ಖೆಡ್ಡಾಕ್ಕೆ ಬಿದ್ದು ಸ್ಥಳೀಯರ ನಿದ್ದೆಗೆಡಿಸಿದ್ದ ಮೂಡಿಗೆರೆ ಭೈರ

3 years ago

ಚಿಕ್ಕಮಗಳೂರು: ಕಳೆದ ನಾಲ್ಕೈದು ವಾರಗಳಿಂದ ಮೂಡಿಗೆರೆ ತಾಲೂಕಿನ ಹಲವೆಡೆ ದಾಂಧಲೆ ನಡೆಸಿ ಇಬ್ಬರ ಜೀವ ತೆಗೆದು‌ ಸ್ಥಳೀಯರ ನಿದ್ದೆಗೆಡಿಸಿದ್ದ ಒಂಟಿಸಲಗ ಮೂಡಿಗೆರೆ ಭೈರ ಕೊನೆಗೂ ಖೆಡ್ಡಾಕ್ಕೆ ಬಿದ್ದಿದ್ದಾನೆ.

ರಾಜಕೀಯವಾಗಿಯೂ ಕೋಲಾಹಲ ಸೃಷ್ಟಿಸಿದ್ದ ಈ ಪುಂಡಾನೆಯನ್ನು ಸೆರೆ ಹಿಡಿಯುವಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ. ಕಾಡಂಚಿನ ಗ್ರಾಮಗಳಲ್ಲಿ ದಾಂಧಲೆ ಮಾಡುತ್ತಾ ಇಬ್ಬರ ಜೀವ ತೆಗೆದಿದ್ದ ಈ ಭೈರನಿಂದ ಜನ ರೋಸಿ ಹೋಗಿದ್ದರು. ಇವನನ್ನು ಸೆರೆ ಹಿಡಿಯುವುದು ಅರಣ್ಯ ಇಲಾಖೆ ಅಧಿಕಾರಿಗಳಿಗೆ  ಸವಾಲಾಗಿತ್ತು.

ಭೈರನ ಜೊತೆಗೆ ಇನ್ನೇರಡು ಕಾಡಾನೆಗಳು ಸೇರಿಕೊಂಡು ಹಾವಳಿ ನಡೆಸತೊಡಗಿದ್ದರಿಂದ ಸ್ಥಳೀಯರು ಕಂಗೆಟ್ಟು ಸರ್ಕಾರ ಅರಣ್ಯ ಇಲಾಖೆಯ ಅಧಿಕಾರಿಗಳ ವಿರುದ್ಧ ತಿರುಗಿ ಬಿದ್ದಿದ್ದರು. ಭೈರನ  ಹಾವಳಿಯಿಂದ ತಿಂಗಳಿಗೊಂದು ಹೆಣ ಬಿದ್ದ ಪರಿಣಾಮ ತಾಳ್ಮೆಗೆಟ್ಟು ಕಂಗೆಟ್ಟಿದ್ದ ಜನ ಆನೆ ದಾಳಿಯಿಂದ ಮೃತಪಟ್ಟ ವ್ಯಕ್ತಿಯ ಅಂತಿಮ ದರ್ಶನಕ್ಕೆ ಬಂದಿದ್ದ ಶಾಸಕ ಎಂ. ಪಿ ಕುಮಾರಸ್ವಾಮಿ ಮೇಲೂ ಹಲ್ಲೆಗೆ ಮುಂದಾಗಿದ್ದರು.ತಾವು ದಲಿತ ಎಂಬ ಕಾರಣಕ್ಕೆ ತಮ್ಮ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ಶಾಸಕರು ಆರೋಪಿಸುವ ಮೂಲಕ ಇದು ರಾಜಕೀಯ ಬಣ್ಣ ಪಡೆದುಕೊಂಡಿತ್ತು.

ಜನ ಯಾವಾಗ ಶಾಸಕರ ಮೇಲೆ ಹಲ್ಲೆಗೆ ಮುಂದಾಗಿ ವಿವಾದದ ಸ್ವರೂಪ ಪಡೆಯಿತೋ ಆಗ ಎಚ್ಚೆತ್ತ ಸರ್ಕಾರ ಮೂರು ಕಾಡಾನೆಗಳನ್ನು ಹಿಡಿಯಲು ಹಸಿರು ನಿಶಾನೆ ತೋರಿತ್ತು.ಮುಖ್ಯಮಂತ್ರಿಗಳು ಕೂಡ ಆನೆ ಹಿಡಿಯಲು ಸೂಚನೆ ನೀಡಿದ್ದರು.

ಸರ್ಕಾರ ಗ್ರೀನ್ ಸಿಗ್ನಲ್ ನೀಡುತ್ತಿದ್ದಂತೆ ಕಳೆದ ಎಂಟತ್ತು ದಿನಗಳಿಂದ ಆರು ಸಾಕಾನೆಗಳ ಜೊತೆಗೆ ಮೂರು ಕಾಡಾನೆಗಳನ್ನು ಹಿಡಿಯಲು ಅಧಿಕಾರಿಗಳು, ಸ್ಥಳೀಯರು ಹಗಲಿರುಳು ಕಷ್ಟ ಪಟ್ಟಿದ್ದರು. ಎರಡು ಕಾಡಾನೆಗಳನ್ನು ಸೆರೆ ಹಿಡಿದು ಮಡಿಕೇರಿಯ ಆನೆ ದುಬಾರೆ ಹಾಗೂ ಶಿವಮೊಗ್ಗ ಜಿಲ್ಲೆಯ ಸಕ್ರೆಬೈಲು ಆನೆ ಬಿಡಾರಕ್ಕೆ ಬಿಟ್ಟಿದ್ದರು.

ಆದರೆ ಪುಂಡ ಒಂಟಿ ಸಲಗ ಮೂಡಿಗೆರೆ ಭೈರ ಮಾತ್ರ ಎಲ್ಲರ ಕಣ್ತಪ್ಪಿಸಿ ನಾಪತ್ತೆಯಾಗುತ್ತಿದ್ದ. ಅರಣ್ಯ ಅಧಿಕಾರಿಗಳ ಡ್ರೋನ್ ಕ್ಯಾಮರ ಕಣ್ತಪ್ಪಿಸಿ ದಟ್ಟ ಕಾನನದಲ್ಲಿ ಪರಾರಿಯಾಗುತ್ತಿದ್ದು ಆತನ ಮೇಲೆ ಎಷ್ಟು ನಿಗಾ ವಹಿಸಿದರೂ ವಿಫಲವಾಗುತ್ತಿತ್ತು. ಆದರೆ ಕೊನೆಗೆ ಮೂಡಿಗೆರೆ ತಾಲೂಕಿನ ಊರಬಗೆ ಗ್ರಾಮದಲ್ಲಿ ಭೈರ ಇರುವ ಖಚಿತ ಮಾಹಿತಿ ಪಡೆದ ಅಧಿಕಾರಿಗಳು ನಿರಂತರ ಕಾರ್ಯಾಚರಣೆ ನಡೆಸಿ ಭೈರನನ್ನು ಖೆಡ್ಡಾಕ್ಕೆ ಬೀಳಿಸಿ ಯಶಸ್ವಿಯಾದರು.

ಸ್ಥಳೀಯರ ನಿದ್ದೆಗೆಡಿಸಿದ್ದ ಮೂಡಿಗೆರೆ ಭೈರ ಸೆರೆಯಾದ ಕಾರಣ ಜನರ ಜೊತೆ ಅರಣ್ಯ ಇಲಾಖೆ ಅಧಿಕಾರಿಗಳು ಕೂಡ ನಿಟ್ಟುಸಿರು ಬಿಟ್ಟಿದ್ದಾರೆ.ಒಂದು ಪುಂಡ ಕಾಡಾನೆ ಮಲೆನಾಡಿಗರಿಗೆ ಈ ಮಟ್ಟಕ್ಕೆ ರೋಧನೆ ಕೊಟ್ಟಿದ್ದು ಇದೇ ಮೊದಲು ಎನ್ನಲಾಗಿದೆ.

 

 

One Response

Leave a Reply