ಇಂದಿರಾ ಕ್ಯಾಂಟೀನ್ ಮುಚ್ಚುವುದು ಬಡವರ ಹೊಟ್ಟೆಯ ಮೇಲೆ ಹೊಡೆಯುವ ರಾಕ್ಷಸಿ ಕೃತ್ಯ: ಸಿದ್ದರಾಮಯ್ಯ

3 years ago

ಹುಬ್ಬಳ್ಳಿ: ಇಂದಿರಾ ಕ್ಯಾಂಟೀನ್ ಗಳನ್ನು ಮೊದಲ ದಿನದಿಂದಲೇ ವಿರೋಧಿಸುತ್ತ ಬಂದಿದ್ದ ಬಿಜೆಪಿ ಈಗ ಅವುಗಳನ್ನು ಶಾಶ್ವತವಾಗಿ ಮುಚ್ಚಲು ಹೊರಟಿದೆ. ಇದು ಬಡವರ ಹೊಟ್ಟೆಯ ಮೇಲೆ ಹೊಡೆಯುವ ರಾಕ್ಷಸಿ ಕೃತ್ಯ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.

ಜನಧ್ವನಿ ಯಾತ್ರೆ ಹಿನ್ನೆಲೆಯಲ್ಲಿ ನಗರಕ್ಕೆ ಆಗಮಿಸಿದ್ದ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಸರ್ಕಾರ ತನ್ನ ನಿಲುವು ಬದಲಿಸಿಕೊಳ್ಳದಿದ್ದರೆ ಬೀದಿಗಿಳಿದು ಹೋರಾಟ ಮಾಡಬೇಕಾದೀತು, ಎಚ್ಚರ ಎಂದರು.

ಬಡವರು, ಕೂಲಿ ಕಾರ್ಮಿಕರು, ವಿದ್ಯಾರ್ಥಿಗಳು ಮತ್ತು ಬೇರೆ ಊರುಗಳಿಂದ ನಗರ-ಪಟ್ಟಣಕ್ಕೆ ಬಂದವರ ಹಸಿದ ಹೊಟ್ಟೆ ತಣಿಸಲು ನಮ್ಮ ಸರ್ಕಾರ ರಾಜ್ಯಾದ್ಯಂತ 400 ಇಂದಿರಾ ಕ್ಯಾಂಟೀನ್ ಗಳನ್ನು ಸ್ಥಾಪಿಸಿತ್ತು.
ಬಿಬಿಎಂಪಿ ವ್ಯಾಪ್ತಿಯಲ್ಲಿಯೇ 195 ಇಂದಿರಾ ಕ್ಯಾಂಟೀನ್ ಗಳನ್ನು ಪ್ರಾರಂಭಿಸಿದ್ದೆವು. ಇದರ ಜೊತೆಗೆ 25 ಮೊಬೈಲ್ ಕ್ಯಾಂಟೀನ್ ಗಳನ್ನೂ ತೆರೆಯಲಾಗಿತ್ತು. 2017-18ರ ಬಜೆಟ್ ನಲ್ಲಿಯೇ ಇದಕ್ಕಾಗಿ 145 ಕೋಟಿ ರೂಪಾಯಿ ಒದಗಿಸಿದ್ದೆ. ಇಂಥಾ ಜನಪರ ಕಾರ್ಯಕ್ರಮದ ತಲೆಯ ಮೇಲೆ ಚಪ್ಪಡಿ ಎಳೆಯುವ ದುಷ್ಟಬುದ್ದಿ ನಿಮಗೆ ಯಾಕೆ ಬಂತು ಬಸವರಾಜ ಬೊಮ್ಮಾಯಿ ಅವರೇ? ಎಂದರು.

ಕಳಪೆ ಗುಣಮಟ್ಟದ ಆಹಾರ ನೀಡಿ, ಸ್ವಚ್ಚತೆಯನ್ನು ಕಾಪಾಡದೆ ಗಲೀಜು ಮಾಡಿ, ಗುತ್ತಿಗೆದಾರರ ಬಿಲ್ ಬಾಕಿ ಇಟ್ಟುಕೊಂಡು, ಹೀಗೆ ನಾನಾ ರೀತಿಯ ಹುನ್ನಾರದ ಮೂಲಕ ಇಂದಿರಾ ಕ್ಯಾಂಟೀನ್ ಗಳನ್ನು ಮುಚ್ಚಲಾಗುತ್ತಿದೆ ಎಂದು ಆರೋಪಿಸಿದರು.

ನಮ್ಮ ಕಾಲದ ಕ್ಯಾಂಟೀನ್ ಗಳ ಆಹಾರದ ಗುಣಮಟ್ಟ ಮತ್ತು ಸ್ವಚ್ಚತೆಯನ್ನು ನೋಡಿ ಬಡವರು ಮಾತ್ರವಲ್ಲ, ಶ್ರೀಮಂತರು ಕೂಡಾ ಕ್ಯಾಂಟೀನ್ ಗೆ ಬರುತ್ತಿದ್ದರು. ಈಗ ಬಡವರನ್ನು ಕೂಡಾ ಕ್ಯಾಂಟೀನ್ ಗಳಿಂದ ದೂರ ಓಡಿಸಲಾಗುತ್ತಿದೆ ಎಂದು ಕಿಡಿಕಾರಿದರು.

ಈಗಾಗಲೇ 50 ಕ್ಕೂ ಹೆಚ್ಚು ಕ್ಯಾಂಟೀನ್ ಗಳನ್ನು ಗಿರಾಕಿಗಳಿಲ್ಲ ಎನ್ನುವ ಕಾರಣ ನೀಡಿ ಮುಚ್ಚಲಾಗಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿ 35 ಕ್ಯಾಂಟೀನ್ ಗಳನ್ನು ಮುಚ್ಚಲು ನಿರ್ಧರಿಸಲಾಗಿದೆಯಂತೆ.
ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ಹೆಸರಿದೆ ಎನ್ನುವ ಏಕೈಕ ಕಾರಣಕ್ಕೆ ಎಲ್ಲಾ ಕ್ಯಾಂಟೀನ್ ಗಳನ್ನೇ ಬಂದ್ ಮಾಡುವುದು ಅಕ್ಷಮ್ಯ ಎಂದರು.

ತಮಿಳುನಾಡಿನಲ್ಲಿ ಜಯಲಲಿತಾ ಅವರು ಮುಖ್ಯಮಂತ್ರಿಯಾಗಿದ್ದಾಗ ಅಮ್ಮ ಕ್ಯಾಂಟೀನ್ ಗಳನ್ನು ಸ್ಥಾಪಿಸಿದ್ದರು. ಡಿಎಂಕೆ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಆ ಕ್ಯಾಂಟೀನ್ ಗಳನ್ನು ಇನ್ನಷ್ಟು ಸುಧಾರಿಸಿ ವಿಸ್ತರಿಸಲಾಗುತ್ತಿದೆ. ಆದರೆ ಇಲ್ಲಿ ಬಿಜೆಪಿ ಅವುಗಳು ಕಾಂಗ್ರೆಸ್ ಪಕ್ಷದ ಯೋಜನೆ ಎನ್ನುವ ಕಾರಣಕ್ಕೆ ಮುಚ್ಚಲಾಗುತ್ತಿದೆ ಎಂದರು.

ಬಿಜೆಪಿ ತಾವು ಅಧಿಕಾರಕ್ಕೆ ಬಂದರೆ ಕೈಗೆಟಕುವ ಬೆಲೆಯಲ್ಲಿ ಉತ್ತಮ ಗುಣಮಟ್ಟದ ಆಹಾರ ಒದಗಿಸಲು ಜಿಲ್ಲಾ ಕೇಂದ್ರಗಳಲ್ಲಿ ಮೂರು ಮತ್ತು ಪ್ರತಿ ತಾಲೂಕು ಕೇಂದ್ರದಲ್ಲಿ ಒಂದು ಹೀಗೆ 300ಕ್ಕಿಂತಲೂ ಹೆಚ್ಚು ‘ಮುಖ್ಯಮಂತ್ರಿ ಕ್ಯಾಂಟೀನ್ ಗಳನ್ನು ಸ್ಥಾಪಿಸಲಾಗುವುದು ಎಂದು ಪ್ರಣಾಳಿಕೆಯಲ್ಲಿ ಭರವಸೆ ನೀಡಿತ್ತು. ಹೊಸ ಕ್ಯಾಂಟೀನ್ ತೆರೆಯುವುದು ಬಿಡಿ, ಹಳೆಯ ಕ್ಯಾಂಟೀನ್ ಗಳನ್ನು ಕೂಡಾ ಬಿಜೆಪಿ ಮುಚ್ಚಿ ಬಡವರ ಹೊಟ್ಟೆಗೆ ಹೊಡೆಯಲು ಹೊರಟಿದೆ ಎಂದರು.

40% ಕಮಿಷನ್ ದಂಧೆಯಲ್ಲಿ ಸಾವಿರಾರು ಕೋಟಿ ಲೂಟಿ ಮಾಡುವವರಿಗೆ ಬಡವರ ಹಸಿವು ನೀಗಿಸಲು ನೂರಿನ್ನೂರು ಕೋಟಿ ಖರ್ಚು ಮಾಡಲಾಗದ್ದು ದುರಂತ ಎಂದರು.

Leave a Reply