ದೇವಸ್ಥಾನಗಳಲ್ಲಿ ನೃತ್ಯದ ಸೇವೆ ಸಲ್ಲಿಸುತ್ತಿದ್ದ ದೇವದಾಸಿಯರ ಕೊನೆಯ ಕೊಂಡಿ ಇವರು ತಿರುವರೂರು ತಿಲಕಂ.
ಈಗ ಇವರಿಗೆ ತೊಂಬತ್ತಾರು ವರ್ಷ. ತಂಜಾವೂರಿನ ಮೊಮ್ಮಕ್ಕಳ ಮನೆಯಲ್ಲಿ ವಾಸವಾಗಿದ್ದಾರೆ. ಇವರ ಕುರಿತು ನನ್ನ ಇತ್ತೀಚಿನ ಅಧ್ಯಯನ ಕೃತಿ ಪದಗಳಿವೆ ಎದೆಯೊಳಗೆ ಕೃತಿಯಲ್ಲಿ ಸವಿವರವಾಗಿ ದಾಖಲಿಸಿದ್ದೀನಿ.
ಏಳನೆಯ ವಯಸ್ಸಿಗೆ ಕುಟುಂಬದ ಪದ್ಧತಿಯಂತೆ ತಿರುವರೂರಿನ ತ್ಯಾಗೇಶ ದೇವಾಲಯಕ್ಕೆ ದೇವದಾಸಿ ವೃತ್ತಿಗೆ ಬಂದ ಇವರು 1947 ರಲ್ಲಿ ಸರ್ಕಾರದ ಆದೇಶದಂತೆ ವೃತ್ತಿಯಿಂದ ಹೊರಬಂದರು. ನಂತರ ಸ್ಥಳೀಯ ಕಾಲೇಜಿನಲ್ಲಿ ಸಂಗೀತ ಮತ್ತು ನೃತ್ಯದ ಶಿಕ್ಷಕಿಯಾಗಿ ಸೇವೆ ಸಲ್ಲಿಸಿ ನಿವೃತ್ತಿಯಾದರು. ಇವರಿಗೆ ಇತ್ತೀಚಿಗೆ ಕೇಂದ್ರ ಸರ್ಕಾರ ಪದ್ಮಶ್ರೀ ಪಶಸ್ತಿ ನೀಡಿ ಗೌರವಿಸಿತು.
ಪ್ರತಿ ವರ್ಷ ಚೆನ್ನೈ ನಗರದ ಮುತ್ತುಸ್ವಾಮಿ ಅಯ್ಯರ್ ಟ್ರಸ್ಟ್ ( ಅವರು ತಿರುವಾಂಕೂರಿನ ದಿವಾನರಾಗಿದ್ದರು. ಜೊತೆಗೆ ದಲಿತರಿಗೆ ದೇಗುಲದ ಪ್ರವೇಶದ ಹಕ್ಕಿರಬೇಕೆಂದು ಹೋರಾಡಿದರು) ನವರು ತಿರುವರೂರಿನ ತ್ಯಾಗರಾಜ ಅಥವಾ ತ್ಯಾಗೇಶ ದೇವಾಲಯದಲ್ಲಿ ಮೂರು ದಿನಗಳ ಪ್ರಾಚೀನ ನೃತ್ಯ ಕಲೆಗಳ ಶಿಬಿರ ಏರ್ಪಡಿಸುತ್ತಿದ್ದಾಗ ತಿಲಕಂ ಅಮ್ಮನವರು ಬಂದು ಆ ಕಾಲದ ದೇವಸ್ಥಾನ ಮತ್ತು ರಾಜರ ಆಸ್ಥಾನಗಳಲ್ಲಿ ನೃತ್ಯ ಹೇಗಿರುತ್ತಿದ್ದವು ಎಂಬುದನ್ನು ತಮ್ಮ ಇಳಿ ವಯಸ್ಸಿನಲ್ಲಿ ಅಭಿನಯಿಸಿ ತೋರಿಸುತ್ತಿದ್ದರು.
ನಾನು ಅಲ್ಲಿನ ಮಾರ್ಚ್ ತಿಂಗಳ ಬಿಸಿಲಿಗೆ ಬೆವರುತ್ತಾ ಅವರ ನೃತ್ಯವನ್ನು ನೋಡುತ್ತಿದ್ದಾಗ ಹತ್ತಿರ ಬಂದು , ಕೃಷ್ಣಾ ನನ್ನ ನೃತ್ಯ ನೋಡಿ ಭಯವಾಯಿತೆ? ಎಂದು ರೇಗಿಸುತ್ತಿದ್ದರು. ತಮಿಳು ಭಾಷೆಯಲ್ಲಿ ಚಿಕ್ಕವರನ್ನು ನಾವು ಕಂದಾ ಎಂದು ಕರೆಯುವ ಹಾಗೆ ಕಣ್ಣಾ ಅಥವಾ ಕಣ್ಣೇ ಎಂದು ಕರೆಯುತ್ತಾರೆ.
ಜಗದೀಶ್ ಕೊಪ್ಪ- ಹಿರಿಯ ಪತ್ರಕರ್ತರು




