ನೋಟು ನಿಷೇಧ, ಡಿಜಿಟಲ್ ವ್ಯವಹಾರದಿಂದ ಭ್ರಷ್ಟಾಚಾರ ನಿಯಂತ್ರಣ ಸಾಧ್ಯವೇ?

2 years ago

#demonetisation #corruption #control #possible #digital #business #NarendraModi #Economy #noteban
ನವೆಂಬರ್ 8, 2016ರಂದು ಪ್ರಧಾನಿ ನರೇಂದ್ರ ಮೋದಿ ನೋಟು ನಿಷೇಧಿಸಿ 7 ವರ್ಷಗಳು ಕಳೆದ ಹಿನ್ನೆಲೆಯಲ್ಲಿ ನಡೆದ ಘಟನೆಗಳ ಹಿನ್ನೋಟ…

ಗರಿಷ್ಠ ಮುಖಬೆಲೆಯ ನೋಟುಗಳ ನಿಷೇಧ ಮತ್ತು ಡಿಜಿಟಲ್ ವ್ಯವಹಾರಗಳಿಂದ ದೇಶದಲ್ಲಿರುವ ಭ್ರಷ್ಟಾಚಾರ ಮತ್ತು ಕಪ್ಪುಹಣವನ್ನು ನಿಯಂತ್ರಿಸಬಹುದು ಅನ್ನೋದು ಮೋದಿಯವರ ಹೇಳಿಕೆಯಾಗಿತ್ತು. ಈ ಕ್ರಮಗಳಿಂದ ಕಪ್ಪುಹಣ ನಿಷೇಧ ಸಾಧ್ಯಾನಾ? ಅನ್ನೋ ಪ್ರಶ್ನೆಗೆ ಉತ್ತರ ಇಲ್ಲಿದೆ.

ಆನ್ಲೈನ್ ವ್ಯವಹಾರದಲ್ಲಿ ಅತ್ಯಂತ ಪಾರದರ್ಶಕ ದೇಶ ಅಂದರೆ ಕೀನ್ಯಾ ಎಂದು ಹೇಳಲಾಗುತ್ತದೆ. ಡಿಜಿಟಲ್ ವಹಿವಾಟಿನ ಮೂಲಕ ಭ್ರಷ್ಟಾಚಾರವನ್ನು ನಿಯಂತ್ರಿಸೋಕೆ ಸಾಧ್ಯವಾಗಿದ್ದಲ್ಲಿ, ಇಷ್ಟು ಹೊತ್ತಿಗೆ ಕೀನ್ಯಾದಲ್ಲಿ ಬಹುದೊಡ್ಡ ಕ್ರಾಂತಿಯಾಗಬೇಕಿತ್ತು. ಯಾಕಂದ್ರೆ, ಶೇ. 75ರಷ್ಟು ಕೀನ್ಯಾ ನಾಗರಿಕರು ಮೊಬೈಲ್ ಮೂಲಕ ಪಾವತಿ ಮತ್ತು ಹಣ ವರ್ಗಾವಣೆ ಮಾಡುತ್ತಾರೆ. ಕೇವಲ ಒಂದೇ ದಿನದ ಆನ್ಲೈನ್ ವಹಿವಾಟಿನ ಪ್ರಮಾಣ ಕೀನ್ಯಾದ ವಾರ್ಷಿಕ ಜಿಡಿಪಿಯ ಶೇ. 4.5ರಷ್ಟಾಗುತ್ತೆ ಅಂತ ಐಎಂಎಫ್ ವರದಿ ಹೇಳುತ್ತದೆ.

ಸ್ಲಮ್ಗಳಲ್ಲಿ ವಾಸವಾಗಿರುವ ಬಡವರನ್ನೂ ಒಳಗೊಂಡಂತೆ ಬಹುತೇಕ ಕೀನ್ಯನ್ನರು, ಸಗಟು ಮತ್ತು ಚಿಲ್ಲರೆ ವ್ಯಾಪಾರಕ್ಕೆ ಮೊಬೈಲ್ ಫೋನ್ಗಳನ್ನೇ ಬಳಸುತ್ತಾರೆ. ದಿನಸಿಯಿಂದ ದೈನಂದಿನ ಅಗತ್ಯವಸ್ತುಗಳ ಖರೀದಿ ಸಂದರ್ಭದಲ್ಲಿ ಆನ್ಲೈನ್ ಮೂಲಕ ಪಾವತಿಸುತ್ತಾರೆ. ಆದ್ರೆ, ಅಚ್ಚರಿಯ ಮಾಹಿತಿ ಅಂದ್ರೆ, ವಿಶ್ವದ ಅತ್ಯಂತ ಭ್ರಷ್ಟಾಚಾರ ಚಾಲ್ತಿಯಲ್ಲಿರೋ ದೇಶಗಳಲ್ಲಿ ಕೀನ್ಯಾ ಕೂಡ ಸ್ಥಾನ ಪಡೆದಿದೆ. 2015ರ ಭ್ರಷ್ಟಾಚಾರ ಸೂಚ್ಯಂಕದ ಪ್ರಕಾರ, 168 ದೇಶಗಳ ಪೈಕಿ ಕೀನ್ಯ 139ನೇ ಸ್ಥಾನ ಪಡೆದಿದೆ.

ಇನ್ನು 2016ರ ರಿಯೋ ಒಲಿಂಪಿಕ್ಸ್ ನಲ್ಲಿ ದೇಶ ವಿದೇಶಗಳ ಕ್ರೀಡಾಪಟುಗಳು ಆಗಮಿಸಿದ್ದರು. ಇವರಿಗೆ, ಪ್ರಸಿದ್ಧ ಕ್ರೀಡಾ ಉಡುಪು ಮತ್ತು ಪರಿಕರಗಳ ಕಂಪನಿ ನೈಕ್ ಯುನಿಫಾರ್ಮ್ ಮತ್ತು ಕಿಟ್ಗಳನ್ನು ನೀಡಿತ್ತು. ಈ ಕಿಟ್ಗಳನ್ನೇ ಕೀನ್ಯಾ ಅಧಿಕಾರಿಗಳು ಮಾರಿಕೊಂಡು ಭ್ರಷ್ಟಾಚಾರ ಎಸಗಿದ್ದರು ಎಂದು ವರದಿಯಾಯಿತು. ಈ ಕುರಿತು ತನಿಖೆ ನಡೆಸುವಂತೆ ನೈಕ್ ಅಧಿಕಾರಿಗಳು ದೂರು ಕೂಡ ದಾಖಲಿಸಿದ್ದರು.

ಇನ್ನೊಂದು ಕುತೂಹಲಕಾರಿ ಸಂಗತಿ ಎಂದರೆ, ಮೋದಿಯವರು, ನೋಟುಗಳನ್ನು ನಿಷೇಧಿಸಿದ 2016ರ ನವೆಂಬರ್ 8ರಂದು ಆನ್ಲೈನ್ ವಹಿವಾಟಿನ ಕುರಿತು ಸಣ್ಣ ಸೊಲ್ಲನ್ನೂ ಎತ್ತಿರಲಿಲ್ಲ. ಅಂದು ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ, ಭ್ರಷ್ಟಾಚಾರದ ವಿರುದ್ಧ ಹೋರಾಡ್ತಿರುವ ಜನಸಾಮಾನ್ಯರಿಗೆ ನೋಟು ನಿಷೇಧ ಶಕ್ತಿ ತುಂಬುತ್ತೆ. ಕಪ್ಪುಹಣ ಮತ್ತು ಖೋಟಾ ನೋಟುಗಳ ವಿರುದ್ಧ ಹೋರಾಡಬಹುದು. ಗಡಿಯಾಚೆಗಿನ ಭಯೋತ್ಪಾದನೆಯನ್ನು ನಿಯಂತ್ರಿಸಬಹುದು ಅಂತ ಹೇಳಿದ್ದರು.

ನೋಟುಗಳ ನಿಷೇಧದ ನಂತರ ದೇಶದ ನಾಗರಿಕರು ದೈನಂದಿನ ಅಗತ್ಯವನ್ನೂ ಪೂರೈಸೋಕೆ ಹಣವಿಲ್ಲದೇ ಪರದಾಡಿದ್ರು. ದಿನಗೂಲಿ ನೌಕರರು ಕೂಲಿ ಸಿಗದೆ ನರಳಿದ್ರು. ದೇಶದಾದ್ಯಂತ ಇದೇ ವಿಷಯಕ್ಕೆ ಸಂಬಂಧಿಸಿದಂತೆ 120ಕ್ಕೂ ಹೆಚ್ಚು ಜನ ಸಾವಿಗೀಡಾದರು. ಇಷ್ಟೆಲ್ಲ ಅನಾಹುತಗಳು ನಡೆದ ನಂತರ, ಆಡಳಿತ ಪಕ್ಷದ ನಾಯಕರಿಗೆ ಆನ್ಲೈನ್ ವಹಿವಾಟು, ಡಿಜಿಟಲ್ ಪೇಮೆಂಟ್ ವಿಷಯ ನೆನಪಾಯ್ತು. ಅನಂತರ ಈ ಕುರಿತು ಜಾಗೃತಿ ಮೂಡಿಸಲು ಮುಖ್ಯಮಂತ್ರಿಗಳು ಮತ್ತು ಮುಖ್ಯಕಾರ್ಯದರ್ಶಿಗಳ ಸಮಿತಿಯನ್ನು ರಚಿಸಲಾಯ್ತು.

ಎನ್ಡಿಎ ತನ್ನ ಆಡಳಿತಾವಧಿಯ ಎರಡೂವರೆ ವರ್ಷಗಳಲ್ಲಿ ಡಿಜಿಟಲ್ ವಹಿವಾಟನ್ನು ಅನುಷ್ಠಾನಗೊಳಿಸಬಹುದಿತ್ತು. ಆದರೆ ಕೇಂದ್ರ ಸರ್ಕಾರ ಈ ನಿಟ್ಟಿನಲ್ಲಿ ಯಾವ ಹೆಜ್ಜೆಯನ್ನೂ ಇಟ್ಟಿರಲಿಲ್ಲ. ಪ್ರಧಾನಿ ಮೋದಿಯವ ಡಿಜಿಟಲ್ ಇಂಡಿಯ ಯೋಜನೆಯ ಪ್ರಕಾರ 2019ರಲ್ಲಿ, ಡಿಜಿಟಲ್ ಕ್ಷೇತ್ರದಲ್ಲಿ ವಿಶ್ವದ ಮುಂಚೂಣಿ ದೇಶವಾಗಬೇಕು. ಇದಕ್ಕೆ ಬಹಳ ಕೆಲಸವನನ್ನು ದೇಶದಲ್ಲಿ ಮಾಡಬೇಕಿತ್ತು.

ಇನ್ನು ಡಿಜಿಟಲ್ ಇಂಡಿಯದಿಂದ 2019ರ ಹೊತ್ತಿಗೆ ದೇಶದಲ್ಲಿ ಬರೋಬ್ಬರಿ 10 ಕೋಟಿ ಉದ್ಯೋಗಗಳನ್ನು ಸೃಷ್ಟಿಸೋದಾಗಿ ಮೋದಿ ಹೇಳಿದ್ದರು. ಆದ್ರೆ, ಗರಿಷ್ಠ ಮುಖಬೆಲೆಯ ನೋಟುಗಳ ನಿಷೇಧದ ನಂತರ, ಅಸಂಘಟಿತ ವಲಯದ ಲಕ್ಷಾಂತರ ಜನ ಉದ್ಯೋಗ ಕಳೆದುಕೊಂಡರು.

ಇನ್ನೊಂದು ಕುತೂಹಲಕಾರಿ ಸಂಗತಿ ಅಂದರೆ, ಗರಿಷ್ಠ ಮುಖಬೆಲೆಯ ನೋಟುಗಳ ನಿಷೇಧದ ನಂತರ ದೇಶದಲ್ಲಿ ಕಪ್ಪುಹಣವನ್ನು ಬಿಳಿಯಾಗಿಸೋ ಹೊಸ ದಂಧೆ ಶುರುವಾಯ್ತು. ಇದರಲ್ಲಿ ಬ್ಯಾಂಕ್ ಅಧಿಕಾರಿಗಳನ್ನೂ ಒಳಗೊಂಡಂತೆ, ಸರ್ಕಾರಿ ಅಧಿಕಾರಿಗಳು, ಉದ್ಯಮಿಗಳು ಮತ್ತೆ ಭ್ರಷ್ಟಾಚಾರದಲ್ಲಿ ತೊಡಗಿದರು. ಖಾಸಗಿ ಮತ್ತು ಸರ್ಕಾರಿ ಬ್ಯಾಂಕ್ ಉದ್ಯೋಗಿಗಳು ಅರೆಸ್ಟ್ ಆದರು. ಸಿಬಿಐ ಮತ್ತು ಜಾರಿ ನಿರ್ದೇಶನಾಲಯ ಇವರ ವಿರುದ್ಧ ತನಿಖೆ ಆರಂಭಿಸಿತ್ತು.

ಆನ್ಲೈನ್ ವ್ಯವಹಾರವನ್ನು ಉತ್ತೇಜಿಸೋಕೆ ನೋಟು ನಿಷೇಧ ಪರಿಹಾರವಲ್ಲ ಅನ್ನೋದು ಆರ್ಥಿಕ ತಜ್ಞರ ಅಭಿಪ್ರಾಯ. ಆದರೂ ಮೋದಿ ಮತ್ತು ಅವರ ತಂಡಕ್ಕೆ ತಮ್ಮ ತಪ್ಪುಗಳನ್ನೆಲ್ಲ ಸಮರ್ಥಿಸಲು ಹೊಸಹೊಸ ಸುಳ್ಳು, ಭರವಸೆಗಳ ಮೊರೆಹೋಗುವುದು ನಿಂತಿಲ್ಲ. ಮೇಲಿನ ಉದಾಹರಣೆಗಳಿಂದ ಗರಿಷ್ಠ ಮುಖಬೆಲೆಯ ನೋಟುಗಳ ನಿಷೇಧದಿಂದಾಗಲಿ ಅಥವಾ ಆನ್ಲೈನ್ ವಹಿವಾಟುಗಳಿಂದಾಗಲಿ ಭ್ರಷ್ಟಾಚಾರ ನಿಯಂತ್ರಣಕ್ಕೆ ಬರೋದಿಲ್ಲ ಎಂಬ ಸಂಗತಿ ಸಾಬೀತಾಗಲಿಲ್ಲವೇ?

– ಡಾ.ಪ್ರದೀಪ್ ಮಾಲ್ಗುಡಿ, ಸಂಶೋಧಕ

Leave a Reply