ಧರ್ಮ ಧರ್ಮಗಳ ನಡುವೆ ಬೆಂಕಿ ಹಚ್ಚಿ ಬೇಳೆ ಬೇಯಿಸಿಕೊಳ್ಳಲು ಹೊರಟ ಮೂರ್ಖರಿಗೆ ಭಾರತದ ಇತಿಹಾಸದಲ್ಲಿ ವಿಶೇಷವಾಗಿ ಬ್ರಿಟೀಷ್ ಸಾಮ್ರಾಜ್ಯದ ವಿರುದ್ಧ ಹೋರಾಡಿದ ಮಹಾನುಭವರಲ್ಲಿ ಎಂತಹ ಜೀವಗಳು ತಮ್ಮ ಪ್ರಾಣವನ್ನು ಬಲಿ ತೆತ್ತವು ಎಂಬುದರ ಬಗ್ಗೆ ಕಿಂಚಿತ್ತೂ ಅರಿವಿಲ್ಲ.
ಪ್ರಥಮ ಸ್ವಾತಂತ್ರ್ಯ ಹೋರಾಟ ಎಂದು ಪರಿಗಣಿಸಿರುವ 1857 ರ ಸಿಪಾಯಿ ದಂಗೆಯ ಹೋರಾಟದಲ್ಲಿ ವೃತ್ತಿಯಲ್ಲಿ ದಳದ ಆಸ್ಥಾನಗಳಲ್ಲಿ ನೃತ್ಯಗಾತಿಯರಾಗಿ, ಗಾಯಕಿಯರಾಗಿ ನಮ್ಮ ದಕ್ಷಿಣ ಭಾರತದ ದೇವದಾಸಿಯರ ರೀತಿಯಲ್ಲಿ ತವೈಫ್ ಸಮುದಾಯ ಎಂದು ಗುರುತಿಸಿಕೊಂಡಿದ್ದ ಮುಸ್ಲಿಂ ಹೆಣ್ಣುಮಕ್ಕಳು ರಾಣಿಯರಾಗಿ, ಸ್ವಾತಂತ್ರ್ಯ ಹೋರಾಟಗಾರರಾಗಿ ಗುರುತಿಸಿಕೊಂಡು ಕೆಲವರು ನೇಣುಗಂಬವನ್ನು ಏರಿದರೆ, ಮತ್ತೇ ಹಲವರು ಬ್ರಿಟೀಷರಿಂದ ಜೀವಂತ ದಹನಕ್ಕೆ ತುತ್ತಾಗಿದ್ದಾರೆ.
ಮೂರು ವರ್ಷದ ಹಿಂದೆ ಲಕ್ನೋ ನಗರದಲ್ಲಿ ತವೈಫ್ ಸಮುದಾಯದ ಮಾಹಿತಿ ಸಂಗ್ರಹಿಸುತ್ತಿದ್ದಾಗ ಅಲ್ಲಿ ದೊರೆತ ಐತಿಹಾಸಿಕ ಮಾಹಿತಿಗಳಿವು. ಇಂತಹವರಲ್ಲಿ ಮೊದಲ ಕಂತಿನಲ್ಲಿ ಬೇಗಂ ಹಜರತ್ ಮಹಲ್ ಎಂಬ ಸಾಧಕಿಯ ಬಗ್ಗೆ ಇಲ್ಲಿ ದಾಖಲಿಸಿದ್ದೀನಿ. ಇಡೀ ತವೈಫ್ ಸಾಧಕಿಯರ ಕುರಿತಂತೆ ನನ್ನ ದೇವದಾಸಿಯರ ಕಥನ ‘ ಪದಗಳಿವೆ ಎದೆಯೊಳಗೆ’ ಎಂಬ ಅಧ್ಯಯನ ಕೃತಿ ಸಧ್ಯದಲ್ಲಿ ಪ್ರಕಟವಾಗಲಿದ್ದು ಅವರಲ್ಲಿ ಅಡಕಗೊಳಿಸಿದ್ದೀನಿ.
ಈಕೆಯು ಅವಧ್ ಸಂಸ್ಥಾನದ ಕೊನೆಯ ದೊರೆ ವಾಜಿದ್ ಆಲಿ ಷಾ ಎರಡನೆಯ ಪತ್ನಿಯಾಗಿದ್ದುಕೊಂಡು ರಾಣಿಯಂತೆ ಜೀವಿಸಿ ಬೇಗಂ ಎಂದು ಗುರುತಿಸಿಕೊಂಡವಳು. ಮೂಲತಃ ತವೈಫ್ ಸಮುದಾಯದ ಕುಟುಂಬದಲ್ಲಿ ಅವಧ್ ನ ಹಳೆಯ ರಾಜಧಾನಿ ಪೈಜಾಬಾದ್ ನಲ್ಲಿ 1820 ರಲ್ಲಿ ಜನಿಸಿದ ಈಕೆಯು ಮಹಮ್ಮದಿ ಖಾನುಮ್ ಹೆಸರಿನಲ್ಲಿ ಒಳ್ಳೆಯ ನೃತ್ಯ ಕಲಾವಿದೆಯಾಗಿದ್ದಳು. ವಾಜಿದ್ ಆಲಿ ಷಾನನ್ನು ವಿವಾಹದ ನಂತರ ಬೇಗಂ ಹಜರತ್ ಮಹಲ್ ಗೆ 1856 ರ ವೇಳೆಗೆ ಓರ್ವ ಅಪ್ರಾಪ್ತ ವಯಸ್ಸಿನ ಪುತ್ರನಿದ್ದ. ಬ್ರಿಟೀಷ್ ಈಸ್ಟ್ ಇಂಡಿಯಾ ಕಂಪನಿಯು 18567ರಲ್ಲಿ ದೊರೆ ವಾಜಿದ್ ಆಲಿ ಷಾ ನಿಗೆ ವಾರ್ಷಿಕ ಹನ್ನೆರೆಡು ಲಕ್ಷ ವರಮಾನ ನೀಡುವ ಭರವಸೆ ನೀಡಿ ಆತನನ್ನು ಅಧಿಕಾರದ ಗದ್ದುಗೆಯಿಂದ ಇಳಿಸುವುದರ ಮೂಲಕ ಅವನ ಸಮಗ್ರ ಕುಟುಂಬ ಪರಿವಾರವನ್ನು ಕೊಲ್ಕತ್ತ ನಗರಕ್ಕೆ ವರ್ಗಾಯಿಸಿತು. ಇಷ್ಟು ಮಾತ್ರವಲ್ಲದೆ ಲಕ್ನೋ ಹೃದಯ ಭಾಗದಲ್ಲಿ ಬ್ರಿಟೀಷ್ ರೆಸಿಡೆನ್ಸಿ ಎಂಬ ಹೆಸರಿನಲ್ಲಿ ಕಚೇರಿ ಹಾಗೂ ಅಧಿಕಾರಿಗಳ ವಸತಿ ಗೃಹವನ್ನು ಸ್ಥಾಪಿಸಿ ಲಕ್ನೋ ಸಂಸ್ಥಾನದ ಮೇಲೆ ತನ್ನ ಅಧಿಕಾರವನ್ನು ಚಲಾಯಿಸತೊಡಗಿತು. ಲಕ್ನೋ ಸಂಸ್ಥಾನದ ದೊರೆಯಾಗಿದ್ದುಕೊಂಡು ಒಳ್ಳೆಯ ಕಥಕ್ ನೃತ್ಯ ಕಲಾವಿದನಾಗಿದ್ದ ವಾಜಿದ್ ಆಲಿ ಷಾ ತನ್ನ ಆಸ್ಥಾನದ ಐವತ್ತಕ್ಕೂ ಹೆಚ್ಚು ಕಲಾವಿದೆಯರನ್ನು ಜೊತೆಯಲ್ಲಿ ಕರೆದುಕೊಂಡು ಹೋಗಿ ಕೊಲ್ಕತ್ತ ನಗರದ ಹೊರವಲಯದ ಹೂಗ್ಲಿ ನದಿಯ ದಂಡೆಯಲ್ಲಿ ಬ್ರಿಟೀಷರು ನೀಡಿದ ಬಂಗಲೆಯಲ್ಲಿ ಅವರು ನೀಡುತ್ತಿದ್ದ ಹಣದಲ್ಲಿ ಅಧಿಕಾರವಿಲ್ಲದಿದ್ದರೂ ಸಹ ದೊರೆಯಂತೆ ಬದುಕುತ್ತಾ ಸದಾ ಸಂಗೀತ ಮತ್ತು ನೃತ್ಯದಲ್ಲಿ ಮುಳುಗಿ ಹೋಗಿದ್ದನು.
ಬ್ರಿಟೀಷರ ಈ ನಿರ್ಧಾರವನ್ನು ಪ್ರತಿಭಟಿಸಿದ ಬೇಗಂ ಅಕ್ತರ್ ತನ್ನ ಪುತ್ರ ಬಿರ್ಜಿಸ್ ಖಾದರ್ ಗೆ ಪಟ್ಟವನ್ನು ಕಟ್ಟಿ, ತಾನು ಅವಧ್ ಸಂಸ್ಥಾನದ ರಾಣಿ ಎಂದು ಘೋಷಿಸಿಕೊಂಡು ಉಸ್ತುವಾರಿ ವಹಿಸಿಕೊಂಡಳು. ಲಕ್ನೋ ನಗರದಲ್ಲಿ ವಾಜಿದ್ ಆಲಿ ಷಾ ತೊರೆದು ಹೋಗಿದ್ದ ಸೇನೆಯನ್ನು ಪುನರ್ ಸಂಘಟಿಸುವುದರ ಮೂಲಕ ಹಾಗೂ ಸಣ್ಣ ಸಂಸ್ಥಾನಗಳ ಹಿಂದೂ ದೊರೆಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಬ್ರಿಟೀಷರ ವಿರುದ್ಧ ದಂಗೆಯೆದ್ದಳು. ಈಕೆಗೆ ಕಾನ್ಪುರ ಸಂಸ್ಥಾನದ ನಾನಾಸಾಹೇಬ್ ಮತ್ತು ತಾತ್ಯಾಟೋಪಿ, ಮೌಲ್ವಿ ಮಹಮ್ಮದ್ ಉಲ್ಲಾ ಷಾ ಮುಂತಾದವರು ಬೆಂಬಲವಾಗಿ ನಿಂತರು.
ಮೂವರು ಬ್ರಿಟೀಷ್ ಅಧಿಕಾರಿಗಳ ಮೇಲೆ ದಾಳಿ ಮಾಡುವುದರ ಮೂಲಕ ಮಾಡುವುದರ ಮೂಲಕ ಲಕ್ನೋ ನಗರದಿಂದ ಬ್ರಿಟೀಷ್ ಸೇನೆಯನ್ನು ಹೊರದೂಡಿ ಲಕ್ನೋ ನಗರದ ಹೊರಭಾಗವಾಗಿದ್ದ ಆಲುಬಾಗ್ ಪ್ರದೇಶವನ್ನು ಅನ್ನು ವಶಪಡಿಸಿಕೊಂಡು ಸ್ವಲ್ಪ ದಿನಗಳ ಕಾಲ ಅವಧ್ ಸಂಸ್ಥಾನದ ರಾಣಿಯಂತೆ ಬದುಕಿದಳು. ೧೮೫೭ ರ ವೇಳೆಗೆ ಈಸ್ಟ್ ಇಂಡಿಯಾ ಕಂಪನಿಯು ಕೊಲ್ಕತ್ತಾ ನಗರದಿಂದ ಹೆಚ್ಚಿನ ಸೇನೆಯನ್ನು ಕರೆಸಿಕೊಂಡು ಸರ್ ಕಾಲಿನ್ ಕ್ಯಾಂಪ್ ಬೆಲ್ ನೇತೃತ್ವದಲ್ಲಿ ದಾಳಿ ಮಾಡಿದಾಗ ಸ್ವತಃ ಆನೆಯ ಮೇಲೆ ಕುಳಿತು ಸೈನಿಕರನ್ನು ಹುರಿದುಂಬಿಸುತ್ತಾ ಯುದ್ಧರಂಗದಲ್ಲಿ ಹೋರಾಡಿದಳು.
ಬ್ರಿಟೀಷರ ಅತ್ಯಾಧುನಿಕ ಯುದ್ಧ ಶಸ್ತಾçಸ್ತ್ರಗಳ ಎದುರು ಹೋರಾಟ ವಿಫಲವಾದಾಗ ತಲೆ ಮರೆಸಿಕೊಂಡು ನೇಪಾಳಕ್ಕೆ ಓಡಿ ಹೋದ ಬೇಗಂ ಹಜರತ್ ಮಹಲ್ ಅಲ್ಲಿನ ಹಿಂದೂ ದೊರೆ ಜಂಗ್ ಬಹದ್ದೂರ್ ಆಶ್ರಯದಲ್ಲಿ ಬದುಕಿ 1879 ರ ಏಪ್ರಿಲ್ ತಿಂಗಳಿನಲ್ಲಿ ನಿಧನಳಾದಳು. ಈಕೆಯನ್ನು ಕಠ್ಮಂಡು ನಗರದ ಹೃದಯ ಭಗದಲ್ಲಿರುವ ಜಮ್ಮಾ ಮಸೀದಿಯ ಬಳಿ ಸಮಾಧಿ ಮಾಡುವುದರ ಮೂಲಕ ಸ್ಮಾರಕವನ್ನು ನಿರ್ಮಿಸಲಾಗಿದೆ.
1962 ರಲ್ಲಿ ಭಾರತ ಸರ್ಕಾರವು ಲಕ್ನೋ ನಗರದ ಆಲುಬಾಗ್ ನ ಉದ್ಯಾನವನವನ್ನು ಬೇಗಂ ಹಜರತ್ ಮಹಲ್ ಎಂದು ಮರುನಾಮಕರಣ ಮಾಡುವುದರ ಜೊತೆಗೆ ಈಕೆಯ ಹೆಸರಿನಲ್ಲಿ ಅಂಚೆ ಚೀಟಿಯನ್ನು ಹೊರತರುವುದರ ಮೂಲಕ ಗೌರವ ಸಲ್ಲಿಸಿತು. ಅಷ್ಟೇ ಅಲ್ಲದೆ ಅಲ್ಪ ಸಂಖ್ಯಾತ ವರ್ಗದ ವಿದ್ಯಾರ್ಥಿಗಳಿಗೆ ನೀಡುವ ಸ್ಕಾಲರ್ ಶಿಪ್ ಯೋಜನೆಯನ್ನು 2003 ರಲ್ಲಿ ಸ್ಥಾಪಿಸಿದ ಕೇಂದ್ರಸರ್ಕಾರವು ಮೌಲನಾ ಅಜಾದ್ ಪೌಂಡೇಶನ್ ಅಡಿಯಲ್ಲಿ ಬಡ ಮುಸ್ಲಿಂ ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರಿಗೆ ಧನ ಸಹಾಯ ಮಾಡುತ್ತಿದೆ. 1857 ರ ಸಮಯದಲ್ಲಿ ಝಾನ್ಸಿಯ ಲಕ್ಷಿಬಾಯಿ ಸೇರಿದಂತೆ ಹನ್ನೆರಡಕ್ಕೂ ಹೆಚ್ಚು ಮಹಿಳೆಯರು ಸಿಪಾಯಿ ದಂಗೆ ಯುದ್ಧದಲ್ಲಿ ಬ್ರಿಟೀಷರ ವಿರುದ್ಧ ಹೋರಾಟ ಮಾಡಿದರು. ಇವರಲ್ಲಿ ಮೂವರು ಮುಸ್ಲಿಂ ಸಮುದಾಯದ ಮಹಿಳೆಯರು ಮುಖ್ಯರಾಗಿದ್ದಾರೆ. ೧೮೦೫ ರ ಜುಲೈ ತಿಂಗಳಿನಲ್ಲಿ ತಮಿಳುನಾಡಿನ ವೆಲ್ಲೂರು ಕೋಟೆಯಲ್ಲಿ ಟಿಪ್ಪು ಸುಲ್ತಾನನ ಪತ್ನಿ ಹಾಗೂ ಆಸ್ಥಾನ ನರ್ತಕಿ ರೋಷನಿ ಬೇಗಂ ಪ್ರಥಮ ಬಾರಿಗೆ ದಂಗೆ ಎದ್ದ ಮುಸ್ಲಿಂ ಮಹಿಳೆಯಾದರೆ, ಬೇಗಂ ಹಜರತ್ ಮಹಲ್ ಯುದ್ಧವನ್ನೇ ಸಾರಿದ ಪ್ರಥಮ ಮುಸ್ಲಿಂ ಮಹಿಳೆ ಎಂಬ ಕೀರ್ತಿಗೆ ಪಾತ್ರಳಾಗಿದ್ದಾಳೆ.
ಭಾರತದಲ್ಲಿ ಬ್ರಿಟೀಷರ ವಿರುದ್ಧ ಹೋರಾಟ ಮಾಡುತ್ತಿದ್ದ ಸಂಧರ್ಭದಲ್ಲಿ ಬ್ರಿಟೀಷರ ಪರವಾಗಿದ್ದುಕೊಂಡು ಮೌನವ್ರುತ ಆಚರಿಸಿದ ಹಿಂದೂ ಮಹಾ ಸಭಾ ದಂತಹ ಹಿಂದೂ ಸಂಘಟನೆಯ ಕುಲ ತ್ರರು ಭಾರತ ಸ್ವಾತಂತ್ರ್ಯ ಹೋರಾಟದಲ್ಲಿ ಮುಸ್ಲಿಂ ಮರು ಹೇಗೆ ಭಾಗವಹಿಸಿದ್ದರು ಮತ್ತು ಎಂತಹ ಹೋರಾಟ ನಡೆಸಿದರು ಎಂಬುದನ್ನು ಅರಿಯಬೇಕಾಗಿದೆ.
– ಜಗದೀಶ್ ಕೊಪ್ಪ, ಹಿರಿಯ ಪತ್ರಕರ್ತರು




