ಬೆಂಗಳೂರು: ನಾವು ಗೃಹಜ್ಯೋತಿ ಯೋಜನೆಯನ್ನು ಜಾರಿಗೆ ತಂದಾಗ ಬಡತನದ ಸವಾಲುಗಳ ಅರಿವಿಲ್ಲದ ಒಂದಷ್ಟು ಮಂದಿ ಜನರಿಗೆ ಉಚಿತವಾಗಿ ವಿದ್ಯುತ್ ನೀಡಿದರೆ ದುಂದುವೆಚ್ಚದ ಬಳಕೆಗೆ ಉತ್ತೇಜನ ನೀಡಿದಂತಾಗುತ್ತದೆ, ತೆರಿಗೆ ಹಣದ ದುರುಪಯೋಗವಾಗುತ್ತದೆ ಎಂದು ಅಪಪ್ರಚಾರ, ಕುಹಕದ ಮಾತುಗಳನ್ನಾಡಿದ್ದರು. ಆದರೆ ಜನ ನನ್ನ ನಂಬಿಕೆಯನ್ನು ಹುಸಿಯಾಗಿಸಲಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಹೆಸ್ಕಾಂ ವ್ಯಾಪ್ತಿಯಲ್ಲಿ ಗೃಹ ಜ್ಯೋತಿ ಯೋಜನೆ ಜಾರಿ ನಂತರ ವಿದ್ಯುತ್ ಬಳಕೆ ಪ್ರಮಾಣ ನಿಯಂತ್ರಣ ವರದಿ ಪ್ರಸಾರ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿಕ್ರಿಯೆ ನೀಡಿರುವ ಅವರು, ಹುಬ್ಬಳ್ಳಿ ವಿದ್ಯುತ್ ಸರಬರಾಜು ನಿಗಮದ ವ್ಯಾಪ್ತಿಯ ಪ್ರಜ್ಞಾವಂತ ಜನರು ತಮ್ಮ ಅಗತ್ಯಕ್ಕೆ ಬೇಕಾದಷ್ಟೇ ವಿದ್ಯುತ್ ಬಳಕೆ ಮಾಡಿಕೊಂಡಿದ್ದರಿಂದ ಹಿಂದಿನ ತಿಂಗಳುಗಳಿಗಿಂತ ಈಗ ವಿದ್ಯುತ್‌ನ ಬಳಕೆ ಪ್ರಮಾಣ ಕಡಿಮೆಯಾಗಿದೆ ಎಂದು ಹೇಳಿದ್ದಾರೆ.
ನಮ್ಮ ಸರ್ಕಾರದ ಜನಪರ ಆಶಯಕ್ಕೆ ಬೆಂಬಲವಾಗಿ ನಿಂತು ಯೋಜನೆಯನ್ನು ಯಶಸ್ವಿಯಾಗಿಸಿದ ಹೆಸ್ಕಾಂ ವ್ಯಾಪ್ತಿಯ ಕುಟುಂಬಗಳಿಗೆ ಧನ್ಯವಾದಗಳು. ನಾಡಿನ ಎಲ್ಲ ಕುಟುಂಬಗಳು ಇದೇ ರೀತಿ ಮಿತ ವಿದ್ಯುತ್ ಬಳಕೆಗೆ ಒತ್ತು ನೀಡಿ, ಯೋಜನೆಯ ಗರಿಷ್ಠ ಲಾಭ ಪಡೆಯಬೇಕು ಎಂದು ಮನವಿ ಮಾಡಿದ್ದಾರೆ.




