ಮೋದಿ, ಯೂನಸ್, ಇಂದಿರಾ, ಲಿಂಡನ್‌ ಜಾನ್ಸನ್‌ ಮತ್ತು ಅನ್‌ಫಾರ್ಚುನೇಟ್‌ ಮೀಡಿಯಾಗಳು!

1 year ago

ಕ್ರೋನಾಲಜಿ ಪ್ರಕಾರ ಇಂದಿರಾಗಾಂಧಿಯಿಂದಲೇ ಶುರು ಮಾಡಬೇಕಿತ್ತು. ಆದರೆ, ನಮಗೆಲ್ಲ ಮೋದಿಯವರು ಫೇವರಿಟ್‌ ವಿಶ್ವಗುರು ಆಗಿರೋದ್ರಿಂದ ಅವರಿಂದಲೇ ಲೇಖನ ಶುರು ಮಾಡ್ತೀನಿ. ಪ್ಲೀಸ್‌ ಡೋಂಟ್‌ ಮೈಂಡಾ!!!

ಮೊನ್ನೆ ಮೋದಿಯವರು ಬಿಮ್‌ಸ್ಟೆಕ್‌ ಶೃಂಗಸಭೆಯಲ್ಲಿ ಭಾಗವಹಿಸೋದಕ್ಕೆ ಅಂತ ಬ್ಯಾಂಕಾಕ್‌ಗೆ ಹೋಗಿದ್ದ್ರು.  ಈ ಬಿಮ್‌ಸ್ಟೆಕ್‌ ಅನ್ನೋದು ಬಾಂಗ್ಲಾ, ಭೂತಾನ್, ಭಾರತ, ಮ್ಯಾನ್ಮಾರ್, ನೇಪಾಳ, ಶ್ರೀಲಂಕಾ ಮತ್ತು ಥಾಯ್‌ಲ್ಯಾಂಡ್‌ ದೇಶಗಳ ಒಂದು ಒಕ್ಕೂಟ. ಬಂಗಾಳಕೊಲ್ಲಿ ಸಮುದ್ರ ಕಿನಾರೆಯ ಪ್ರಭಾವಕ್ಕೆ ಒಳಗಾದ ದೇಶಗಳ ವ್ಯಾಪಾರ, ಉದ್ದಿಮೆ, ಹೂಡಿಕೆ, ಸಹಕಾರಕ್ಕಾಗಿ 1997ರಲ್ಲಿ ರೂಪುಗೊಂಡ ಈ ಒಕ್ಕೂಟ, ಆಗಾಗ್ಗೆ ಸಭೆ ಸೇರಿ ಚರ್ಚೆ ನಡೆಸೋದು ವಾಡಿಕೆ. ಆದರೆ ಕೊರೊನಾ ಕೃಪೆಯಿಂದಾಗಿ 2018ರ ನಂತರ ಶೃಂಗಸಭೆ ನಡೆದೇ ಇರಲಿಲ್ಲ. 2022ರಲ್ಲಿ ನಡೆದಿತ್ತಾದರೂ ಅದು ಆನ್‌ಲೈನ್‌ ವರ್ಚುಯಲ್‌ ಶೃಂಗಸಭೆ. ಸುಮಾರು ಏಳು ವರ್ಷಗಳ ನಂತರ ನಡೆಯುತ್ತಿರುವ ಈ ನೇರ ಶೃಂಗಸಭೆಯ ಬಗ್ಗೆ ಅಷ್ಟೇನು ಕುತೂಹಲಗಳಿರಲಿಲ್ಲ. ಯಾಕಂದ್ರೆ, ಭಾರತವನ್ನು ಹೊರತುಪಡಿಸಿದಂತೆ ಜಾಗತಿಕ ವೇದಿಕೆಗಳಲ್ಲಿ ಪ್ರಭಾವಿ ಎನಿಸುವಂತಹ ಬೇರಾವ ದೇಶವೂ ಇದರಲ್ಲಿ ಸದಸ್ಯನಿಲ್ಲ. ಆದರೂ ಒಂದು ಕಾರಣಕ್ಕೆ ಈ ಶೃಂಗಸಭೆ ಇಂಟರೆಸ್ಟಿಂಗ್‌ ಅನಿಸಿತ್ತು. ಭಾರತದ ಪ್ರಧಾನಿ ಮೋದಿಯವರು, ಬಾಂಗ್ಲಾ ಮಧ್ಯಂತರ ಸರ್ಕಾರದ ಮುಖ್ಯ ಸಲಹೆಗಾರ ಮೊಹ್ಮದ್ ಯೂನುಸ್ ಅವರನ್ನು ಮುಖಾಮುಖಿಯಾಗಲಿದ್ದರು.

ಅದರಲ್ಲೇನು ವಿಶೇಷ? ಅಂತ ನಿಮಗನ್ನಿಸಬಹುದು. ಈ ಶೃಂಗಸಭೆಗು ಬರುವುದಕ್ಕು ಮುನ್ನ ಚೀನಾಕ್ಕೆ ಭೇಟಿ ನೀಡಿದ್ದ ಮೊಹಮದ್ ಯೂನುಸ್‌, ಭಾರತದ ಬಗ್ಗೆ ಒಂದು ಸಲ್ಲದ ಹೇಳಿಕೆ ನೀಡಿ ಆತಂಕ ಹುಟ್ಟಿಸಿದ್ದರು. ಕಡಲ ಕಿನಾರೆಯ ಸಂಪರ್ಕವೇ ಇಲ್ಲದ ಭಾರತದ ಈಶಾನ್ಯ ರಾಜ್ಯಗಳ ಭೌಗೋಳಿಕ ಅಸಹಾಯಕತೆಯನ್ನು ಉಲ್ಲೇಖಿಸಿ, ಚೀನಾ ದೇಶವು ಬಾಂಗ್ಲಾವನ್ನು ಬಳಸಿಕೊಂಡು ಈ ಪ್ರದೇಶಗಳ ಮೇಲೆ ತನ್ನ ಪ್ರಭಾವ ವಿಸ್ತರಿಸುವಂತೆ ಆಹ್ವಾನ ನೀಡಿದ್ದಾರೆ ಎಂದು ವರದಿಯಾಗಿತ್ತು. ಯೂನುಸ್‌ ಅವರ ಈ ಹೇಳಿಕೆ ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು. ಹಾಗಾಗಿ ಭಾರತದ ಪ್ರಧಾನಿ, ಬಾಂಗ್ಲಾ ಸರ್ಕಾರದ ಈ ಮುಖ್ಯ ಸಲಹೆಗಾರನನ್ನು ಹೇಗೆ ಮುಖಾಮುಖಿಯಾಗಲಿದ್ದಾರೆ? ಏನೆಲ್ಲಾ ಮಾತುಕತೆ ನಡೆಸಲಿದ್ದಾರೆ? ಎಂಬ ಕಾರಣಗಳಿಂದ ಈ ಶೃಂಗಸಭೆ ಮುಖ್ಯವೆನಿಸಿತ್ತು.

ನಿರೀಕ್ಷೆಯಂತೆ ಪ್ರಧಾನಿಯವರು ಯೂನಸ್‌ ಅವರ ಚೀನಾ ಹೇಳಿಕೆಗೆ ತಮ್ಮ ಪರೋಕ್ಷ ಅಸಮಾಧಾನವನ್ನು ದಾಖಲಿಸಿದ್ದಾರೆ. ಕಚೇರಿಯ ಅಧಿಕೃತ ವೆಬ್‌ಸೈಟ್‌ನ ಅಥೆಂಟಿಕೇಟೆಡ್‌ ವಿವರಣೆಯನ್ನೆ ಪರಿಗಣಿಸುವುದಾದರೆ, ಪ್ರಜಾತಾಂತ್ರಿಕ, ಒಳಗೊಳ್ಳುವಿಕೆಯ, ಸ್ಥಿರ ಮತ್ತು ಅಭಿವೃದ್ಧಿಶೀಲ ಬಾಂಗ್ಲಾ ನಿರ್ಮಾಣಕ್ಕೆ ತನ್ನ ಸಹಕಾರ ಇರುವುದಾಗಿ ಮೋದಿಯವರು ಈ ಮಾತುಕತೆಯಲ್ಲಿ ಯೂನಸ್‌ ಅವರಿಗೆ ಹೇಳಿದ್ದಾರೆ. ಆಂತರಿಕ ದಂಗೆಯ ಕಾರಣದಿಂದ ಅಂದಿನ ಪ್ರಧಾನಿ ಶೇಕ್‌ ಹಸೀನಾ ಅವರು ದೇಶಬಿಟ್ಟು ಪಲಾಯನ ಮಾಡಿದ ತರುವಾಯ ಬಾಂಗ್ಲಾದಲ್ಲಿ ಸಾಕಷ್ಟು ಬೆಳವಣಿಗೆಗಳಾಗಿವೆ. ಅದರಲ್ಲೂ ಕೋಮುಗಲಭೆಗಳು ಹೆಚ್ಚಾದ ಬಗ್ಗೆ ವರದಿಯಾಗಿದ್ದವು. ಹಿಂದೂಗಳನ್ನೂ ಒಳಗೊಂಡಂತೆ ಅಲ್ಲಿನ ಅಲ್ಪಸಂಖ್ಯಾತರ ರಕ್ಷಣೆಯ ಬಗ್ಗೆ ಆತಂಕಗಳು ಉಂಟಾಗಿದ್ದವು. ಸಹಜವಾಗಿಯೇ ತಮ್ಮ ಚರ್ಚೆಯಲ್ಲಿ ಅದನ್ನೂ ಪ್ರಸ್ತಾಪಿಸಿದ ಮೋದಿಯವರು ಹಿಂದೂಗಳು ಒಳಗೊಂಡಂತೆ ಎಲ್ಲಾ ಅಲ್ಪಸಂಖ್ಯಾತರ ರಕ್ಷಣೆಗೆ ಸೂಕ್ತ ಕ್ರಮಕೈಗೊಳ್ಳುವಂತೆ ತಿಳಿಸಿದ್ದಾಗಿ ಪ್ರಧಾನಿ ಕಚೇರಿಯ ವೆಬ್‌ಸೈಟ್‌ನಲ್ಲಿ ಉಲ್ಲೇಖಿಸಲಾಗಿದೆ.

ನಮ್ಮ ನೆಲದ ಅಲ್ಪಸಂಖ್ಯಾತರ ಬಗ್ಗೆ ಆತಂಕಕಾರಿಯಾಗಿ ವರ್ತಿಸುತ್ತಾ, ಬೇರೊಂದು ದೇಶದ ಅಲ್ಪಸಂಖ್ಯಾತರ ರಕ್ಷಣೆಗೆ ಮಿಡಿಯುವ ಮೋದಿಯವರ ಹಿಪಾಕ್ರಸಿಯ ಬಗ್ಗೆ ಚರ್ಚಿಸುವುದು ಈ ಬರಹದ ಉದ್ದೇಶವಲ್ಲ; ವಿವರಿಸಬೇಕಾದ ಅಗತ್ಯವೂ ಇಲ್ಲ ಅನ್ನಿಸುತ್ತೆ. ಆದರೆ ಈ ಮಾತುಕತೆಯನ್ನು ನಮ್ಮ ಇಂಡಿಯನ್‌ ಮೀಡಿಯಾಗಳು ಉಪ್ಪು-ಖಾರ-ಒಗ್ಗರಣೆ ಹಾಕಿ ವರದಿ ಮಾಡಿದ ರೀತಿ ಇದೆಯಲ್ಲ, ಅದು ಬಹಳ ಮಜವಾಗಿದೆ. ಕನ್ನಡದ ಪತ್ರಿಕೆಯೊಂದು ಹೀಗೆ ಹೆಡ್‌ಲೈನ್‌ ಕೊಟ್ಟಿತ್ತು, “ಹಿಂದೂಗಳಿಗೆ ಮೊದಲು ರಕ್ಷಣೆ ನೀಡಿ | ಬಾಂಗ್ಲಾಗೆ ಪ್ರಧಾನಿ ಮೋದಿ ನೇರ ಎಚ್ಚರಿಕೆ: ಮಿಸ್ಟರ್, ಯೂನಸ್ ಮನೆಮುರುಕ ಮಾತು ನಿಲ್ಲಿಸಿ”!

ಈ ಹೆಡ್‌ಲೈನ್‌ ಓದಿ, ನೀವೊಂದು ದೃಶ್ಯ ಕಲ್ಪಿಸಿಕೊಳ್ಳಲು ಯತ್ನಿಸಿದರೆ ಅಲ್ಲಿ ಮೋದಿಯವರು ಹೆಡ್‌ಮೇಷ್ಟ್ರು ಚೇರಿನ ಮೇಲೆ ಸಿಟ್ಟಿನಿಂದ ಕೂತಂತೆಯೂ; ಮೊಹಮದ್‌ ಯೂನಸ್‌ ಬೆದರಿದ, ತಪ್ಪಿತಸ್ಥ ವಿದ್ಯಾರ್ಥಿ ಕೈಕಟ್ಟಿ ನಿಂತಂತೆಯೂ; ಮೋದಿಯವರು ಯೂನಸ್‌ರನ್ನು ತಾರಾಮಾರಿ ತರಾಟೆಗೆ ತೆಗೆದುಕೊಂಡಂತೆಯೂ ಭಾಸವಾಗದಿರದು. ಇದನ್ನು ಓದಿದ ನಮ್ಮ ಭಕ್ತಾಗ್ರೇಸರು, “ನೋಡಿದ್ರಾ ನಮ್ಮ ರೋಲ್‌ ನಂಬರ್‍‌ 56 ಮೋದಿಜಿ, ಬಾಂಗ್ಲಾದ ಸಾಬಿಗೆ ಹೆಂಗೆ ಅವಾಜ್‌ ಬಿಟ್ಟು ಗದರಿಸಿದಾರೆ. ಇದು ವಿಶ್ವಗುರುವಿನ ತಾಕತ್ತು. ಅಷ್ಟಿಲ್ಲದೇ ಇಡೀ ಜಗತ್ತು ನಮ್ಮ ಭಾರತದ ಕಡೆ ತಿರುಗಿನೋಡುವಂತೆ ಮಾಡಲು ಸಾಧ್ಯವಾಗ್ತಿತ್ತ ನಮ್ಮ ಮೋದಿಜಿಗೆ. ಅದ್ರಲ್ಲೂ ಹಿಂದೂಗಳ ರಕ್ಷಣೆ ಬಗ್ಗೆ ಎಂಥಾ ಕಾಳಜಿ ನೋಡ್ರಿ ನಮ್ಮ ಮೋದೀಜಿಗೆ” ಅಂತ ತಮ್ಮಷ್ಟಕ್ಕೆ ತಾವೇ ಶಹಬ್ಬಾಶ್‌ಗಿರಿ ಕೊಟ್ಟುಕೊಳ್ಳಬಹುದು; ಕೊಟ್ಟುಕೊಂಡಿರುತ್ತಾರೆ ಕೂಡಾ.

ಆದರೆ ನಮ್ಮ ಮೀಡಿಯಾಗಳು ಹೈಪ್‌ ಕೊಟ್ಟು ವರದಿ ಮಾಡಿದಂತೆ ಅಲ್ಲೇನೂ ನಡೆದಿಲ್ಲ, ನಡೆಯಲು ಸಾಧ್ಯವೂ ಇಲ್ಲ. ಎರಡು ದೇಶಗಳ ಪ್ರತಿನಿಧಿಗಳು, ತಮ್ಮದಲ್ಲದ ಬೇರೊಂದು  ದೇಶದ ನೆಲದಲ್ಲಿ ಮುಖಾಮುಖಿಯಾದಾಗ ಡಿಪ್ಲೊಮೆಸಿಯನ್ನು ಮರೆತು ಯಾರಾದರೂ ಹೀಗೆ ವರ್ತಿಸಲು ಸಾಧ್ಯವೇ? ಟ್ರಂಪ್‌ ಕೂಡಾ ಉಕ್ರೇನಿನ ಝೆಲೆನ್ಸ್ಕಿಯ ಮೇಲೆ ರೇಗಾಡಿದ್ದು ತನ್ನದೇ ವೈಟ್‌ಹೌಸಿನ ಬೆಚ್ಚನೆ ಗೂಡಿನಲ್ಲಿ ಕೂತು! ಬೇರೆ ಯಾರದೋ ಅಂಗಳದಲ್ಲಲ್ಲ!! ಅಂದಹಾಗೆ, ಟ್ರಂಪ್‌ ಹಾಗೆ ಡಿಪ್ಲೊಮೆಸಿ ಮರೆತು ಕೂಗಾಡಿದಾಗ, ಝೆಲೆನ್ಸ್ಕಿ ಕೂಡಾ “ಹೋಗಯ್ಯಾ ಇಲ್ಲಿ ಯಾವಾನಿಗೆ ಗದರಿಸೋದಕ್ಕೆ ಬರ್‍ತೀಯಾ?” ಅನ್ನೋ ರೀತಿಯಲ್ಲಿ, ಟ್ರಂಪಣ್ಣನ ಅರಮನೆಯಲ್ಲೆ ತಿರುಗೇಟು ಕೊಟ್ಟು ಎದ್ದು ಬಂದಿದ್ದ. ಈ ಮುಖಭಂಗಕ್ಕೆ ಮೆತ್ತಗಾದ ಟ್ರಂಪು, ಎರಡೇ ದಿನಕ್ಕೆ ಉಲ್ಟಾ ಹೊಡೆದು ಉಕ್ರೇನಿನ ಪರ ನಿಲ್ಲಬೇಕಾಯ್ತು. ಸನಿಹ ಸದ್ಯದ ಹಿಸ್ಟರಿ ಇಷ್ಟು ಖಾರವಾಗಿ ಕಣ್ಮುಂದೆ ಇರುವಾಗ ನಮ್ಮ ಮೋದಿಯವರು ಯೂನುಸ್‌ ಅವರನ್ನು ಬೇರೊಂದು ದೇಶದ ನೆಲದಲ್ಲಿ ಚಿಕ್ಕ ಮಕ್ಕಳನ್ನು ಗದರಿದಂತೆ ಹೆದರಿಸಲು ಸಾಧ್ಯವೇ?

ಅಸಲಿಗೆ, ಮೋದಿಯವರು ಯೂನಸ್‌ ಅವರ ಚೀನಾ ಹೇಳಿಕೆಗೆ “ಉಭಯ ದೇಶಗಳ ನಡುವಿನ ಸಂಬಂಧಕ್ಕೆ ಧಕ್ಕೆಯಾಗುವಂತಹ ಹೇಳಿಕೆಗಳನ್ನು ತಡೆಯುವುದು ಒಳಿತು” ಎಂದು ಪರೋಕ್ಷವಾಗಿ ಭಾರತದ ಅಸಮಾಧಾನವನ್ನು ದಾಖಲಿಸಿದ್ದಾರೆ. ಯಾವುದೇ ದೇಶವೊಂದರ ಪ್ರತಿನಿಧಿಯ ಅಧಿಕೃತ ಮತ್ತು ದಾಖಲೀಕೃತವಲ್ಲದ ಹೇಳಿಕೆ/ನಡವಳಿಕೆಗಳಿಗೆ ಜವಾಬ್ದಾರಿಯುತ ದೇಶವೊಂದು ಹೀಗೆ ಪರೋಕ್ಷವಾಗಿಯೇ, ಡಿಪ್ಲೊಮ್ಯಾಟಿಕ್‌ ಆಗಿ ಪ್ರತಿಕ್ರಿಯಿಸಬೇಕಾಗುತ್ತದೆ. ಇಂತಹ ವಿಚಾರದಲ್ಲಿ ಜಾಗತಿಕ ತೃತೀಯ ಶಕ್ತಿಗಳ ಮುಂಚೂಣಿಯ ಚರಿತ್ರೆಯಿರುವ ಭಾರತದ ಪ್ರಧಾನಿಯಾಗಿ ಮೋದಿಯವರು ಕೂಡಾ ಹಾಗೇ ನಡೆದುಕೊಂಡಿದ್ದಾರೆ. ಪತ್ರಿಕೆಯು ಅನಗತ್ಯವಾಗಿ ವಿಜೃಂಭಿಸಿದಂತೆ ಮೋದಿಯವರು ಅಬ್ಬರಿಸಿಲ್ಲ; ಅಬ್ಬರಿಸಲೂ ಬಾರದು.

ಆದರೆ ಶತಾಯಗತಾಯ ಮೋದಿಯವರನ್ನು ಹೊಗಳಿ ಅಟ್ಟಕ್ಕೇರಿಸುವ ಗುತ್ತಿಗೆ ಹಿಡಿದಂತೆ ವರ್ತಿಸುತ್ತಿರುವ ನಮ್ಮ ಮೀಡಿಯಾಗಳು ಓದುಗರನ್ನು ಮೋದಿ ಮೇನಿಯಾದ ಭ್ರಮೆಗೆ ತಳ್ಳುವ ಕೆಲಸವನ್ನು ಮುಂದುವರೆಸುತ್ತಿವೆ. ನಿಜ ಹೇಳಬೇಕೆಂದರೆ, ಆ ಉಭಯ ಮಾತುಕತೆಗಳಲ್ಲಿ ಪ್ರಧಾನವಾಗಿ ಚರ್ಚೆಯಾಗಿದ್ದು ಬಾಂಗ್ಲಾದಿಂದ ಪಲಾಯನವಾಗಿ ಇಂಡಿಯಾದಲ್ಲಿ ರಕ್ಷಣೆ ಪಡೆದಿದ್ದಾರೆ ಎನ್ನಲಾಗುತ್ತಿರುವ ಶೇಕ್‌ ಹಸೀನಾ ಅವರ ಹಸ್ತಾಂತರದ ಬಗ್ಗೆ. ಇದನ್ನು ಕೇಂದ್ರ ಸರ್ಕಾರದ ವಿದೇಶಾಂಗ ಸಚಿವಾಲಯವೇ ಖಾತ್ರಿ ಪಡಿಸಿದೆ. (https://timesofindia.indiatimes.com/india/sheikh-hasinas-extradition-raised-during-pm-modi-yunus-talks-mea/articleshow/119974008.cms) ಆದರೆ ಈ ಬಗ್ಗೆ ಭಾರತದ ನಿಲುವಾಗಿ ಪ್ರಧಾನಿಯವರು ಏನು ಹೇಳಿದರು ಎಂಬುದನ್ನು ಬಹಿರಂಗ ಪಡಿಸಲು ಇದು ಸೂಕ್ತಸಮಯವಲ್ಲ ಎಂದು ವಿದೇಶಾಂಗ ಕಾರ್ಯದರ್ಶಿ ವಿಕ್ರಂ ಮಿಸ್ರಿ ಹೇಳಿದ್ದಾರೆ. ಸುಮಾರು 700 ಜನರ ಸಾವಿಗೆ ಕಾರಣವಾದ ಶೇಕ್‌ ಹಸೀನಾ ಅವರು ಭಾರತದಲ್ಲಿ ರಕ್ಷಣೆ ಪಡೆದಿದ್ದು ಅವರನ್ನು ತಮಗೆ ಹಸ್ತಾಂತರ ಮಾಡುವಂತೆ ಬಾಂಗ್ಲಾ ಮಧ್ಯಂತರ ಸರ್ಕಾರ 2024ರ ಡಿಸೆಂಬರ್‍‌ನಲ್ಲೇ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿತ್ತು. ಆದರೆ ಅದಕ್ಕೆ ಮೋದಿ ಸರ್ಕಾರ ಪ್ರತಿಕ್ರಿಯಿಸಿರಲಿಲ್ಲ. (https://www.thehindu.com/news/international/bangladesh-sends-note-verbale-asking-india-to-send-back-deposed-pm-sheikh-hasina/article69018619.ece) ಈಗಿನ ಉಭಯ ಚರ್ಚೆಗಳಲ್ಲು ಅದು ಮುನ್ನೆಲೆಗೆ ಬಂದಿದ್ದು, ಅದರ ಬಗ್ಗೆ ಯಾವುದೇ ಮಾಹಿತಿ ಹಂಚಿಕೊಳ್ಳಲು ಸೂಕ್ತ ಸಮಯವಲ್ಲ ಎಂದು ವಿದೇಶಾಂಗ ಸಚಿವಾಲಯ ಹೇಳುತ್ತಿದೆ.

ಇದರರ್ಥ, ಮಾತುಕತೆಯ ವೇಳೆ ಪ್ರಧಾನಿ ಮೋದಿಯವರ ಮೇಲೆ ಒತ್ತಡ ಹೇರಲು ಬಾಂಗ್ಲಾ ಸಲಹೆಗಾರ ಯೂನಸ್‌ ಬಳಿಯು ಒಂದು ಅಸ್ತ್ರವಿತ್ತು. ಅವರು ಮೋದಿಯ ಮುಂದೆ ಕೈಕಟ್ಟಿ ನಿಲ್ಲುವಷ್ಟು ದುರ್ಬಲ ಸ್ಥಿತಿಯಲ್ಲಿರಲಿಲ್ಲ. ಹಾಗಾಗಿ ಮೀಡಿಯಾಗಳು ಉನ್ಮಾದಿಸುತ್ತಿರುವಂತೆ ಯಾವುದೇ ಅತಿರೇಕದ ಅಥವಾ ವೀರಾವೇಶದ ವರ್ತನೆಯನ್ನು ಎರಡೂ ದೇಶಗಳ ಪ್ರತಿನಿಧಿಗಳು ಅಲ್ಲಿ ತೋರಿಸಿಲ್ಲ. ತಮ್ಮ ತಮ್ಮ ಮನವಿ, ಸಲಹೆ, ಬೇಡಿಕೆಗಳನ್ನು ಡಿಪ್ಲೊಮ್ಯಾಟಿಕ್‌ ಶೈಲಿಯಲ್ಲಿ ವಿನಿಮಯ ಮಾಡಿಕೊಂಡಿದ್ದಾರೆ. ಇನ್ನುಳಿದಂತೆ ಉಪ್ಪು-ಖಾರ-ಒಗ್ಗರಣೆಗಳೆಲ್ಲ ಮೋದಿಯವರನ್ನು ಸೂಪರ್‍‌ಮ್ಯಾನ್‌ ರೀತಿ ತೋರಿಸುವ ನಮ್ಮ ಮೀಡಿಯಾಗಳ ಅನ್‌ಫಾರ್ಚುನೇಟ್‌ ಎಪಿಸೋಡುಗಳು.

ಇಲ್ಲಿ ಇಂದಿರಾಗಾಂಧಿಗೆ ಏನು ಕೆಲಸ? ಈ ಲಿಂಡನ್‌ ಜಾನ್ಸನ್‌ ಯಾರು? ಅನ್ನೋ ಪ್ರಶ್ನೆಗಳು ನಿಮಗೆ ಕಾಡಬಹುದು. Lets  go through them… ಒಂದು ವೇಳೆ, ಪ್ರಧಾನಿ ಮೋದಿಯವರು ಮೊಹ್ಮದ್ ಯೂನಸ್‌ ಅವರನ್ನು ಸಿಂಗಲ್‌ ಹ್ಯಾಂಡೆಡ್ಲಿ ತರಾಟೆಗೆ ತೆಗೆದುಕೊಂಡು, ನೀರಿಳಿಸಿದ್ದರು ಅಂತಲೇ ಭಾವಿಸೋಣ. ಆಗಲೂ ನಮ್ಮ ಮೀಡಿಯಾಗಳು ಹರಸಾಹಸ ಪಟ್ಟಂತೆ ಅವರನ್ನು ನಾವು ಸೂಪರ್‍‌ಮ್ಯಾನ್‌ ಪಟ್ಟಕ್ಕೆ ಏರಿಸಬಹುದೇ? ಜಗತ್ತಿನ ಶ್ರೇಯಾಂಕದಲ್ಲಿ ಬಾಂಗ್ಲಾದ ಸ್ಥಾನಮಾನ, ಪ್ರಭಾವಗಳು ಎಂತವು…. ಭಾರತದ ಹಂಗಿನಲ್ಲೇ ಸ್ವತಂತ್ರ ದೇಶವಾಗಿ ರೂಪುಗೊಂಡು, ಇವತ್ತಿಗೂ ಭಾರತದಂತಹ ಹಲವು ರಾಷ್ಟ್ರಗಳ ನೆರವಿನಲ್ಲೇ ಸಾಗುತ್ತಿರುವ ಒಂದು ದುರ್ಬಲ ದೇಶ. ಸಶಕ್ತ ಆರ್ಥಿಕ ಚೇತನವಿಲ್ಲದೆ, ಸಾಕಷ್ಟು ಉದ್ಯೋಗಾವಕಾಶಗಳೂ ಇಲ್ಲದೆ ಅಲ್ಲಿನ ಜನ ಅಕ್ರಮವಾಗಿ ಗಡಿನುಸುಳಿ ಭಾರತದೊಳಕ್ಕೆ ಬರುತ್ತಿದ್ದಾರೆ ಎಂದು ನಮ್ಮ ಸರ್ಕಾರಗಳೇ ಹೇಳುತ್ತಾ ಬಂದಿವೆ. ಅಂತಹ ದುರ್ಬಲ ದೇಶವೊಂದರ ಮಧ್ಯಂತರ ಸರ್ಕಾರದ ಪ್ರತಿನಿಧಿಯೊಬ್ಬರನ್ನು ಮೋದಿ ತರಾಟೆಗೆ ತೆಗೆದುಕೊಂಡರು ಕೂಡಾ ಅದು ಹೆಚ್ಚುಗಾರಿಕೆ ಅನ್ನಿಸುವುದಿಲ್ಲ. ಒಬ್ಬ ದುರ್ಬಲ ವ್ಯಕ್ತಿಯ ಮೇಲೆ ಅವನಿಗಿಂತಲು ಶಕ್ತಿಶಾಲಿಯಾದವ ಸವಾರಿ ಮಾಡುವುದನ್ನು ನಮ್ಮ ಜನ ನ್ಯಾಯಸಮ್ಮತ ಅಥವಾ ಶೂರತನ ಎಂದು ಒಪ್ಪುವುದಿಲ್ಲ. ಆದರೆ, ತನಗಿಂತಲೂ ಶಕ್ತಿಶಾಲಿಯಾದ ವ್ಯಕ್ತಿಗೆ ತಿರುಗೇಟು ನೀಡುವುದನ್ನು ದಿಟ್ಟತನ, ಧೈರ್ಯವಂತಿಕೆ ಎಂದು ಪರಿಗಣಿಸಲಾಗುತ್ತೆ.

ನಮಗಿಂತಲೂ ಬಲಶಾಲಿಯಾದ ಅಮೆರಿಕಾದ ಪ್ರತಿನಿಧಿ ಡೊನಾಲ್ಡ್‌ ಟ್ರಂಪ್‌ ಅವರ ಮುಂದೆ ಮೋದಿಯವರು ಹೇಗೆ ವರ್ತಿಸಿದ್ದರು ಅಂತ ಒಮ್ಮೆ ನೆನಪಿಸಿಕೊಳ್ಳಿ. ಮೋದಿಯವರು ಇತ್ತೀಚೆಗೆ ಅಮೆರಿಕಾಗೆ ಭೇಟಿ ನೀಡಿದ್ದ ವೇಳೆಯಲ್ಲೆ, ಭಾರತದ ವಲಸಿಗರನ್ನು ಥರ್ಡ್‌ ರೇಟೆಡ್‌ ಕ್ರಿಮಿನಲ್‌ಗಳಂತೆ ಕೈಕಾಲುಗಳಿಗೆ ಕೋಳವನ್ನು ಹಾಕಿ, ಅವಮಾನಕರವಾಗಿ ಟ್ರಂಪ್‌ ಸರ್ಕಾರ ಹೊರದಬ್ಬಿತ್ತು. ಅದರ ಬಗ್ಗೆ ಮೋದಿಯವರ ಚಕಾರವೆತ್ತಲಿಲ್ಲ. ಜಗತ್ತಿನ ವಿರುದ್ಧ ತೆರಿಗೆ ಸಮರ ಸಾರಿರುವ ಟ್ರಂಪ್‌, ಭಾರತದ ಮೇಲೂ ಅದನ್ನು ವಿಸ್ತರಿಸಿದಾಗ ಆಪ್ತಮಿತ್ರನಿಗೆ ಮೋದಿಯವರು ಒಂದು ಮಾತೂ ಹೇಳಲಿಲ್ಲ. ಬದಲಿಗೆ 30 ಅಮೆರಿಕಾ ಸರಕುಗಳ ಮೇಲೆ ಭಾರತ ವಿಧಿಸುತ್ತಿದ್ದ ತೆರಿಗೆಗಳನ್ನು ಕಡಿಮೆ ಮಾಡಿ, ಅಮೆರಿಕಾದಿಂದ ರಕ್ಷಣಾ ಮತ್ತು ಇಂಧನ ಇಲಾಖೆಯ ಸರಕುಗಳನ್ನು ಮತ್ತಷ್ಟು ಜಾತಿ ಆಮದು ಮಾಡಿಕೊಳ್ಳುವ ಯೋಜನೆಯತ್ತ ಮನಸು ಹರಿಬಿಟ್ಟು ಟ್ರಂಪ್‌ ಸರ್ಕಾರವನ್ನು ಪುಸಲಾಯಿಸುವಷ್ಟು ಮೆತ್ತಗಾಯಿತು. (https://www.business-standard.com/economy/news/india-us-trade-tariffs-imports-defence-energy-reciprocal-duties-125021101302_1.html). ಇನ್ನು ಚೀನಾದ ವಿಚಾರದಲ್ಲಿ ಮೋದಿಯವರು ತೀರಾ ಮೃದುವಾಗಿ ವರ್ತಿಸುತ್ತಿದ್ದಾರೆ ಎಂಬುದು ವಿರೋಧ ಪಕ್ಷಗಳ ಗಂಭೀರ ಆರೋಪ. ಇತ್ತೀಚೆಗಷ್ಟೆ ವಿಪಕ್ಷ ನಾಯಕ ರಾಹುಲ್‌ ಗಾಂಧಿಯವರು ಲೋಕಸಭೆ ಅಧಿವೇಶನದಲ್ಲೆ “ಚೀನಾ ನಮ್ಮ ದೇಶದ 4,000 ಕಿಲೋಮೀಟರಿನಷ್ಟು ನಮ್ಮ ಜಾಗವನ್ನು ಅತಿಕ್ರಮಿಸಿದೆ” ಎಂದು ಆರೋಪಿಸಿದ್ದರು. ಇದಕ್ಕೆ ಮೋದಿಯವರ ಸರ್ಕಾರದ ಪರವಾಗಿ ಬಿಜೆಪಿಯ ಅನುರಾಗ್ ಠಾಕೂರ್‍‌ ಅವರು “ನಮ್ಮ ಒಂದು ಇಂಚು ನೆಲವೂ ನಮ್ಮ ಅವಧಿಯಲ್ಲಿ ಚೀನಾದ ಪಾಲಾಗಿಲ್ಲ” ಎಂದು ಉತ್ತರ ಕೊಟ್ಟಿದ್ದಾರಾದರೂ, ಭಾರತ-ಚೀನಾ  ನಡುವೆ ಗಡಿ ಮತ್ತು ನದಿನೀರು ವಿಚಾರದಲ್ಲಿ ಸಾಕಷ್ಟು ಗೊಂದಲಗಳಿರುವುದು ಮತ್ತು ಈ ಕುರಿತು ಪ್ರಧಾನಿ ಮೋದಿಯವರು ದಿಟ್ಟ ಪ್ರತಿಕ್ರಿಯೆ ನೀಡದಿರುವುದನ್ನು ನಾವು ಗಮನಿಸಬಹುದು.

ಈಗ ಹೇಳಿ, ಒಂದುವೇಳೆ ಮೋದಿಯವರು ದುರ್ಬಲ ಬಾಂಗ್ಲಾದ ಪ್ರತಿನಿಧಿಯನ್ನು ತರಾಟೆಗೆ ತೆಗೆದುಕೊಂಡಿದ್ದು ನಿಜವೇ ಅಂದುಕೊಳ್ಳೋಣ. ಆಗಲೂ ನಮ್ಮ ಮೀಡಿಯಾಗಳು ಕೊಡುತ್ತಿರುವ ಸೂಪರ್‍‌ಮ್ಯಾನ್‌ ಹೈಪ್‌ಗೆ ಮೋದಿಯವರು ಅರ್ಹರೇ?

ಛೇ…. ಇಲ್ಲಿ ಮತ್ತೆ ಇಂದಿರಾಗಾಂಧಿ ಲಿಂಕ್‌ ಮಿಸ್‌ ಆಗ್ತಾ ಇದೆ ನೋಡಿ!!! ನಮಗಿಂತ ದುರ್ಬಲರ ಮೇಲೆ ಅಬ್ಬರಿಸುವುದರಲ್ಲಿ ಯಾವ ಹೆಚ್ಚುಗಾರಿಕೆಯೂ ಇಲ್ಲ. ಇನ್‌ಫ್ಯಾಕ್ಟ್‌ ಅದು ವೀರ/ವೀರವನಿತೆ ಎನ್ನಿಸಿಕೊಂಡವರಿಗೆ ಶೋಭೆಯೂ ಅಲ್ಲ. ಆದರೆ ನಮಗಿಂತಲೂ ಪ್ರಬಲರು ನಮ್ಮ ಮೇಲೆ ದಬ್ಬಾಳಿಕೆ ಮಾಡಲು ಬಂದಾಗ ತಿರುಗೇಟು ನೀಡುವುದಿದೆಯಲ್ಲ ಅದೇ ನಿಜವಾದ ದಿಟ್ಟತನ. ಇವತ್ತಿಗೂ ದೊಡ್ಡಣ್ಣನೆಂಬ ಬಿಗುಮಾನದಲ್ಲಿರುವ ಅಮೆರಿಕಾಗೆ ಇಂದಿರಾಗಾಂಧಿಯವರು 1970ರ ದಶಕದಲ್ಲೇ ಬಿಸಿ ಮುಟ್ಟಿಸಿದ್ದರು. ಆಗಿನ್ನೂ ಭಾರತ ಇಷ್ಟು ಸಶಕ್ತವಾಗಿರಲಿಲ್ಲ. ಬ್ರಿಟಿಷ್‌ ಲೂಟಿಯಿಂದ ಆಗಷ್ಟೇ ಹೊರಬರುತ್ತಿದ್ದ ಭಾರತದ ಪರಿಸ್ಥಿತಿ ಅಂಬೆಗಾಲಿನ ಕೂಸಿನ ಅವಸ್ಥೆಯಲ್ಲಿತ್ತು. ನೆಹರೂ ಅವರ ಪಂಚವಾರ್ಷಿಕ ಯೋಜನೆಗಳು ಸ್ವಲ್ಪಮಟ್ಟಿಗೆ ಚೇತರಿಕೆ ತುಂಬಿದ್ದವಾದರೂ, ಸ್ವಾವಲಂಬನೆ ಇನ್ನೂ ಸಾಧ್ಯವಾಗಿರಲಿಲ್ಲ. ಮುಖ್ಯವಾಗಿ ಹಸಿವು ತಾಂಡವವಾಡುತ್ತಿತ್ತು. ಆಗ ಫುಡ್ ಫಾರ್ ಪೀಸ್‌ ಒಪ್ಪಂದದಡಿ ಅಮೆರಿಕಾ, ಭಾರತಕ್ಕೆ ಆಹಾರಧಾನ್ಯ ಪೂರೈಸಲು ಒಪ್ಪಿಕೊಂಡಿತ್ತು.

ಆರಂಭದಲ್ಲಿ ಎಲ್ಲವೂ ಸರಿಯಿತ್ತು. ಆದರೆ ಲಿಂಡನ್‌ ಜಾನ್ಸನ್‌ ಎಂಬ ವ್ಯಕ್ತಿ ಅಮೆರಿಕಾ ಅಧ್ಯಕ್ಷನಾದ ಮೇಲೆ ಈ ಒಪ್ಪಂದ ಸಡಿಲಗೊಳ್ಳಲು ಶುರುವಾಯ್ತು. ಭಾರತವು ಸೋವಿಯತ್‌ ರಷ್ಯಾದೊಂದಿಗೆ ಉತ್ತಮ ಸಂಬಂಧ ಹೊಂದಿದೆ ಎಂಬ ಗ್ರಹಿಕೆಯಲ್ಲಿದ್ದ ಜಾನ್ಸನ್‌ ಆಹಾರ ಧಾನ್ಯಗಳು ಪೂರೈಕೆಯಾಗುವುದಕ್ಕೆ ತಡೆಯೊಡ್ಡುತ್ತಾ ಬಂದ. ಸ್ವತಃ ಇಂದಿರಾಗಾಂಧಿ ಅಮೆರಿಕಾಗೆ ಭೇಟಿ ನೀಡಿ ಈ ಕುರಿತು ಮಾತುಕತೆ ನಡೆಸಿದರೂ ಅವನ ಉದ್ಧಟತನ ಮುಂದುವರೆಯಿತು. ಬೇಕುಬೇಕಂತಲೇ ಹಡಗುಗಳನ್ನು ತಡೆಹಿಡಿಯುವುದು, ನಿಗದಿತ ಸಮಯಕ್ಕೆ ಆಹಾರಧಾನ್ಯ ಕಳುಹಿಸದೆ ಸತಾಯಿಸುವುದು ಮುಂದುವರೆಯಿತು. ಇದು ಭಾರತದ ಸ್ವಾಭಿಮಾನವನ್ನು ಅಣಕಿಸಿದಂತಿತ್ತು. ಪ್ರಧಾನಿ ಇಂದಿರಾ ಕುದ್ದುಹೋದರು. ಅವನ ಅಹಮ್ಮಿಗೆ ಪೆಟ್ಟುಕೊಡಬೇಕು ಅಂತ ತೀರ್ಮಾನಿಸಿದ ಅವರು ವಿಯೆಟ್ನಾಂ ಮೇಲೆ ಅಮೆರಿಕಾ ಹಸ್ತಕ್ಷೇಪವನ್ನು `ಬಂಡವಾಳಶಾಹಿ ಅತಿರೇಕ’ ಎಂಬ ಘೋಷಣೆಗೆ ಸಹಿಹಾಕಿದರು. ಥೇಟು ಟ್ರಂಪ್‌ ತರಹದ ವ್ಯಕ್ತಿತ್ವದ ಲಿಂಡ್ಸನ್‌ ಇದರಿಂದ ಮತ್ತಷ್ಟು ಸಿಟ್ಟುಗೆದ್ದು, ಆಹಾರ ಧಾನ್ಯ ಸರಬರಾಜನ್ನು ಸಂಪೂರ್ಣವಾಗಿ ತಡೆಹಿಡಿದ.

ಇಂದಿರಾ ಅವನ ಮುಂದೆ ಮಂಡಿಯೂರಲಿಲ್ಲ. ನಮ್ಮ ಆಹಾರವನ್ನು ನಾವೇ ಉತ್ಪಾದನೆ ಮಾಡಿಕೊಳ್ತೀವಿ ಎಂದು ಸವಾಲು ಹಾಕಿದರು. ಆಗ ಹುಟ್ಟಿಕೊಂಡಿದ್ದೇ ಈ ಹಸಿರುಕ್ರಾಂತಿಯ ಪರಿಕಲ್ಪನೆ. ಎಂ ಎಸ್ ಸ್ವಾಮಿನಾಥನ್‌ ಅದಕ್ಕೆ ಹೆಗಲುಕೊಟ್ಟರು. ಬೇರೆಯವರ ಮುಂದೆ ಆಹಾರಕ್ಕಾಗಿ ಕೈಚಾಚುವ ಪರಿಸ್ಥಿತಿಯಲ್ಲಿದ್ದ ಭಾರತ ಕೆಲವೇ ವರ್ಷಗಳಲ್ಲಿ ತನ್ನ ಆಹಾರ ಸ್ವಾವಲಂಬನೆ ಸಾಧಿಸಿಕೊಂಡಿದ್ದು ಮಾತ್ರವಲ್ಲ, ಬೇರೆ ದೇಶಗಳಿಗೆ ರಫ್ತು ಮಾಡುವಷ್ಟು ಪ್ರಬಲವಾಯಿತು. ಇಂದಿರಾಗಾಂಧಿಯವರಿಗಿದ್ದ ಹಠ, ಬದ್ಧತೆ, ದಿಟ್ಟತೆ ಅಂತದ್ದು. ಅಷ್ಟಿಲ್ಲದೆ ಹೋಗಿದ್ದರೆ ಎದುರಾಳಿ ಅಟಲ್‌ ಬಿಹಾರಿ ವಾಜಪೇಯಿಯಂತವರೇ ಇಂದಿರಾ ಅವರನ್ನು ‘ದುರ್ಗೆ’ ಎಂದು ಕರೆದು ಹೊಗಳುತ್ತಿರಲಿಲ್ಲ. ವಿಪರ್ಯಾಸವೆಂದರೆ, ಇಂತಹ ಹೊಗಳಿಕೆಗಳು, ಪರಾಕುಗಳೇ ಮುಂದೆ ಇಂದಿರಾ ಅವರನ್ನು ಎಮರ್ಜೆನ್ಸಿಯ ಪತನದತ್ತ ಕೊಂಡೊಯ್ದವು!

‘ಎನ್ನವರೊಲಿದು ಹೊನ್ನಶೂಲದಲ್ಲಿಕ್ಕಿದರೆನ್ನ ಹೊಗಳಿ ಹೊಗಳಿ’ ಎಂಬ ಬಸವಣ್ಣನವರ ಮಾತು ಅಕ್ಷರಶಃ ಸತ್ಯ. ಮೀಡಿಯಾಗಳು ಮೋದಿಯವರಿಗೆ ಹಾಕುತ್ತಿರುವ ಈ ಬಹುಪರಾಕು ಕೂಡಾ ಹೊನ್ನ ಶೂಲವೇ?

– ಮಾಚಯ್ಯ ಎಂ ಹಿಪ್ಪರಗಿ, ರಾಜಕೀಯ ವಿಶ್ಲೇಷಕರು

Leave a Reply