ಇ ಖಾತಾ ಹೆಸರಲ್ಲಿ ಮಾಫಿಯಾ ಸೃಷ್ಟಿಯಾಗಿದೆ: ಆರ್‌.ಅಶೋಕ

3 months ago

ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಮಾಡಲು ಡಿಸಿಎಂ ಡಿ.ಕೆ.ಶಿವಕುಮಾರ್‌ ʼಬ್ರ್ಯಾಂಡ್‌ ಬೆಂಗಳೂರುʼ ಘೋಷಿಸಿದ್ದರು. ಆದರೆ ಈಗ ಇ-ಖಾತಾ ಹೆಸರಲ್ಲಿ ಪಾಲಿಕೆ ಅಧಿಕಾರಿಗಳು ದಂಧೆ ಮಾಡುತ್ತಿದ್ದಾರೆ. ಇ ಖಾತಾ ಹೆಸರಲ್ಲಿ ಮಾಫಿಯಾ ಸೃಷ್ಟಿಯಾಗಿದೆ. ತೆರಿಗೆ ಪಾವತಿಸಿದರೂ ಮನೆ ಹರಾಜು ಹಾಕಲು ಅಧಿಕಾರಿಗಳು ಮುಂದಾಗುತ್ತಿದ್ದಾರೆ ಎಂದು ವಿಪಕ್ಷ ನಾಯಕ ಆರ್‌.ಅಶೋಕ ಹೇಳಿದರು.

ವಿಧಾನಸಭೆಯಲ್ಲಿ ಬೆಂಗಳೂರಿನ ಸಮಸ್ಯೆಗಳ ಬಗ್ಗೆ ಮಾತನಾಡಿದ ಅವರು, ಇ ಖಾತಾ ಹೆಸರಲ್ಲಿ ಪಾಲಿಕೆಗಳ ಅಧಿಕಾರಿಗಳು ದಂಧೆ ಮಾಡುತ್ತಿದ್ದಾರೆ. “ನಮ್ಮ ಸರ್ಕಾರದಲ್ಲಿ ಲಂಚ ಪಡೆದ ಒಬ್ಬರನ್ನು ತೋರಿಸಿ” ಎಂದು ಡಿ.ಕೆ.ಶಿವಕುಮಾರ್‌ ಸವಾಲು ಹಾಕಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಓಡಾಡುತ್ತಿದೆ. ಬಿಡಿಎಯಿಂದ ಎಚ್‌ಬಿಆರ್‌ ಲೇಔಟ್‌ ನಿರ್ಮಾಣವಾಗಿದೆ. ಇಲ್ಲಿ ಒಬ್ಬ ಮಾಲೀಕರು ಹರಾಜಿನಲ್ಲಿ ಕಾರ್ನರ್‌ ಸೈಟ್‌ ಪಡೆದಿದ್ದರು. ಅದನ್ನು ಇ-ಖಾತಾ ಮಾಡಿಸಲು ಹೋದಾಗ, ಅಧಿಕಾರಿಗಳು ಇದು ಎ ಖಾತಾ ಆಗಲ್ಲ, ಬಿ ಖಾತಾ ಮಾಡಬೇಕಾಗುತ್ತದೆ ಎಂದು ಹೇಳಿದ್ದರು. ಮಾಲೀಕರು ಹಾಗೂ ಅಧಿಕಾರಿಯ ನಡುವೆ 30,000 ರೂ. ಲಂಚಕ್ಕೆ ಮಾತುಕತೆ ನಡೆದಿತ್ತು. ಮೊದಲಿಗೆ ಅಧಿಕಾರಿಗೆ ಫೋನ್‌ ಪೇನಲ್ಲಿ 15,000 ರೂ. ಲಂಚ ಸಂದಾಯವಾಗಿದೆ. ಆದರೆ ಅರ್ಜಿಯನ್ನು ಜಿಲ್ಲಾಧಿಕಾರಿ ತಿರಸ್ಕಾರ ಮಾಡಿದ್ದಾರೆ. ಮತ್ತೆ ಎರಡು ಬಾರಿ ಅರ್ಜಿ ಹಾಕಿದಾಗಲೂ ತಿರಸ್ಕಾರವಾಗಿದೆ. ಮಾಲೀಕರು ಉಳಿದ 20,000 ರೂ. ಲಂಚ ಕೊಟ್ಟಿದ್ದರು. ಆ ಹಣವನ್ನು ವಾಪಸ್‌ ಕೇಳಿದಾಗ ಅಧಿಕಾರಿ ವಾಪಸ್‌ ಕೊಟ್ಟಿಲ್ಲ. ಮಾಲೀಕರು ಗ್ರಾಹಕರ ನ್ಯಾಯಾಲಯಕ್ಕೆ ಹೋದರೂ ನ್ಯಾಯ ಸಿಗಲಿಲ್ಲ. ಸಹಾಯವಾಣಿಗೆ ದೂರು ನೀಡಿದರೂ ನ್ಯಾಯ ಸಿಗಲಿಲ್ಲ. ಇದೇ ರೀತಿ ದೇವನಹಳ್ಳಿ ಭಾಗದಲ್ಲಿ ಇ -ಖಾತಾ ಮಾಡಿಸಲು 50,000 ರೂ. ಲಂಚ ಪಡೆಯುತ್ತಾರೆ. ನಂಜುಂಡಪ್ಪ ಎಂಬ ನಿವೃತ್ತ ಅಧಿಕಾರಿ ಕಚೇರಿ ಮಾಡಿಕೊಂಡು ಒಂದು ನಿವೇಶನಕ್ಕೆ ಇ -ಖಾತಾ ಮಾಡಿಸಲು 30-40 ಸಾವಿರ ರೂ. ಪಡೆಯುತ್ತಿದ್ದಾರೆ. ಪ್ರತಿ ವಾರ್ಡ್‌ಗಳಲ್ಲಿ ಇಂತಹ ದಂಧೆ ನಡೆಯುತ್ತಿದೆ ಎಂದರು.

ಎಚ್‌ಬಿಆರ್‌ ಲೇಔಟ್‌ನಲ್ಲಿ ಮಾಲೀಕರ ತಂದೆಗೆ ಹರಾಜು ನೋಟಿಸ್‌ ನೀಡಲಾಗಿದೆ. ಎರಡು ವರ್ಷದಿಂದ ತೆರಿಗೆ ನೀಡಿಲ್ಲದ್ದಕ್ಕೆ ಮನೆ ಹರಾಜು ಹಾಕಲಾಗುತ್ತಿದೆ ಎಂದು ಹೇಳಲಾಗಿದೆ. ಆದರೆ ಈ ಮನೆಯ ಖಾತೆಯನ್ನು ತಂದೆ ಮಗನ ಹೆಸರಿಗೆ ನೋಂದಣಿ ಮಾಡಿಸಿದ್ದರು. ಈವರೆಗೆ ಮಗ ಸರಿಯಾಗಿ ತೆರಿಗೆ ಪಾವತಿಸಿದ್ದಾರೆ. ಆದರೆ ಅವರ ತಂದೆಗೆ ನೋಟಿಸ್‌ ನೀಡಲಾಗಿದೆ. ಇದೇ ರೀತಿ ಎಲ್ಲ ಕಡೆ ಮಾಫಿಯಾ ಇದೆ. ಈ ಕುರಿತು ನನ್ನ ಕಚೇರಿಗೆ ಅನೇಕರು ಬಂದು ದೂರು ನೀಡುತ್ತಿದ್ದಾರೆ ಎಂದರು.

ಕರ್ನಾಟಕದ ಶೇ.65 ರಷ್ಟು ಆದಾಯ ಬೆಂಗಳೂರಿಂದ ಬರುತ್ತಿದೆ. ಮೂಲಸೌಕರ್ಯದ ಕೊರತೆಯಿಂದಾಗಿ ಅನೇಕ ಕಂಪನಿಗಳು ನಗರವನ್ನು ತೊರೆಯುತ್ತಿವೆ. ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಬ್ರ್ಯಾಂಡ್‌ ಬೆಂಗಳೂರು ಯೋಜನೆ ಘೋಷಿಸಿದ್ದರು. ಆದರೆ ಬೆಂಗಳೂರಲ್ಲಿ ಈಗ ಕಸದ ರಾಶಿ, ರಸ್ತೆ ಗುಂಡಿ ಮೊದಲಾದ ಸಮಸ್ಯೆಗಳು ಉಂಟಾಗಿವೆ. ಉಪಮುಖ್ಯಮಂತ್ರಿ ಅನೇಕ ಬಾರಿ ನಗರ ಪ್ರದಕ್ಷಿಣೆ ಮಾಡಿ 15 ದಿನ ಕಳೆದರೂ ರಸ್ತೆಗುಂಡಿ ಮುಚ್ಚಲಿಲ್ಲ. ಎರಡು ಮೂರು ಸಾವಿರ ಕೋಟಿ ರೂ. ಖರ್ಚು ಮಾಡಿ ಗುಂಡಿ ಮುಚ್ಚಿದ್ದೇವೆ ಎಂದರೂ ಎಲ್ಲೂ ಗುಂಡಿ ಮುಚ್ಚಿಲ್ಲ. ಬಸ್‌ ಹರಿದು, ಸ್ಕೂಟರ್‌ನಿಂದ ಬಿದ್ದು ಅನೇಕ ಜನರ ಸಾವಾಗಿದೆ ಎಂದರು.

ರಸ್ತೆಗುಂಡಿ ಮುಚ್ಚಲು ಸರ್ಕಾರ ಗಡುವು ನೀಡಿದರೂ ಅದು ಯಶಸ್ವಿಯಾಗಿಲ್ಲ. ತೆಲಂಗಾಣದ ಮುಖ್ಯಮಂತ್ರಿ ರೇವಂತ್‌ ರೆಡ್ಡಿ ಬೆಂಗಳೂರಿನ ಕಡೆ ತಿರುಗಿ ನೋಡಬೇಡಿ ಎಂದಿದ್ದಾರೆ. ಡಿ.ಕೆ.ಶಿವಕುಮಾರ್‌ ಅವರು ರೇವಂತ್‌ ರೆಡ್ಡಿಯನ್ನು ಬ್ರದರ್‌ ಎನ್ನುತ್ತಾರೆ. ಆದರೆ ರೇವಂತ್‌ ರೆಡ್ಡಿ ತಮ್ಮ ನಗರಕ್ಕೆ ಬೆಂಗಳೂರನ್ನು ಹೋಲಿಸಬೇಡಿ ಎಂದು ಟೀಕೆ ಮಾಡಿದ್ದಾರೆ. ಇದಕ್ಕೆ ಡಿ.ಕೆ.ಶಿವಕುಮಾರ್‌ ಒಂದೂ ಪ್ರತಿಕ್ರಿಯೆ ನೀಡಿಲ್ಲ. ಈ ಸರ್ಕಾರ ಧೈರ್ಯವಾಗಿ ಅದಕ್ಕೆ ಪ್ರತಿಕ್ರಿಯೆ ನೀಡಬೇಕಿತ್ತು ಎಂದರು.

ಡಂಪಿಂಗ್‌ ಯಾರ್ಡ್‌ ಇಲ್ಲ: ಕಸದ ಸಮಸ್ಯೆ ನಿವಾರಣೆಗೆ ಡಂಪಿಂಗ್‌ ಯಾರ್ಡ್‌ ನಿರ್ಮಿಸಲಾಗುವುದು ಎಂದು ಸರ್ಕಾರ ಹೇಳಿತ್ತು. ಮೂರು ವರ್ಷ ಕಳೆದರೂ ಆ ಕೆಲಸವಾಗಿಲ್ಲ. ಅದರ ಬದಲು ಸಚಿವ ಜಮೀರ್‌ ಅಹ್ಮದ್‌ ಕೋಗಿಲು ಕ್ರಾಸ್‌ನಲ್ಲಿ ಮನೆಗಾಗಿ ನಿವೇಶನ ಹಂಚಿದ್ದಾರೆ. ಇಂದು ನಗರದಲ್ಲಿ 10,000 ಟನ್‌ ಕಸ ಡಂಪಿಂಗ್‌ ಯಾರ್ಡ್‌ಗೆ ಹೋಗದೆ ಬಾಕಿ ಉಳಿದಿದೆ ಎಂದರು.

ಜಿವಿಎ ಕಂದಾಯ ಇಲಾಖೆಯಲ್ಲಿ 1482 ಅಧಿಕಾರಿಗಳಿರಬೇಕಿತ್ತು. ಆದರೆ 858 ಅಧಿಕಾರಿಗಳಿದ್ದಾರೆ. ಆರೋಗ್ಯ ಇಲಾಖೆಯಲ್ಲಿ 1063 ಬದಲು 429 ಅಧಿಕಾರಿಗಳಿದ್ದಾರೆ. ಎಂಜಿನಿಯರಿಂಗ್‌ ವಿಭಾಗದಲ್ಲಿ 1047 ರ ಬದಲು 543 ಅಧಿಕಾರಿಗಳಿದ್ದಾರೆ. ಹಣಕಾಸು ವಿಭಾಗದಲ್ಲಿ 30 ರ ಬದಲು 18 ಅಧಿಕಾರಿಗಳಿದ್ದಾರೆ. ಪ್ರಥಮ ಹಾಗೂ ದ್ವಿತೀಯ ದರ್ಜೆ ನೌಕರರು 2704 ಇರಬೇಕಿದ್ದರೂ, ಈಗ 970 ಇದ್ದಾರೆ. ಅಂದರೆ ಜಿಬಿಎನಲ್ಲಿ ಹೊಸ ನೇಮಕ ನಡೆದಿಲ್ಲ. ಪಾಲಿಕೆಯ ಆದಾಯ ಕೂಡ ಕಡಿಮೆಯಾಗಿದೆ. ಆಸ್ತಿ ತೆರಿಗೆಯಿಂದ 4500 ಕೋಟಿ ರೂ., ನಕ್ಷೆ ಮಂಜೂರಾತಿಯಿಂದ 1200 ಕೋಟಿ ರೂ., ರಸ್ತೆ ಅಗೆತ ಶುಲ್ಕದಿಂದ 150 ಕೋಟಿ ರೂ., ಸೇರಿ ಒಟ್ಟು 5850 ಕೋಟಿ ರೂ. ಆದಾಯ ಬರುತ್ತದೆ. ಈ ಪೈಕಿ ವೇತನಕ್ಕೆ 3492 ಕೋಟಿ ರೂ. ಕೊಡಬೇಕು. ತ್ಯಾಜ್ಯ ವಿಲೇವಾರಿ ಮೊದಲಾದ ಕಾರ್ಯಗಳು ಸೇರಿದರೆ ಒಟ್ಟು 6300 ಕೋಟಿ ರೂ. ಕೊಡಬೇಕಾಗುತ್ತದೆ. ಇನ್ನು ಪ್ರವಾಹ ಮೊದಲಾದ ಸಮಸ್ಯೆಗಳು ಬಂದರೆ ಅದಕ್ಕೆ ಪಾಲಿಕೆ ಬಳಿ ಹಣವೇ ಇಲ್ಲ. ಕಳೆದ ಬೇಸಿಗೆಯಲ್ಲಿ ನಗರದಲ್ಲಿ ಟ್ಯಾಂಕರ್‌ ಮಾಫಿಯಾ ಕಂಡುಬಂದಿತ್ತು. ಈ ಬಾರಿ ಬೇಸಿಗೆ ಆರಂಭವಾದರೂ ಸಭೆ ನಡೆದಿಲ್ಲ, ತಯಾರಿ ನಡೆದಿಲ್ಲ ಎಂದರು.

ಒಸಿ ನೀಡಲ್ಲ: ಕಟ್ಟಡಗಳಿಗೆ ಒಸಿ ನೀಡದೆ ಸಮಸ್ಯೆ ಉಂಟಾಗಿದೆ. ಏನೇ ಕೇಳಿದರೂ ಸುಪ್ರೀಂ ಕೋರ್ಟ್‌ ಆದೇಶವಿದೆ ಎನ್ನುತ್ತಾರೆ. ಈಗಾಗಲೇ ನಿರ್ಮಾಣವಾದ 4 ಲಕ್ಷ ಕಟ್ಟಡಗಳು ಬಳಕೆಯಾಗದೆ ಪಾಳು ಬಿದ್ದಿದೆ. ಒಸಿ ನೀಡಲು ಸಾಧ್ಯವಿಲ್ಲವಾದರೆ ನಿರ್ಮಾಣವಾಗಲು ಅನುಮತಿ ಏಕೆ ನೀಡಬೇಕಿತ್ತು? ಈ ಹಿಂದೆ ಒನ್‌ ಟೈಮ್‌ ಸೆಟಲ್‌ಮೆಂಟ್‌ ಎಂಬ ವ್ಯವಸ್ಥೆ ತರಲಾಗಿತ್ತು. ಬೆಂಗಳೂರಿನಲ್ಲಿ ಶೇ.80 ರಷ್ಟು ಅನಧಿಕೃತ ಕಟ್ಟಡಗಳೇ ಇವೆ. ಅವುಗಳನ್ನು ಒಡೆದುಹಾಕಲು ಸಾಧ್ಯವಿಲ್ಲ. ವಸತಿಗಾಗಿ ಕಟ್ಟಡ ನಿರ್ಮಾಣ ಮಾಡಿದವರಿಗೆ ಬಳಕೆಗೆ ಅವಕಾಶ ನೀಡಬಹುದು. ಇ-ಖಾತಾ ವ್ಯವಸ್ಥೆಯಡಿ ಎಲ್ಲರಿಗೂ ನೋಟಿಸ್‌ ನೀಡಲಾಗಿದೆ. ಡ್ರೋನ್‌ ಆಧರಿಸಿ ವಿಸ್ತೀರ್ಣ ಅಳತೆ ಮಾಡಲಾಗಿದೆ. ಜನರಿಗೆ ತೊಂದರೆಯಾಗದಂತೆ ಈ ಸಮಸ್ಯೆ ನಿವಾರಿಸಬೇಕು ಎಂದರು.

ವೈಮಾನಿಕ ಶಾಲೆ ಮುಚ್ಚುವ ಯತ್ನ: ಜಕ್ಕೂರಿನಲ್ಲಿ 370 ಎಕರೆ ಜಾಗದಲ್ಲಿ ವೈಮಾನಿಕ ಶಾಲೆಗೆ ಮಾಜಿ ಪ್ರಧಾನಿ ಜವಹರಲಾಲ್‌ ನೆಹರೂ ಶಂಕುಸ್ಥಾಪನೆ ಮಾಡಿದ್ದರು. ಈ ಜಾಗವನ್ನು ಮೈಸೂರು ಮಹಾರಾಜರು ನೀಡಿದ್ದರು. ಈ ಭಾಗದಲ್ಲಿ ಎತ್ತರದ ಕಟ್ಟಡಗಳನ್ನು ನಿರ್ಮಿಸಲು ಸಾಧ್ಯವಿಲ್ಲ. ಹಿಂದಿನ ಕಾಂಗ್ರೆಸ್‌ ಅವಧಿಯಲ್ಲಿ ಇಲ್ಲಿ ಶಾಸಕರು, ಅಧಿಕಾರಿಗಳಿಗೆ ಎಕ್ಸಿಕ್ಯೂಟಿವ್‌ ಕ್ಲಬ್‌ ನಿರ್ಮಿಸಲು ಯೋಜನೆ ಇತ್ತು. ಬಿಜೆಪಿ ಅವಧಿಯಲ್ಲಿ ಇದನ್ನು ರದ್ದು ಮಾಡಲಾಗಿತ್ತು. ಈಗ ರಿಯಲ್‌ ಎಸ್ಟೇಟ್‌ ಅನುಕೂಲಕ್ಕಾಗಿ ಶಾಲೆಯನ್ನು ಮುಚ್ಚುವ ಪ್ರಯತ್ನ ಸರ್ಕಾರದಿಂದ ನಡೆದಿದೆ. ಶಾಲೆಯನ್ನು ಸ್ಥಳಾಂತರಿಸಲು ಅಧಿಕಾರಿಗಳು ಸಭೆ ನಡೆಸಿ ಚರ್ಚಿಸಿದ್ದಾರೆ “ಕಾಂಗ್ರೆಸ್‌ ಸರ್ಕಾರದ ಅವಧಿಯಲ್ಲಿ ತಪ್ಪಾಗಿದೆ, ಇದು ದೊಡ್ಡ ಹಗರಣ, ಶಾಲೆಯನ್ನು ಉಳಿಸಬೇಕು” ಎಂದು ಸಚಿವ ಕೃಷ್ಣ ಬೈರೇಗೌಡರು ಹೇಳಿದ್ದರು ಎಂದರು.

ಶಾಲೆಯ ಜಾಗದಲ್ಲಿ ಶಾಪಿಂಗ್‌ ಕಾಂಪ್ಲೆಕ್ಸ್‌ ನಿರ್ಮಿಸಲು ಚರ್ಚೆಯಾಗಿದೆ. ನಗರದಲ್ಲಿ ಬೇರೆ ಕಡೆ ಸಾಕಷ್ಟು ಜಾಗವಿದ್ದರೂ ಶಾಲೆಯ ಜಾಗವನ್ನೇ ಪಡೆಯಲು ಹುನ್ನಾರ ನಡೆಯುತ್ತಿದೆ. ಶಾಲೆಯನ್ನು ಮುಚ್ಚಿದರೆ ರಿಯಲ್‌ ಎಸ್ಟೇಟ್‌ನವರು ಎತ್ತರದ ಕಟ್ಟಡಗಳನ್ನು ಕಟ್ಟಿಸಿ ಹಣ ಮಾಡುತ್ತಾರೆ. ಈ ಮೂಲಕ ಸರ್ಕಾರಕ್ಕೂ ಕೆಟ್ಟ ಹೆಸರು ಬರುವುದು ಖಚಿತ. ಶಾಲೆಯ ಜಾಗವನ್ನು ರಿಯಲ್‌ ಎಸ್ಟೇಟ್‌ಗೆ ಕೊಡಬಾರದು ಎಂದು ಒತ್ತಾಯಿಸಿದರು.

ಕಾಮಗಾರಿ ಸ್ಥಗಿತ: ನಗರದಲ್ಲಿ ಯಾವುದೇ ಕಾಮಗಾರಿ ನಡೆಯುತ್ತಿಲ್ಲ. ಈಜಿಪುರದ ಮೇಲ್ಸೇತುವೆ, ಉಲ್ಲಾಳ ಗೇಟ್‌ ಸೆಪರೇಟರ್‌, ರಾಜರಾಜೇಶ್ವರಿ ನಗರ ಜಂಕ್ಷನ್‌, ಕೆಂಗೇರಿ ಹೊರವರ್ತುಲ ರಸ್ತೆ, ಎಚ್‌ಎಂಟಿ ಪೈಪ್‌ಲೈನ್‌ ವೃತ್ತ ಮೊದಲಾದ ಕಡೆ ಕಾಮಗಾರಿ ಸ್ಥಗಿತವಾಗಿದೆ. ಸರ್ಕಾರವನ್ನು ಪ್ರಶ್ನೆ ಮಾಡಿದರೆ ಹಣವಿದೆ ಎನ್ನುತ್ತಾರೆ. ಕಾಮಗಾರಿಗೆ ಹಣವಿಲ್ಲದೆ ಎಲ್ಲವೂ ಸ್ಥಗಿತವಾಗಿದೆ. ನಿಗದಿತ ಸಮಯಕ್ಕೆ ಹಣ ನೀಡಿಲ್ಲವೆಂದು ಒಬ್ಬ ಗುತ್ತಿಗೆದಾರರು ಜಿಬಿಎಗೆ ಪತ್ರ ಬರೆದಿದ್ದಾರೆ ಎಂದರು.

ಹಿಂದೆ ಕಲ್ಯಾಣ ಕಾರ್ಯಕ್ರಮಗಳಡಿ ಬಡವರಿಗೆ ತಳ್ಳುಗಾಡಿ, ಇಸ್ತ್ರಿಪೆಟ್ಟಿಗೆ ನೀಡಲಾಗುತ್ತಿತ್ತು. ಆದರೆ ಮೂರು ವರ್ಷದಿಂದ ಯಾರಿಗೂ ಸ್ವಯಂ ಉದ್ಯೋಗಕ್ಕೆ ಪರಿಕರ ನೀಡಿಲ್ಲ. ಬೆಂಗಳೂರಿಗೆ ಬಜೆಟ್‌ನಲ್ಲಿ ಏಳೆಂಟು ಸಾವಿರ ಕೋಟಿ ರೂ. ಎಂದು ಹೇಳಿದರೂ, ಕೇವಲ 3,000 ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ಇದರಿಂದಾಗಿ ಜಿಬಿಎ ಸಂಪೂರ್ಣ ಪಾಪರ್‌ ಆಗಿದೆ. ಸಿಎಂ ಸಿದ್ದರಾಮಯ್ಯ 48,000 ಕೋಟಿ ರೂ. ಗೆ ಬಾಂಡ್‌ ತರುವುದಾಗಿ ಬಜೆಟ್‌ನಲ್ಲಿ ಹೇಳಿದ್ದಾರೆ. ಬೆಂಗಳೂರಿನ ಸಮಸ್ಯೆಗಳು ನಿವಾರಣೆಯಾಗಲು ಹೆಚ್ಚು ಅನುದಾನವನ್ನು ಸರ್ಕಾರ ನೀಡಬೇಕು. ಐದು ಪಾಲಿಕೆಗಳನ್ನು ರಚಿಸಿದರೆ ಸಾಲದು, ಹೆಚ್ಚು ಅನುದಾನ ಕೊಡಬೇಕು ಎಂದರು.

Leave a Reply