ಗಾಂಧೀಜಿಯವರ ಅಸ್ಪೃಶ್ಯತೆಯ ಹೋರಾಟಕ್ಕೆ ನಾರಾಯಣಗುರುಗಳೇ  ಪ್ರೇರಣೆ: ಬಿ ಕೆ ಹರಿಪ್ರಸಾದ್

2 months ago

ಬೆಂಗಳೂರು: ಭಾರತದ ಸಾಮಾಜಿಕ ಇತಿಹಾಸದಲ್ಲಿ ಜಾತಿ, ಅಸ್ಪೃಶ್ಯತೆ ಮತ್ತು ಸಾಮಾಜಿಕ ಅಸಮಾನತೆಯ ವಿರುದ್ಧ ಧ್ವನಿ ಎತ್ತಿದ ಮಹಾನ್ ಸಮಾಜ ಸುಧಾರಕರಲ್ಲಿ ಶ್ರೀ ನಾರಾಯಣ ಗುರುಗಳು ಪ್ರಮುಖರು ಎಂದು ಕೆಪಿಸಿಸಿ ಅಧ್ಯಕ್ಷ ಬಿ ಕೆ ಹರಿಪ್ರಸಾದ್ ಹೇಳಿದರು.

ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆದ ಬ್ರಹ್ಮಶ್ರೀ ನಾರಾಯಣಗುರು ಜನ್ಮಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಒಂದೆಡೆ ಭಾರತ ದೇಶ ಬ್ರಿಟೀಷರ ದಬ್ಬಾಳಿಕೆಯಿಂದ ಒಳಗಾಗಿದ್ದ ಕಾಲ, ಇನ್ನೊಂದೆಡೆ ಶತ ಶತಮಾನಗಳ ಕಾಲ ಜಾತಿ, ಅಸ್ಪೃಶ್ಯತೆಯ ದಾಸ್ಯದಲ್ಲಿದ್ದ ಕಾಲದಲ್ಲಿ ಸಮಾಜವನ್ನು ಸುಧಾರಣೆಯ ಹಾದಿಗೆ ತಂದ ಮಹಾನ್ ಸಂತ ನಾರಾಯಣಗುರುಗಳು ಎಂದರು.

ಸಾಮಾಜಿಕ ಶೋಷಣಾ ವ್ಯವಸ್ಥೆಯನ್ನು ಬದಲಾಯಿಸಲು ತಮ್ಮ ಇಡೀ ಜೀವನವನ್ನೇ ಗುರುಗಳು ಮುಡಿಪಾಗಿಟ್ಟರು. ನಾರಾಯಣ ಗುರುಗಳು ಪೆರಿಯಾರ್​ರಂತೆ ಧರ್ಮವನ್ನು ತಿರಸ್ಕರಿಸಲಿಲ್ಲ. ಬಸವಣ್ಣರಂತೆ ಬಂಡಾಯವೆದ್ದು ಹೊಸ  ಧರ್ಮ ಸೃಷ್ಟಿಸಲಿಲ್ಲ.  ಬದಲಾಗಿ ಹಿಂದೂ  ಧರ್ಮದ ಹೆಸರಿನಲ್ಲಿ ನಡೆಯುತ್ತಿದ್ದ ಅಸಮಾನತೆಯನ್ನು ಪ್ರಶ್ನಿಸಿ, ಧರ್ಮವನ್ನು ಮಾನವೀಯತೆ, ನೈತಿಕತೆ ಮತ್ತು ಸಮಾನತೆಯೊಂದಿಗೆ ಜೋಡಿಸಲು ಪ್ರಯತ್ನಿಸಿದರು ಎಂದರು.

ಮಹಾತ್ಮಾ ಗಾಂಧೀಜಿಯವರ ಅಸ್ಪೃಶ್ಯತೆಯ ಹೋರಾಟಕ್ಕೆ ನಾರಾಯಣಗುರುಗಳೇ  ಪ್ರೇರಣೆ. ಗುರು-ಗಾಂಧಿ ಸಂವಾದದ ನಂತರ ಗಾಂಧೀಜಿಯವರ ಅಸ್ಪೃಶ್ಯತೆಯ ಹೋರಾಟಕ್ಕೆ ಹೊಸ ಶಕ್ತಿ ನೀಡಿದೆ ಎಂದರೆ ತಪ್ಪಾಗಲಾರದು. ನಾರಾಯಣ ಗುರುಗಳ ಚಿಂತನೆಯ ಪ್ರಭಾವ ಕೇವಲ ಬಿಲ್ಲವ ಸಮುದಾಯಕ್ಕೆ ಸೀಮಿತವಾಗಲಿಲ್ಲ ಎಂದರು.

ಶಿಕ್ಷಣ, ಸಂಘಟನೆ, ಸ್ವಾಭಿಮಾನ ಮತ್ತು ಸಮಾನತೆಯ ವಿಚಾರಗಳು ಕರಾವಳಿಯ ವಿವಿಧ ಹಿಂದುಳಿದ ಮತ್ತು ಶೋಷಿತ ಸಮುದಾಯಗಳ ನಡುವೆ ಹೊಸ ಜಾಗೃತಿಗೆ ಕಾರಣವಾದವು. ಶಿಕ್ಷಣದಿಂದ ಸಮಾಜದ ಸುಧಾರಣೆ ಸಾಧ್ಯ ಎಂದು ಗುರುಗಳು ಸಂದೇಶ ನೀಡಿದ್ದಾರೆ ಎಂದರು.

ಕೇರಳದ ವರ್ಕಳದಲ್ಲಿ ಮಠಕ್ಕೆ ಭೇಟಿ ಕೊಟ್ಟರೆ ಇಲ್ಲಿ ಲೇಖನಿಯನ್ನು ನೀಡುತ್ತಾರೆ. ಲೇಖನಿಯಿಂದ ಸಮಾಜದ ಬದಲಾವಣೆಗೆ ನಾಂಧಿ ಹಾಡಬಹುದು ಎಂಬುದು ಗುರುಗಳ ಕಲ್ಪನೆಯಾಗಿತ್ತು. ಗುರುಗಳು ಸ್ಥಾಪಿಸಿದ ಎಸ್.ಎನ್.ಡಿಪಿ ಇಂದು ಶಿಕ್ಷಣ ಕ್ಷೇತ್ರದಲ್ಲಿ ಮಹತ್ತರ ಸಾಧನೆ ಮಾಡಿದೆ. ಆದರೆ ಕರ್ನಾಟಕದಲ್ಲಿ ಅಂತಹ ಶಿಕ್ಷಣಕ್ಕೆ ಮಹತ್ವ ಸಿಗಲಿಲ್ಲ. ಮಾಜಿ ಸಚಿವರಾದ ಜಾಲಪ್ಪನವರ ಪ್ರಯತ್ನದಿಂದಾಗಿ ಶಿಕ್ಷಣ ಸಂಸ್ಥೆಗಳನ್ನು ಕಟ್ಟಿ ಇಪ್ಪತ್ತಕ್ಕೂ ಹೆಚ್ಚು ಕೋಟಿ ಹಣ ಮೀಸಲಿಟ್ಟು ಬಡ ಜನರಿಗೆ ಶಿಕ್ಷಣ ನೀಡುತ್ತಿದ್ದಾರೆ. ಅಂತಹ ಪ್ರಯತ್ನಗಳು ಹೆಚ್ಚಾಗಬೇಕು ಎಂದರು.

ಗುರುಗಳು ಶಿಕ್ಷಣಕ್ಕೆ ಮಹತ್ವ ನೀಡಿ ಜನಜಾಗೃತಿ ನಡೆಸಿದ ಕಾರಣಕ್ಕಾಗಿ ಕೇರಳ ರಾಜ್ಯ ಇಂದು ದೇಶದಲ್ಲೇ ಸಾಕ್ಷರತೆಯಲ್ಲಿ ಮೊದಲ ಸ್ಥಾನದಲ್ಲಿದೆ. ಆದರೆ ನಮ್ಮ ರಾಜ್ಯದ ಕರಾವಳಿ ಜಿಲ್ಲೆಗಳಲ್ಲಿ ಹಿಂದುಳಿದ ಸಮುದಾಯದ ಮಕ್ಕಳು ಕೋಮುವಾದ, ಧರ್ಮದ ಹೆಸರಿನಲ್ಲಿ ಜೈಲು ಸೇರುತ್ತಿದ್ದಾರೆ. ಇದನ್ನು ನಾರಾಯಣಗುರು ಅವರ ಚಿಂತನೆಯ ಮೂಲಕ ಹೋಗಲಾಡಿಸಬೇಕಿದೆ ಎಂದರು.

ರಾಜ್ಯ ಸರ್ಕಾರ ನಾರಾಯಣಗುರುಗಳ ಮಠ ಸ್ಥಾಪನೆಗೆ ಬಂಟ್ವಾಳದಲ್ಲಿ ಭೂಮಿಯನ್ನು ನೀಡಿದೆ. ಅದರ ಅಭಿವೃದ್ದಿ ಎಲ್ಲಾ ರೀತಿಯ ಸಹಕಾರ ನೀಡಬೇಕೆಂದು ಎಲ್ಲಾ ಸಹೋದರ ಸಮುದಾಯದ ಪಂಗಡಗಳ ಪರವಾಗಿ ಮುಖ್ಯಮಂತ್ರಿಗಳಿಗೆ ಮನವಿ ಮಾಡುತ್ತೇನೆ ಎಂದರು.

ಸಮುದಾಯಗಳು ಜಾಗೃತಿಯಾಗಬೇಕು. ಯಾವುದೇ ಪಕ್ಷ ಇರಲಿ, ಯಾವುದೇ ಸರ್ಕಾರ ಬರಲಿ, ನಮ್ಮ ಸಮುದಾಯಗಳಿಗೆ ಒತ್ತು ನೀಡಿ ಶಿಕ್ಷಣಕ್ಕೆ, ಉದ್ಯೋಗಕ್ಕೆ, ಆರ್ಥಿಕ ಶಕ್ತಿಯನ್ನು ತುಂಬಲು ಸಹಕಾರ ನೀಡುವವರಿಗೆ ಶಕ್ತಿ ತುಂಬಿ ಎಂದು ಕರೆ ನೀಡಿದರು.

ಬಾಬಾ ಸಾಹೇಬರ ಮಾತಿನಂತೆ ನಮ್ಮ ಜೀವನ ಬದಲಾಯಿಸಿಕೊಳ್ಳಲು ರಾಜಕೀಯಕ್ಕೆ ಬರುವುದು ಬೇಡ, ಜನರ ಜೀವನ ಬದಲಾಯಿಸಲು ರಾಜಕೀಯಕ್ಕೆ ಬರಬೇಕಿದೆ. ಗಾಂಧೀಜಿಯವರ ಸಂದೇಶವೂ ಕೂಡ ಕಟ್ಟ ಕಡೆಯ ವ್ಯಕ್ತಿಯ ಬದುಕನ್ನು ಬದಲಾಯಿಸಬೇಕಿದೆ. ಇಂತಹ ನಿಟ್ಟಿನಲ್ಲಿ ನಮ್ಮ ಕೆಲಸಗಳು ನಡೆಯಲಿ, ನಮಗೆ ನಾರಾಯಣಗುರುಗಳ ಜೀವನದ ಸಂದೇಶ, ಬದುಕು ಸ್ಪೂರ್ತಿಯಾಗಲಿ ಎಂದರು.

ಕಾರ್ಯಕ್ರಮದಲ್ಲಿ ಸಿಎಂ ಡಿ ಕೆ ಶಿವಕುಮಾರ್, ಸಮುದಾಯದ ಸ್ವಾಮೀಜಿಗಳು, ಸಚಿವರಾದ ಮಧು ಬಂಗಾರಪ್ಪ, ಶಿವರಾಜ್ ತಂಗಡಗಿ ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು.

Leave a Reply