ಶಿವಮೊಗ್ಗ: ಫೆ. 27ರಂದು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಲಿರುವ ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ರಾಷ್ಟ್ರಕವಿ ಕುವೆಂಪು ಮತ್ತು ಸಮಾಜವಾದಿ ನಾಯಕ ಶಾಂತವೇರಿ ಗೋಪಾಲಗೌಡರ ಹೆಸರಿಡುವಂತೆ ಒತ್ತಡಗಳು ಕೇಳಿಬಂದಿವೆ. ನಿರಂತರ ಜನ ಜಾಗೃತಿ ವೇದಿಕೆ ಕಾರ್ಯದರ್ಶಿ ಕುವೆಂಪು ಅವರ ಹೆಸರಿಡುವಂತೆ ಒತ್ತಾಯಿಸಿದ್ದಾರೆ. ಇನ್ನು ರಾಜ್ಯ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಎನ್.ಶಿವಾನಂದ ಕುಗ್ವೆ ಸಾಗರ ಒತ್ತಾಯಿಸಿದ್ದಾರೆ. ಅವರು ಮನವಿ ಮಾಡಿರುವ ಪೂರ್ಣಪಾಠ ಹೀಗಿದೆ:
ಗೆಳೆಯರೆ, ಶಿವಮೊಗ್ಗದ ವಿಮಾನ ನಿಲ್ದಾಣಕ್ಕೆ ಯಾರ ಹೆಸರಿಡಬೇಕೆಂಬ ಜಿಜ್ಞಾಸೆ ಎದ್ದಿದೆ. ಶಿವಮೊಗ್ಗ ಜಿಲ್ಲೆಗೆ ಅನೇಕ ರಾಜಕಾರಣಿಗಳು, ಸಾಹಿತಿಗಳು, ಹೋರಾಟಗಾರರು, ರಾಜ್ಯದಲ್ಲಿ ಒಂದು ಘನತೆ ಯನ್ನು ತಂದುಕೊಟ್ಟವರು ಅನೇಕರು ಇದ್ದಾರೆ. ಅವರು ಕೆಲವರು ಜೀವಂತವಾಗಿದ್ದಾರೆ, ಕೆಲವರು ಈಗ ಇಲ್ಲ.
ಶಿವಮೊಗ್ಗ ಜಿಲ್ಲೆಗೆ ದೇಶದ ರೈತ ಹೋರಾಟದ ಚರಿತ್ರೆಯಲ್ಲಿ ಒಂದು ಶಾಶ್ವತ ಸ್ಥಾನ ಕೊಟ್ಟಿರುವುದು ಕಾಗೋಡು ಚಳುವಳಿ. ಅಂತಹದೊಂದು ಚಳುವಳಿ ನಾಡಿನ ಅನೇಕ ಜನ ಹೋರಾಟಗಳಿಗೆ ಸ್ಫೂರ್ತಿಯಾಗಿದ್ದು, ಹಲವಾರು ಜನ ರಾಜಕೀಯ ನಾಯಕರ ಬೆಳವಣಿಗೆಗೆ ಭೂಮಿಕೆ ಯಾಗಿದ್ದು ಈಗ ಇತಿಹಾಸ.
ಅಂತಹದೊಂದು ಹೋರಾಟವನ್ನು ಮುನ್ನಡೆಸಿದ ಧೀಮಂತ ನಾಯಕ ಅಂದು ಶಾಂತವೇರಿ ಗೋಪಾಲ ಗೌಡರು. ರಾಜ್ಯದ ಲಕ್ಷಾಂತರ ಗೇಣಿ ರೈತ ಕುಟುಂಬಗಳ ಉಳುವವರನ್ನು ಹೊಲದೊಡೆಯರನ್ನಾಗಿಸಿದ ಕ್ರಾಂತಿಕಾರಿಯಾದ ಕರ್ನಾಟಕ ಭೂಸುಧಾರಣ ಕಾಯ್ದೆ ಜಾರಿಯಾಗಲು ಪ್ರೇರಣೆಯಾದವರು ಶಾಂತವೇರಿ ಗೋಪಾಲಗೌಡರು.
ಅವರು ನಾಡಿನ ಅನೇಕ ಸಾಹಿತಿ ಲೇಖಕರುಗಳನ್ನು, ಜನಹೋರಾಟಗಾರರನ್ನು, ಚಿಂತಕರನ್ನು ಪ್ರಭಾವಿಸಿದ್ದರು, ನಿಜವಾದ ಪ್ರಜಾಪ್ರಭುತ್ವವನ್ನು ಜನಮಾನಸಕ್ಕೆ ನಾಟುವಂತೆ ಅವರ ಭಾಷಣಗಳಿಂದ, ಮನದಟ್ಟು ಮಾಡುತ್ತಿದ್ದ, ದೊಡ್ಡ ಸಮಾಜವಾದಿ ನಾಯಕರಾಗಿದ್ದವರು. ಅಂತಹ ಪ್ರಾಮಾಣಿಕ ರಾಜಕಾರಣಕ್ಕೆ ಮಾದರಿಯಾಗಿದ್ದವರ ಜನ್ಮಶತಾಬ್ದಿ ವರ್ಷದ ಆಚರಣೆಯನ್ನು ಮಾಡುತ್ತಿರುವ ಸರ್ಕಾರ ಅವರ ಹೆಸರನ್ನು ಶಿವಮೊಗ್ಗದ ವಿಮಾನ ನಿಲ್ದಾಣಕ್ಕೆ ಇಡಬೇಕಾದ್ದು ಅರ್ಥಪೂರ್ಣ ಹಾಗೂ ಅವರ ಹೋರಾಟದ ಚರಿತ್ರೆಗೆ ನ್ಯಾಯ ಒದಗಿಸಿದಂತೆ ಆಗುತ್ತದೆ.
- ಎನ್.ಶಿವಾನಂದ ಕುಗ್ವೆ ಸಾಗರ, ರಾಜ್ಯ ಉಪಾಧ್ಯಕ್ಷ , ರಾಜ್ಯ ರೈತ ಸಂಘ



