ದೆಹಲಿ: ಸಂಸತ್‌ನಲ್ಲಿ ಪ್ರಶ್ನೆ ಕೇಳಲು ಲಂಚ ಪಡೆದ ಆರೋಪದಡಿ ತೃಣಮೂಲ ಕಾಂಗ್ರೆಸ್ ಪಕ್ಷದ ಸಂಸದೆ ಮಹುವಾ ಮೋಯಿತ್ರಾ ಅವರನ್ನು ಲೋಕಸಭೆಯಿಂದ ಉಚ್ಛಾಟನೆ ಮಾಡಲಾಗಿದೆ.
ಲೋಕಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ, ಆಡಳಿತಾರೂಢ ಬಿಜೆಪಿಯನ್ನು ತಮ್ಮ ಅಮೋಘ, ಅಭೂತಪೂರ್ವ ವಾಗ್ಝರಿಯ ಮೂಲಕ ಮಹುವಾ ಮೋಯಿತ್ರಾ ಕಟ್ಟಿಹಾಕುತ್ತಿದ್ದರು. ಅವರು ವಿಷಯಾಧಾರಿತವಾಗಿ ಮಂಡಿಸುತ್ತಿದ್ದ ವಿಷಯಗಳು ಮತ್ತು ಕೇಳುತ್ತಿದ್ದ ಪ್ರಶ್ನೆಗಳಿಗೆ ಆಡಳಿತಾರೂಢ ಪಕ್ಷ ಮತ್ತು ಸಚಿವರು ಉತ್ತರಿಸಲು ಅಸಾಧ್ಯವಾಗುತ್ತಿತ್ತು. ಅಷ್ಟು ಮೊನಚಾಗಿ ವಿಚಾರಗಳನ್ನು ಮೊಯಿತ್ರಾ ಅವರು ಸ್ಪಷ್ಟ, ನಿರರ್ಗಳ, ಖಚಿತ ಮತ್ತು ನೇರವಾಗಿ ಮಂಡಿಸುತ್ತಿದ್ದರು.
ಮಹೂವಾ ಮೋಯಿತ್ರಾ ಅವರನ್ನು ಸದನದಿಂದ ಉಚ್ಚಾಟಿಸುವಂತೆ ಶಿಫಾರಸು ಮಾಡಿರುವ ತನ್ನ ವರದಿಯನ್ನು ಲೋಕಸಭೆಯ ನೀತಿ ಸಮಿತಿ ನವೆಂಬರ್ 9ರಂದು ಅಂಗೀಕಾರ ನೀಡಿತ್ತು. 495 ಪುಟಗಳ ಈ ವರದಿಯನ್ನು ನೀತಿ ಸಮಿತಿ ಮುಖ್ಯಸ್ಥ ವಿನೋದ್ ಕುಮಾರ್ ಸೋನಕರ್ ಇಂದು ಲೋಕಸಭೆಯಲ್ಲಿ ಮಂಡಿಸಿದರು.
ಮೊಯಿತ್ರಾ ಅವರನ್ನು ಉಚ್ಛಾಟಿಸುವ ನಿರ್ಧಾರವನ್ನು ಸದನದಲ್ಲಿ ಓದಿದ ಸ್ಪೀಕರ್ ಓಂ ಪ್ರಕಾಶ್ ಬಿರ್ಲಾ, ಸಂಸದೆ ಮಹುವಾ ಮೋಯಿತ್ರಾ ಅವರ ನಡವಳಿಕೆ ಸಂಸದರಾಗಿ ಅನೈತಿಕ ಮತ್ತು ಸರಿಯಾದುದಲ್ಲ ಎಂಬ ಸಮಿತಿಯ ತೀರ್ಮಾನಗಳನ್ನು ಈ ಸದನ ಒಪ್ಪಿಕೊಳ್ಳುತ್ತದೆ. ಆದ್ದರಿಂದ ಅವರು ಸಂಸದೆಯಾಗಿ ಮುಂದುವರಿಯುವುದು ಸೂಕ್ತವಲ್ಲ ಎಂದರು.
ದೂರಿನ ಕುರಿತು ನೈತಿಕ ಸಮಿತಿ ವರದಿ ಆಧರಿಸಿ ಓಯಿತ್ರಾ ಅವರನ್ನು ಸದನದ ಸದಸ್ಯತ್ವದಿಂದ ಹೊರಹಾಕುವ ನಿರ್ಣಯವನ್ನು ಲೋಕಸಭೆ ಶುಕ್ರವಾರ ಅಂಗೀಕರಿಸಿತು. ಅನಂತರ ಡಿಸೆಂಬರ್ 11ರವರೆಗೆ ಲೋಕಸಭೆಯ ಕಲಾಪವನ್ನು ಮುಂದೂಡಲಾಗಿದೆ. ಈ ಮೂಲಕ ಟಿಎಂಸಿ ಸೇರಿದಂತೆ ವಿಪಕ್ಷಗಳು ಸರ್ಕಾರ, ಸ್ಪೀಕರ್ ನಿರ್ಣಯದ ವಿರುದ್ಧ ನಡೆಸುವ ಪ್ರತಿಭಟನೆಯನ್ನು ಸದ್ಯಕ್ಕೆ ತಡೆಯುವಲ್ಲಿ ಬಿಜೆಪಿ ಯಶಸ್ವಿಯಾದಂತಾಗಿದೆ. ಆದರೆ, ಸೋಮವಾರ ಈ ವಿಷಯಕ್ಕೆ ಸಂಬಂಧಿಸಿದಂತೆ ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಕೋಲಾಹಲ ಸೃಷ್ಟಿಯಾಗುವುದು ನಿಶ್ಚಿತವಾಗಿದೆ.




