ಮಾದಿಗ ಉಪಜಾತಿಗಳಿಗೆ ಸಮಾನ ಸಾಮಾಜಿಕ ಮನ್ನಣೆ ನೀಡುವವರಾರು?

2 years ago

ಮಾದಿಗ ಮತ್ತು ಅದರ ಉಪಜಾತಿಗಳ ಬಗ್ಗೆ ಚಿತ್ರದುರ್ಗ ಜಿಲ್ಲೆ ಮೊಳಕಾಲ್ಮೂರು ವ್ಯಕ್ತಿ ಒಂದು ಚರ್ಚೆ ಹುಟ್ಟುಹಾಕಿದ್ದಾರೆ. ಮೊದಲು ಮಾದಿಗ ಕನ್ನಡ ಪದವೇ ಎಂದು ಶೋಧನೆ ಆಗಲಿ. ಏಕೆಂದರೆ ಮಾದಿಗ ಪದ ಮೂಲತಃ ತೆಲುಗು ಮೂಲದ ಜಾಂಬವ ಪುರಾಣದಿಂದ ಬಂದಿದೆ. ಮಾದಿಗರು ಚರ್ಮಕಾರರು ಎಂದಾಗ ಅದರ ಮಾತೃ ಬೇರುಗಳು ದಕ್ಷಿಣ ಭಾರತದ ಅಂದರೆ ವಿಂಧ್ಯ ಪರ್ವತದ ಕೆಳಗಿನ ದಖನ್ ಪ್ರಸ್ಥಭೂಮಿಯ ಸುತ್ತಲೂ ಹೋರಾಡಿದ್ದಾರೆ. ಆವಾಗ ಇವರು ವಿವಿಧ ಭಾಷಿಕ ಸಮುದಾಯಗಳು ಎಂಬುದನ್ನು ಒಪ್ಪಬೇಕು.

ಆದಿ ಜಾಂಬವ ಪದವನ್ನು ಒಪ್ಪಿದವರು ಅದರ ಉಪಜಾತಿಗಳನ್ನು ಸಹ ಗೌರವಿಸಬೇಕು. 1956 ರಲ್ಲಿ ಭಾಷಾವಾರು ಪ್ರಾಂತ್ಯಗಳ ರಚನೆಯ ಸಂದರ್ಭದಲ್ಲಿ ಆಯಾ ಪ್ರದೇಶದಲ್ಲಿದ್ದ ಜಾತಿ ಮತ್ತು ಉಪ ಜಾತಿಗಳನ್ನು ಹಂಚಲಾಯಿತು. ಆವಾಗ ತೆಲಂಗಾಣದಿಂದ 32 ಜಾತಿಗಳು, ಬಾಂಬೆಯಿಂದ 24, ಮದ್ರಾಸ್ ಪ್ರೆಸಿಡೆನ್ಸಿ ಯಿಂದ 52 ಜಾತಿಗಳು, ಮೈಸೂರಿನ ರಾಜ್ಯದಿಂದ 15, ಕೊಳ್ಳೇಗಾಲ ರಿಂದ 2, ದಕ್ಷಿಣ ಕನ್ನಡ 04, ಕೊಡಗು 12 ಮತ್ತು ಉತ್ತರ ಕನ್ನಡ ಜಿಲ್ಲೆಯಿಂದ 01ಜಾತಿಗಳು, ಅಂತಿಮ ಕ್ರೋಢೀಕರಣ 101.

ಮಾದಿಗ ಎಂದಾಗ ಅದನ್ನು ವಿಶಾಲವಾದ ಸಾಮಾಜಿಕ ಭೂಮಿಕೆಯಲ್ಲಿ ನೋಡಿದಾಗ ಉಪ ಜಾತಿಗಳ ಮೂಲಕ ಮಾಡುವ ಕಿತಾಪತಿ ನಿಲ್ಲುತ್ತದೆ.

ಉದಾಹರಣೆಗೆ ಮರಾಠಿ ತ್ರಿಮತಸ್ಥ ಚರ್ಮಕಾರರು ಅಂದರೆ ಡೋಹಾರ, ಸಮಗಾರ ಮತ್ತು ಮೋಚಿ, ಮೋಡಿಗಾರ, ಸಮಗಾರ ಸಮುದಾಯ ಈ ಹಿಂದೆಯೂ ಮಾದಿಗ ಸಾಮೀಪ್ಯ ಹೊಂದಿದ್ದವು. ಅವುಗಳು ಮೇಲೆ ಬ್ರಾಹ್ಮಣ್ಯದ ಗುಪ್ತಗಾಮಿನಿ ಸಂಚಾರ ಆರಂಭವಾದ ಮೇಲೆ ಇಂದಿನ ಪೀಳಿಗೆಯು ಮಾದಿಗರಿಂದ ದೂರ ನಿಲ್ಲಲು ಸಜ್ಜಾಗಿದ್ದಾರೆ.

ಮಾಚಾಳ, ಮಾಸ್ತೀಕ, ಕೋಲ್ಲುಪುಲ್ಲವಾಂಡ್ಲು, ದಕ್ಕಲಿಗ, ಬಿಂಡ್ಲಾ, ಮಾಂಗ್ ಗರೋಡಿ, ಅಸಾದಿ, ಬೇಡ (ಬುಡ್ಗ)ಜಂಗಮ ಆಂಧ್ರ ಪ್ರದೇಶದ ಸಾಮಾಜಿಕ ಚೌಕಟ್ಟಿನಲ್ಲಿ ಮಾದಿಗರು ಅಂದ ಮೇಲೆ ಕರ್ನಾಟಕ ರಾಜ್ಯದಲ್ಲಿ ಅವರು ಮಾಲ ಆಗಲು ಸಾಧ್ಯವಿಲ್ಲ.

ಆಯಿತು, ಮೊಳಕಾಲ್ಮೂರು ವ್ಯಕ್ತಿ ಪ್ರಕಾರ ಮಧ್ಯ ಕರ್ನಾಟಕ ಮಾದಿಗರೆ ಶ್ರೇಷ್ಠ, ಅದರ ಉಪ ಜಾತಿಗಳು ಕನಿಷ್ಠ ಅಂದಾಗ ಇವರು ಬಹು ಸಂಖ್ಯಾತ ಸಮುದಾಯದ ಗುಣಲಕ್ಷಣಗಳನ್ನು ಕಳೆದುಕೊಂಡು ಒಂದು ಸಣ್ಣ ಸಮುದಾಯ ಆಗುತ್ತದೆ.

ಈ ಹಿಂದೆ ರಾಯಚೂರು ಜನರು ಅಂಬಣ್ಣ ಅರೋಲಿಕರ್ ಅವರು ಮೂಲತಃ ಮಾದಿಗ ಅಲ್ಲವೆಂದಾಗ ಅದಕ್ಕೆ ಉತ್ತರ ನೀಡಲಾಗಿದೆ. ಹಾಗೆಯೇ ಮಾಸ್ತೀಕ ಅರ್ಥಾತ್ ಮಾಚಾಳರು ಮಾದಿಗರಲ್ಲ ಎಂದರೆ ಸಿಗುವ ಸಾಮಾಜಿಕ ಲಾಭವೇನು?

ಉದಾಹಣೆಗೆ 1956ರಲ್ಲಿ ಮಾದಿಗ ದಾಸರು ಇಲ್ಲಿಗೆ ಸೇರ್ಪಡೆ ಆಗಿಲ್ಲ. ಆದರೆ ಅವರೆಲ್ಲರೂ ಹೈದರಾಬಾದ್ ಕರ್ನಾಟಕದ ಜಿಲ್ಲೆಗಳಲ್ಲಿ ಪ್ರಮುಖವಾಗಿ ಮಾದಿಗ ಶ್ರೀವೈಷ್ಣವ ಕುಟುಂಬಗಳಿಗೆ ತಿರುಮಲಧಾರಿಗಳಾಗಿದ್ದಾರೆ. ಅವರು 75 ವರ್ಷಗಳಿಂದ ಒಂದು ಸಾಮಾಜಿಕ ಗುರುತುಗಳಿಲ್ಲದೆ ಹೋಗಿದ್ದಾರೆ. ಅವರನ್ನು ಸರ್ಕಾರ ಮಾನ್ಯ ಮಾಡಿದರೆ ಮೊಳಕಾಲ್ಮೂರು ವ್ಯಕ್ತಿ ಅಂತಹ ಜನರು ಮಾದಿಗ ದಾಸರನ್ನು ಮಾದಿಗ ಉಪ ಜಾತಿ ಅಲ್ಲ ಎಂದರೆ ಇತರರು ಇದನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಚುನಾವಣೆ ಸಂದರ್ಭದಲ್ಲಿ ಒಂದು ಉಪ ಜಾತಿ ಇದು ನಮ್ಮದಲ್ಲ, ಅವರು ಕೀಳು ನಾವು ಮೇಲು ಎಂಬ ಮೂರ್ಖತನದ ಪರಮಾವಧಿಗಳನ್ನು ಪ್ರದರ್ಶನ ಮಾಡಿದರೆ ಮಾದಿಗರು ಅಸ್ಥಿತ್ವಕ್ಕೆ ಧಕ್ಕೆ ಬರಬಹುದೆಂದು ಯೋಚನೆ ಮಾಡುವವರಿಗೆ ಸಾಮಾಜಿಕ ವಿವೇಕ ಕಡಿಮೆಯಾಗಿದೆ.

ಅರುಂಧತಿಯಾರ್, ಚಕ್ಕಲಿಯನ್, ಮಾದಾರಿಗಳು ಹೇಗೆ ಮಾದಿಗರು ಉಪಜಾತಿಗಳೊ ಹಾಗೆಯೇ ಮಾಚಾಳರು ಮಾಸ್ತಿಕರೂ ಮಾದಿಗ ಕುಲವೇ ಆಗಿದೆ.

ದಕ್ಕಲಿಗರನ್ನು ದೂರವಿಟ್ಟು ಅವರನ್ನು ಒಂದಾಗಿಸುವ ಕಸರತ್ತು ಮಾದಿಗ ಮನೋಧರ್ಮವನ್ನು ಕೆಣಕಿಲ್ಲ. ಜಗ್ಗಲಿ ಎಂಬ ಸಣ್ಣ ಮಾದಿಗ ಉಪ ಜಾತಿಯ ಕಥೆಯೂ ಇದೆ. ಅದು ಒಡಿಸ್ಸಾದಿಂದ ಬಂದಿರುವ ಈ ಸಮುದಾಯವನ್ನು ದೂರಮಾಡಿದರೆ ನಷ್ಟ ಯಾರಿಗೆ?

“ಮಾದಿಗ ಕೂಡದೆ ಕೆಟ್ಟ ದೊಂಬ ಅಗಲಿ ಕೆಟ್ಟ” ಎಂಬ ಗಾದೆಯನ್ನು ಅರ್ಥೈಸಿಕೊಂಡು ಮಾದಿಗ ಸಮುದಾಯ ಕೂಡದೆ ಕೆಟ್ಟಿರುವುದೆ ಅಧಿಕ. ಒಳ ಮೀಸಲಾತಿ ಹೋರಾಟದ ಫಲ ಶೃತಿ ಎಂಬಂತೆ ಅನೇಕ ಪರಿಶಿಷ್ಟ ಜಾತಿ ಮತ್ತು ಇತರೆ ಹಿಂದುಳಿದ ವರ್ಗಗಳು ಒಂದಾಗಿ ಮಾದಿಗರು ಅಸ್ತಿತ್ವಕ್ಕೆ ಎಳ್ಳು ಜೀರಿಗೆ ಬಿಡುತ್ತಿದ್ದಾರೆ. ಅಂತಹ ಸಂದರ್ಭದಲ್ಲಿ ಕಿಲುಬು ಕಾಸಿಗೂ ಬೆಲೆ ಇಲ್ಲದ ಮಾಸ್ತೀಕ ಚರ್ಚೆ ಒಂದು ಹಾಸ್ಯಾಸ್ಪದ ಮಂಡನೆ ಎಂದು ನಾನಾದರೂ ಪರಿಭಾವಿಸುವೆ.

  • ದಾಸನೂರು ಕೂಸಣ್ಣ, ಸಮುದಾಯ ಚಿಂತಕರು

Leave a Reply