ಈಗ ನಡೆಯುತ್ತಿರುವ ಕರ್ನಾಟಕದ ವಿಧಾನ ಸಭಾ ಚುನಾವಣೆ ಕೇವಲ ರಾಜಕೀಯ ಪಕ್ಷಗಳ ಮತ್ತು ಅವುಗಳ ಅಭ್ಯರ್ಥಿಗಳ ಭವಿಷ್ಯದ ಪ್ರಶ್ನೆ ಮಾತ್ರವಲ್ಲ. ಇದು ಕರ್ನಾಟಕದ ಸೌಹಾರ್ಧತೆಯ ಮತ್ತು ನೆಮ್ಮದಿಯ ಬದುಕಿನ ಪ್ರಶ್ನೆಯ ಜೊತೆಗೆ ಇಲ್ಲಿನ ಪ್ರತಿಯೊಬ್ಬ ಪ್ರಜೆಯ ಭವಿಷ್ಯದ ಪ್ರಶ್ನೆಯಾಗಿ ಮಾರ್ಪಟ್ಟಿದೆ.
ಸ್ವಾತಂತ್ರ್ಯಾನಂತರದ ಕರ್ನಾಟಕದಲ್ಲಿ ಜನತೆ ಈಗ ಅತ್ಯಂತ ಕೆಟ್ಟ ಹಾಗೂ ಕಡು ಭ್ರಷ್ಟ ಸರ್ಕಾರವನ್ನು ನೋಡುತ್ತಿದೆ. ಇಂತಹ ವ್ಯವಸ್ಥೆಯನ್ನು ಬೇರು ಸಮೇತ ಕಿತ್ತೊಗೆಯಲು ನಮಗಿರುವ ಏಕೈಕ ಅಸ್ತ್ರವೆಂದರೆ ಅದು ಮತದಾನ ಮಾತ್ರ. ಈ ಸುವರ್ಣ ಅವಕಾಶವನ್ನು ಪ್ರತಿಯೊಬ್ಬ ಮತದಾನೂ ಬಳಸಿಕೊಳ್ಳುವುದರ ಜೊತೆಗೆ ಇತರರಿಗೆ ಪ್ರೇರಣೆಯಾಗಬೇಕಿದೆ.
ನಲವತ್ತು ವರ್ಷಗಳ ಹಿಂದೆ 1983 ರಲ್ಲಿ ಅಂದಿನ ಕರ್ನಾಟಕದ ಜನರು ಮತದಾನ ಎಂಬ ಅಸ್ತ್ರದ ಮೂಲಕ ಆರ್.ಗುಂಡೂರಾವ್ ನೇತೃತ್ವದ ಕಾಂಗ್ರೇಸ್ ಸರ್ಕಾರವನ್ನು ಕರ್ನಾಟಕದ ಇತಿಹಾಸದಲ್ಲಿ ಪ್ರಥಮ ಬಾರಿಗೆ ಕಿತ್ತು ಕಸದ ಬುಟ್ಟಿಗೆ ಎಸೆದಿದ್ದರು. ಅಂದಿನ ಬೆಳವಣಿಗೆಯಲ್ಲಿ ಇಂದಿನ ಹಾಗೆ ಮಾಹಿತಿ ತಂತ್ರಜ್ಞಾನವಿರಲಿಲ್ಲ, ನಮ್ಮ ಬೆರಳ ತುದಿಯಲ್ಲಿ ಮಾಹಿತಿಯ ಕೋಶವಿರಲಿಲ್ಲ. ಮೊಬೈಲ್, ಅಂತರ್ಜಾಲ, ದೃಶ್ಯ ಮಾಧ್ಯಮಗಳ ಪ್ರಭಾವ ಇರಲಿಲ್ಲ.ಜನತೆಯ ಬಳಿ ಬಡತನವಿತ್ತು, ಅನಕ್ಷರತೆ ಇತ್ತು, ಮುಗ್ದತನ ಬೇರೂರಿತ್ತು. ಆದರೆ, ಕಣ್ಣೆದುರು ನಡೆಯುವ ಅಟ್ಟಹಾಸ ಮತ್ತು ದುರಹಂಕಾರದ ನಡೆಗಳನ್ನು ಯಾವುದೇ ಜಾತಿ, ಧರ್ಮದ ಹಂಗಿಲ್ಲದೆ ನೆಲಕ್ಕೆ ಹಾಕಿ ಹೊಸಕುವ ಸಾಮರ್ಥ್ಯವಿತ್ತು.
ಅವರಿಗೆ ಮಾರ್ಗದರ್ಶಕರಾಗಿ ಪ್ರೊ.ಎಂ.ನಂಜುಂಡಸ್ವಾಮಿ, ಪಿ.ಲಂಕೇಶ್, ಕೆ.ರಾಮದಾಸ್, ತೇಜಸ್ವಿ, ಹೆಚ್,ಎಲ್.ಕೇಶವಮೂರ್ತಿ ಅವರಂತಹ ನಡೆದಾಡುವ ಸುಡುವ ಕೆಂಡದಂತಹ ವ್ಯಕ್ತಿಗಳಿದ್ದರು. ಇವರುಗಳು ಸರ್ಕಾರದಲ್ಲಿನ ಸ್ಥಾನಮಾನ ಅಥವಾ ಪ್ರಶಸ್ತಿಗಳಿಗಾಗಿ ಹಾತೊರೆದವರಲ್ಲ. ಈ ನೆಲದ ಜನತೆಯ ಅಪಮಾನವನ್ನು ಮತ್ತು ನೋವಿನ ಬದುಕನ್ನು ತಮ್ಮ ವೈಯಕ್ತಿಕ ನೋವೆಂದು ಭಾವಿಸಿ ವ್ಯವಸ್ಥೆಯ ವಿರುದ್ಧ ಸಿಡಿದೆದ್ದಿದ್ದರು.
ಗುಂಡೂರಾವ್ ಸರ್ಕಾರವು ಪ್ರತಿಭಟನೆ ನಡೆಸುತ್ತಿದ್ದ ನವಲುಗುಂದ ಮತ್ತು ನರಗುಂದ ರೈತರ ಮೇಲೆ ಗುಂಡಿನ ಸುರಿಮಳೆಗೈದು ಒಂಬತ್ತಕ್ಕೂ ಹೆಚ್ಚು ರೈತರ ಸಾವಿಗೆ ಕಾರಣವಾದ ನಂತರ ಕನ್ನಡ ನೆಲದ ರೈತರು ಮತ್ತು ಕೃಷಿ ಕೂಲಿ ಕಾರ್ಮಿಕರ ಇದೆಯೊಳಗೆ ಇದ್ದ ಆಕ್ರೋಶವು 1983 ರ ಚುನಾವಣೆಯಲ್ಲಿ ಅಗ್ನಿಸ್ಪೋಟದಂತೆ ಭುಗಿಲೆದ್ದು ಜ್ವಾಲಾಮುಖಿಯಾಗಿ ಹರಿಯಿತು.
ಈ ಸಂದರ್ಭದಲ್ಲಿ ಅಂದರೆ, ನನಗೆ ನೆನಪಿರುವ ಹಾಗೆ 1981 ರಲ್ಲಿ ಲಂಕೇಶರು ಸ್ಥಾಪಿಸಿದ ಲಂಕೇಶ್ ಪತ್ರಿಕೆ ಕನ್ನಡ ಜನಸಾಮಾನ್ಯರ ಧ್ವನಿಯಾಗಿ ಸರ್ಕಾರದ ಬದಲಾವಣೆಗೆ ಪ್ರಮುಖ ಕಾರಣವಾಯಿತು. ಲಂಕೇಶರು ಆ ಸಂದರ್ಭದಲ್ಲಿ ಬರೆಯುತ್ತಿದ್ದ ಸಂಪಾದಕೀಯ ಮತ್ತು ಟೀಕೆ ಟಿಪ್ಪಣಿಗಳು ಆಗತಾನೆ ಬರಹ ಮತ್ತು ಪತ್ರಿಕೋದ್ಯಮಕ್ಕೆ ತೆರೆದುಕೊಂಡ ನನ್ನ ತಲೆಮಾರಿಗೆ ದಾರಿ ದೀಪವಾಗುವುದರ ಜೊತೆಗೆ ಇಡೀ ಕರ್ನಾಟಕದಲ್ಲಿ ಪ್ರಜ್ಞಾವಂತ ಯುವ ಸಮೂಹವನ್ನು ಹುಟ್ಟು ಹಾಕಿತು.
ಇಂದಿನ ಅಂದರೆ, 2023 ರ ಚುನಾವಣೆಯಲ್ಲಿ ಕರ್ನಾಟಕದ ಜನತೆ ಅದೇ 1983 ರ ಸ್ಥಿಯಲ್ಲಿ ನಿಂತಿದ್ದಾರೆ. ಅಂದು ಕಾಂಗ್ರೇಸ್ ಸರ್ಕಾರವನ್ನು ಕಿತ್ತು ಬಿಸಾಕಿದಂತೆ ಇಂದಿನ ಬಿ.ಜೆ.ಪಿ. ಸರ್ಕಾರವನ್ನು ಕಸ ಗುಡಿಸಿ ಬಿಸಾಕಿದಂತೆ ಹೊರಗೆ ಬಿಸಾಡಬೇಕಿದೆ. ಇಂದಿನ ಅತ್ಯಾಧುನಿಕ ತಂತ್ರಜ್ಞಾನಗಳ ನಡುವೆ ಸರ್ಕಾರದ ಭ್ರಷ್ಟಾಚಾರ, ಜನಪ್ರತಿನಿಧಿಗಳ ಅನೈತಿಕ ಚಟುವಟಿಕೆಗಳು ನಮ್ಮ ಬೆರಳು ತುದಿಯಲ್ಲಿ ಇರುವುದರಿಂದ ಇಲ್ಲಿನ ಪ್ರತಿಯೊಬ್ಬ ಪ್ರಜ್ಞಾವಂತ ಮತದಾರನೂ ನಾಲ್ಕು ಮಂದಿ ಇತರಿಗೆ ಈ ವಿಷಯದಲ್ಲಿ ಪ್ರಜ್ಞೆ ಮೂಡಿಸಬೇಕಿದೆ. ಏಕೆಂದರೆ, ಈಗ ನಮ್ಮ ನಡುವೆ ಲಂಕೇಶರಿಲ್ಲ, ತೇಜಸ್ವಿಯೂ ಇಲ್ಲ. ಈಗ ಏನಿದ್ದರೂ ಪತ್ರಕರ್ತ ಅಥವಾ ಬರಹಗಾರ ಎಂಬ ಮುಖವಾಡ ಹೊತ್ತು ಆಯ್ದ ರಾಜಕೀಯ ಪಕ್ಷಗಳು ಮತ್ತು ರಾಜಕಾರಣಿಗಳ ಪರವಾಗಿ ತುತ್ತೂರಿ ಊದುವ ನನ್ನಂತಹವರು ಇದ್ದಾರೆ.
ಇಂತಹವರಿಗಿಂತ ಭಿನ್ನವಾಗಿ ಯಾವುದೇ ಧರ್ಮದ ಅಥವಾ ಜಾತಿ ಮತ್ತು ಪ್ರಾದೇಶಿಕತೆಯ ಹಂಗಿಲ್ಲದೆ, ರಾಗದ್ವೇಷವಿಲ್ಲದೆ ನಾಡಿನ ಜ್ವಲಂತ ಸಮಸ್ಯೆಗಳನ್ನು ಜನತೆಗೆ ಬಿಡಿಸಿ ಹೇಳುವ ಲಂಕೇಶ್ ರವರ ಉತ್ತರಾಧಿಕಾರಿಗಳು ಈಗ ಬೇಕಾಗಿದ್ದಾರೆ.
ಲಂಕೇಶರಿಗೆ ಎಲ್ಲರಿಗೂ ಇರುವಂತೆ ಅನೇಕ ವೈಯಕ್ತಿ ದೌರ್ಬಲ್ಯಗಳು ಇದ್ದವು ನಿಜ. ಮುಂಗೋಪ,ಸಿಟ್ಟು ತಮ್ಮ ಸಮಕಾಲೀನ ಬರಹಗಾರರ ಪ್ರತಿಭೆ ಕುರಿತಂತೆ ಅಸೂಯೆ ಇದ್ದವು. ಆದರೆ, ತಾವು ಬದುಕುತ್ತಿದ್ದ ವರ್ತಮಾನದ ಸಮಾಜದ ಬಗ್ಗೆ ಮತ್ತು ಬಡ ರೈತ, ಕೂಲಿಕಾರ್ಮಿಕರು, ಅಸಹಾಯಕ ಹೆಣ್ಣು ಮಕ್ಕಳು, ಹಿಂದುಳಿದ ವರ್ಗದ ಧ್ವನಿ ಇಲ್ಲದವರ ಬಗ್ಗೆ ಅವರಿಗಿದ್ದ ಕಾಳಜಿಯ ಮುಂದೆ ಉಳಿದ ಎಲ್ಲವೂ ಗೌಣವಾಗುತ್ತಿದ್ದವು. ಈ ಕಾರಣದಿಂದಲೇ ಉಸಿರಾಟದ ತೊಂದರೆಯ ನಡುವೆಯೂ ಕೃತಕ ಉಸಿರಾಟದ ಯಂತ್ರದ ಜೊತೆ ಗಿರೀಶ್ ಕಾರ್ನಾಡ್, ಕಿಡ್ನಿ ತೊಂದರೆಯ ನಡುವೆಯೂ ಮೂತ್ರ ಶೇಖರಣೆಯ ಬಾಟಲ್ ಅನ್ನು ತೊಡೆಗೆ ಕಟ್ಟಿಕೊಂಡು ಪ್ರತಿಭಟನೆಗೆ ಬರುತ್ತಿದ್ದ ಯು.ಆರ್.ಅನಂತಮೂರ್ತಿ ಮತ್ತು ಅನಾರೋಗ್ಯದ ನಡುವೆಯೂ ಜಿ.ಕೆ.ಗೋವಿಂದರಾವ್ ಹೀಗ ಅನೇಕ ಮಹನೀಯರು ಇಲ್ಲಿನ ಸಮಾಜಕ್ಕೆ. ಶಾಂತಿ ಸೌಹಾರ್ಧತೆ ಧಕ್ಕೆಯಾದಾಗ ಬೆಂಗಳೂರಿನ ಪುಟ್ಟಣ್ಣಚೆಟ್ಟಿ ಪುರಭವನದ ಮೆಟ್ಟಿಲುಗಳ ಮೇಲೆ ಉರಿಬಿಸಿಲಿನಲ್ಲಿ ಧರಣಿ ಕೂರುತ್ತಿದ್ದರು. ಈ ಕಾರಣದಿಂದಾಗಿ ಪ್ರೊಫೆಸರ್ ನಂಜುಂಡಸ್ವಾಮಿ ಒಳಗೊಂಡಂತೆ ಲಂಕೇಶ್, ತೇಜಸ್ವಿ, ಅನಂತಮೂರ್ತಿ ಮಾತನಾಡಿದರೆ ಸರ್ಕಾರ ಮಾತ್ರವಲ್ಲ ಇಡೀ ನಾಡು ಅವರತ್ತ ತಿರುಗಿ ನೋಡುತ್ತಿತ್ತು.
ಇಂದಿನ ಕರ್ನಾಟಕದ ರಾಜಕೀಯ, ಸಾಮಾಜಿಕ, ಸಾಹಿತ್ಯ ಮತ್ತು ಸಾಂಸ್ಕೃತಿಕ ವಲಯಗಳು ತೀರಾ ಹೊಲಸೆದ್ದು ಹೋಗಿವೆ. ಮಾತನಾಡಬೇಕಾದ ಕನ್ನಡ ವಿದ್ವಾಂಸರೆಂಬ ವಿದೂಷಕರು ಮೌನದ ಮುಸುಕು ಹೊದ್ದು ಮಲಗಿದ್ದಾರೆ. ಎರಡು ತಿಂಗಳ ಹಿಂದೆ ರಾಜ್ಯ ಸರ್ಕಾರ ಪಂಪ ಪ್ರಶಸ್ತಿ ಘೋಷಿಸಿದಾಗ ಸರ್ಕಾರದ ಅವಿವೇಕದ ನಡುವಳಿಕೆ ಕುರಿತಾಗಿ ಓರ್ವ ವಿದೂ ವಿದೂಷಕನೂ ತುಟಿ ಬಿಚ್ಚಲಿಲ್ಲ. ಸಿ.ಪಿ. ಕೃಷ್ಣಕುಮಾರ್ ಹೊರತು ಪಡಿಸಿದರೆ ಉಳಿದ ಇಬ್ಬರು ಆರ್.ಎಸ್.ಎಸ್. ಆಲೋಚನೆಯ ಪ್ರತಿಪಾದಕರಿಗೆ ಪ್ರಶಸ್ತಿ ಘೋಷಿಸಿದಾಗ ಬಾಬು ಕೃಷ್ಣಮೂರ್ತಿ ಎಂಬುವರು ಒಂದೆರೆಡು ಕಾದಂಬರಿ ಹೊರತು ಪಡಿಸಿದರೆ, ಮಂಗಳಾ ವಾರಪತ್ರಿಕೆ ಸಂಪಾದಕನಾಗಿ ಕಾರ್ಯ ನಿರ್ವಹಿಸಿದರೆ, ನಾವ್ಯಾರೂ ಹೆಸರು ಕೇಳಿರದ ಉತ್ಥಾನ ಮಾಸ ಪತ್ರಿಕೆಯ ಸಂಪಾದಕ ಎಸ್.ಆರ್. ರಾಮಸ್ವಾಮಿ ಎಂಬುವರಿಗೆ ಪಂಪ ಪ್ರಶಸ್ತಿ ನೀಡಲಾಯಿತು. ಕನ್ನಡ ಸಾಹಿತ್ಯಕ್ಕೆ ಅವರುಗಳ ಕೊಡುಗೆ ಏನು? ಎಂದು ಕೇಳಲಾರದ ಸ್ಥಿತಿಗೆ ಕರ್ನಾಟಕ ಸಾಂಸ್ಕೃತಿಕ ವಲಯ ನಿಷ್ಕ್ರಿಯೆಗೊಂಡಿರುವಾಗ ನನಗೆ ತಕ್ಷಣ ನೆನಪಾಗುವರು ಪಿ.ಲಂಕೇಶ್ ಮಾತ್ರ.
1983 ರ ಚುನಾವಣೆಯಲ್ಲಿ 221 ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದ ಕಾಂಗ್ರೇಸ್ 82 ಸ್ಥಾನಗಳನ್ನು ಮಾತ್ರ ಪಡೆಯಿತು. 195 ಸ್ಥಾನಗಳಲ್ಲಿ ಸ್ಪರ್ಧೆ ಮಾಡಿದ್ದ ಜನತಾ ಪಕ್ಷ 95 ಸ್ಥಾನಗಳನ್ನು ಗಳಿಸಿದರೆ, 110 ಸ್ಥಾನಗಳಿಗೆ ಸ್ಪರ್ಧೆ ಮಾಡಿದ್ದ ಬಿ.ಜೆ.ಪಿ. 18 ಸ್ಥಾನಗಳು ಮತ್ತು ಎಡಪಕ್ಷಗಳು ( ಸಿಪಿ.ಐ, ಮತ್ತು ಸಿ.ಪಿ.ಎಂ) ಆರು ಅಥವಾ ಏಳು ಸ್ಥಾನಗಳು, ಪಕ್ಷೇತರರು 22 ಸ್ಥಾನಗಳನ್ನುಗೆದ್ದಿದ್ದರು.
ರಾಮಕೃಷ್ಣ ಹೆಗ್ಡೆ ನೇತೃತ್ವದಲ್ಲಿ ಸಮ್ಮಿಶ್ರ ಸರ್ಕಾರ ಅಸ್ತಿತ್ವಕ್ಕೆ ಬಂದಿತು. 1985 ರ ವೇಳೆಗೆ ರಾಮಕೃಷ್ಣ ಹೆಗ್ಡೆಯವರು ಲೋಕಸಭೆಯ ಚುನಾವಣೆಯಲ್ಲಿ ಜನತಾ ಪಕ್ಷಕ್ಕೆ ಹಿನ್ನಡೆಯಾದಾಗ ಸರ್ಕಾರವನ್ನು ವಿಸರ್ಜಿಸಿ ಮತ್ತೇ ಚುನಾವಣೆಗೆ ಹೋದರು. ಜನತಾ ಪಕ್ಷವು 130 ಕ್ಕೂ ಅಧಿಕ ಸ್ಥಾನ ಗಳಿಸಿ ಮತ್ತೇ ಅಧಿಕಾರಕ್ಕೆ ಬಂದಿತು. ಈ ಸಂದರ್ಭದಲ್ಲಿ ಲಂಕೇಶರು ತಮ್ಮ ಪತ್ರಿಕೆಯಲ್ಲಿ ಯಾವ ಅಭ್ಯರ್ಥಿ ಜನಪ್ರತಿನಿಧಿಯಾಗಲು ಸೂಕ್ತ ಮತ್ತು ಯಾವ ಅಭ್ಯರ್ಥಿ ಅಯೋಗ್ಯ ಎಂಬುದರ ಕುರಿತಾಗಿ ಅವರುಗಳ ಭಾವಚಿತ್ರದೊಂದಿಗೆ ಲೇಖನ ಪ್ರಕಟಿಸಿ ಜನ ಸಾಮಾನ್ಯರಿಗೆ ಮಾರ್ಗದರ್ಶನ ಮಾಡುತ್ತಿದ್ದರು.
ನಲವತ್ತು ವರ್ಷ ಕಳೆದರೂ ಸಹ ಲಂಕೇಶರ ಮಾತುಗಳನ್ನು ಮತ್ತು ಬರಹಗಳನ್ನು ನನ್ನಂತಹವನಿಗೆ ಮರೆಯಲು ಸಾಧ್ಯವಾಗಿಲ್ಲ. 1985 ರ ಮಾರ್ಚ್ ತಿಂಗಳಲ್ಲಿ ಅವರು ಟೀಕೆ ಟಿಪ್ಪಣಿಯಲ್ಲಿ ಬರೆದ ಕೆಲವು ಮಾತುಗಳು ಹೀಗಿವೆ.
‘’ ಕೋಟ್ಯಾಂತರ ರೂಪಾಯಿ ಖರ್ಚು ಮಾಡಿ ಗೆದ್ದು ಬಂದ ರಾಜಕಾರಣಿ ತನ್ನ ಗೆಲುವಿನ ಬಗ್ಗೆ ಹೆಮ್ಮೆ ಪಡುತ್ತಾನೆ. ಆದರೆ, ಆತನಿಗೆ ತನ್ನ ಹಣದಿಂದ ಬಿತ್ತಿದ ವಿಷಬೀಜ ಅವನಿಗೆ ಕಾಣುವುದೇ ಇಲ್ಲ .ಆತನ ವಿಷಬೀಜದಿಂದ ಬೆಳೆದ ಕಪ್ಪು ಬೆಳೆಗಳು, ಕರಾಳ ಕೀಟಗಳು ಆತನನ್ನು ಬೆನ್ನಟ್ಟಿ ಹೋಗುತ್ತವೆ. ಇದು ಗಾಂಧೀಜಿಯವರಿಗೆ ಗೊತ್ತಿತ್ತು. ಆತ್ಮವನ್ನು ಕಳೆದುಕೊಂಡ ರಾಜಕಾರಣಿ ತನ್ನನ್ನು ರಕ್ಷಿಸಿಕೊಳ್ಲಲು ಪೊಲೀಸರ ಪಡೆಯನ್ನು ಹೊಂದಿರಬೇಕಾಗುತ್ತದೆ. ಹಾಗಾಗಿ ಬಾಪೂಜಿ ಎಂದಿಗೂ ಅಂಗರಕ್ಷ ಪಡೆಯನ್ನು ಹೊಂದಿರಲಿಲ್ಲ. ಏಕೆಂದರೆ ಅವರಿಗೆ ಗೊತ್ತಿತ್ತು. ಅಂಗರಕ್ಷಕರು ಕೇವಲ ವ್ಯಕ್ತಿಯ ದೇಹವನ್ನು ಮಾತ್ರ ರಕ್ಷಿಸುವುದಿಲ್ಲ, ರಾಜಕಾರಣಿಯನ್ನು ಸೆರೆಮನೆಯಲ್ಲಿಟ್ಟು ನಾಶಗೊಳಿಸುತ್ತಾರೆ.ಆತ್ಮವನ್ನು ಕಳೆದುಕೊಂಡ ರಾಜಕಾರಣಿಗೆ ಓಲಗದ ಸದ್ದು, ಗಂಟೆಯ ನೀನಾದ ಕೇಳುವುದಿರಲಿ, ಜನ ಸಾಮಾನ್ಯರ ಆಕ್ರಂದನವೂ ಕೇಳುವುದಿಲ್ಲ’’
ಇಂದಿನ ರಾಜಕಾರಣಿಗಳ ಜಾತಕವನ್ನು ಲಂಕೇಶರು ನಲವತ್ತು ವರ್ಷಗಳ ಹಿಂದೆಯೇ ಬರೆದಿಟ್ಟರು. ಈಗ ಈ ಜಾತಕವನ್ನು ಜನತೆಯ ಮುಂದಿಡುವುದು ನಮ್ಮೆಲ್ಲರ ನೈತಿಕ ಜವಾಬ್ದಾರಿಯಾಗಿದೆ.
-ಜಗದೀಶ್ ಕೊಪ್ಪ, ಚಿಂತಕರು




