ಬೆಂಗಳೂರು: 2018ರಲ್ಲಿ ಪೂರ್ಣಪ್ರಮಾಣದಲ್ಲಿ ಸ್ವಂತ ಬಲದ ಮೇಲೆ ಅಧಿಕಾರ ಹಿಡಿಯಲು ವಿಫಲವಾಗಿದ್ದ ಬಿಜೆಪಿ ಇದೀಗ ಆಪರೇಷನ್ ಕಮಲ ನಡೆಸಿ ರಾಜ್ಯದಲ್ಲಿ ಅಧಿಕಾರದಲ್ಲಿದೆ. 2023ರ ಏಪ್ರಿಲ್ ಅಥವಾ ಮೇ ತಿಂಗಳಲ್ಲಿ ನಡೆಯಲಿರುವ ಚುನಾವಣೆಗೆ ಈಗಿನಿಂದಲೆ ಪಕ್ಷ ಸಜ್ಜಾಗುತ್ತಿದೆ.
ತಳಮಟ್ಟದಲ್ಲಿ ಪಕ್ಷದ ಸ್ಥಿತಿಗತಿಗಳನ್ನು ಅರಿಯುವುದು, ಸ್ಥಳೀಯ ಸಮಸ್ಯೆಗಳನ್ನು ಕುರಿತು ತಿಳಿಯುವುದು, ಸರ್ಕಾರದಿಂದ ಜನರ ನಿರೀಕ್ಷೆಗಳ ಮಾಹಿತಿ ಮತ್ತು ಅಭಿವೃದ್ಧಿ ವಿಷಯಗಳಿಗೆ ಸಂಬಂಧಿಸಿದಂತೆ ಅಧ್ಯಯನ ನಡೆಸಲು ಮೂರು ವಿಶೇಷ ತಂಡಗಳನ್ನು ಬಿಜೆಪಿ ಹೈಕಮಾಂಡ್ ರಚಿಸಿದೆ.
ಕೇಂದ್ರ ಮತ್ತು ರಾಜ್ಯ ಸರ್ಕಾರದ ಯೋಜನೆಗಳನ್ನು ಕುರಿತು ಜನರಿಗೆ ಎಷ್ಟು ಮಾಹಿತಿಯಿದೆ, ಅವುಗಳು ತಲುಪಿರುವ ಪ್ರಮಾಣವೆಷ್ಟು, ಪಕ್ಷದ ಸಂಘಟನೆಯ ಶಕ್ತಿಯ ಇತಿಮಿತಿಗಳೇನು ಇತ್ಯಾದಿ ಮಾಹಿತಿ ಆಧರಿಸಿದ ವರದಿಗಳನ್ನು ಈ ಮೂರು ಸಮಿತಿಗಳು ಹೈಕಮಾಂಡ್ ನೀಡಲಿವೆ.
ಮೊದಲ ತಂಡವನ್ನು ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ, ಕರ್ನಾಟಕ ಉಸ್ತುವಾರಿ ಅರುಣ್ ಸಿಂಗ್ ಮುನ್ನಡೆಸಲಿದ್ದಾರೆ. ಇವರ ತಂಡದಲ್ಲಿ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ, ಕಂದಾಯ ಸಚಿವ ಆರ್.ಅಶೋಕ್ ಅವರನ್ನು ಸೇರಿಸಲಾಗಿದೆ. ಏಪ್ರಿಲ್ 12ರಂದು ಈ ತಂಡ ಬೆಳಗಾವಿ ಭೇಟಿ ನೀಡಲು ಈಗಾಗಲೇ ಸಿದ್ಧತೆ ಪೂರ್ಣಗೊಳಿಸಿದೆ.
ಎರಡನೇ ತಂಡವನ್ನು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಮುನ್ನಡೆಸಲಿದ್ದು, ಮೂರನೇ ತಂಡದ ನೇತೃತ್ವವನ್ನು ಸಿಎಂ ಬಸವರಾಜ ಬೊಮ್ಮಾಯಿ ವಹಿಸಿಕೊಳ್ಳಲಿದ್ದಾರೆ. ಬೊಮ್ಮಾಯಿಯವರ ತಂಡದಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ, ಮಾಜಿ ಸಿಎಂ ಸದಾನಂದ ಗೌಡ ಅವರಿದ್ದಾರೆ. ಈ ತಂಡ ಮಂಗಳೂರು (ಕರಾವಳಿ) ಮತ್ತು ಶಿವಮೊಗ್ಗ ವಿಭಾಗದ ಜವಾಬ್ದಾರಿ ಹೊರಲಿದೆ.
ಪ್ರತಿತಂಡದಲ್ಲಿ ಸಂಸದರು, ಶಾಸಕರು, ಪಕ್ಷದ ನಾಯಕರು, ಮುಂಛೂಣಿ ನಾಯಕರನ್ನು ಒಳಗೊಂಡ 7-8 ಸದಸ್ಯರು ಇರಲಿದ್ದಾರೆ. ಮೂರು ತಂಡಗಳು ಇದೇ ಮಂಗಳವಾರ ಪ್ರವಾಸ ಕಾರ್ಯ ಆರಂಭಿಸಿ, ರಾಜ್ಯದ ವಿಧಾನಸಭೆ ವ್ಯಾಪ್ತಿಯ 10 ವಿಭಾಗಗಳಲ್ಲಿ ಅಧ್ಯಯನ ನಡೆಸಿ, ಏಪ್ರಿಲ್ 22ರಂದು ಪ್ರವಾಸವನ್ನು ಪೂರ್ಣಗೊಳಿಸಲಿವೆ.
ಪ್ರತಿ ತಂಡ ಒಂದು ವಿಭಾಗದಲ್ಲಿ 2 ದಿನಗಳ ಕಾಲ ಉಳಿಯಲಿದ್ದು, ಒಂದು ರಾತ್ರಿ ಸಂವಾದ ಕಾರ್ಯಕ್ರಮದಲ್ಲಿ ಭಾಗಿಯಾಗಲಿದೆ. 5000 – 10000 ಕಾರ್ಯಕರ್ತರೊಂದಿಗೆ ಸಭೆಗಳನ್ನು ನಡೆಸಲು ಯೋಜನೆ ರೂಪಿಸಲಾಗಿದೆ.
ಈಗಾಗಲೇ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ಕೂಡ ಅನೇಕ ಕಾರ್ಯತಂತ್ರಗಳನ್ನು ರೂಪಿಸಿವೆ. ಕಾಂಗ್ರೆಸ್ ಮೇಕೆದಾಟು ಪಾದಯಾತ್ರೆ ನಡೆಸಿದರೆ, ಜೆಡಿಎಸ್ ನಾಯಕ ಎಚ್.ಡಿ.ಕುಮಾರಸ್ವಾಮಿ ಕನಿಷ್ಠ 2 ದಿನಗಳಿಗೊಮ್ಮೆ ಸಭೆ, ಸುದ್ದಿಗೋಷ್ಠಿಗಳನ್ನು ನಡೆಸುತ್ತಿದ್ದಾರೆ. ಇದೀಗ ಬಿಜೆಪಿ ಕೂಡ ಅಖಾಡಕ್ಕೆ ಇಳಿದಂತಾಗಿದೆ.



