ನಿನ್ನೆ ದೆಹಲಿಯ ಇಂದ್ರಪ್ರಸ್ಥ ಬಡಾವಣೆಯ ರಸ್ತೆಯೊಂದರಲ್ಲಿ ಮಧ್ಯಾಹ್ಮ ಪ್ರಾರ್ಥನೆ ಸಲ್ಲಿಸುತ್ತಿದ್ದ ಮುಸ್ಲಿಂರನ್ನು ಸ್ಥಳೀಯ ಪೊಲೀಸ್ ಅಧಿಕಾರಿಯೊಬ್ಬ ಬೂಟುಗಾಲಿನಿಂದ ಒದ್ದು ಎಬ್ಬಿಸಿದ ಪ್ರಕರಣ ದೇಶಾದ್ಯಂತ ಸುದ್ದಿಯಾಯಿತು. ಈ ರೀತಿಯ ಧಾರ್ಮಿಕ ಕ್ರಿಯೆ ಕಾನೂನು ಬಾಹಿರ ಚಟುವಟಿಕೆಯಾಗಿದ್ದರೂ ಸಹ ಪೊಲೀಸ್ ಸಿಬ್ಬಂದಿ ಈ ರೀತಿ ಅಮಾನುಷವಾಗಿ ನಡೆದುಕೊಳ್ಳಬೇಕಿರಲಿಲ್ಲ. ಈ ಘಟನೆ ಖಂಡನೀಯವಾದುದು.
ಆದರೆ, ಈ ಸುದ್ದಿಯನ್ನು ತಾವೇ ಸ್ವತಃ ತಿಕದ ಮೇಲೆ ಒದ್ದಿಸಿಕೊಂಡಂತೆ ಸುದ್ದಿ ಪ್ರಕಟಿಸಿ ಲಬೋ ಲಭೋ ಎಂದು ಬಡಿದುಕೊಂಡು ವಾರ್ತಾಭಾರತಿ ಪತ್ರಿಕೆಯ ಗೋಳು ಮಾತ್ರ ಅತ್ಯಂತ ಶೋಚನೀಯವಾಗಿತ್ತು. ಇಂತಹ ಘಟನೆಗಳ ಕುರಿತು ವರದಿ ಮಾಡಿದರೆ ಮಾತ್ರ ಜವಾಬ್ದಾರಿ ಮುಗಿದು ಹೋಗುವುದಿಲ್ಲ. ಈ ಇಪ್ಪತ್ತೊಂದನೆಯ ಶತಮಾನದಲ್ಲಿಯೂ ಕೂಡ ಮುಸ್ಲಿಂ ಸಮುದಾಯ ಇನ್ನೂ ಏಕೆ ಧಾರ್ಮಿಕ ಕೆಸರಿನಲ್ಲಿ ಹೂತು ಹೋಗಿದೆ ಎಂಬುದನ್ನು ಆತ್ಮವಿಮರ್ಶೆ ಮಾಡಿಕೊಳ್ಳಬೇಕಿದೆ.
ಕಳೆದ ನಲವತ್ತು ವರ್ಷಗಳಿಂದ ಹಿಂದೂ ಧರ್ಮದ ಮೂಲಭೂತವಾದಿಗಳು ಎದ್ದು ನಿಲ್ಲಲು ಕಾರಣವಾಗಿರುವುದು ಇಸ್ಲಾಂ ಧರ್ಮದ ಇಂತಹ ಅನಿಷ್ಠ ಆಚರಣೆಗಳೇ ಹೊರತು ಬೇರೇನೂ ಅಲ್ಲ. ಎಲ್ಲೇ ಪ್ರಯಾಣಿಸುತ್ತಿರಲಿ, ರೈಲು ಅಥವಾ ವಿಮಾನ ಇಲ್ಲವೆ, ನಿಲ್ದಾಣದಲ್ಲಿರಲಿ, ಕರ್ತವ್ಯದಲ್ಲಿರಲಿ ದಿನಕ್ಕೆ ಐದು ಬಾರಿ ನಮಾಜು ಅಥವಾ ಪ್ರಾರ್ಥನೆ ಸಲ್ಲಿಸುತ್ತೀನಿ ಎನ್ನುವುದು ಹಿಂದೂ ಧರ್ಮದ ಮೌಢ್ಯ ಅಥವಾ ಕಂದಾಚಾರಕ್ಕೆ ಸಮನಾದುದು.
ನಾನು ಹಾಕಿರುವ ಈ ಚಿತ್ರವನ್ನು ಗಮನಿಸಿ. ರಸ್ತೆ ಟ್ರಾಫಿಕ್ ನಿಯಂತ್ರಿಸಬೇಕಾದ ಪೊಲೀಸ್ ಪೇದೆ ನಡುರಸ್ತೆಯಲ್ಲಿ ಬಟ್ಟೆ ಹಾಸಿ ನಮಾಜು ಮಾಡುತ್ತಿದ್ದಾನೆ. ಕರ್ತವ್ಯವನ್ನು ಬದಿಗೊತ್ತಿದ ಈತನ ನಡುವಳಿಕೆಯನ್ನು ಧಾರ್ಮಿಕ ಕ್ರಿಯೆ ಎಂದು ಬಣ್ಣಿಸಲು ಸಾಧ್ಯವೆ?

ಇದೇ ರೀತಿ ಬಸ್ ಚಾಲಕ, ವಿಮಾನದ ಪೈಲೆಟ್, ಅಥವಾ ರೈಲಿನ ಚಾಲಕರು ದಿಡೀರನೆ ಪ್ರಾರ್ಥನೆಗೆ ಕುಳಿತರೆ, ಜನರ ಪ್ರಾಣ ಇರಲಿ, ಧರ್ಮವೂ ಚಿಂದಿಯಾಗುತ್ತದೆ. ಆಯಾಕಾಲಘಟ್ಟದ ಪರಿಸ್ಥಿತಿಗೆ ತಕ್ಕಂತೆ ಬದಲಾಗದೆ ನಿಂತ ನೀರಿನಂತೆ ಕೊಳೆಯುತ್ತಿರುವ ಇಸ್ಲಾಂ ಧರ್ಮದ ಬಗ್ಗೆ ಏಕೆ ಇಷ್ಟೊಂದು ಅಸಹನೆ ಜಾಗತಿಕ ಮಟ್ಟದಲ್ಲಿ ಬೆಳೆಯುತ್ತಿದೆ ಎಂಬುದನ್ನು ಧರ್ಮವನ್ನು ಗುತ್ತಿಗೆ ಹಿಡಿದ ಮುಲ್ಲಾಗಳು, ಮೌಲ್ವಿಗಳು ಒಮ್ಮೆ ಆತ್ಮವಿಮರ್ಶೆ ಮಾಡಿಕೊಳ್ಳಬೇಕಿದೆ.

ಸಾಧ್ಯವಾದರೆ, ಮೆಕ್ಕಾ, ಮದೀನ ಎಂದು ಬಾಯಿ ಬಡಿದುಕೊಳ್ಳುವ ಇವರನ್ನ ಒಮ್ಮೆ ಅರಬ್ ರಾಷ್ಟ್ರಗಳಿಗೆ ಕರೆದೊಯ್ದು ದುಬೈ ಹಾಗೂ ಇತರೆ ನಗರಗಳಲ್ಲಿ ಹರಿಯುತ್ತಿರುವ ಮದ್ಯದ ಹೊಳೆ ಮತ್ತು ಹೈಟೆಕ್ ವೇಶ್ಯೆಯರ ಲೋಕವನ್ನು ಪರಿಚಯಿಸಬೇಕಿದೆ.

ಇದು 1985ರಲ್ಲಿ ನಾನು ಕಣ್ಣಾರೆ ಕಂಡ ಘಟನೆ. ಮಹಾರಾಷ್ಟ್ರದಲ್ಲಿ ವಿಶೇಷವಾಗಿ ಮುಂಬೈ ನಗರದಲ್ಲಿ ಬಾಳಾಸಾಹೇಬ್ ಠಾಕ್ರೆ ನೇತೃತ್ವದಲ್ಲಿ ಆಗತಾನೆ ಶಿವಸೇನೆ ಸಂಘಟನೆ ಅಸ್ತಿತ್ವಕ್ಕೆ ಬಂದಿತ್ತು. ಮುಂಬೈ ನಗರದ ಕೇಂದ್ರ ಸ್ಥಳವಾದ ವಿಕ್ಟೋರಿಯಾ ಟರ್ಮಿನಲ್ ರೈಲ್ವೆ ನಿಲ್ದಾಣದ ಬಲಭಾಗದಲ್ಲಿ ಕೇವಲ ಅರ್ಧ ಕಿಲೊಮೀಟರ್ ದೂರದಲ್ಲಿ ಬೆಂಡಿ ಬಜಾರ್ ಎಂಬ ಪ್ರಸಿದ್ಧ ಮಾರುಕಟ್ಟೆಯ ಸ್ಥಳವಿದೆ. ಅಲ್ಲಿನ ರಸ್ತೆಯ ಒಂದು ಬದಿಯಲ್ಲಿ ಮುಂಬೈ ಪೊಲೀಸ್ ಕಮೀಷನರ್ ಕಚೇರಿ ಇದ್ದರೆ, ಇನ್ನೊಂದು ಭಾಗದಲ್ಲಿ ಮಸೀದಿಯಿದೆ. ಪ್ರತಿ ಶುಕ್ರವಾರ ಮುಸ್ಲಿಂರು ಪ್ರಾರ್ಥನೆ ಸಲ್ಲಿಸುವ ಉದ್ದೇಶದಿಂದ ಮಧ್ಯಾಹ್ನ ಒಂದು ಗಂಟೆಯಿಂದ ಒಂದೂವರೆ ಗಂಟೆಯವರೆಗೆ ರಸ್ತೆಯನ್ನು ಬಂದ್ ಮಾಡಿ ಪ್ರಾರ್ಥನೆ ಸಲ್ಲಿಸಲು ಮುಂಬೈ ಪೊಲೀಸರು ಅವಕಾಶ ಮಾಡಿಕೊಟ್ಟಿದ್ದರು.

ಇದನ್ನು ನೆಪಮಾಡಿಕೊಂಡು ಬಾಳ್ ಠಾಕ್ರೆ, ಪ್ರತಿ ಶುಕ್ರವಾರ ಅದೇ ಸಮಯಕ್ಕೆ ಮಹಾಲಕ್ಷ್ಮಿ ಪೂಜೆ ಎಂಬ ಕಾರ್ಯಕ್ರಮ ಹಮ್ಮಿಕೊಂಡು, ಅಂದೇರಿ, ಮಲಬಾರ್ ಹಿಲ್, ಜುಹೂ ಬೀಚ್ ರಸ್ತೆಗಳಲ್ಲಿ ವಾಹನ ಸಂಚಾರಕ್ಕೆ ತಡೆಯೊಡ್ಡಿದ. ಅಂತಿಮವಾಗಿ ಪೊಲೀಸರು ಬೆಂಡಿ ಬಜಾರ್ ರಸ್ತೆಯಲ್ಲಿ ಮುಸ್ಲಿಂರು ಪ್ರಾರ್ಥನೆ ಸಲ್ಲಿಸುವುದನ್ನು ನಿಷೇಧಿಸಿದರು. ಈ ಘಟನೆಯು ಶಿವಸೇನೆ ಪ್ರವರ್ಧಮಾನಕ್ಕೆ ಬರಲು ಪರೋಕ್ಷವಾಗಿ ಕಾರಣವಾಯಿತು. ಇಂದಿನ ಹಿಂದೂ ಮೂಲಭೂತವಾದಿಗಳ ಬಗ್ಗೆ ನಾವು ಎಷ್ಟೇ ಕಠೋರವಾಗಿ ಮಾತನಾಡಿದರೂ ಸಹ ಅವರುಗಳ ಬೆಳವಣಿಗೆಯಲ್ಲಿ ಇಸ್ಲಾಂ ಧರ್ಮದ ಮೌಢ್ಯಗಳು ಸಹ ಕಾರಣಗಿವೆ ಎಂಬುದನ್ನು ಮರೆಯಬಾರದು.
ಧಾರ್ಮಿಕ ನಂಬಿಕೆ ಹೇಗೆ ವ್ಯಕ್ತಿಯೊಬ್ಬನ ಖಾಸಗಿ ಸಂಗತಿಯೋ, ಅದೇ ರೀತಿ ಧರ್ಮದ ವಿಧಿ ವಿದಾನಗಳು ಸಹ ನಾಲ್ಕು ಗೋಡೆಯ ಮಧ್ಯದಲ್ಲಿರಬೇಕು.
ಕೃಷಿ ಕೂಲಿಕಾರರಾಗಿರುವ ಮಂಡ್ಯ ಜಿಲ್ಲೆಯ ಮುಸ್ಲಿಂ ಜನರಿಗೆ ಹೆಗಲ ಮೇಲಿನ ಗುದ್ದಲಿ ಮತ್ತು ದುಡಿಮೆ ದೇವರಾಗಿದೆಯೇ ಹೊರತು, ಮಸೀದಿ ಅಥವಾ ನಮಾಜುಗಳಲ್ಲ. ಅವುಗಳಿಂದ ಹೊಟ್ಟೆ ತುಂಬುವುದಿಲ್ಲ ಎಂಬುದನ್ನು ಅರಿತಿದ್ದ ನನ್ನೂರಿನ ವಜೀರಣ್ಣ, ಜಲೀಲಣ್ಣ, ಮತ್ತು ಪೀರ್ ಸಾಬಣ್ಣ ಇವರನ್ನು ಬಾಲ್ಯದಿಂದಲೂ ನಾನು ನೋಡಿದ್ದೀನಿ. ಮೂಟೆ ಹೊರುವ ಸಾಬಣ್ಣ ಬೆನ್ನ ಮೇಲಿನ ಮೂಟೆ ಒಗೆದು ಅಥವಾ ಟಾಂಗಾ ನಡೆಸುವ ಸಾಬಣ್ಣ, ಜಟಕಾ ಗಾಡಿಯಿಂದ ಚೆಂಗನೆ ನೆಗೆದು ಐದು ಬಾರಿ ನಮಾಜು ಮಾಡಬೇಕು ಎಂದು ಹಠಕ್ಕೆ ಬಿದ್ದ ಸನ್ನಿವೇಶವನ್ನು ನಾನು ಎಂದಿಗೂ ನೋಡಿಲ್ಲ.
ಹಿಂದೂ ಧರ್ಮದ ಕಂದಾಚಾರಗಳ ಬಗ್ಗೆ ನಮಗೆ ಎಷ್ಟೇ ಸಿಟ್ಟಿದ್ದರೂ ಅವುಗಳನ್ನು ವಿರೋಧಿಸುವ ಸ್ವಾತಂತ್ರ್ಯವನ್ನು ಆ ಧರ್ಮವು ನಮಗೆ ನೀಡಿದೆ. ಕ್ರಿಸ್ತಪೂರ್ವದ ಚಾರ್ವಾಕನಿಂದ ಹಿಡಿದು, ಬುದ್ಧ ಮತ್ತು ಇಪ್ಪತ್ತನೇ ಶತಮಾನದ ಅಂಬೇಡ್ಕರ್ ನಮಗೆ ಸಾಕ್ಷಿಯಾಗಿದ್ದಾರೆ. ಅಂತಹ ಸ್ವಾತಂತ್ರ್ಯ ಇಸ್ಲಾಂ ಮತ್ತು ಕ್ರೈಸ್ತ ಧರ್ಮಗಳಲ್ಲಿ ಇಂದಿಗೂ ಇಲ್ಲವಾಗಿದೆ. ಮುಸ್ಲಿಂ ಸಮುದಾಯಕ್ಕೆ ಇಂದು ಬೇಕಾಗಿರುವುದು ಝಗಮಗಿಸುವ ಮಸೀದಿಗಳಲ್ಲ, ಆಧುನಿಕ ಸ್ವರ್ಧಾತ್ಮಕ ಜಗತ್ತಿಗೆ ಮಕ್ಕಳನ್ನು ತಯಾರು ಮಾಡುವ ಶಿಕ್ಷಣ ಕೇಂದ್ರಗಳು ಎಂಬುದನ್ನು ಮುಸ್ಲಿಂ ಸಮುದಾಯದ ಪ್ರಜ್ಞಾವಂತರು ಹೇಳಬೇಕಿದೆ. ವರ್ತಮಾನದ ದುರಂತವೆಂದರೆ, ಅವರುಗಳು ನನಗೆ ಗೋಚರಿಸುತ್ತಿಲ್ಲ.
ಕನ್ನಡ ಸಾಹಿತ್ಯದ ಅತ್ಯಂತ ಸಂವೇದನಾ ಶೀಲ ಹಾಗೂ ಪ್ರಜ್ಞಾವಂತ ನಂಬರ್ ಒನ್ ಲೇಖಕ ಎಂದು ನಾನು ಹೆಮ್ಮೆಯಿಂದ ಬಣ್ಣಿಸುತ್ತಿದ್ದ ಲೇಖಕಿ ಸಾರಾ ಅಬೂಕರ್ ನಿಧನದಿಂದ ಮುಸ್ಲಿಂ ಜಗತ್ತಿನ ವೈಚಾರಿಕತೆ ಬಡವಾಗಿದೆ. ಮನುಷ್ಯತ್ವವನ್ನು ಮೀರಿದ ಇನ್ನೊಂದು ಧರ್ಮವಿಲ್ಲ ಎಂದು ನಮ್ಮ ನೆಲದ ತತ್ವಪದಕಾರರು ಮತ್ತು ಸೂಫಿ ಸಂತರು ಹೇಳಿದ್ದಾರೆ. ಇದನ್ನು ನಾವು ಹಿಂದೂ ಸಮುದಾಯದಲ್ಲಿ ಗಟ್ಟಿಯಾಗಿ ಹೇಳುವ ಹಾಗೆ ಮುಸ್ಲಿಂ ಸಮುದಾಯದಲ್ಲಿ ಹೇಳುವ ಬರಹಗಾರರು ಬರಬೇಕಿದೆ.
– ಜಗದೀಶ್ ಕೊಪ್ಪ, ಹಿರಿಯ ಪತ್ರಕರ್ತರು




