ಗ್ಯಾರಂಟಿಗಳ ಅನುಷ್ಠಾನಕ್ಕೆ ಎಸ್.ಸಿ. ಎಸ್.ಟಿಪಿ- ಟಿ.ಎಸ್.ಪಿ ಹಣ ಬಳಕೆ ಮಾಡಿಕೊಂಡಿಲ್ಲ: ಡಾ.ಎಚ್.ಸಿ.ಮಹದೇವಪ್ಪ

2 years ago

ಬೆಂಗಳೂರು: ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳಿಗೆ ಎಸ್.ಸಿ. ಎಸ್. ಟಿಪಿ- ಟಿ.ಎಸ್.ಪಿ ಅನುದಾನವನ್ನ ಬಳಕೆ ಮಾಡಿಕೊಳ್ಳುತ್ತಿರುವ ವಿಷಯ ವಿಧಾನಪರಿಷತ್ನಲ್ಲಿ ಪ್ರತಿಧ್ವನಿಸಿ ಆಡಳಿತ ಮತ್ತು ಪ್ರತಿಪಕ್ಷಗಳ ಸದಸ್ಯರ ನಡುವೆ ಮಾತಿನ ಚಕಮಕಿ ನಡೆದು ಕಾವೇರಿದ ವಾತಾವರಣ ಸೃಷ್ಟಿಯಾಯಿತು.

ಪ್ರಶ್ನೋತ್ತರ ಕಲಾಪದಲ್ಲಿ ಈ ಕುರಿತಾಗಿ ಬಿಜೆಪಿಯ ಛಲವಾದಿ ನಾರಾಯಣಸ್ವಾಮಿ ಅವರು ಮಾಡಿದ ಪ್ರಸ್ತಾವನೆಗೆ ಎಚ್.ಸಿ.ಮಹದೇವಪ್ಪ ಅವರು ಉತ್ತರಿಸಿ, ಗ್ಯಾರಂಟಿಗಳ ಅನುಷ್ಠಾನಕ್ಕೆ ಎಸ್.ಸಿ. ಎಸ್. ಟಿಪಿ- ಟಿ.ಎಸ್.ಪಿ ಹಣ ಬಳಕೆ ಮಾಡಿಕೊಂಡಿಲ್ಲ. ನಮ್ಮ ಪ್ರತಿಪಕ್ಷದ ಸದಸ್ಯರು ಅನಗತ್ಯವಾಗಿ ಜನರನ್ನು ತಪ್ಪು ದಾರಿಗೆ ಎಳೆಯುವ ಪ್ರಯತ್ನ ಮಾಡುತ್ತಿದ್ದಾರೆ. ಗ್ಯಾರಂಟಿ ಯೋಜನೆಗಳ ಅನುಷ್ಠಾನಕ್ಕೆ ನಮ್ಮ ಇಲಾಖೆಯಲ್ಲಿ ಮೀಸಲಿಟ್ಟಿದ್ದ ಅನುದಾನವನ್ನು ಬಳಕೆ ಮಾಡಿಲ್ಲ ಎಂದು ಹೇಳುವ ಮೂಲಕ ಗೊಂದಲಗಳಿಗೆ ತೆರೆ ಎಳೆಯುವ ಪ್ರಯತ್ನ ಮಾಡಿದರು.

ಕಾಯ್ದೆಯ ಸೆಕ್ಷನ್ 7ಡಿಗೆ ತಿದ್ದುಪಡಿ ಮಾಡಲಾಗಿದೆ. ದಲಿತರ ಹಣವನ್ನು ದಲಿತರಿಗೇ ಬಳಕೆ ಮಾಡುತ್ತಿದ್ದೇವೆ. ಇದರಲ್ಲಿ ಒಂದೊಂದು ಪೈಸೆಯೂ ದುರುಪಯೋಗವಾಗಿಲ್ಲ ಎಂದು ಸ್ಪಷ್ಟನೆ ನೀಡಿದರು.

ವಾಸ್ತವವಾಗಿ ಹಿಂದಿನ ಸರ್ಕಾರವೇ ಈ ಹಣವನ್ನು ಬೇರೆ ಉದ್ದೇಶಗಳಿಗೆ ಬಳಕೆ ಮಾಡಿದೆ. ಇಲ್ಲಿ ಮೀಸಲಿಟ್ಟ ಹಣವನ್ನು ಬೇರೆ ಯಾವುದೇ ಕಾರ್ಯಕ್ರಮಗಳಿಗೂ ಬಳಕೆ ಮಾಡಬಾರದೆಂಬ ನಿಯಮವಿದೆ. ಆದರೂ ಹಿಂದಿನ ಸರ್ಕಾರ ನಿಯಮ ಉಲ್ಲಂಘಿಸಿ ಬೇರೆ ಕೆಲಸಗಳಿಗೆ ಬಳಕೆ ಮಾಡಲಾಗಿದೆ. ನಿಮ್ಮ ಬಿಜೆಪಿ ಸರ್ಕಾರ ಸೆಕ್ಷನ್ 7ಡಿಗೆ ತಿದ್ದುಪಡಿ ಮಾಡಿತ್ತು. ನಾವು ಕೂಡ ಅದನ್ನೇ ಮಾಡಿದ್ದೇವೆ ಎಂದು ಸಮರ್ಥನೆ ಮಾಡಿಕೊಂಡರು.

ಗೃಹ ಲಕ್ಷ್ಮಿ ಯೋಜನೆಗೆ 3,156.31 ಕೋಟಿ, ಅನ್ನ ಭಾಗ್ಯಕ್ಕೆ 853.32 ಕೋಟಿ, ಗೃಹ ಜ್ಯೋತಿ ಗೆ 1,464.34.ಕೋಟಿ, ಶಕ್ತಿ ಯೋಜನೆಗೆ 686.38 ಕೋಟಿ, ಯುವನಿಧಿಗೆ 1.67 ಕೋಟಿ ಖರ್ಚು ಮಾಡಲಾಗಿದೆ ಎಂದು ಮಾಹಿತಿ ನೀಡಿದರು. ಎಸ್.ಸಿ. ಎಸ್. ಟಿಪಿ- ಟಿ.ಎಸ್.ಪಿ ಯೋಜನೆಯಡಿ ಮೀಸಲಾದ ಅನುದಾನದಲ್ಲಿ ಐದು ಗ್ಯಾರಂಟಿಗಳಿಗೆ ಒಟ್ಟು 6, 162.02 ಕೋಟಿ ಬಳಕೆ ಮಾಡಲಾಗಿದೆ ಎಂದರು.

Leave a Reply