ಸಂವಿಧಾನಕ್ಕೆ ನಮಸ್ಕಾರ
ಹಲವು ಧರ್ಮಗಳ ಹಲವಾರು ಗ್ರಂಥಗಳು ಉಪದೇಶವನ್ನು ಮಾತ್ರ ನೀಡಿತು, ಸಂವಿಧಾನ ಬದುಕನ್ನ ಕಟ್ಟಿಕೊಟ್ಟಿತು.
ಮತದಾನದ ಹಕ್ಕು ಕೊಟ್ಟು ಪ್ರಜಾಪ್ರಭುತ್ವದಲ್ಲಿ ಪಾಲುದಾರರನ್ನಾಗಿಸಿದ ಸಂವಿಧಾನಕ್ಕೆ ನಮಸ್ಕಾರ
ಮಾತನಾಡುವ ಹಕ್ಕು ಕೊಟ್ಟು, ವ್ಯಕ್ತಿ ಸ್ವಾತಂತ್ರ್ಯವನ್ನು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಕೊಟ್ಟ, ಸಂವಿಧಾನಕ್ಕೆ ನಮಸ್ಕಾರ.
ಎಲ್ಲರಿಗೂ ಅವರವರ ಧರ್ಮದ ಆಚರಣೆಗೆ ಅನುವು ಮಾಡಿಕೊಟ್ಟು, ಅವರ ಇಚ್ಛೆಯಂತೆ ಬದುಕಲು ಅವಕಾಶ ಮಾಡಿಕೊಟ್ಟ ಸಂವಿಧಾನಕ್ಕೆ ನಮಸ್ಕಾರ.
ಅಸ್ಪೃಶ್ಯತೆ ಅಪರಾಧವೆಂದು ಕಾನೂನನ್ನು ಮಾಡಿ, ಅಸ್ಪೃಶ್ಯತೆ ಆಚರಿಸುವವರಿಗೆ ಎಚ್ಚರಿಕೆಯನ್ನ ನೀಡಿ, ನೊಂದವರ ಸ್ವಾಭಿಮಾನದ ಬದುಕಿಗೆ ಮುನ್ನುಡಿ ಬರೆದ ಸಂವಿಧಾನಕ್ಕೆ ನಮಸ್ಕಾರ.
ತಲೆಯ ಮೇಲೆ ಮಲ ಹೋರುವ, ರಾಕ್ಷಸ ಪದ್ಧತಿಗೆ ಅಂತ್ಯಗೊಳಿಸಿದ ಸಂವಿಧಾನಕ್ಕೆ ನಮಸ್ಕಾರ.
ಉಚಿತವಾಗಿ ಪ್ರಾಥಮಿಕ ಶಿಕ್ಷಣದ ಹಕ್ಕು, ಕೊಟ್ಟ ಸಂವಿಧಾನಕ್ಕೆ ನಮಸ್ಕಾರ.
ಉಳುವವನಿಗೆ ಭೂಮಿ ಎಂಬ ಕಾನೂನು ಮಾಡಲು ಪ್ರೇರಣೆಯಾದ ಸಂವಿಧಾನಕ್ಕೆ ನಮಸ್ಕಾರ.
ಆಹಾರ ಭದ್ರತೆ ಕಾಯ್ದೆಯನ್ನ ಜಾರಿಗೊಳಿಸಲು ಕಾರಣವಾದ ಸಂವಿಧಾನಕ್ಕೆ ನಮಸ್ಕಾರ.
ಸಮ ಸಮಾಜದ ನಿರ್ಮಾಣಕ್ಕೆ ಎಲ್ಲರಿಗೂ ಗೌರವದಿಂದ ಬದುಕಲು ಯೋಜನೆಗಳನ್ನ ರೂಪಿಸಿ ಕೊಟ್ಟಿರುವ ಸಂವಿಧಾನಕ್ಕೆ ನಮಸ್ಕಾರ.
ಬೆವರು ಸುರಿಸಿ, ಮೈ ಮುರಿದು ದುಡಿಯುವ ಜನರ, ಧ್ವನಿಯಾಗಿ, ವಿದ್ಯೆ ಕಲಿಯಲು, ದೇವಾಲಯಗಳಲ್ಲಿ ಪ್ರವೇಶ ಪಡೆಯಲು, ಸಾರ್ವಜನಿಕ ಸವಲತ್ತುಗಳನ್ನು ಬಳಸಲು, ಹಕ್ಕು ನೀಡಿದ ಸಂವಿಧಾನಕ್ಕೆ ನಮಸ್ಕಾರ.
ಭಾರತೀಯರ ಬದುಕಿಗೆ ಉಸಿರಾಗಿರುವ, ಎಲ್ಲರ ಪವಿತ್ರ ಗ್ರಂಥವಾಗಿರುವ ಸಂವಿಧಾನವನ್ನು ರಚಿಸಿಕೊಟ್ಟ ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಅಂಬೇಡ್ಕರ್ ರವರಿಗೆ ನಮ್ಮ ನಮಸ್ಕಾರ
ನೂರು ಜನ ಅಬ್ಬರಿಸಲಿ, ನೂರಾರು ಕುತಂತ್ರಗಳನ್ನ ನಡೆಸಲಿ, ಬದಲಾಗುವುದಿಲ್ಲ, ಬದಲಾವಣೆ ಬಯಸದ ಯಥಾಸ್ಥಿತಿವಾದಿಗಳ ಮೋಸದ ಮಾತುಗಳಿಗೆ ಮರುಳಾಗದೆ ಎಚ್ಚರ ವಹಿಸೋಣ.
– ಕೆ ಎಸ್ ನಾಗರಾಜ್, ಬೆಂಗಳೂರು




