ಗ್ಯಾಸ್ ಗೀಸರ್ ಬಳಕೆಯನ್ನು ನಿಷೇಧಿಸಿ

9 hours ago

ಇತ್ತೀಚಿನ ದಿನಗಳಲ್ಲಿ ಹಲವಾರು ಮನೆಗಳಲ್ಲಿ ಪುಟ್ಟಪುಟ್ಟ ಮಕ್ಕಳು, ಹಿರಿಯ ನಾಗರಿಕರು ಮತ್ತು ಯುವಕರು ಸ್ನಾನದ ಮನೆಗಳಲ್ಲಿ ಉಸಿರಾಟದ ತೊಂದರೆಯಿಂದ ತಮ್ಮ ಪ್ರಾಣಗಳನ್ನು ಕಳೆದುಕೊಳ್ಳುತ್ತಿದ್ದಾರೆ. ಇದಕ್ಕೆಲ್ಲ ಕಾರಣ ಅವರು ಸ್ನಾನದ ಮನೆಯಲ್ಲಿ ಬಳಸುತ್ತಿರುವ ಗ್ಯಾಸ್ ಗೀಸರ್ ಎಂಬುದು ಪ್ರಮುಖವಾದಂತಹ ಕಾರಣವಾಗುತ್ತಿದೆ ಎನ್ನುವುದು ತನಿಖೆಗಳಿಂದ ತಿಳಿಯುತ್ತಿದೆ.

ನಮ್ಮಲ್ಲಿ ಸ್ನಾನದ ಕೊಠಡಿಗಳಿಗೆ ಬಹಳಷ್ಟು ಮನೆಗಳಲ್ಲಿ ಸೂಕ್ತವಾದ ವೆಂಟಿಲೇಶನ್ ವ್ಯವಸ್ಥೆ ಇರುವುದಿಲ್ಲ, ಇದರ ನಡುವೆ ಇವರು ಪುಟ್ಟಪುಟ್ಟ ಸ್ನಾನದ ಕೊಠಡಿಗಳಲ್ಲಿ ಇಂತಹ ಅಪಾಯಕಾರಿ ಯಂತ್ರಗಳನ್ನು ಬಳಸುವುದು ಸರಿಯಲ್ಲ. ದೇಶದಲ್ಲಿ ಎಷ್ಟು ಗ್ಯಾಸ್ ಗೀಸರ್ ತಯಾರಿಕೆ ಕಂಪನಿಗಳಿಗೆ ಮಾನ್ಯತೆ ನೀಡಿದೆ, ಅವುಗಳ ಸುರಕ್ಷತೆಯ ಬಗ್ಗೆ ದೃಢೀಕರಣ ಪತ್ರ ನೀಡಿದ್ದಾರೆಯೇ ಇವುಗಳನ್ನು ಯಾರು ಗಮನಿಸುತ್ತಿಲ್ಲ.

ಪದೇಪದೇ ಮನೆಗಳಲ್ಲಿ ಅಪಾಯಗಳಾಗಿ ಜೀವಗಳನ್ನು ಕಳೆದುಕೊಳ್ಳುತ್ತಿರುವ ಹಿನ್ನೆಲೆಯಲ್ಲಿ, ಸರ್ಕಾರಗಳು ಈ ನಿಟ್ಟಿನಲ್ಲಿ ಗಮನವನ್ನು ಹರಿಸಿ ಕಂಪನಿಗಳು ಮಾರಾಟ ಮಾಡುತ್ತಿರುವ ಗ್ಯಾಸ್ ಗೀಸರ್  ಗುಣಮಟ್ಟ ಮತ್ತು ಸುರಕ್ಷತೆಯ ಬಗ್ಗೆ ಗಮನವನ್ನು ಹರಿಸಬೇಕು, ಸಾಧ್ಯವಾಗುವುದಾದರೆ ಇವುಗಳನ್ನು ನಿಷೇಧಿಸುವುದೇ ಒಳ್ಳೆಯದು.

ಸರಿಯಾದಂತಹ ವೆಂಟಿಲೇಶನ್ ಇರದೇ ಇರುವ ಸ್ನಾನದ ಕೊಠಡಿಗಳಲ್ಲಿ ಇವು ಕಾರ್ಬನ್ ಮೋನಾಕ್ಸೈಡ್ ಹೊರ ಚೆಲ್ಲುವುದರಿಂದ ಕೆಲವೇ ಕ್ಷಣಗಳಲ್ಲಿ ಉಸಿರಾಟಕ್ಕೆ ತೊಂದರೆಯಾಗಿ ಜ್ಞಾನ ಕಳೆದುಕೊಳ್ಳುತ್ತಾರೆ, ಮತ್ತೆ ಕೆಲವೇ ನಿಮಿಷಗಳಲ್ಲಿ ಪ್ರಾಣವನ್ನು ಕಳೆದುಕೊಳ್ಳುತ್ತಾರೆ.

ಸಂಬಂಧಪಟ್ಟ ಅಧಿಕಾರಿಗಳು ಮತ್ತು ಇಲಾಖೆಯವರು ಈ ಬಗ್ಗೆ ಕೂಡಲೇ ಗಮನವನ್ನು ಹರಿಸಿ ಕ್ರಮ ಕೈಗೊಳ್ಳಬೇಕು. ಈಗಾಗಲೇ ಪ್ರತಿದಿನ ಗ್ಯಾಸ್ ಗೀಸರ್ ಬಳಕೆಯಿಂದ ಜೀವಗಳು ಹೋಗುತ್ತಿರುವುದು ಹೆಚ್ಚಾಗುತ್ತದೆ. ಸಾರ್ವಜನಿಕರು ಸಹ ಗ್ಯಾಸ್ ಗೀಸರ್ ಬಳಸುವುದರಿಂದ ವಿದ್ಯುತ್ ಬಿಲ್ ನಲ್ಲಿ ಸ್ವಲ್ಪ ಪ್ರಮಾಣದಲ್ಲಿ ಹಣವನ್ನು ಉಳಿಸಲು ಹೋಗಿ ತೊಂದರೆಗಳನ್ನು ಅನುಭವಿಸಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ಸಾರ್ವಜನಿಕರು ಸಹ ಇವುಗಳ ಬಳಕೆಯ ನಿಟ್ಟಿನಲ್ಲಿ ಹಲವಾರು ಬಾರಿ ಯೋಚಿಸುವುದು ಒಳ್ಳೆಯದು.

– ಕೆ ಎಸ್ ನಾಗರಾಜ್, ಬೆಂಗಳುರು

Leave a Reply