ ಶ್ರಮದಿಂದ ಅಭಿವೃದ್ಧಿಗೊಂಡಿರುವ ಸಂಸ್ಥೆಯಾಗಿರುವ ಇದರಲ್ಲಿ ಸಿಂಧ್ಯಾರವರು ಸಕ್ರಿಯವಾಗಿ ಅನೇಕ ಕಾರ್ಯಕ್ರಮಗಳನ್ನು ಯೋಚಿಸುವುದರ ಮೂಲಕ 77ರ ವಯಸ್ಸಿನಲ್ಲೂ ಉತ್ಸಾಹದಿಂದ ದುಡಿಯುತ್ತಿದ್ದಾರೆ. 1949ರ ಸೆಪ್ಟೆಂಬರ್ 19ರಂದು ಹುಟ್ಟಿದ ಇವರಿಗೆ 77 ನೇ ವರ್ಷದ ಜನ್ಮದಿನದ ಶುಭಾಶಯಗಳು.

ಜನತಾ ಪರಿವಾರವೆಂಬುದು ಒಂದು ವಿಶ್ವವಿದ್ಯಾನಿಲಯವಿದ್ದಂತೆ. ಇಲ್ಲಿ ಆಡಳಿತಾತ್ಮಕವಾದಂತ ತರಬೇತಿ ಇಲ್ಲಿನ ನಾಯಕರುಗಳಿಂದ ದೊರಕ ರೀತಿ, ಇವರುಗಳ ಬೆಳವಣಿಗೆಗೆ ಪೂರಕವಾಗಿದೆ. ಜನತಾ ವಿಶ್ವವಿದ್ಯಾನಿಲಯವೆಂಬ ರಾಜಕೀಯ ಪಕ್ಷದಲ್ಲಿ ಬೆಳೆದವರು ಇಂದು ಕರ್ನಾಟಕ ರಾಜ್ಯದ ಅನೇಕ ಪಕ್ಷಗಳಲ್ಲಿ ಸೇರಿ ತಮ್ಮ ನಾಯಕತ್ವವನ್ನು ಉಳಿಸಿಕೊಂಡಿದ್ದಾರೆ.

– ಕೆ ಎಸ್ ನಾಗರಾಜ್, ಬೆಂಗಳೂರು

Leave a Reply