ಪಿ.ಎಸ್.ಐ. ನೇಮಕ ಪರೀಕ್ಷೆ ದಿನಾಂಕ ನಿಗದಿ

3 years ago

#PSI #Appointment #Exam #Date #Schedule

ಬೆಂಗಳೂರು: ಅಕ್ರಮಗಳ ಕಾರಣಕ್ಕೆ ರದ್ದುಗೊಂಡಿರುವ ಪೊಲೀಸ್ ಇನ್ಸ್ ಪೆಕ್ಟರ್ ಗಳ ನೇಮಕಕ್ಕೆ ಕೋರ್ಟ್ ಆದೇಶದಂತೆ ಮರು ಪರೀಕ್ಷೆಗೆ ಡಿಸೆಂಬರ್ 23 ರಂದು ಮರು ಪರೀಕ್ಷೆ ನಿಗದಿಯಾಗಿದೆ. ಈ ಬಾರಿ ಬೆಂಗಳೂರಿನ ಪರೀಕ್ಷಾ ಕೇಂದ್ರಗಳಲ್ಲಿ ಮಾತ್ರ ಪರೀಕ್ಷೆಗಳು ನಡೆಯಲಿವೆ.

ಈ ವಿಷಯವನ್ನು ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಪ್ರಕಟಣೆ ಹೊರಡಿಸಿದ್ದು, ಈ ಹಿಂದೆ 545 ಪೊಲೀಸ್ ಸಬ್ ಇನ್ಸ್ಪೆಕ್ಟರ್ ಹುದ್ದೆಗಳಿಗೆ ನಡೆಸಿದ್ದ ಲಿಖಿತ ಪರೀಕ್ಷೆಗೆ ಅರ್ಹತೆ ಪಡೆದವರು ಈ ಮರು ಲಿಖಿತ ಪರೀಕ್ಷೆಗೆ ಅರ್ಹರು ಎಂದಿದ್ದಾರೆ.

ಪಿಎಸ್ಐ ಹುದ್ದೆಗಳ ನೇಮಕಕ್ಕೆ ರಾಜ್ಯ ಸರ್ಕಾರ ಸ್ವತಂತ್ರ ಸಂಸ್ಥೆಯಿಂದ ಹೊಸದಾಗಿ ಪರೀಕ್ಷೆ ನಡೆಸಬಹುದು ಎಂದು ಹೈಕೋರ್ಟ್ ನವೆಂಬರ್ 10ರಂದು ನೀಡಿದ್ದ ತೀರ್ಪಿನ ಅನ್ವಯ ಈ ತೀರ್ಮಾನ ತೆಗೆದುಕೊಳ್ಳಲಾಗಿದೆ. ಈ ಮೊದಲು 2021ರ ಜನವರಿ 21ರಂದು 545 ಪಿಎಸ್ಐ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಿತ್ತು. ಅದೇ ವರ್ಷದ ಅಕ್ಟೋಬರ್ 3 ರಂದು ಲಿಖಿತ ಪರೀಕ್ಷೆ ನಡೆದಿತ್ತು. ಸುಮಾರು 54 ಸಾವಿರ ಅಭ್ಯರ್ಥಿಗಳು ಲಿಖಿತ ಪರೀಕ್ಷೆಗೆ ಅರ್ಹತೆ ಪಡೆದಿದ್ದರು.

2022ರ ಜ. 19ರಂದು ತಾತ್ಕಾಲಿಕ ಪಟ್ಟಿಯನ್ನು ಪ್ರಕಟಿಸಲಾಗಿತ್ತು. ಲಿಖಿತ ಪರೀಕ್ಷೆಯಲ್ಲಿ ಅಕ್ರಮ ನಡೆದ ಹಿನ್ನೆಲೆಯಲ್ಲಿ ಪ್ರಕರಣವನ್ನು ಸಿಐಡಿಗೆ ವಹಿಸಲಾಗಿತ್ತು. ಸಿಐಡಿ ನೀಡಿದ್ದ ಮಧ್ಯಂತರ ವರದಿ ಆಧರಿಸಿ ಸರ್ಕಾರ, 2021 ಅ. 3ರಂದು ನಡೆಸಿದ್ದ ಲಿಖಿತ ಪರೀಕ್ಷೆಯನ್ನು ರದ್ದುಗೊಳಿಸಿ, ಹೊಸದಾಗಿ ಪರೀಕ್ಷೆ ನಡೆಸಲು 2022ರ ಏಪ್ರಿಲ್ 29ರಂದು ಆದೇಶಿಸಿತ್ತು. ಈ ಆದೇಶವನ್ನು ಕೆಲ ಅಭ್ಯರ್ಥಿಗಳು ಹೈಕೋರ್ಟ್ನಲ್ಲಿ ಪ್ರಶ್ನಿಸಿ ಅಹವಾಲು ಸಲ್ಲಿಸಿದ್ದರು.

ಪ್ರಕರಣ ಕುರಿತು ಸುದೀರ್ಘ ವಿಚಾರಣೆ ನಡೆದ ಬಳಿಕ ಹೈಕೋರ್ಟ್ ತೀರ್ಪು ನೀಡಿದ್ದು, ಮರು ಪರೀಕ್ಷೆಯ ಸರ್ಕಾರದ ನಿರ್ಧಾರವನ್ನು ಸಮರ್ಥಿಸಿತ್ತು. ಈ ಹಿನ್ನೆಲೆಯಲ್ಲಿ ಸರ್ಕಾರ ಮರು ಪರೀಕ್ಷೆ ನಡೆಸಲು ಅಗತ್ಯ ಕ್ರಮ ತೆಗೆದುಕೊಂಡಿದೆ.

ಹೈಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಸ್ವತಂತ್ರ ಸಂಸ್ಥೆಯಿಂದ ಮರು ಪರೀಕ್ಷೆ ನಡೆಸಬೇಕು ಎಂಬ ಕಾರಣಕ್ಕೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ಮರು ಪರೀಕ್ಷೆ ಆಯೋಜಿಸಲಾಗಿದೆ.

Leave a Reply