ಕರ್ನಾಟಕ ರಾಜ್ಯದಲ್ಲಿ ಚುನಾವಣೆಯ ಹಿನ್ನೆಲೆಯಲ್ಲಿ ಮತ್ತು ದೇಶದ ಅನೇಕ ರಾಜ್ಯಗಳ ಚುನಾವಣೆಯ ಸಂದರ್ಭದಲ್ಲಿ ನಮ್ಮ ಪ್ರಧಾನಿಗಳು ವಿರೋಧಪಕ್ಷಗಳನ್ನು ಟೀಕಿಸಲು ಪರಿವಾರದ ರಾಜಕಾರಣ ಮತ್ತು ಭ್ರಷ್ಟಾಚಾರದ ವಿಚಾರಗಳನ್ನು ಪ್ರಸ್ತಾಪಿಸಿ ಹೆಚ್ಚು ಟೀಕೆಗಳನ್ನು ಮೋದಿಯವರು ಮಾಡಿರುತ್ತಾರೆ. ಆದರೆ ಕರ್ನಾಟಕ ರಾಜ್ಯದಲ್ಲಿ ವಿಧಾನಸಭಾ ಚುನಾವಣೆಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಸಂದರ್ಭದಲ್ಲಿ ಈ ಎರಡು ಪದಗಳು ಮೋದಿಯವರಿಗೆ ನೆನಪಿಗೆ ಬಂದಿರುವುದಿಲ್ಲ ಅಥವಾ ನೆನಪಿಗೆ ಬಂದರೂ ಸಹ ಅದನ್ನು ಅನುಷ್ಠಾನ ಮಾಡುವಲ್ಲಿ ಕರ್ನಾಟಕ ರಾಜ್ಯ ರಾಜಕಾರಣದ ಸ್ಥಿತಿಗತಿ ಅವರಿಗೆ ಅವಕಾಶವನ್ನು ನೀಡಿರುವುದಿಲ್ಲವೆಂದು ಭಾವಿಸಬೇಕಾಗುತ್ತದೆ.
ಬಿ.ಜೆ.ಪಿ.ಯವರು ಅಭ್ಯರ್ಥಿಗಳನ್ನು ಆಯ್ಕೆ ಮಾಡಿರುವ ಪಟ್ಟಿಯನ್ನು ನೋಡಿದಾಗ ಕೆಲವು ಕುಟುಂಬದವರಿಗೆ ಸುಣ್ಣ, ಮತ್ತೆ ಕೆಲವು ಕುಟುಂಬದವರಿಗೆ ಬೆಣ್ಣೆ ಎಂಬ ನೀತಿಯನ್ನು ಅನುಸರಿಸಿದ್ದಾರೆ. ಉಮೇಶ್ ಕತ್ತಿ ಕುಟುಂಬದವರ ವಿಚಾರದಲ್ಲಿ ಪರಿವಾರದ ರಾಜಕಾರಣ ಮರೆತೇ ಹೋಗಿದ್ದಾರೆ. ಇನ್ನೂ ರಮೇಶ್ ಜಾರಕಿಹೊಳಿಯವರ ಕುಟುಂಬಕ್ಕೆ ಆದ್ಯತೆಯನ್ನು ಕೊಡುವ ಸಂದರ್ಭದಲ್ಲಿ ನೈತಿಕತೆಯನ್ನು ಮರೆತು ಹೋಗಿದ್ದಾರೆ.
ಇನ್ನು ಜೊಲ್ಲೆಯವರ ಕುಟುಂಬ, ತೇಜಸ್ವಿ ಸೂರ್ಯರವರ ಕುಟುಂಬ, ಯಡಿಯೂರಪ್ಪನವರ ಕುಟುಂಬ ಹೀಗೆ ಅನೇಕ ಕುಟುಂಬದ ಸದಸ್ಯರಿಗೆ ಅವಕಾಶವನ್ನು ಕಲ್ಪಿಸಿಕೊಡುವಲ್ಲಿ ಈ ಪದಗಳೆ ಮರೆತುಹೋಗಿದೆ.
ಕ್ರಿಮಿನಲ್ ಹಿನ್ನಲೆವುಳ್ಳವರು, ವಿವಿಧ ಸಂಸ್ಥೆಗಳಲ್ಲಿ ಆರೋಪಗಳನ್ನು ಹೊತ್ತು ತನಿಖೆಯನ್ನು ಎದುರಿಸುತ್ತಿರುವವರು ಇವರ ಹೆಸರುಗಳು ಪ್ರಸ್ತಾಪವಾದಾಗ ಮೌನಕ್ಕೆ ಶರಣಾಗಿದ್ದರು ಎಂದು ಭಾವಿಸಬಹುದೆ.
ಸದಸ್ಯದಲ್ಲಿಯೇ ಚುನಾವಣೆಯ ಪ್ರಚಾರಕ್ಕೆ ಆಗಮಿಸಿ ನೂರಾರು ಕಡೆ ಭಾಷಣ ಮಾಡುವ ಸಲುವಾಗಿ ಬಿ.ಜೆ.ಪಿ.ಯ ನಾಯಕರು ಕುಟುಂಬ ರಾಜಕಾರಣ, ಭ್ರಷ್ಟಚಾರದ ವಿಚಾರ, ನೈತಿಕತೆಯ ವಿಚಾರ, ಸಿದ್ಧಾಂತದ ವಿಚಾರಗಳನ್ನು ಮಾತನಾಡುವ ಮುನ್ನ ತಮ್ಮ ಮುಂದೆ ಹಂಚಿಕೊಂಡಿರುವ ನಾಯಕರುಗಳ ಮುಖವನ್ನು ಮತ್ತು ತಾವು ಮತವನ್ನು ಕೇಳುವ ಅಭ್ಯರ್ಥಿಯ ವಿವರಗಳನ್ನು ಅರಿತುಕೊಂಡು ಮಾತನಾಡುವುದು ಹೆಚ್ಚು ಸೂಕ್ತವಾಗುತ್ತದೆ ಇಲ್ಲದಿದ್ದರೆ ಮಾತುಗಳೆಲ್ಲವೂ ಹಾಸ್ಯಾಸ್ಪದವಾಗುತ್ತದೆ.
– ಕೆ.ಎಸ್.ನಾಗರಾಜ್, ಬೆಂಗಳೂರು




