ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಶಾಂತವೇರಿ ಗೋಪಾಲಗೌಡ ಹೆಸರಿಡಿ: ರಮೇಶ್ ಬಾಬು

3 years ago

ಬೆಂಗಳೂರು: ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಸಮಾಜವಾದಿ ನಾಯಕ ಶಾಂತವೇರಿ ಗೋಪಾಲಗೌಡ ಅವರ ಹೆಸರನ್ನು ಇಡುವಂತೆ ಕಾಂಗ್ರೆಸ್ ವಕ್ತಾರ ರಮೇಶ್ ಬಾಬು ಸಿಎಂ ಬಸವರಾಜ ಬೊಮ್ಮಾಯಿ ಮತ್ತು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರಿಗೆ ಪತ್ರ ಬರೆಯುವ ಮೂಲಕೊ ಒತ್ತಾಯಿಸಿದ್ದಾರೆ. ಅವರ ಪತ್ರದ ಪೂರ್ಣ ಪಾಠ ಹೀಗಿದೆ:

ಶ್ರೀ ಬಸವರಾಜ್ ಬೊಮ್ಮಾಯಿ,
ಮಾನ್ಯ ಮುಖ್ಯಮಂತ್ರಿಗಳು,
ಕರ್ನಾಟಕ ಸರ್ಕಾರ, ಬೆಂಗಳೂರು

ಶ್ರೀ ಬಿ.ಎಸ್.ಯಡಿಯೂರಪ್ಪ,
ಮಾನ್ಯ ಮಾಜಿ ಮುಖ್ಯಮಂತ್ರಿಗಳು,
ಕರ್ನಾಟಕ ಸರ್ಕಾರ, ಬೆಂಗಳೂರು

ಕರ್ನಾಟಕದ ಶಿವಮೊಗ್ಗದಲ್ಲಿ ಬಹುದಿನಗಳ ಬೇಡಿಕೆಯಾದ ವಿಮಾನ ನಿಲ್ದಾಣ ನಿರ್ಮಾಣಗೊಂಡಿರುವುದು ಸಂತಸದ ಸಂಗತಿ. ಇದಕ್ಕೆ ಕಾರಣರಾದ ಎಲ್ಲರಿಗೂ ಮತ್ತು ರಾಜ್ಯ ಸರ್ಕಾರಕ್ಕೂ ಅಭಿನಂದನೆಗಳು.

ಕರ್ನಾಟಕದ ಶಿವಮೊಗ್ಗ ಜಿಲ್ಲೆ ಸಾಮಾಜಿಕವಾಗಿ, ಸಾಂಸ್ಕೃತಿಕವಾಗಿ ಮತ್ತು ರಾಜಕೀಯವಾಗಿ ತನ್ನದೇ ಆದ ಹೆಸರನ್ನು ಗಳಿಸಿರುತ್ತದೆ. ಭಾರತದ ಸಮಾಜವಾದಿ ನಾಯಕರಲ್ಲಿ ಪ್ರಮುಖ ಸಮಾಜವಾದಿ ನಾಯಕರಲ್ಲಿ ಒಬ್ಬರಾದ ಶ್ರೀ ಶಾಂತವೇರಿ ಗೋಪಾಲಗೌಡರು ಈ ನೆಲದವರು ಎನ್ನುವುದು ನಮ್ಮ ಹೆಮ್ಮೆ.

ಕಾಗೋಡು ಸತ್ಯಾಗ್ರಹದ ಮೂಲಕ ರಾಷ್ಟ್ರದ ಗಮನಸೆಳೆದು, ರಾಜ್ಯದಲ್ಲಿ ಭೂ ಚಳುವಳಿಗೆ ಕಾರಣರಾದ ಮತ್ತು ಈ ರಾಜ್ಯಕ್ಕೆ ಶ್ರೀ ಎಸ್.ಬಂಗಾರಪ್ಪ, ಶ್ರೀ ಜೆ.ಹೆಚ್.ಪಟೇಲ್, ಶ್ರೀ ಎಸ್.ಎಂ.ಕೃಷ್ಣ ಮುಂತಾದ ನಾಯಕರನ್ನು ನೀಡಿದ ಕೀರ್ತಿ ಅವರಿಗೆ ಸಲ್ಲುತ್ತದೆ. ಅಲ್ಲದೇ ಕರ್ನಾಟಕ ಇವರ ಜನುಮದಿನದ ಶತಮಾನೋತ್ಸವವನ್ನು ಆಚರಿಸುತ್ತಿದೆ.

ಕರ್ನಾಟಕದಲ್ಲಿ ಭೂಸುಧಾರಣೆ ಕಾಯಿದೆ ಜಾರಿಗೊಳ್ಳಲು ಮತ್ತು ಮೈಸೂರು ರಾಜ್ಯ ಕರ್ನಾಟಕ ರಾಜ್ಯವಾಗಿ ಮರುನಾಮಕರಣವಾಗಲು, ರಾಜ್ಯದ ಬಡವರು ಮತ್ತು ಕಾರ್ಮಿಕರಿಗೆ ಹಲವಾರು ಜನಪರ ಯೋಜನೆಗಳು ಜಾರಿಯಾಗಲು ಕರ್ನಾಟಕದ ರಾಜಕಾರಣದಲ್ಲಿ ಶೋಷಿತ ವರ್ಗದವರ ಧ್ವನಿ ಗಟ್ಟಿಯಾಗಲು ಶ್ರೀ ಶಾಂತವೇರಿ ಗೋಪಾಲಗೌಡರು ಅತ್ಯಂತ ದೊಡ್ಡ ಕಾಣಿಕೆಯನ್ನು ನೀಡಿರುತ್ತಾರೆ.

ಕರ್ನಾಟಕದ ಶಾಸಕಾಂಗದ ಇತಿಹಾಸದಲ್ಲಿ ಮತ್ತು ಭೂಸುಧಾರಣೆಯ ಕಾಯಕಲ್ಪದಲ್ಲಿ ಅಚ್ಚಳಿಯದ ನಾಯಕರಾಗಿ ಇಂದಿಗೂ ಜನಮನದಲ್ಲಿ ಉಳಿದುಕೊಂಡಿದ್ದಾರೆ. ಇಂತಹ ನಾಯಕನ ಹೆಸರನ್ನು ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಇಡುವುದು ಸಮಂಜಸ ಮತ್ತು ಸೂಕ್ತವಾಗಿರುತ್ತದೆ.

ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ತಮ್ಮ ಹೆಸರನ್ನು ಇಡುವ ಪ್ರಸ್ತಾಪವನ್ನು ತಿರಸ್ಕರಿಸಿ ಮಾಜಿ ಮುಖ್ಯಮಂತ್ರಿ ಶ್ರೀ ಬಿ.ಎಸ್.ಯಡಿಯೂರಪ್ಪನವರು ಒಬ್ಬ ಮಾದರಿ ನಾಯಕರಾಗಿ ಹೊರಹೊಮ್ಮಿದ್ದಾರೆ. ಶ್ರೀ ಯಡಿಯೂರಪ್ಪನವರೇ ಈ ವಿಮಾನ ನಿಲ್ದಾಣಕ್ಕೆ ರಾಜ್ಯದ ಭೂಸುಧಾರಣಾ ನಾಯಕ ಸಮಾಜವಾದಿ ಮುಖಂಡ ಶ್ರೀ ಶಾಂತವೇರಿ ಗೋಪಾಲಗೌಡರ ಹೆಸರನ್ನು ಸೂಚಿಸುವುದರ ಮೂಲಕ ಶಿವಮೊಗ್ಗದ ಹಿರಿಮೆಯನ್ನು ಎತ್ತಿ ಹಿಡಿಯಲು ಕೋರುತ್ತೇನೆ.

ಅವರ ಜನ್ಮ ಶತಮಾನೋತ್ಸವದ ಸಂದರ್ಭದಲ್ಲಿ ಶಿವಮೊಗ್ಗ ವಿಮಾನ ನಿಲ್ದಾಣವನ್ನು ಶ್ರೀ ಶಾಂತವೇರಿ ಗೋಪಾಲಗೌಡ ವಿಮಾನ ನಿಲ್ದಾಣವೆಂದು ನಾಮಕರಣ ಮಾಡುವುದರ ಮೂಲಕ ಗೌರವ ಸಲ್ಲಿಸಲು ಕೋರುತ್ತೇನೆ. ಕರ್ನಾಟಕ ರಾಜ್ಯ ಸರ್ಕಾರವು ನಮ್ಮ ರಾಜ್ಯದ ಸಂಸ್ಕೃತಿ, ಮೌಲ್ಯ ಮತ್ತು ರಾಷ್ಟ್ರಕವಿ ಕುವೆಂಪುರವರ ಆಶಯಗಳಿಗೆ ಅನುಗುಣವಾಗಿ ಶ್ರೀ ಶಾಂತವೇರಿ ಗೋಪಾಲಗೌಡರ ಹೆಸರನ್ನು ಪರಿಗಣಿಸಲು ಕೋರುತ್ತೇನೆ.

ವಂದನಗೆಳೊಂದಿಗೆ, ಗೌರವಪೂರ್ವಕವಾಗಿ,

  • ರಮೆಶ್ ಬಾಬು, ಕೆಪಿಸಿಸಿ ವಕ್ತಾರ

Leave a Reply