ವಿವೇಕಾನಂದರು ಹಿಂದುತ್ವ ಬೇರೆ, ಹಿಂದೂ ಧರ್ಮ ಬೇರೆ ಎಂದಿದ್ದಾರೆ: ಸಿದ್ದರಾಮಯ್ಯ

3 years ago

ವಿಜಯನಗರ: ವಿವೇಕಾನಂದರು ಹಿಂದುತ್ವ ಬೇರೆ, ಹಿಂದೂ ಧರ್ಮ ಬೇರೆ ಎಂದು ಹೇಳಿದ್ದಾರೆ. ಹಿಂದುತ್ವ ಎಂದರೆ ಮನುವಾದಿ ಧರ್ಮ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದರು.
ವಿಜಯನಗರ ಜಿಲ್ಲೆಯ ಹೂವಿನ ಹಡಗಲಿ ತಾಲೂಕಿನ ಮೈಲಾರದಲ್ಲಿ ಯಾತ್ರಿ ನಿವಾಸ ಉದ್ಘಾಟಿಸಿ, ಮಾತನಾಡಿದ ಅವರು, ಮನುವಾದಿಗಳು ಮತ್ತು ಪುರೋಹಿತಶಾಹಿಗಳು ನಮ್ಮ ಸಮಾಜಕ್ಕೆ ಶಾಪ ಎಂದು ಹೇಳಿದ್ದರು. ಇಂದು ವಿವೇಕಾನಂದರ ಜನ್ಮದಿನವನ್ನು ಯುವಜನೋತ್ಸವ ಎಂದು ಆಚರಣೆ ಮಾಡುತ್ತೇವೆ, ಅವರನ್ನು ಪೂಜಿಸುತ್ತೇವೆ. ಆದರೆ ಅವರ ಮಾತುಗಳನ್ನು ಮುಚ್ಚಿಹಾಕಲು ನೋಡುತ್ತೇವೆ ಎಂದರು.
ಕನಕದಾಸರು ಬುದ್ಧ, ಬಸವಾದಿ ಶರಣರಂತೆ ಓರ್ವ ಮಹಾನ್‌ ದಾರ್ಶನಿಕರು. ಬಸವಾದಿ ಶರಣರು ಇವನಾರವ, ಇವನಾರವ, ಇವನಾರವ ಎಂದೆಣಿಸದಿರಯ್ಯ, ಇವ ನಮ್ಮವ, ಇವ ನಮ್ಮವ, ಇವ ನಮ್ಮವ ಎಂದೆಣಿಸಯ್ಯ, ಎನ್ನ ಮನೆಮನಗನೆಂದಣಿಸಯ್ಯ ಎಂದು ಹೇಳಿದ್ದಾರೆ. ಕನಕದಾಸರು ಕುಲ ಕುಲ ಕುಲವೆಂದು ಹೊಡೆದಾಡದಿರಿ, ನಿಮ್ಮ ಕುಲದ ನೆಲೆಯನೇನಾದರೂ ಬಲ್ಲಿರಾ, ಬಲ್ಲಿರಾ? ಎಂದು ಜಾತಿವಾದಿಗಳಿಗೆ ಪ್ರಶ್ನೆ ಮಾಡಿದ್ದಾರೆ. ನಮ್ಮ ದೇಶದಲ್ಲಿ ಇನ್ನೂ ಜಾತಿ ವ್ಯವಸ್ಥೆ ಹೋಗಿಲ್ಲ. ಯಾವ ಜಾತಿಯೂ ಶ್ರೇಷ್ಠ, ಕನಿಷ್ಠ ಎಂದು ನಾವು ಮಾಡಿದ್ದಲ್ಲ, ಮನವಾದಿಗಳು ಮಾಡಿದ್ದು. ಅವಕಾಶ ಸಿಕ್ಕಿದ್ದರೆ ಎಲ್ಲರೂ ಶ್ರೇಷ್ಠ ಜಾತಿಯಲ್ಲಿ ಹುಟ್ಟಬೇಕು ಎಂದು ಅರ್ಜಿ ಹಾಕಿ ಹುಟ್ಟುತ್ತಿದ್ದರು ಎಂದರು.
ಗಾಂಧಿ, ಅಂಬೇಡ್ಕರ್‌ ಅವರು ಆಶಯವೂ ಇದೆ ಆಗಿದೆ. ಶೋಷಿತ ಜನರು ಶಿಕ್ಷಣ, ಸಂಘಟನೆ ಮತ್ತು ಹೋರಾಟದ ಮೂಲಕ ತಮ್ಮ ಹಕ್ಕುಗಳನ್ನು ಪಡೆಯಬೇಕು ಎಂದು ಬಾಬಾ ಸಾಹೇಬರು ಹೇಳಿದ್ದರು. ಸ್ವಾತಂತ್ರ್ಯ ಬಂದಾಗ ದೇಶದ ಶಿಕ್ಷಿತರ ಪ್ರಮಾಣ 16% ಇತ್ತು, ಇನ್ನುಳಿದ 84% ಜನರನ್ನು ಶಿಕ್ಷಣದಿಂದ ದೂರ ಇಡಲಾಗಿತ್ತು. ಸಮಾಜದ ಮೇಲ್ವರ್ಗದ ಜನರು ಮಾತ್ರ ಶಿಕ್ಷಣ ಪಡೆಯಲು, ಆಸ್ತಿ ಗಳಿಸಲು, ಅದನ್ನು ಅನುಭವಿಸಲು ಅವಕಾಶ ಇತ್ತು. ಇದರ ಪರಿಣಾಮವಾಗಿ ಇಂದು ಆರ್ಥಿಕ ಮತ್ತು ಸಾಮಾಜಿಕ ಅಸಮಾನತೆ ಮುಂದುವರೆದುಕೊಂಡು ಹೋಗುತ್ತಿದೆ ಎಂದರು.

Leave a Reply