ಎರಡನೇ ಪಿಯುಸಿ ಓದುತ್ತಿದ್ದಾಗ ನಮಗೆ ಆರ್.ಕೆ.ನಾರಾಯಣ್ ಅವರ Doctors Word ಎಂಬ ಸಣ್ಣ ಕತೆ ಪಠ್ಯವಾಗಿತ್ತು. ಇದು ಇಬ್ಬರು ಗೆಳೆಯರಾದ ರಾಮು ಎಂಬ ಡಾಕ್ಟರ್ ಮತ್ತು ಗೋಪಾಲ್ ಎಂಬ ರೋಗಿಯ ಕತೆ. ಡಾಕ್ಟರ್ ರಾಮುವಿನ ಮಾತಿನ ಮೇಲೆ ಗೋಪಾಲ್‌ಗೆ ಅಪಾರ ನಂಬಿಕೆ. ಗೋಪಾಲ್ ಒಮ್ಮೆ ಅಸ್ವಸ್ಥತೆಗೀಡಾಗಿ ಚಿಂತಾಜನಕ ಸ್ಥಿ ತಿಯಲ್ಲಿ ಆಸ್ಪತ್ರೆಗೆ ದಾಖಲಾಗುತ್ತಾನೆ. ಗೋಪಾಲ್ ಸಾಯುವ ಮೊದಲು ವಿಲ್ ಗೆ ಸಹಿ ಹಾಕಬೇಕಾಗಿತ್ತು. ಅದಕ್ಕಾಗಿ ಆತ ತಾನು ಬದುಕುತ್ತೇನೋ ಇಲ್ಲವೋ ಎಂದು ಡಾಕ್ಟರ್ ಬಳಿ ಕೇಳುತ್ತಾನೆ.
ಡಾಕ್ಟರದ್ದು ಧರ್ಮ ಸಂಕಟ. ತನ್ನ ರೋಗಿ ಬದುಕುವ ಸ್ಥಿತಿಯಲ್ಲಿಯೇ ಇಲ್ಲ ಎಂದು ಅವರ ವೈದ್ಯಕೀಯ ಜ್ಞಾನ-ಅನುಭವ ಹೇಳುತ್ತದೆ. ಅದರ ಆಧಾರದಲ್ಲಿ ನೀನು ಸಾಯುತ್ತಿ ಎಂದು ಹೇಳಿಬಿಟ್ಟರೆ ರೋಗಿ ಆತ್ಮವಿಶ್ವಾಸವನ್ನು ಕಳೆದುಕೊಳ್ಳುತ್ತಾನೆ, ಅದರಿಂದಾಗಿ ಬದುಕುಳಿಯುವ ಸಣ್ಣ ಅವಕಾಶವೂ ತಪ್ಪಿ ಸತ್ತೇ ಹೋಗಬಹುದೆಂಬ ಭಯ ಡಾಕ್ಟರ್ ಗೆ.
ಸಾಯುತ್ತಿ ಎಂದು ಹೇಳದೆ ಇದ್ದರೆ ಬದುಕುಳಿಯುತ್ತೇನೆ ಎಂಬ ವಿಶ್ವಾಸದಿಂದ ರೋಗಿ ವಿಲ್ ಗೆ ಸಹಿ ಹಾಕುವುದಿಲ್ಲ. ವಿಲ್ ಗೆ ಸಹಿಹಾಕದೆ ಸತ್ತರೆ ಆಸ್ತಿ ಪತ್ನಿಯ ಕೈತಪ್ಪಿ ಹೋಗುವ ಅಪಾಯ ಇದೆ.
ಈ ಯೋಚನೆಯಲ್ಲಿ ತೊಳಲಾಡುವ ಡಾಕ್ಟರ್ ಕೊನೆಗೆ ಧೈರ್ಯ ಮಾಡಿ ರೋಗಿಗೆ ‘ನೀನು ಬದುಕುತ್ತಿ ಭಯ ಬೇಡ’ ಎಂದು ಹೇಳಿ ಹೊರಟು ಬಿಡುತ್ತಾನೆ. ಮರುದಿನ ಬಂದು ನೋಡಿದರೆ ರೋಗಿ ಬದುಕಿರುತ್ತಾನೆ. ಅವನನ್ನು ಬದುಕಿಸಿದ್ದು ಔಷಧಿ ಅಲ್ಲ ಡಾಕ್ಟರ್ ಅವರ ಮಾತು. ಇದು ಕತೆ.
ನನಗೆ ಡಾಕ್ಟರ್ ಎಂದರೆ ನಂಬಿಕೆಯ ಪ್ರತಿರೂಪ. ನಾನೆಂದೂ ಡಾಕ್ಟರ್ ಬಳಿ ವಾದ ಮಾಡುವುದಿಲ್ಲ. ಅವರು ಹೇಳಿದ್ದನ್ನು ಕಣ್ಣುಮುಚ್ಚಿ ಒಪ್ಪುತ್ತೇನೆ, ಪಾಲಿಸುತ್ತೆನೆ. ಈ ನಂಬಿಕೆಯನ್ನು ನನ್ನ ಯಾವ ಡಾಕ್ಟರ್ ಗಳೂ ಈವರೆಗೆ ಹುಸಿಗೊಳಿಸಿಲ್ಲ.
ನಾನು ಸಣ್ಣವನಿದ್ದಾಗ ನಮಗೆ ಇಬ್ಬರು ಮನೆ ಡಾಕ್ಟರ್ ಗಳು. ಒಬ್ಬರು ಜುಟ್ಟು-ಜನಿವಾರ ಹಾಕಿಕೊಂಡ ಸಂಪ್ರದಾಯವಾದಿ ಬ್ರಾಹ್ಮಣ ಡಾಕ್ಟರ್. ಸೊಸೈಟಿ ಬಳಿ ಅವರ ಕ್ಲಿನಿಕ್ ಇದ್ದ ಕಾರಣ ಅವರನ್ನು ‘ಸೊಸೈಟಿ ಡಾಕ್ಟರ್ ಎಂದು ಕರೆಯುತ್ತಿದ್ದರು.
ಮಳೆ-ನೆರೆ ಏನೇ ಇರಲಿ, ದೋಣಿ ದಾಟಿಕೊಂಡು ಗೊಣಗಾಟ ನಡೆಸದೆ ಊರಿಗೆ ಬಂದು ರೋಗಿಗಳನ್ನು ನೋಡಿ ಹೋಗುತ್ತಿದ್ದ ಪುಣ್ಯಾತ್ಮ ಅವರು.
ನಾನು ಜ್ವರ ಬಂದಾಗ ಮಾತ್ರ ಅವರ ಬಳಿ ಹೋಗುತ್ತಿರಲಿಲ್ಲ. ಯಾಕೆಂದರೆ ಅವರದ್ದು ಭಯಂಕರ ಪಥ್ಯೆ, ಅಕ್ಕಿ ಗಂಜಿಯನ್ನು ಎರಡು ಬಾರಿ ಕುದಿಸಿ ಸ್ವಲ್ಪ ಉಪ್ಪು ಹಾಕಿ ಕುಡಿಯಬೇಕು. ಖಾರ-ಹುಳಿ ಏನೂ ತಿನ್ನಬಾರದು, ಮೀನು ಸಾರು ಮುಟ್ಟಬಾರದು… ಇತ್ಯಾದಿ ಪಥ್ಯೆ. ಇದು ನನ್ನ ಪಾಲಿಗೆ ಜ್ವರ-ಶೀತಕ್ಕಿಂತಲೂ ಹೆಚ್ಚು ಕಿರಿಕಿರಿ.
ನನ್ನ ನೆಚ್ಚಿನ ಡಾಕ್ಟರ್ ಮಲ್ಯ ಎಂಬ ಇನ್ನೊಬ್ಬ ಕೊಂಕಣಿ ಡಾಕ್ಟರ್.
40ರ ಆಸುಪಾಸಿನಲ್ಲಿದ್ದ ಈ ಶೋಮ್ಯಾನ್ ಡಾಕ್ಟರ್ ಅವಿವಾಹಿತ.(ಬ್ರಹ್ಮಚಾರಿ ಅಲ್ಲ) ತಮ್ಮ ಗರ್ಲ್ ಫ್ರೆಂಡ್ ಗಳ ಬಗ್ಗೆ ಅವರು ನನ್ನೊಡನೆ ಹೇಳುತ್ತಾ ನನ್ನ ತಲೆಕೆಡಿಸುತ್ತಿದ್ದರು.
ನಾನು ಬಹಳ ಅಮಾಯಕನಾಗಿ “ನಿಮಗೆ ಈಗ ಗರ್ಲ್ ಫ್ರೆಂಡ್ ಗಳಿರಬಹುದು, ವಯಸ್ಸಾದರೆ ಏನು ಮಾಡ್ತೀರಿ?” ಎಂದು ಕೇಳಿದರೆ, ಆಗ ಆ ಗರ್ಲ್ ಫ್ರೆಂಡ್ ಗಳ ತಾಯಂದಿರು ಇರುತ್ತಾರಲ್ಲಾ ಎಂದು ಹೇಳುತ್ತಿದ್ದರು.
ನಾನು ತಲೆಯಾಡಿಸುತ್ತಾ ಬಂದು ಆ ಮೇಲೆ ತಲೆಕೆಡಿಸಿ ಕೊಳ್ಳುತ್ತಿದ್ದೆ. ಇವರಿಗೆ ವಯಸ್ಸಾದಾಗ ಇವರ ಗರ್ಲ್ ಫ್ರೆಂಡ್ ಗಳಿಗೂ ವಯಸ್ಸಾಗಿರುತ್ತದೆ, ಹಾಗೆಯೇ ಅವರ ತಾಯಂದಿರಿಗೂ ವಯಸ್ಸಾಗುತ್ತೆ ಅಲ್ವಾ? ಎಂದೆಲ್ಲ ಗೊಂದಲ ಮಾಡಿಕೊಳ್ಳುತ್ತಿದ್ದೆ.
ಇವರಲ್ಲಿ ನಾನು ಜ್ವರ ಬರ್ತಿದೆ ಎಂದು ಹೇಳಿದರೆ ಯಾವುದೋ ಒಂದು ಮಾತ್ರೆ ಕೊಟ್ಟು “ಕಡಕ್ ಮೀನು ಸಾರಿನಲ್ಲಿ ಹೊಟ್ಟೆ ತುಂಬಾ ಊಟ ಮಾಡಿ ಈ ಮಾತ್ರೆ ನುಂಗು,
ಪಥ್ಯೆ ಗಿಥ್ಯೆ ಏನೂ ಇಲ್ಲ’’ ಎಂದು ಕಳಿಸುವವರು. ಅದರಿಂದ ನನ್ನ ಜ್ವರ ಓಡಿಹೋಗುತ್ತಿತ್ತು.
ನನ್ನ ತಂದೆ-ತಾಯಿಗೆ ಜುಟ್ಟಿನ ಡಾಕ್ಟರ್ ಹೇಳುವ ಗಂಜಿ ಮೇಲೆ ನಂಬಿಕೆ ಇತ್ತು. ನನಗೆ ಶೋಮ್ಯಾನ್ ಡಾಕ್ಟರ್ ಹೇಳುವ ಕಡಕ್ ಮೀನು ಸಾರು ಮೇಲೆ ನಂಬಿಕೆ. ಇಬ್ಬರೂ ಡಾಕ್ಟರ್ ಗಳು ನಮ್ಮ ನಂಬಿಕೆ ಹುಸಿಗೊಳಿಸಿರಲಿಲ್ಲ.
ವೈದ್ಯರ ದಿನದ ಶುಭಾಶಯಗಳು.
– ದಿನೇಶ್ ಅಮೀನ್ ಮಟ್ಟು, ಹಿರಿಯ ಪತ್ರಕರ್ತರು
