ರಾಯಚೂರು ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಅಣಕು ಕಾರ್ಯಾಚರಣೆ

12 months ago

ಬೆಂಗಳೂರು: ಪಹಲ್ಗಾಮ್ ದಾಳಿಯ ಬಳಿಕ ಪಾಕಿಸ್ತಾನ ಮತ್ತು ಭಾರತ ನಡುವೆ ಉಂಟಾಗಿರುವ ಉದ್ವಿಗ್ನ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದ ಸೂಚನೆ ಹಿನ್ನೆಲೆಯಲ್ಲಿ ಬೆಂಗಳೂರು, ರಾಯಚೂರು ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಅಣಕು ಕಾರ್ಯಾಚರಣೆ ನಡೆಯಲಿದೆ.

ಉಗ್ರರ ದಾಳಿಯ ಬೆನ್ನಲ್ಲೇ ಭಾರತ ಪ್ರತೀಕಾರ ರೂಪವಾಗಿ ಪಾಕಿಸ್ತಾನದೊಂದಿಗೆ ರಾಜತಾಂತ್ರಿಕ ಸಂಬಂಧ ಕಡಿದುಕೊಂಡಿದೆ. ಜತೆಗೆ ಸಿಂಧೂ ಜಲ ಒಪ್ಪಂದವನ್ನು ರದ್ದುಗೊಳಿಸಿದೆ.ಇದರಿಂದ ಎರಡೂ ದೇಶಗಳ ನಡುವಿನ ಉದ್ವಿಗ್ನತೆ ಈಗ ಯುದ್ಧದ ಭೀತಿಯನ್ನು ಸೃಷ್ಟಿಸಿದೆ.

ಇದರ ಬೆನ್ನಲ್ಲೇ ಕೇಂದ್ರ ಗೃಹಸಚಿವಾಲಯವು ಮೇ 7ರಂದು ‘ಬ್ಲಾಕ್‌ಔಟ್‌’ ಅಣಕು ಕಾರ್ಯಾಚರಣೆ ನಡೆಸಲು ಸೂಚಿಸಿದೆ. ರಾಜ್ಯದ ಬೆಂಗಳೂರು, ರಾಯಚೂರು ಮತ್ತು ಉತ್ತರ ಕನ್ನಡ ಜಿಲ್ಲೆಗಳನ್ನು ಒಳಗೊಂಡು ದೇಶದ 244 ಜಿಲ್ಲೆಗಳಲ್ಲಿ ನಡೆಯಲಿದೆ. ಇದರಲ್ಲಿ ವಾಯುದಾಳಿಯ ಸೈರನ್‌ ಮೊಳಗಲಿದೆ. ಸುರಕ್ಷಿತ ಸ್ಥಳಗಳಿಗೆ ಜನರ ಸ್ಥಳಾಂತರ ಮತ್ತು ಯುದ್ಧ ಹಾಗೂ ಇತರ ತುರ್ತು ಸಂದರ್ಭಗಳಿಗೆ ಜನರನ್ನು ಸಜ್ಜುಗೊಳಿಸುವ ತರಬೇತಿ ಕಾರ್ಯಾಗಾರವೂ ಆಗಿರಲಿದೆ.

ನಾಗರಿಕ ಯುದ್ಧ ನಿಯಮ 1968ರ ಅಡಿಯಲ್ಲಿ ಈ ಅಣಕು ಕಾರ್ಯಾಚರಣೆ ನಡೆಸಲಾಗುತ್ತಿದೆ. ಸದ್ಯ ಉಂಟಾಗಿರುವ ಉದ್ವಿಗ್ನತೆಗೂ ಮತ್ತು ಅಣಕು ಕಾರ್ಯಾಚರಣೆಗೂ ಸಂಬಂಧವಿಲ್ಲ. ಆದರೆ ಯಾವುದೇ ಕಠಿಣ ಪರಿಸ್ಥಿತಿಯಲ್ಲಿ ನಾಗರಿಕರನ್ನು ರಕ್ಷಣೆ ಮಾಡಲು ಅವರನ್ನು ಸಜ್ಜುಗೊಳಿಸಲು ಈ ಕಾರ್ಯಾಚರಣೆ ನಡೆಸಲಾಗುತ್ತಿದೆ.

ಯುದ್ಧ, ಕ್ಷಿಪಣಿ ದಾಳಿ ಅಥವಾ ವಾಯು ದಾಳಿಯ ಸಂದರ್ಭದಲ್ಲಿ ನಾಗರಿಕ ರಕ್ಷಣೆಯಲ್ಲಿ ಸರ್ಕಾರಿ ಯಂತ್ರ ಮತ್ತು ನಾಗರಿಕರನ್ನು ಸಜ್ಜುಗೊಳಿಸುವ ಪರೀಕ್ಷಾರ್ಥ ಪ್ರಯೋಗ. ಇದರಲ್ಲಿ ಯುದ್ಧದ ನೈಜ ಸನ್ನಿವೇಶವನ್ನೇ ಸೃಷ್ಟಿಸಲಾಗುತ್ತದೆ.

ವಾಯು ದಾಳಿಯ ಸೈರನ್‌ 244 ನಗರಗಳಲ್ಲಿ ಮೊಳಗಲಿದೆ. ತಕ್ಷಣ ವಿದ್ಯುತ್ ಕಡಿತ ಮಾಡಲಾಗುತ್ತದೆ. ನಾಗರಿಕರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸುವ ಪ್ರಕ್ರಿಯೆ ಮತ್ತು ವಿಪತ್ತು ನಿರ್ವಹಣಾ ತಂಡಗಳು ನೈಜ ಪರಿಸರದಂತೆಯೇ ಕಾರ್ಯಾಚರಣೆ ನಡೆಸಲಿವೆ. ಇದರಿಂದ ಭವಿಷ್ಯದಲ್ಲಿ ಎದುರಾಗಬಹುದಾದ ಅಪಾಯದ ಗಾಬರಿ ತಗ್ಗಿಸುವುದು, ಗೊಂದಲ ನಿವಾರಿಸುವುದು ಮತ್ತು ಜೀವಗಳನ್ನು ರಕ್ಷಿಸುವ ನಿಟ್ಟಿನಲ್ಲಿ ನಡೆಸಲಾಗುತ್ತಿರುವ ಜಾಗೃತಿ ಕಾರ್ಯಾಗಾರ ಮತ್ತು ಸಿದ್ಧತೆಯಾಗಿದೆ.

Leave a Reply