ಬೆಂಗಳೂರು: ಗ್ರೇಟರ್ ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ನಮ್ಮ ಮೆಟ್ರೋದ ಗುಲಾಬಿ ಮಾರ್ಗದ ಜಯದೇವ ಆಸ್ಪತ್ರೆಯಿಂದ ಕಾಳೇನ ಅಗ್ರಹಾರ ಮೆಟ್ರೋ ನಿಲ್ದಾಣದವರೆಗಿನ ಎತ್ತರಿಸಿದ ಮಾರ್ಗದಲ್ಲಿ, ಸಾರ್ವಜನಿಕ ಸೇವೆಗೆ ತೆರೆಯುವ ಸಿದ್ಧತೆಗಳನ್ನು ಪರಿಶೀಲಿಸಿದರು.
- ಮೆಟ್ರೋ ಸಾರ್ವಜನಿಕ ಸೇವೆಗೆ ತೆರೆಯುವ ಸಿದ್ಧತೆಗಳನ್ನು ಪರಿಶೀಲಿಸಿದ ಕೃಷ್ಣ ಬೈರೇಗೌಡ
- ಎರಡು ದಶಕಗಳ ಕನ್ನಡಿಗರ ಹೋರಾಟಕ್ಕೆ ಮತ್ತೊಂದು ಮಹತ್ವದ ಜಯ: ಟಿ.ಎ.ನಾರಾಯಣಗೌಡ
- ಪ್ರಜಾಸೇವಾ ಆಂದೋಲನ ಪೂರ್ವಭಾವಿ ಸಭೆ ನಡೆಸಿದ ದರ್ಶನ್ ಪುಟ್ಟಣ್ಣಯ್ಯ
- ದಲಿತರು ಎಲ್ಲಿಗೇ ಭೇಟಿ ನೀಡಿದರೂ ಅಲ್ಲಿ ಶುದ್ಧೀಕರಣ ಮಾಡುವುದು ತಪ್ಪು: ಆರ್.ಅಶೋಕ
- ಕೆಪಿಎಸ್ಸಿ ಸದಸ್ಯರು ಮತ್ತು ಅಧ್ಯಕ್ಷರ ಆಯ್ಕೆಯಲ್ಲಿ ಬೇಕಿದೆ ಪಾರದರ್ಶಕತೆ
ಪರಿಶೀಲನೆಯ ಸಂದರ್ಭದಲ್ಲಿ ಸಚಿವರು ಹಾಗೂ ಇತರ ಗಣ್ಯರು ಜಯದೇವ ಆಸ್ಪತ್ರೆಯಿಂದ ಕಾಳೇನ ಅಗ್ರಹಾರವರೆಗೆ ಸಂಚರಿಸಿ, ಕಾಳೇನ ಅಗ್ರಹಾರ ಮೆಟ್ರೋ ನಿಲ್ದಾಣದಲ್ಲಿನ ಪ್ರಯಾಣಿಕರ ಸೌಲಭ್ಯಗಳು ಹಾಗೂ ನಿಲ್ದಾಣದ ಸಿದ್ಧತೆಯನ್ನು ಪರಿಶೀಲಿಸಿದರು.
ಬಿ.ಎಂ.ಆರ್.ಸಿ.ಎಲ್ ಅಧಿಕಾರಿಗಳು ಬಿಇಎಂಎಲ್ ಸಂಸ್ಥೆ ತಯಾರಿಸಿರುವ ಅತ್ಯಾಧುನಿಕ ಮೆಟ್ರೋ ರೈಲುಗಳ ಕುರಿತು ಮಾಹಿತಿ ನೀಡಿದರು. ಈ ರೈಲುಗಳಲ್ಲಿ ಸುಮಾರು ಶೇ 70% ಸ್ವದೇಶೀಯವಾಗಿದ್ದು, ಸ್ವಯಂಚಾಲಿತ ರೈಲು ಕಾರ್ಯಾಚರಣೆ (ATO) ಹಾಗೂ ಅತ್ಯಾಧುನಿಕ ಚಾಲಕರಹಿತ ರೈಲು ಕಾರ್ಯಾಚರಣೆ (UTO) ವ್ಯವಸ್ಥೆಗಳನ್ನು ಬೆಂಬಲಿಸುವ ಸಾಮರ್ಥ್ಯ ಹೊಂದಿವೆ.
ಈ ಮಾರ್ಗವನ್ನು ಸಾರ್ವಜನಿಕ ಸೇವೆಗೆ ತರಲು ಅಗತ್ಯವಿರುವ ಸಾಕಷ್ಟು ಸಂಖ್ಯೆಯ ರೈಲುಗಳು ಪ್ರಸ್ತುತ ಲಭ್ಯವಿವೆ. ರೈಲುಗಳು ನಿಗದಿತ ಪರೀಕ್ಷೆ ಮತ್ತು ಪ್ರಯೋಗಗಳ ಹಂತದಲ್ಲಿದ್ದು, ಪ್ರಯಾಣಿಕರ ಸೇವೆಗೆ ನಿಯೋಜಿಸುವ ಮೊದಲು ಕಡ್ಡಾಯವಾಗಿ 750 ಕಿ.ಮೀ. ಸಂಚರಿಸುವ ಪರೀಕ್ಷೆಯನ್ನು ಪೂರ್ಣಗೊಳಿಸಬೇಕಾಗಿದೆ. ರೈಲು ಚಾಲಕರನ್ನು ಗುರುತಿಸಲಾಗಿದ್ದು, ಅವರಿಗೆ ಅಗತ್ಯವಿರುವ ಕಡ್ಡಾಯ ತರಬೇತಿಯನ್ನು ಈ ವಾರದೊಳಗೆ ಪೂರ್ಣಗೊಳಿಸುವ ನಿರೀಕ್ಷೆಯಿದೆ.
ಕಾಳೇನ ಅಗ್ರಹಾರ ಮೆಟ್ರೋ ನಿಲ್ದಾಣದಲ್ಲಿ ಅತ್ಯಾಧುನಿಕ ಕಮ್ಯುನಿಕೇಷನ್ ಬೇಸ್ಡ್ ಟ್ರೈನ್ ಕಂಟ್ರೋಲ್ (CBTC) ಸಿಗ್ನಲಿಂಗ್ ವ್ಯವಸ್ಥೆ, ಸ್ಟೇಷನ್ ಕಂಟ್ರೋಲ್ ರೂಮ್ ಹಾಗೂ ನ್ಯಾಷನಲ್ ಕಾಮನ್ ಮೊಬಿಲಿಟಿ ಕಾರ್ಡ್ (NCMC) ಜೊತೆಗೆ ಸಂಯೋಜಿತವಾಗಿರುವ ಆಟೋಮ್ಯಾಟಿಕ್ ಫೇರ್ ಕಲೆಕ್ಷನ್ (AFC) ವ್ಯವಸ್ಥೆಯ ಸಿದ್ಧತೆ ಕುರಿತು ಅಧಿಕಾರಿಗಳು ಮಾಹಿತಿ ನೀಡಿದರು.
ಹೊಸ ರೋಲಿಂಗ್ ಸ್ಟಾಕ್‌ಗೆ ರೈಲ್ವೆ ಮಂಡಳಿಯ ಅನುಮೋದನೆ ಶೀಘ್ರದಲ್ಲೇ ದೊರೆಯುವ ನಿರೀಕ್ಷೆಯಿದೆ. ಮೆಟ್ರೋ ರೈಲ್ವೆ ಸುರಕ್ಷತಾ ಆಯುಕ್ತರು (CMRS) ಸುರಕ್ಷತಾ ಪರಿಶೀಲನೆ ನಡೆಸಿ, ಅನುಮೋದನೆಯ ಮೇರೆಗೆ ಸಾರ್ವಜನಿಕ ಪ್ರಯಾಣಿಕರ ಸಂಚಾರಕ್ಕೆ ತೆರೆಯಲಾಗುವುದು.
ಬಿ.ಎಂ.ಆರ್.ಸಿ.ಎಲ್ ಅಗತ್ಯವಿರುವ ಎಲ್ಲಾ ಕಾಮಗಾರಿಗಳು ಪೂರ್ಣಗೊಳಿಸಿದೆ. ಕಡ್ಡಾಯ ಪರಿಶೀಲನೆಗಳು ಹಾಗೂ ಅಗತ್ಯ ಅನುಮತಿಗಳು/ಅನುಮೋದನೆಗಳಿಗೆ ಒಳಪಟ್ಟು ಈ ಮಾರ್ಗವನ್ನು ಸಾರ್ವಜನಿಕ ಸೇವೆಗೆ ತೆರೆಯಲು ನಿಗಮವು ಸಂಪೂರ್ಣ ಸಿದ್ಧವಾಗಿದೆ.
ಈ ಸಂದರ್ಭದಲ್ಲಿ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಮಾನ್ಯ ಸಂಸದ ತೇಜಸ್ವಿ ಸೂರ್ಯ, ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ಎ. ಕೃಷ್ಣಪ್ಪ, ಬೆಮೆರೈನಿನಿಯ ವ್ಯವಸ್ಥಾಪಕ ನಿರ್ದೇಶಕ ಡಾ. ಪಿ.ಸಿ. ಜಾಫರ್, ಭಾ.ಆ.ಸೇ, ನಿರ್ದೇಶಕರು ಹಾಗೂ ಹಿರಿಯ ಅಧಿಕಾರಿಗಳು ಹಾಜರಿದ್ದರು.




