ನಗರ ನಕ್ಸಲರ ಹೃದಯ ವೈಶಾಲ್ಯತೆ
ದಶಕದ ಹಿಂದೆ ಕರ್ನಾಟಕದ ಪ್ರಗತಿಪರ ಲೇಖಕರರನ್ನು ನಗರ ನಕ್ಸಲರು ಎಂದು ಕರೆಯುವ ಪದ್ಧತಿ ಸಂಘ ಪರಿವಾರದ ಅವಿವೇಕಿಗಳಿಂದ ಚಾಲ್ತಿಗೆ ಬಂದಿತು. ಖ್ಯಾತ ನಾಟಕಕಾರರಾದ ಗಿರೀಶ್ ಕಾರ್ನಾಡ್ ಅವರು ಒಮ್ಮೆ ಟೌನ್ ಹಾಲ್ ಬಳಿಯ ಪ್ರತಿಭಟನೆಯಲ್ಲಿ ‘ನಾನು ನಗರ ನಕ್ಸಲ’ ಎಂಬ ಫಲಕವನ್ನು ಕುತ್ತಿಗೆಗೆ ಹಾಕಿಕೊಂಡು’’ ಹೌದು ನಾನು ನಗರ ನಕ್ಸಲೀಯ ‘’ ಎಂದು ಮಾಧ್ಯಮಗಳಿಗೆ ಉತ್ತರಿಸಿದ್ದರು.
ಇತಿಹಾಸದ ಅರಿವಿಲ್ಲದವನು ಇತಿಹಾಸವನ್ನು ಸೃಷ್ಟಿಸಲಾರ ಎಂಬ ಮಾತಿದೆ. ಈ ಸತ್ಯ ಗಿರೀಶ್ ಕಾರ್ನಾಡ್ ಅವರಿಗಿತ್ತು. ಇತಿಹಾಸ ಗೊತ್ತಿಲ್ಲದ ಮೂರ್ಖರು ಮಾತ್ರ ನಗರ ನಕ್ಸಲರು ಎಂಬ ಶಬ್ದವನ್ನು ತಪ್ಪಾಗಿ ಬಳಕೆ ಮಾಡುತ್ತಿದ್ದಾರೆ. ಇದಕ್ಕೆ ಭಾರತದಲ್ಲಿ ಪಶ್ಚಿಮ ಬಂಗಾಳದ ಸಿಲಿಗುರಿಯ ಪ್ರಾಂತ್ಯದಲ್ಲಿ ನಕ್ಸಲ್ ಹೋರಾಟವನ್ನು ಹುಟ್ಟುಹಾಕಿದ ಚಾರು ಮುಂಜುಂದಾರ್ ಅವರ ಬದುಕಿನ ಒಂದು ಘಟನೆ ಸಾಕ್ಷಿಯಾಗಿದೆ.
1918ರಲ್ಲಿ ಸಿಲಿಗುರಿಯಲ್ಲಿ ಜನಿಸಿದ ಚಾರು ಮುಜುಂದಾರ್ ಆಗರ್ಭ ಶ್ರೀಮಂತ ಕುಟುಂಬದಿಂದ ಬಂದವರು. ಅವರ ತಂದೆ ಆ ಕಾಲಕ್ಕೆ ವಾರಣಾಸಿಯಲ್ಲಿ ಬಿ.ಎ. ಎಲ್.ಎಲ್.ಬಿ. ಮಾಡಿ ವಕೀಲಿ ವೃತ್ತಿ ಮಾಡುತ್ತಿದ್ದರು. ನ್ಯಾಯಾಲಯದಲ್ಲಿ ತಮ್ಮ ಕಕ್ಷಿದಾರರ ಪರವಾಗಿ ಸುಳ್ಳುಗಳನ್ನು ಹೇಳಲಾರದೆ ವಕೀಲಿ ವೃತ್ತಿಯನ್ನು ತ್ಯಜಿಸಿದ್ದರು. ತಂದೆಗೆ ಏಕೈಕ ಪುತ್ರಿಯಾಗಿದ್ದ ಅವರ ಪತ್ನಿಯ ಕಡೆಯಿಂದ ಬಂದಿದ್ದ ಅಪಾರ ಪ್ರಮಾಣದ ಭೂಮಿಯ ಒಡೆಯರಾಗಿದ್ದರು. ಇಂತಹ ಕುಟುಂಬದಿಂದ ಚಾರು ಮುಜುಂದಾರ್ ಶಿಕ್ಷಣ ಮುಗಿಸಿ, ಆರಂಭದಲ್ಲಿ ಜಯಪ್ರಕಾಶ್ ನಾರಾಯಣ್ ನೇತೃತ್ವದ ಅಂದಿನ ಸಮಾಜವಾದಿ ಕಾಂಗ್ರೆಸ್ ಪಕ್ಷದ ಸದಸ್ಯರಾಗಿದ್ದರು. ನಂತರ ಕಮ್ಯೂನಿಸ್ಟ್ ಪಕ್ಷದಲ್ಲಿ ತೊಡಗಿಸಿಕೊಂಡರು.
1940ರಲ್ಲಿ ತಮ್ಮ ಇಪ್ಪತ್ತನೆಯ ವಯಸ್ಸಿನಲ್ಲಿ ಹಳ್ಳಿಗಾಡಿನ ಪ್ರದೇಶಗಳಲ್ಲಿ ಸಂಚರಿಸುತ್ತಾ, ಕೃಷಿ ಕೂಲಿಕಾರ್ಮಿಕರ ಮನೆಯಲ್ಲಿ ಊಟ ಮಾಡುತ್ತಾ ಪಕ್ಷವನ್ನು ಸಂಘಟಿಸುತ್ತಿದ್ದರು. ಉತ್ತರ ಭಾಗದ ಪಶ್ಚಿಮ ಬಂಗಾಳದ ಕೃಷಿ ಕೂಲಿ ಕಾರ್ಮಿಕರು ಮತ್ತು ಆದಿವಾಸಿಗಳ ಬದುಕು ಅಂದಿನ ದಿನಗಳಲ್ಲಿ ದಾರುಣವಾಗಿತ್ತು. ಜಮೀನ್ದಾರರ ಗದ್ದೆಗಳಲ್ಲಿ ದುಡಿಯುತ್ತಿದ್ದ ಇವರುಗಳಿಗೆ ಭೂಮಾಲೀಕರು ಕೂಲಿ ರೂಪದಲ್ಲಿ ನೀಡುತ್ತಿದ್ದ ಅಕ್ಕಿಯು ಕೇವಲ ಮೂರು ತಿಂಗಳಿಗೆ ಸಾಕಾಗುತ್ತಿತ್ತು. ಉಳಿದ ಒಂಬತ್ತು ತಿಂಗಳು ಹಸಿ ತರಕಾರಿ, ಸೊಪ್ಪು ಮತ್ತು ಗೆಡ್ಡೆಗಳನ್ನು ಬೇಯಿಸಿ ತಿನ್ನುತ್ತಾ ಜೀವಿಸುತ್ತಿದ್ದರು.
ಒಮ್ಮೆ ಚಾರು ಮುಜುಂದಾರ್ ಒಂದು ಹಳ್ಳಿಯಲ್ಲಿ ಜತಿನ್ ಎಂಬ ಕೂಲಿಕಾರನ ಮನೆಗೆ ಹೋದಾಗ, ಆ ಕೂಲಿ ಕಾರ್ಮಿಕನು ಬೇರೆಡೆಯಿಂದ ಅಕ್ಕಿ ತಂದು ಅಡುಗೆ ಮಾಡಿದ್ದನು. ಅನ್ನ ಬೇಯುತ್ತಿರುವಾಗ ಆತನ ಮಕ್ಕಳು ‘’ಅಪ್ಪಾ ಈ ದಿನ ನಮಗೆ ಅನ್ನದ ಊಟ ಬಡಿಸಪ್ಪಾ’’ ಎಂದು ತಂದೆಯನ್ನು ಒಳಮನೆಯಲ್ಲಿ ಬೇಡಿಕೊಳ್ಳುತ್ತಿದ್ದ ಮಾತುಗಳು ಚಾರು ಅವರ ಕಿವಿಗೆ ಬಿದ್ದವು. ‘ನಗರದಿಂದ ನಾಯಕರು ಬಂದಿದ್ದಾರೆ. ಈ ದಿನ ಅನ್ನದ ಊಟ ಅವರಿಗೆ’ ನಾಳೆ ನಿಮಗೆ ಅಕ್ಕಿ ತರುತ್ತೇನೆ ಎಂದು ಕೂಲಿಕಾರ ಮಕ್ಕಳನ್ನು ಸಂತೈಸುತ್ತಿದ್ದ.
ಆ ದಿನ ಚಾರು ಮುಂಜುಂದಾರ್ ಊಟಕ್ಕೆ ಕುಳಿತು ಅನ್ನವನ್ನು ಬಾಯಿಗೆ ಇಡುವಾಗ ಅವರ ಕಣ್ಣುಗಳಿಂದ ನೀರು ಹರಿಯತೊಡಗಿದವು. ಮಕ್ಕಳನ್ನು ಜೊತೆಯಲ್ಲಿ ಕೂರಿಸಿಕೊಂಡು ಊಟ ಮಾಡಿದರು. ಕೃಷಿ ಕಾರ್ಮಿಕರಿಗೆ ನ್ಯಾಯ ದೊಕಿಸಿಕೊಡುವುದು ನನ್ನ ಜೀವನದ ಮುಖ್ಯ ಗುರಿ ಎಂದು ಆ ಕ್ಷಣವೇ ನಿರ್ಧರಿಸಿದರು.
ಅದರಂತೆ ಭೂಮಾಲಿಕರ ವಿರುದ್ಧ ಸಿಡಿದೆದ್ದು ಭಾರತದಲ್ಲಿ ವಿಶೇಷವಾಗಿ ಪಶ್ಚಿಮ ಬಂಗಾಳ, ಆಂಧ್ರ ಪ್ರದೇಶದಲ್ಲಿ ಆದಿವಾಸಿಗಳಿಗೆ ಮತ್ತು ಕೃಷಿ ಕೂಲಿ ಕಾರ್ಮಿಕರಿಗೆ ಧ್ವನಿಯಾದರು. ನಕ್ಸಲ್ ಸಂಘಟನೆಯನ್ನು ಹುಟ್ಟು ಹಾಕಿ 1972ರಲ್ಲಿ ಪೊಲಿಸರಿಗೆ ಬಲಿಯಾದರು. 1967 ರಿಂದ 2002ರ ವರೆಗೆ ಅಂದರೆ ಮುವತ್ತೈದು ವರ್ಷಗಳ ಅವಧಿಯಲ್ಲಿ ಪಶ್ಚಿಮ ಬಂಗಾಳ ಮತ್ತು ಆಂಧ್ರಪ್ರದೇಶದಲ್ಲಿ ಒಟ್ಟು ಒಂಬತ್ತು ಸಾವಿರ ಮಂದಿ ಇವರಲ್ಲಿ ಆರು ಸಾವಿರ ಮಂದಿ ನಕ್ಸಲ್ ಸಂಘಟನೆಯ ನಾಯಕರು ಬಲಿಯಾಗಿದ್ದರು. ಜೀವ ತೆತ್ತವರಲ್ಲಿ ಶೇಕಡಾ 90ರಷ್ಟು ಮಂದಿ ಎಂ.ಎ., ಎಂ.ಎಸ್ಸಿ., ಇಂಜಿನಿಯರಿಂಗ್ ಓದಿಕೊಂಡ ವಿದ್ಯಾವಂತರು ಮತ್ತು ವಕೀಲರು, ಪ್ರಾಧ್ಯಾಪಕರು, ವಿಜ್ಞಾನಿಗಳು ಇದ್ದರು.
ಯಾವುದೇ ವೈಯಕ್ತಿಕ ಆಸೆ ಇಲ್ಲದೆ ತಾವು ನೋಡಿದ ಜಗತ್ತಿನ ಬಡವರ ಬದುಕಿನ ಏಳಿಗೆಗೆ ಪ್ರಾಣ ತೆತ್ತ ಇವರನ್ನು ತೆಲುಗು ಜನತೆ ಅಮರುಡು ಅಂದರೆ ಅಮರರು ಎಂದು ಕರೆದು ಗೌರವಿಸಿದರು. ಹಾಗಾಗಿ ನಗರ ನಕ್ಸಲರು ಎಂದರೆ ಅಮರ ಜೀವಿಗಳು ಎಂದು ಸಂಘಪರಿವಾರದ ಅವಿವೇಕಿಗಳಿಗೆ ನಾವು ಈಗ ಪಾಠ ಹೇಳಿಕೊಡಬೇಕಾಗಿದೆ.
– ಜಗದೀಶ್ ಕೊಪ್ಪ, ಹಿರಿಯ ಪತ್ರಕರ್ತರು




