ವಿಜಯನಗರ: 1988ರಲ್ಲಿ ನಾನು ರಾಜ್ಯವನ್ನು ಸುತ್ತಿ 500ನೇ ಕನಕ ಜಯಂತಿ ಜೊತೆಗೆ ಇತರೆ ಕಾರ್ಯಕ್ರಮಗಳನ್ನು ಸರ್ಕಾರದಿಂದ ವಿಜೃಂಭಣೆಯಿಂದ ಆಚರಣೆ ಮಾಡುವ ಕೆಲಸ ಮಾಡಿದ್ದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದರು.
ವಿಜಯನಗರ ಜಿಲ್ಲೆಯ ಹೂವಿನ ಹಡಗಲಿ ತಾಲೂಕಿನ ಮೈಲಾರದಲ್ಲಿ ಯಾತ್ರಿ ನಿವಾಸ ಉದ್ಘಾಟಿಸಿ, ಮಾತನಾಡಿದ ಅವರು, ದೇಜಗೌ ಅವರ ನೇತೃತ್ವದಲ್ಲಿ ಒಂದು ಸಮಿತಿ ರಚಿಸಿ, ಕನಕದಾಸರ ಕೃತಿಗಳಾದ ಮೋಹನ ತರಂಗಿಣಿ, ರಾಮಧಾನ್ಯ ಚರಿತೆ, ಹರಿಭಕ್ತ ಸಾರ ಈ ಎಲ್ಲವುಗಳನ್ನು ಕಡಿಮೆ ದುಡ್ಡಿನಲ್ಲಿ ಜನರಿಗೆ ತಲುಪಿಸುವ ಕೆಲಸ ಮಾಡಿದ್ದೆ ಎಂದರು.
ಕನಕದಾಸರ ಬದುಕು, ಹೋರಾಟ, ವಿಚಾರಧಾರೆಯನ್ನು ಜನರಿಗೆ ತಿಳಿಸಬೇಕು ಎಂದು ಅವರ ಸಾಹಿತ್ಯವನ್ನು ಕಡಿಮೆ ದರದಲ್ಲಿ ಎಲ್ಲ ಕಡೆ ಹಂಚುವುದು ನನ್ನ ಉದ್ದೇಶವಾಗಿತ್ತು. ನಂತರ ನಮ್ಮ ಸರ್ಕಾರ ಹೊರಟುಹೋದ ಮೇಲೆ ಈ ಕಾರ್ಯಕ್ರಮದ ಸಮಾರೋಪ ಸಮಾರಂಭವೇ ನಡೆಯಲಿಲ್ಲ ಎಂದರು.
ಕುರುಬರಿಗೆ ಒಂದು ಗುರುಪೀಠ ಇಲ್ಲ, ಒಂದು ಗುರುಪೀಠ ಸ್ಥಾಪನೆ ಮಾಡಬೇಕು ಎಂದು ನಾನು ಮತ್ತು ಹಲವು ಮಂದಿ ಸೇರಿ ತೀರ್ಮಾನ ಮಾಡಿ ಎಲ್ಲ ಭಾಗದಲ್ಲೂ ಸಂಚರಿಸಿದ್ದೆವು. ಶಿವಮೊಗ್ಗದಲ್ಲಿ ನಡೆದ ಮೊದಲನೆ ಮೀಟಿಂಗಿಗೆ ಈಶ್ವರಪ್ಪ ಬಂದಿದ್ದರು, ಎರಡನೇ ಮೀಟಿಂಗಲ್ಲಿ ದುಡ್ಡು ಕೊಡುತ್ತೇವೆ ಎಂದು ನಮ್ಮನ್ನು ಕರೆದಿದ್ದರು, ಹೋಗಿ ನೋಡಿದರೆ ಆ ಮೀಟಿಂಗಿಗೆ ಈಶ್ವರಪ್ಪ ಬರಲೇ ಇಲ್ಲ ಎಂದರು.
ಪುಟ್ಟಪ್ಪ ಮತ್ತು ತಿಮ್ಮಯ್ಯ ಶಿವಮೊಗ್ಗ ಜಿಲ್ಲೆಯಿಂದ 3 ಲಕ್ಷ ರೂಪಾಯಿ ಸಂಗ್ರಹ ಮಾಡಿ ಕೊಟ್ಟಿದ್ದರು. ದುಡ್ಡು ಕೊಡದಿದ್ದರೂ ಪರವಾಗಿರಲಿಲ್ಲ, ಉದ್ಘಾಟನಾ ಸಮಾರಂಭಕ್ಕಾದರೂ ಬರುವುದು ಬೇಡವೇ? ಗುರುಪೀಠದ ಉದ್ಘಾಟನೆ ಮಾಡಿದ್ದು ಶರದ್ ಪವಾರ್, ಅವರು ಕೇಂದ್ರದಲ್ಲಿ ರಕ್ಷಣಾ ಸಚಿವರಾಗಿದ್ದರು. ಕಾರ್ಯಕ್ರಮಕ್ಕೆ ಸುಮಾರು 5 ಲಕ್ಷ ಜನ ಸೇರಿದ್ದರು ಎಂದರು.
ಎಸ್,ಆರ್ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾಗಿದ್ದಾಗ ಕಾಗಿನೆಲೆ ಗುರುಪೀಠಕ್ಕೆ ಜಾಗ ಕೊಡಿಸಿದ್ದೆ. ಕಾಗಿನೆಲೆ ಕನಕದಾಸರ ಕರ್ಮಭೂಮಿ, ಅವರು ಹೆಚ್ಚು ಕಾಲ ಕಾಗಿನೆಲೆಯಲ್ಲಿದ್ದರು. ಹಾಗಾಗಿ ಅಲ್ಲಿಯೇ ಗುರುಪೀಠ ಸ್ಥಾಪನೆ ಮಾಡಬೇಕು ಎಂದು ಮಾಡಿದ್ದೆವು. ಕಾಗಿನೆಲೆ ಗುರುಪೀಠದ ಮೊದಲ ಸ್ವಾಮೀಜಿ ವೀರೇಂದ್ರ ಕೇಶವ ತಾರಕಾನಂದ ಸ್ವಾಮೀಜಿಗಳು. ಇವರೊಮ್ಮೆ ಸ್ವಾಮೀಜಿ ಆಗುವ ಮೊದಲು ಚುನಾವಣೆಗೆ ಸ್ಪರ್ಧೆ ಮಾಡಿದ್ದರು, ಅವರನ್ನು ಹರಿದ್ವಾರಕ್ಕೆ ಕಳಿಸಿ, ನಂತರ ಸ್ವಾಮೀಜಿ ಮಾಡಿದ್ದು. ಈಗ ಮುಖ್ಯ ಸ್ವಾಮೀಜಿ ನಿರಂಜನಾನಂದ ಸ್ವಾಮೀಜಿ ಅವರು. ಈಗ ಒಂದು ಟ್ರಸ್ಟ್ ಕೂಡ ಇದೆ, ನಾನು ಅದರ ಧರ್ಮದರ್ಶಿ ಆಗಿದ್ದೇನೆ. ಗುರುಪೀಠ ಸ್ಥಾಪನೆ ಆಗಿ 31 ವರ್ಷಗಳು ಕಳೆದಿದೆ. 535ನೇ ಕನಕ ಜಯಂತಿ ಈಗ ಆಚರಣೆ ಮಾಡಿದ್ದೇವೆ ಎಂದರು.




