ಬಿಬಿಎಂಪಿ ವತಿಯಿಂದ ಕೂಡಲೇ ಆಗಬೇಕಾಗಿರುವ ಕಾರ್ಯಗಳ ಬಗ್ಗೆ ಕೂಡಲೇ ಗಮನಹರಿಸಿ

10 months ago

ಬೆಂಗಳೂರು ನಗರದ ಜನರಿಗೆ ಬಿಬಿಎಂಪಿ ವತಿಯಿಂದ ಕೂಡಲೇ ಆಗಬೇಕಾಗಿರುವ ಕಾರ್ಯಗಳ ಬಗ್ಗೆ ಉಪಮುಖ್ಯಮಂತ್ರಿಗಳು ಕೂಡಲೇ ಗಮನಹರಿಸಿ.

ಬೆಂಗಳೂರು ನಗರದಲ್ಲಿ ನಾಗರಿಕರು ತಮ್ಮ ಸ್ಥಿರಾಸ್ತಿಗಳಿಗೆ ಕಂಪ್ಯೂಟರ್ ಖಾತೆ ಮಾಡಿಕೊಳ್ಳಬೇಕಾದದ್ದು ಅನೇಕ ಕಾರಣಗಳಿಂದ ಅನಿವಾರ್ಯವಾಗಿದೆ. ಈ ಸಂದರ್ಭದಲ್ಲಿ ದೊಡ್ಡ ಅಳತೆಯ ನಿವೇಶನಗಳಿಗೆ ಮತ್ತು ವಾಣಿಜ್ಯ ಕಟ್ಟಡಗಳು ಉಳ್ಳ ನಿವೇಶನಗಳಿಗೆ ಅಧಿಕಾರಿಗಳು ಕಂಪ್ಯೂಟರ್ ಖಾತೆಯನ್ನು ಮಾಡಿಕೊಡಬೇಕಾದರೆ ಸಾಕಷ್ಟು ಅಲೆದಾಡಿಸುತ್ತಿದ್ದಾರೆ. ಇಲ್ಲಿ ಇದರ ಅನುಮತಿಯ ಅಧಿಕಾರದ ವ್ಯಾಪ್ತಿಯಲ್ಲಿ ಗೊಂದಲಗಳು ಇರುವ ಕಾರಣದಿಂದ, ಕೆಲವು ಅಧಿಕಾರಿಗಳು ಇದನ್ನೇ ಬಂಡವಾಳವನ್ನಾಗಿ ಮಾಡಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಸ್ಥಿರಾಸ್ತಿಗಳು ಯಾವುದೇ ಅಳತೆಯಲ್ಲಿದ್ದರೂ ಅವರ ಆಸ್ತಿಗಳಿಗೆ  ಖಾತೆ ಪಡೆದುಕೊಳ್ಳುವಲ್ಲಿ ತೊಂದರೆಗಳಾಗದಂತೆ ಸೂಕ್ತವಾದಂತಹ ನಿರ್ದೇಶನವನ್ನ ಆಯುಕ್ತರ ಮೂಲಕ ಎಲ್ಲಾ ಅಧಿಕಾರಿಗಳಿಗೆ ಕೂಡಲೇ ಕೊಡಿಸಿ.

ನಗರದ ಆಸ್ತಿ ಮಾಲೀಕರು ತಮ್ಮ ಆಸ್ತಿಗಳನ್ನು ಒಂದುಗೂಡಿಸಿಕೊಂಡು ಖಾತೆ ಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ, ಇದರಿಂದ ಕಟ್ಟಡ ನಿರ್ಮಾಣ ಮಾಡುವವರಿಗೆ ನಕ್ಷೆ ಮಂಜೂರಾತಿ ತೆಗೆದುಕೊಳ್ಳುವವರಿಗೆ ತೊಂದರೆಯಾಗುತ್ತಿದೆ, ಇದನ್ನು ಸಹ ಗಂಭೀರವಾಗಿ ಪರಿಗಣಿಸಿ ಖಾತೆಗಳ ಒಂದುಗೂಡಿಸುವುದು ಎಂದರೆ ಅಮಾಲಗಮೇಷನ್ ವ್ಯವಸ್ಥೆಗೂ ಸಹ ಕೂಡಲೇ ಗಮನಹರಿಸಬೇಕು.

ನಗರದ ನಾಗರಿಕರು ತಮ್ಮ ಆಸ್ತಿಗಳನ್ನು ಅನೇಕ ಕಾರಣಗಳಿಗೆ ವಿಭಜನೆಯನ್ನು ಮಾಡುತ್ತಾರೆ. ಸ್ವಲ್ಪ ಭಾಗವನ್ನು ತಮ್ಮ ಮಕ್ಕಳಿಗೆ ಹಂಚುತ್ತಾರೆ ಮತ್ತು ಮಾರಾಟವನ್ನು ಮಾಡುತ್ತಾರೆ .ಈ ಸಂದರ್ಭದಲ್ಲಿ ಖಾತೆ ವಿಭಜನೆ ಅಂದರೆ ಬೈಫರ್ ಕೇಶನ್ ಸಹ ಆಗುತ್ತಿಲ್ಲ. ಖಾತೆ ವಿಭಜನೆ ಯಾಗದೆ ಆಸ್ತಿದಾರರು ಸಾಲವನ್ನು ಪಡೆಯಲು ಸಾಧ್ಯವಾಗುವುದಿಲ್ಲ. ಇನ್ನು ಕಟ್ಟಡ ನಿರ್ಮಾಣವಂತು ಸಾಧ್ಯವೇ ಇಲ್ಲ, ಇದರ ಬಗ್ಗೆಯೂ ಗಮನವನ್ನು ಹರಿಸಬೇಕಾಗಿ ಕೊಡುತ್ತೇನೆ.

ನಗರದಲ್ಲಿ ಇರುವ ಆಸ್ತಿಗಳ ಪೈಕಿ ಸುಮಾರು ಶೇಕಡ 50ರಷ್ಟು ಬಿ ಖಾತೆಯನ್ನು ಹೊಂದಿರುವ ಆಸ್ತಿದಾರರೇ ಆಗಿದ್ದಾರೆ. ಇವರು ಹಲವಾರು ವರ್ಷಗಳಿಂದ ತಮ್ಮ ನಿವೇಶನಗಳಲ್ಲಿ ಮನೆಯನ್ನ ಕಟ್ಟಿಕೊಂಡಿದ್ದಾರೆ ಮತ್ತು ಮತ್ತೆ ಕೆಲವರು ಮನೆಯನ್ನ ನಿರ್ಮಿಸಿಕೊಳ್ಳಲು ಬಯಸುತ್ತಾರೆ. ಇವರುಗಳಿಗೆ ಬಿಬಿಎಂಪಿ ವತಿಯಿಂದ ನಕ್ಷೆ ಮಂಜೂರಾತಿ ಆಗುವುದಿಲ್ಲ. ನಕ್ಷೆ ಮಂಜೂರು ಆಗದಿದ್ದರೂ ಇವರು ವಿಧಿ ಇಲ್ಲದೆ ಮನೆಗಳನ್ನು ನಿರ್ಮಿಸಿಕೊಳ್ಳುತ್ತಾರೆ .ಇದರಿಂದ ಬಿಬಿಎಂಪಿ ಅಧಿಕಾರಿಗಳು ಇವರಿಗೆ ನೋಟಿಸ್ ಗಳನ್ನು ನೀಡುತ್ತಾರೆ .ಹೀಗಾಗಿ ಮತ್ತೆ ಗೊಂದಲ ಸೃಷ್ಟಿಯಾಗುತ್ತಿದೆ ಈ ಹಿನ್ನೆಲೆಯಲ್ಲಿ ಬಿ ಖಾತೆಯ ಆಸ್ತಿದಾರರಿಗೆ ಅಭಿವೃದ್ಧಿ ಶುಲ್ಕವನ್ನು ಪಡೆದುಕೊಂಡು ನಕ್ಷೆ ಮಂಜೂರಾತಿಯನ್ನು ಮಾಡುವ ಪ್ರಸ್ತಾವನೆಯನ್ನು ತಾವು ಕೂಡಲೇ ಜಾರಿಗೊಳಿಸಬೇಕೆಂದು ಕೋರಿಕೊಳ್ಳುತ್ತೇನೆ.

ಆಸ್ತಿಗಳ ಒಂದುಗೂಡುವಿಕೆ ಮತ್ತು ವಿಭಜನೆ ಹಾಗೂ ಬಿ ಖಾತೆಗಳಿಗೆ ನಕ್ಷೆ ಮಂಜೂರಾತಿ ಇವುಗಳು ಹಾಲಿ ಸರ್ವೋಚ್ಚ ನ್ಯಾಯಾಲಯದ ತೀರ್ಪಿಗೆ ಅನ್ವಯವಾಗುವುದಿಲ್ಲ. ಇವುಗಳು ನಮ್ಮ ರಾಜ್ಯ ಸರ್ಕಾರದ ವ್ಯಾಪ್ತಿಯಲ್ಲಿ ಮಾಡಬಹುದಾದಂತಹ ಆದೇಶಗಳಾಗಿರುತ್ತದೆ.

ಕೆಲವು ವರ್ಷದ ಹಿಂದೆ ಸರ್ವೋಚ್ಚ ನ್ಯಾಯಾಲಯ ಪ್ರತಿಯೊಬ್ಬ ನಾಗರಿಕರಿಗೆ ನೀರು ಮತ್ತು ವಿದ್ಯುತ್ ಸಂಪರ್ಕ ಅವರ ಮೂಲಭೂತ ಹಕ್ಕು ಎಂದು ತೀರ್ಪನ್ನು ನೀಡಿರುತ್ತದೆ. ಆದರೆ ಇದೇ ನ್ಯಾಯಾಲಯ ಕಟ್ಟಡಗಳ ನಕ್ಷೆ ಉಲ್ಲಂಘನೆ ಸಿಸಿ,ಓಸಿ ಇಲ್ಲದ ಕಟ್ಟಡಗಳಿಗೆ ವಿದ್ಯುತ್ ಮತ್ತು ನೀರಿನ ಸಂಪರ್ಕವನ್ನು ನೀಡಬಾರದೆಂದು ಯಾವುದೋ ಒಂದು ರಾಜ್ಯದ ಪ್ರಕರಣದ ಹಿನ್ನೆಲೆಯಲ್ಲಿ ತೀರ್ಪು ನೀಡಿರುತ್ತಾರೆ.. ಈ ಹಿನ್ನೆಲೆಯಲ್ಲಿ ಕರ್ನಾಟಕ ಸರ್ಕಾರ ಭಾರತದ ಸರ್ವೋಚ್ಚ ನ್ಯಾಯಾಲಯದಲ್ಲಿ ಪುನರ್ ಪರಿಶೀಲಿಸಿ ಆದೇಶ ನೀಡಲು ಮನವಿಯನ್ನು ಸಲ್ಲಿಸಬಹುದು. ಇದರಲ್ಲಿ ಕನಿಷ್ಠ ಪಕ್ಷ ನಾಲ್ಕು ಸಾವಿರ ಅಳತೆಯ ಕಟ್ಟಡಗಳಿಗೆ ಸಿಸಿ ಮತ್ತು ಓಸಿ ಗಳ ಕಡ್ಡಾಯವೆಂಬ ನೇಮದಿಂದ ವಿನಾಯತಿ ನೀಡಬೇಕೆಂಬ ಮನವಿಯನ್ನು ಸಲ್ಲಿಸಬಹುದು. ನ್ಯಾಯಾಧೀಶರಿಗೆ ರಾಜ್ಯ ಸರ್ಕಾರದ ವಕೀಲರು ಸರಿಯಾಗಿ ಮನದಟ್ಟು ಮಾಡಿಕೊಟ್ಟರೆ ಸಮಸ್ಯೆ ಪರಿಹಾರವಾಗುತ್ತದೆ. ನ್ಯಾಯಾಲಯದಲ್ಲಿ ಪುನರ್ ಪರಿಶೀಲನ ಅರ್ಜಿಯನ್ನು ಸಲ್ಲಿಸದಿದ್ದರೆ ಸರ್ವೋಚ್ಚ ನ್ಯಾಯಾಲಯದ ಆದೇಶದ ವಿರುದ್ಧ ರಾಜ್ಯ ಸರ್ಕಾರ ಯಾವುದೇ ಆದೇಶಗಳನ್ನು ಮಾಡಿದರು ಅದು ನಿಲ್ಲುವುದಿಲ್ಲ.

– ಕೆ ಎಸ್ ನಾಗರಾಜ್, ಬೆಂಗಳೂರು

Leave a Reply