ಕರ್ನಾಟಕ ಸೇರಿ 44ಕ್ಕೂ ಹೆಚ್ಚು ಕಡೆ ಎನ್.ಐ.ಎ ದಾಳಿ

2 years ago

ಬೆಂಗಳೂರು: ದೇಶಾದ್ಯಂತ ಭಯೋತ್ಪಾದಕ ಕೃತ್ಯ ನಡೆಸಲು ಜಾಗತಿಕ ಭಯೋತ್ಪಾದಕ ಸಂಘಟನೆ ‘ಐಸಿಸ್’ ಸಂಚು ರೂಪಿಸಿದೆ ಎಂಬ ಗುಪ್ತದಳದ ಸಂದೇಶದ ಬೆನ್ನುಹತ್ತಿದ ರಾಷ್ಟ್ರೀಯ ತನಿಖಾ ದಳ (ಎನ್ ಐಎ) ಅಧಿಕಾರಿಗಳು ಕರ್ನಾಟಕ ಹಾಗೂ ಮಹಾರಾಷ್ಟ್ರದ 44ಕ್ಕೂ ಹೆಚ್ಚು ಸ್ಥಳಗಳಲ್ಲಿ ದಾಳಿ ನಡೆಸಿದೆ. ಎನ್ಐಎ ಅಧಿಕಾರಿಗಳು ಕರ್ನಾಟಕದ ಒಂದು ಕಡೆ, ಪುಣೆಯ 2, ಥಾಣೆ ಗ್ರಾಮಾಂತರದ 31, ಥಾಣೆ ನಗರದ 9 ಮತ್ತು ಭಾಯಂದರ್ನಲ್ಲಿ 1 ಸ್ಥಳಗಳಲ್ಲಿ ಶೋಧ ನಡೆಸಿದ್ದಾರೆ. ಐಸಿಸ್ ಭಯೋತ್ಪಾದನೆ ಸಂಘಟನೆ ಜೊತೆ ಸೇರಿ ಸಂಚು ರೂಪಿಸಿದ ಪ್ರಕರಣದಲ್ಲಿ ಇದುವರೆಗೆ 13 ಜನ ಶಂಕಿತ ಉಗ್ರರನ್ನು ಬಂಧಿಸಿದ್ದಾರೆ.

ಬೆಂಗಳೂರಿನಲ್ಲಿ ಉರ್ದು ಶಾಲೆ ನಡೆಸುತ್ತಿದ್ದ ಶಂಕಿತ ಉಗ್ರನನ್ನು ಎನ್ಐಎ ಅಧಿಕಾರಿಗಳು ಬಂಧಿಸಿದ್ದಾರೆ. ಶಂಕಿತ ಉಗ್ರನಿಂದ 16.42 ಲಕ್ಷ ರೂ. ಜಪ್ತಿ ಮಾಡಿದ್ದಾರೆ. ಶಂಕಿತ ಉಗ್ರ ಡಾಟಾ ಕನ್ಸಲ್ಟೆಂಟ್ ಆಗಿ ಕೆಲಸ ಮಾಡುತ್ತಿದ್ದ ಎಂಬ ಮಾಹಿತಿ ಲಭ್ಯವಾಗಿದೆ. ಇನ್ನು ಪುಣೆ ದಾಳಿ ವೇಳೆ ಪ್ರಕರಣಕ್ಕೆ ಸಂಬಂಧಿಸಿದಂತೆ 13 ಆರೋಪಿಗಳನ್ನು ಬಂಧಿಸಲಾಗಿದೆ.

ದಾಳಿಯ ಸ್ಥಳಗಳಲ್ಲಿ ಅಧಿಕಾರಿಗಳು ಶೋಧ ನಡೆಸಿದ್ದಾರೆ. ಭಾರತದಲ್ಲಿ ಭಯೋತ್ಪಾದನೆ ಮತ್ತು ಹಿಂಸಾಚಾರ ಹರಡುವ ಭಯೋತ್ಪಾದಕ ಸಂಘಟನೆಯ ಯೋಜನೆಗಳನ್ನು ವಿಫಲಗೊಳಿಸಲು ಎನ್ಐಎ ವ್ಯಾಪಕ ತನಿಖೆಯನ್ನು ಕೈಗೊಂಡಿದೆ.

ಬೆಂಗಳೂರಿನ ಫ್ರೇಜರ್ ಟೌನ್ನಲ್ಲಿರುವ ಅಲಿ ಅಬ್ಬಾಸ್ ಎಂಬಾತನ ಮನೆಯಲ್ಲಿ ಎನ್ಐಎ ಅಧಿಕಾರಿಗಳು ಪರಿಶೀಲನೆ ನಡೆಸಿದರು. ಮುಂಬೈ ಮೂಲದ ಅಲಿ ಅಬ್ಬಾಸ್, ಟ್ಯಾನರಿ ರಸ್ತೆಯಲ್ಲಿ ಉರ್ದು ಶಾಲೆ ನಡೆಸುತ್ತಿದ್ದಾರೆ. 2018ರಲ್ಲಿ ಫ್ಲಾಟ್ ಖರೀದಿಸಿದ್ದ ಅಲಿ ಅಬ್ಬಾಸ್, ವೈದ್ಯೆಯಾಗಿರುವ ತನ್ನ ಪತ್ನಿ ಮತ್ತು ಮೂವರು ಮಕ್ಕಳ ಜೊತೆಗೆ ವಾಸವಿರುವ ಮಾಹಿತಿ ಸಿಕ್ಕಿದೆ.

ಮಹಾರಾಷ್ಟ್ರದಲ್ಲಿ ಬಂಧನವಾಗಿದ್ದ ಶಂಕಿತನ ಜೊತೆಗೆ ಸಂಪರ್ಕದಲ್ಲಿದ್ದ ಎಂದು ಪ್ರಾಥಮಿಕ ಮಾಹಿತಿ ಲಭ್ಯವಾಗಿದೆ. ಆರೋಪಿಯ ಮೊಬೈಲ್, ಲ್ಯಾಪ್ಟಾಪ್ಗಳ ಪರಿಶೀಲನೆ ನಡೆದಿದೆ. ಅಲ್-ಖೈದಾ ಮತ್ತು ಐಸಿಸ್ ಸೇರಿದಂತೆ ನಿಷೇಧಿತ ಭಯೋತ್ಪಾದಕ ಸಂಘಟನೆಗಳ ಹಿಂಸಾತ್ಮಕ ಉಗ್ರಗಾಮಿ ಸಿದ್ಧಾಂತದ ಬೆಳವಣಿಗೆಗೆ ಪ್ರತಿಜ್ಞೆ ಮಾಡಿದ ಆರೋಪಿಗಳು ಮತ್ತು ಅವರ ಸಹಚರರು ರೂಪಿಸಿದ ಕ್ರಿಮಿನಲ್ ಪಿತೂರಿಗೆ ಸಂಬಂಧಿಸಿದ್ದಾಗಿದೆ ಮತ್ತು ಭಯೋತ್ಪಾದಕ ಗ್ಯಾಂಗ್ ರಚಿಸಿರುವ ಮಾಹಿತಿ ಆಧರಿಸಿ ರಾಷ್ಟ್ರೀಯ ತನಿಖಾ ದಳ ದಾಳಿ ನಡೆಸಿದೆ.

Leave a Reply