ಲೈಂಗಿಕ ಕಿರುಕುಳ ನೀಡಿದವನನ್ನು ಪೊಲೀಸ್ ವಶಕ್ಕೆ ಒಪ್ಪಿಸಿದ ಮೆಟ್ರೋ ಸಿಬ್ಬಂದಿ

2 years ago

#Metro #staff #handedover #sexualharasser #police #custody

ಬೆಂಗಳೂರು: ನಮ್ಮ ಮೆಟ್ರೋ ರೈಲಿನಲ್ಲಿ ಯುವತಿಯೊಬ್ಬರಿಗೆ ಲೈಂಗಿಕ ಕಿರುಕುಳ ನೀಡಿದ ಯುವಕನೊಬ್ಬನನ್ನು ಮೆಟ್ರೋ ಭದ್ರತಾ ಸಿಬ್ಬಂದಿ ವಶಕ್ಕೆ ಪಡೆದು ಉಪ್ಪಾರಪೇಟೆ ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ. ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಲೋಕೇಶ್ ನನ್ನು ವಶಕ್ಕೆ ಪಡೆದ ಪೊಲೀಸರು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ.

ರಾಜಾಜಿನಗರದಲ್ಲಿ ನಿನ್ನೆ ಬೆಳಗ್ಗೆ 9.40ರ ಸುಮಾರಿಗೆ ಮೆಟ್ರೋ ರೈಲು ಹತ್ತಿದ್ದ 22 ವರ್ಷದ ಯುವತಿಯ ಮೈಕೈಯನ್ನು ಲೋಕೇಶ್ ಮುಟ್ಟಿದ್ದಾನೆ. ಯುವತಿ ರಕ್ಷಣೆಗಾಗಿ ಕೂಗುತ್ತಿದ್ದಂತೆ ಮುಂದಿನ ನಿಲ್ದಾಣದಲ್ಲಿ ಪರಾರಿಯಾಗಲು ಯತ್ನಿಸಿದ್ದಾನೆ. ಈವೇಳೆ ಆತನನ್ನು ಮೆಟ್ರೋ ಭದ್ರತಾ ಅಧಿಕಾರಿಗಳು ವಶಕ್ಕೆ ಪಡೆದಿದ್ದರು.

ಬಂಧಿತ ಆರೋಪಿ ಲೋಕೇಶ್ ಮೇಲೆ ಈ ಹಿಂದೆ ಕೂಡ ಕೆಲವು ಪ್ರಕರಣಗಳಿರುವುದು ಇದೇ ವೇಳೆ ಬೆಳಕಿಗೆ ಬಂದಿದೆ. ಬಿಎಂಟಿಸಿ ಬಸ್ ನಲ್ಲಿ ಯುವತಿಯ ಮೊಬೈಲ್ ಕದಿಯುವ ವೇಳೆ ಲೋಕೇಶ್ ಸಿಕ್ಕಿಬಿದ್ದಿದ್ದ. ತನಿಖೆ ವೇಳೆ ಕಳ್ಳತನ ಮಾಡಿದ್ದ ವಿಷಯ ಬಹಿರಂಗವಾಗಿತ್ತು. ಆಗ ಆರೋಪಿ ಬಳಿ 20 ಮೊಬೈಲ್ ಫೋನ್, ಒಂದು ದ್ವಿಚಕ್ರ ವಾಹನವನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದರು.

ಜೊತೆಗೆ ನವೆಂಬರ್ 20 ರಂದು ಜನರಿಂದ ತುಂಬಿ ತುಳುಕುತ್ತಿದ್ದ ಮೆಟ್ರೋ ನಿಲ್ದಾಣದಲ್ಲಿ ದುಷ್ಕರ್ಮಿ ಕಾಲೇಜು ಯುವತಿಯೊಬ್ಬಳಿಗೆ ಲೈಂಗಿಕ ಕಿರುಕುಳ ನೀಡಿದ್ದ ಘಟನೆ ವರದಿಯಾಗಿತ್ತು. ಈ ಬಗ್ಗೆ ಯುವತಿಯ ಸ್ನೇಹಿತರು ಸಾಮಾಜಿಕ ಜಾಲತಾಣದಲ್ಲಿ ಈ ವಿಷಯವನ್ನು ಹಂಚಿಕೊಂಡಿದ್ದರು. ತಕ್ಷಣ ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳುವಂತೆ ಒತ್ತಾಯ ಕೇಳಿಬಂದಿತ್ತು. ಆದರೆ ಘಟನೆ ಕುರಿತು ಯಾರೂ ದೂರು ದಾಖಲಿಸಿಲಿಲ್ಲ.

ಸೆಪ್ಟಂಬರ್ 9ರಂದು ನಗರದ ಕಾಲೇಜೊಂದರ 20 ವರ್ಷದ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ ಕುರಿತು ದೂರು ದಾಖಲಾಗಿತ್ತು. ಕಳೆದ ಕೆಲ ದಿನಗಳ ಹಿಂದೆ ಪ್ರಯಾಣಿಕರೊಬ್ಬರ ಪರ್ಸ್ ಕಳವಾಗಿತ್ತು. ಪದೇ ಪದೇ ಈ ರೀತಿಯ ಘಟನೆಗಳು ನಗರದಲ್ಲಿ ನಡೆಯುತ್ತಿರುವುದರಿಂದ ಹೆಣ್ಣು ಮಕ್ಕಳ ಭದ್ರತೆ ಕುರಿತು ಸಾಕಷ್ಟು ಅನುಮಾನಗಳು ಎದ್ದಿದ್ದವು. ಇದೀಗ ಒಬ್ಬ ಆರೋಪಿಯ ಬಂಧನವಾಗಿದೆ. ಅಧಿಕಾರಿಗಳು ಇನ್ನಾದರೂ ಈ ಎಲ್ಲ ಪ್ರಕರಣಗಳನ್ನು ತಾರ್ಕಿಕ ಅಂತ್ಯ ಕಾಣಿಸಬೇಕಿದೆ.

Leave a Reply