ಬೆಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರ ಅಸ್ತಿತ್ವಕ್ಕೆ ಬರುತ್ತಿದ್ದಂತೆ ಬಡವರ ಹೊಟ್ಟೆ ತುಂಬಿಸಲು ಅಸ್ತಿತ್ವಕ್ಕೆ ತರಲಾಗಿದ್ದ ಇಂದಿರಾ ಕ್ಯಾಂಟೀನ್ ಗಳು ಮರು ಜೀವ ಪಡೆಯುವ ವಿಶ್ವಾಸದಲ್ಲಿವೆ.
ರಾಜಕೀಯ ಕಾರಣಕ್ಕಾಗಿ ಈ ಹಿಂದಿನ ಬಿಜೆಪಿ ಸರ್ಕಾರ ಇಂದಿರಾ ಕ್ಯಾಂಟೀನ್ ಗಳಿಗೆ ಸೂಕ್ತ ಪ್ರಮಾಣದಲ್ಲಿ ಅನುದಾನ ನೀಡದೆ ಅವುಗಳ ಸೇವೆಯಲ್ಲಿ ಭಾರಿ ಪ್ರಮಾಣದ ವ್ಯತ್ಯಾಸ ಉಂಟಾಗಿತ್ತು.
ಬಿಜೆಪಿ ಸರ್ಕಾರದ ನಿರ್ಧಾರದಿಂದಾಗಿ ಅಗ್ಗದ ದರದಲ್ಲಿ ಊಟ ಉಪಹಾರ ಸರಬರಾಜು ಮಾಡುತ್ತಿದ್ದ ಬಹುತೇಕ ಇಂದಿರಾ ಕ್ಯಾಂಟೀನ್ ಗಳು ಬಾಗಿಲು ಮುಚ್ಚಿದ್ದವು. ಇಂದಿರಾ ಕ್ಯಾಂಟೀನ್ ಗಳನ್ನು ನಿರ್ವಹಣೆ ಮಾಡುತ್ತಿರುವ ಸಂಸ್ಥೆಗಳಿಗೆ ಅಪಾರ ಪ್ರಮಾಣದ ಬಾಕಿ ನೀಡಬೇಕಾಗಿದೆ.
ಈಗ ಅಸ್ತಿತ್ವಕ್ಕೆ ಬಂದಿರುವ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಈ ಬಾಕಿ ಪಾವತಿಸುವ ಜೊತೆಗೆ ಇಂದಿರಾ ಕ್ಯಾಂಟೀನ್ ಗಳಿಗೆ ಹೊಸ ರೂಪ ನೀಡಲಿದೆ ಎಂಬ ಸುದ್ದಿಗಳು ಹರಡಿವೆ. ಇದು ಇಂದಿರಾ ಕ್ಯಾಂಟೀನ್ ಆಡಳಿತ ಮಂಡಳಿ ಮತ್ತು ಸಿಬ್ಬಂದಿಗೆ ಹೊಸ ಉತ್ಸಾಹ ಮೂಡಿಸಿದೆ.
ಈ ಸುದ್ದಿಗಳಿಂದ ಸಂಭ್ರಮ ಪಟ್ಟಿರುವ ಇಂದಿರಾ ಕ್ಯಾಂಟೀನ್ ಆಡಳಿತ ಮಂಡಳಿ ಇಂದು ತನ್ನ ಕ್ಯಾಂಟೀನ್ ಗಳಲ್ಲಿ ಗ್ರಾಹಕರಿಗೆ ಊಟ ಉಪಚಾರದ ಜೊತೆಗೆ ಉಚಿತವಾಗಿ ಹೋಳಿಗೆ ನೀಡುವ ಮೂಲಕ ಸಂತಸ ಹಂಚಿಕೊಂಡಿದೆ.
ಇದರ ಬೆನ್ನಲ್ಲೇ ಇಂದಿರಾ ಕ್ಯಾಂಟೀನ್ ಗಳ ಕಾರ್ಯವೈಖರಿ ಸುಧಾರಿಸುಶ ಕುರಿತಂತೆ ಟ್ವಿಟ್ ಮಾಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ನಗರ-ಪಟ್ಟಣಗಳಲ್ಲಿರುವ ಮತ್ತು ಕಾರ್ಯನಿಮಿತ್ತ ನಗರಗಳಿಗೆ ಬರುವ ಬಡವರ ಹಸಿವು ತಣಿಸುವ ಸದುದ್ದೇಶದಿಂದ ನಮ್ಮ ಸರ್ಕಾರ ಪ್ರಾರಂಭಿಸಿದ್ದ ಇಂದಿರಾ ಕ್ಯಾಂಟೀನ್ ಗಳನ್ನು ಬಿಜೆಪಿ ಸರ್ಕಾರ ನಿರ್ಲಕ್ಷಿಸಿದ ಕಾರಣದಿಂದಾಗಿ ಕೆಲವು ಮುಚ್ಚಿವೆ, ಹಲವು ಮುಚ್ಚುವ ಸ್ಥಿತಿಯಲ್ಲಿವೆ ಎಂದು ಕಿಡಿಕಾರಿದ್ದಾರೆ.
‘ಗರೀಬಿ ಹಟಾವೋ’ ಘೋಷಣೆಯ ಮೂಲಕ ಬಡತನ ನಿರ್ಮೂಲನೆಯ ಕಾರ್ಯವನ್ನು ಕಾಳಜಿಯಿಂದ ಮಾಡಿದ್ದ ಮಾಜಿ ಪ್ರಧಾನಿ ಇಂದಿರಾಗಾಂಧಿಯವರ ಹೆಸರಿನ ಇಂದಿರಾ ಕ್ಯಾಂಟಿನ್ ಗಳನ್ನು ಮುಚ್ಚಲು ನಾವು ಅವಕಾಶ ನೀಡುವುದಿಲ್ಲ. ಅಗತ್ಯ ಸಂಪನ್ಮೂಲ ಒದಗಿಸಿ ಅವುಗಳನ್ನು ಪುನಶ್ಚೇತನಗೊಳಿಸುವುದಕ್ಕೆ ನಮ್ಮ ಸರ್ಕಾರ ಬದ್ಧವಾಗಿದೆ ಎಂದು ತಿಳಿಸಿದ್ದಾರೆ.
ಅತಿ ಶೀಘ್ರದಲ್ಲೇ ಇಂದಿರಾ ಕ್ಯಾಂಟೀನ್ ಗಳು ಸ್ವಸ್ಥ ಮತ್ತು ರುಚಿಕರವಾದ ಊಟ-ತಿಂಡಿಗಳೊಂದಿಗೆ ಜನರ ಸೇವೆ ಶುರುಮಾಡಲಿವೆ. ಹಸಿದವರ ಪಾಲಿಗೆ ಅನ್ನವೇ ದೇವರು ಎಂಬುದಾಗಿ ಹೇಳಿದ್ದಾರೆ.




