ಪ್ರೇಮವೆಂದರೆ ಅತಿಕೋಮಲತೆ ಸಂವೇದನೆಯನ್ನು ಅರಿಯುವುದು – ಗಿಬ್ರಾನ್
ಕನ್ನಡದಲ್ಲಿ ಮಹತ್ವದ ಸೃಜನಶೀಲ ಕೊಡುಗೆಗಳನ್ನ ಕೊಟ್ಟವರು ಚೇತನಾ ತೀರ್ಥಹಳ್ಳಿ. ಸಮಕಾಲೀನ ವಿದ್ಯಮಾನಗಳಿಗೆ ತೀವ್ರವಾಗಿ ತಿಳುವಳಿಕೆಯಿಂದ ಸ್ಪಂದಿಸುವ ಚೇತನಾ ರವರ ಅಭಿವ್ಯಕ್ತಿ ಕನ್ನಡಕ್ಕೆ ಬಹಳ ಮಹತ್ವದ್ದನ್ನೇ ಕೊಟ್ಟಿದೆ. ಅವರ ಬರಹಗಳನ್ನ ಅನೇಕ ಕಾರಣಗಳಿಗಾಗಿ ಓದುವ ನಾನು ಸದಾ ನನಗಿಂತ ಚಿಕ್ಕವರಿಗೆ ಸಾಹಿತ್ಯ ಲೋಕಕ್ಕೆ ಬರಬೇಕೆಂಬ ತುಡಿತ ಇರುವವರಿಗೆ ಸದಾ ಹೇಳುವುದು ಮೊದಲು ಚೇತನಾ ರ ‘ಭಾಮಿನಿ ಷಟ್ಪದಿ’ ಮತ್ತು ಶೈಲಜಾ ನಾಗರಘಟ್ಟರವರ ‘ಕಿಚ್ಚಿಲ್ಲದ ಬೇಗೆ’ ಓದಿ. ಈ ಪ್ರಾಥಮಿಕ ಪಠ್ಯಗಳನ್ನ ಓದಿ ಅಲ್ಲಿನ ಚಿಂತನೆಗಳನ್ನ ಮೊದಲು ಅರಗಿಸಿಕೊಂಡು ಸಹಿಸಿಕೊಂಡು ಅವರಿಗಿಂತಲೂ ಒಂದೇ ಒಂದು ಗುಂಜಿ ಹೆಚ್ಚಿಗೆ ತೀವ್ರವಾಗಿ ಸುಂದರವಾಗಿ ಅಥವಾ ಆ ಬರಹಗಳ ತೂಕಕ್ಕೆ ಸಮನಾಗಿ ಬರೆಯಬಹುದಾದರೆ ಅಭಿವ್ಯಕ್ತಿ ಸಬಹುದಾದರೆ ಖಂಡಿತ ಬರಹಲೋಕಕ್ಕೆ ಸ್ವಾಗತ ಎಂದೆಲ್ಲ ಹೇಳುತ್ತಿರುತ್ತೇನೆ.
ಈಗ ಚೇತನಾ ರ ‘ಲವ್’ ಪುಸ್ತಕಕ್ಕೆ ಬರೋಣ. ನಮ್ಮಲ್ಲಿ ವ್ಯವಹಾರಿಕ ಅಥವಾ ಮಾರ್ಕೆಟ್ ಓರಿಯೆಂಟೆಡ್ ಸಾಹಿತ್ಯ ವಿಪುಲವಾಗಿದೆ. ಲವ್, ಸೆಕ್ಸ್, ಕ್ರೈಮ್ ಬಗ್ಗೆ ಬರೆದು ಕೋಟಿಗಟ್ಟಲೆ ಗಳಿಸಿದವರು ಸಮಾಜದ ಆರೋಗ್ಯವನ್ನ ಹದಗೆಡಿಸಿದವರೇ ಹೆಚ್ಚು. ಆದರೆ ಚೇತನಾರ ಈ ‘ಲವ್’ ಕೃತಿ ಅಂಥ ಮಾರುಕಟ್ಟೆ ಸರಕಾಗದೆ ಎಲ್ಲ ವಯೋಮಾನದವರ ಬದುಕನ್ನ ಸಹ್ಯಗೊಳಿಸಬಹುದಾದ, ತುಂಬಾ ದಗ್ದ ಸನ್ನಿವೇಷಗಳಲ್ಲಿ ಆಪ್ತ ಸಾಂತ್ವನ ನೀಡಬಹುದಾದ ಹೇಳಿಕೊಳ್ಳಬಹುದಾದ ಹೇಳಿಕೊಳ್ಳಲಾಗದ ಸಂಕಟಗಳಿಗೆ ಸಮಾಧಾನಿಸಬಹುದಾದ ಪ್ರಾಜ್ಞ ಸಂಗಾತಿಯಂತಿದೆ.
- ಬಸವಣ್ಣನವರ ವಚನಗಳು ವಿಶ್ವವಿದ್ಯಾಲಯಗಳು ಹೇಳಿಕೊಡುವ ಪಾಠಕ್ಕಿಂತ ಕಡಿಮೆಯಲ್ಲ: ಸಾಜೀದ್ ಮುಲ್ಲಾ
- ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ಮಸೂದೆ ಅಂಗೀಕಾರವಾಗಿದೆ
- ಮಹಿಳಾ ಮೀಸಲಾತಿ ವಿಷಯದಲ್ಲಿ ಮೋದಿ ಸರ್ಕಾರದಿಂದ ಮಹಿಳೆಯರಿಗೆ ದ್ರೋಹ: ಸಿದ್ದರಾಮಯ್ಯ
- ಕಾಂಗ್ರೆಸ್ಗೆ ಮಹಿಳಾ ಮೀಸಲಾತಿ ಬೇಕಿಲ್ಲ ಎಂಬುದು ಸ್ಪಷ್ಟ: ಬಸವರಾಜ ಬೊಮ್ಮಾಯಿ
- ಸಾರ್ವಜನಿಕ ಆರೋಗ್ಯ ವ್ಯವಸ್ಥೆ ಎಷ್ಟು ಹದಗೆಟ್ಟಿದೆ ಎನ್ನುವುದಕ್ಕೆ ಕನ್ನಡಿ: ಆರ್ ಅಶೋಕ್
ಅಕ್ಷರ ಕಲಿತ ಬರಹ ಅರ್ಥಮಾಡಿಕೊಳ್ಳಬಲ್ಲ ಎಲ್ಲರೂ ಈ ಕೃತಿಯನ್ನ ಓದಬಹುದು ಮತ್ತು ಓದಬೇಕು.
ಬದುಕು ನಿಂತಿರುವುದೇ ಪ್ರೀತಿಯ ಮೇಲೆ. ಈ ಪ್ರೀತಿಯನ್ನ ಪ್ರಭಾವಿಸಬಹುದಾದ ಎಲ್ಲ ಸಂಗತಿಗಳನ್ನ ಅತ್ಯಂತ ಪ್ರಾಜ್ಞ ಮತ್ತು ಕ್ರಾಂತಿಕಾರಕ ರೀತಿಯಲ್ಲಿ ಅನೇಕ ಸತ್ಯಗಳನ್ನ ಈ ಕೃತಿ ಅನಾವರಣಗೊಳಿಸುತ್ತದೆ. ಮತ್ತು ಈ ಕೃತಿಯನ್ನ ಓದಲೂ ಕೂಡ ಒಂದು ಸಿದ್ಧತೆ ಬೇಕು. ಆ ಸಿದ್ಧತೆ ಇಲ್ಲದೇ ಹೋದರೆ ಈ ಕೃತಿಯೂ ಅನರ್ಥಕಾರಿ ಎನ್ನಿಸಬಹುದು ಮತ್ತು ರೂಢಿನಿಷ್ಠರಿಗೆ ಆಘಾತ ತರಬಹುದು.
ಮನುಷ್ಯ ಮೂಲತಃ ಒಬ್ಬಂಟಿ. ಈ ಒಬ್ಬಂಟಿಗೆ ಸವಾಲು ಸಂಕಟಗಳು ಸಾವಿರ. ಯಾರ ಮುಂದೆಯೂ ಚರ್ಚಿಲಸಾಧ್ಯ ಸಂಕಟಗಳನ್ನ ಉದ್ದೇಶಿಸಿ ಸಾಧ್ಯ ಪರಿಹಾರಗಳನ್ನೂ ಸೂಚಿಸುವುದು ಈ ಕೃತಿಯ ಹೆಗ್ಗಳಿಕೆ.
ಒಂದು ರೀತಿಯಲ್ಲಿ ಮನೋವೈಜ್ಞಾನಿಕ ಎನ್ನಿಸುವ ಮತ್ತೊಂದು ರೀತಿಯಲ್ಲಿ ವ್ಯಕ್ತಿತ್ವ ವಿಕಸನಕ್ಕೆ ಸಹಾಯಕ ಎನ್ನಿಸುವ ಇನ್ನೊಂದು ರೀತಿಯಲ್ಲಿ ಅನಾಹತನಾದವನ್ನ ಆಲಿಸಿ ನಮ್ಮೊಳಗಿನಿಂದಲೇ ಪರಿಹಾರ ಸೂಚಿಸಿ ಆಹ್ಲಾದ ನೀಡುವ ನೆಮ್ಮದಿ ಕೊಡುವ ಈ ಕೃತಿಗೆ ಕ್ಯಟಗರಿಗಳ ಗೋಜಲಿಲ್ಲ.
ಈ ಕೃತಿಯ ಪ್ರಯೋಜನ ಅಪ್ರಯೋಜನ ಯಾವುದನ್ನೂ ನಾನಿಲ್ಲ ಹೀಗೆಯೇ ಅಂತ ಹೇಳಲಾರೆ. ಆದರೆ ಈ ಕೃತಿಯ ಓದು ನಿಮ್ಮ ಬದುಕಿನ ದೃಷ್ಟಿಕೋನ ಮತ್ತು ವಿಧಾನವನ್ನು ಪ್ರಭಾವಿಸಬಲ್ಲದು.
ಚೇತನಾರು ಈ ಕೃತಿಯಲ್ಲಿ ತೋರಿರುವ ಸಂಯಮ, ಜ್ಞಾನ ಮತ್ತು ವಿವೇಕಕ್ಕೆ ಅವರ ಬದುಕಿನ ಒಟ್ಟು ಘಳಿಗೆಗಳ ಪರಿಶ್ರಮವಿದೆ. ಬದುಕಿನ ಬಹುತೇಕ ಮಗ್ಗಲುಗಳನ್ನ ಕಂಡುಂಡಿರುವ ಚೇತನಾರ ಅಂತಃಶಕ್ತಿ ಹಲವು ಬದುಕುಗಳನ್ನ ಬೆಳಗಬಲ್ಲ ತಾಕತ್ತಿನದು.
ಮೊದ ಮೊದಲು ಈ ಕೃತಿಯನ್ನ ಮತ್ತೊಂದು ಸಾಧಾರಣ ಪೇಲವದ ಮತ್ತು ರಂಜಿಸುವ ಕೃತಿಯೆಂದು ಭಾವಿಸಿ ಓದುತ್ತ ಹೋದ ನನಗೆ, ಈ ಕೃತಿಯಲ್ಲಿನ ಪ್ರಾಜ್ಞ ಚಿಂತನೆಗಳು ತಾಯ ಮಮತೆಯಂತೆ ತಂದೆಯ ಕಾಳಜಿಯಂತೆ ಗೆಳೆಯನ ಬದ್ಧತೆಯಂತೆ, ಗೆಳತಿಯ ಒಲವಿನಂತೆ, ಸಹೋದರಿಯ ಅಕ್ಕರೆಯಂತೆ ಆವರಿಸುತ್ತ ಹೋಯಿತು.
ಈ ಕೃತಿಯ ಓದು ಬದುಕಿನಲ್ಲಿ ನಾವಾಗಿಯೇ ಮಾಡಿಕೊಂಡ ಕ್ಲೇಷಗಳನ್ನ ತೊಳೆಯುತ್ತ ನಮ್ಮನ್ನ ಅಪರಾಧಿ ಸ್ಥಾನದಲ್ಲಿ ನಿಲ್ಲಿಸದೆ ಸಹಜ ಮತ್ತು ನೈಸರ್ಗಿಕ ರೀತಿಯಲ್ಲಿ ಹೇಗೆ ನಾವು ಈ ಆಳದ ದುಃಖಗಳಿಂದ ಹೊರಬರಬಹುದೆಂಬ ಅರಿವನ್ನ ಮನಗಾಣಿಸುತ್ತದೆ.
ಸಲಹೆ, ಸೂಚನೆ, ಮಾರ್ಗದರ್ಶನ ಅಥವಾ ಪಾಠಗಳಿಲ್ಲ ಇಲ್ಲಿ. ಪ್ರತಿಯೊಬ್ಬ ಓದುಗರೊಳಗಿರಬಹುದಾದ ಸಂಕಟಗಳನ್ನ ಒಳಗಿನಿಂದಲೇ ಆಲಿಸಿ ಸಂತೈಸುವ ನಮಗೆ ನಾವೇ ಹೇಳಿಕೊಳ್ಳಬಹುದಾದ ಆತ್ಯಂತಿಕ ತಿಳುವಳಿಕೆ ಇಲ್ಲಿದೆ.
ಯಾವ ಯಾವುದರ ಹಿಂದೆ ವಿನಾಕಾರಣ ಧಾವಂತದಲ್ಲಿ ಓಡುವ ನಮಗೆ ವಿರಾಮ ವಿಶ್ರಾಂತಿ ನೀಡಿ ಆಲೋಚನೆಗಳ ತಣ್ಣೀರುಣಿಸಿ ದಣಿವಾರಿಸಿ ನೆಮ್ಮದಿ ನೋಡಬಹುದಾದ ಈ ಕೃತಿಯನ್ನ ಓದಲು ನೀವು ಬಿಡುವು ಮಾಡಿಕೊಂಡರೆ ನಿಮಗೆ ಬಹಳಷ್ಟು ದಕ್ಕಬಹುದು. ಅದು ಏನು ಎಂದು ನೀವು ಓದಿದ ಮೇಲೆಯೇ ನಿಮಗೆ ತಿಳಿಯಬಹುದು.
ಈ ಕೃತಿಯ ಮುಂದುವರಿಕೆಯಾಗಿ ಚರ್ಚೆಯನ್ನೂ ಇನ್ನೂ ವಿಸ್ತರಿಸಬಹುದು. ಅದಕ್ಕ ಅವಕಾಶಗಳಂತೂ ಇದ್ದೇ ಇವೆ.
ಚೇತನಾರವರು ಎಷ್ಟೇ ಸರಳವಾಗಿ ಬರೆಯುತ್ತೇನೆಂದು ಪಟ್ಟುಹಿಡಿದರೂ ವಿಷಯ ಅಷ್ಟು ಸರಳವಾಗಿಲ್ಲ. ಹಾಗಾಗಿ ತುಂಬಾ ಸರಳವಾಗಿ ಪ್ರಾರಂಭವಾಗುವ ಈ ಕೃತಿ ತುಂಬಾ ಘನವಾದ ಆಲೋಚನೆಗಳಿಂದಲೇ ಮುಗಿಯುತ್ತದೆ, ನಮ್ಮಾಳದಲ್ಲಿ ಮುಂದುವರೆಯುತ್ತದೆ.
ಬಹಳಷ್ಟು ಸಲ ಸಾಹಿತ್ಯದ ಪರಿಕರಗಳನ್ನ ಇಟ್ಟುಕೊಂಡು ತುಂಬಾ ಮಹತ್ವಾಕಾಂಕ್ಷೆಯಿಂದ ಬರೆಯ ಹೊರಡುವ ನಾವು ಅನೇಕ ಸಲ ಸಾಮಾನ್ಯ ಓದುಗರಿಂದ ನಾವೇ ದೂರನಡೆಯುತ್ತಿರುತ್ತೇವೆ. ಆದರೆ ಈ ಕೃತಿ ಅದಕ್ಕೆ ಅಪವಾದದಂತಿದೆ.
‘ಲವ್’ ಓದಿದ ಮೇಲೆ ನಿಮಗೇನು ದಕ್ಕಿತೆಂದು ನೀವು ಹೇಳಬಹುದು ಮತ್ತು ಹೇಳದಿರಬಹುದು. ಆದರೆ ದಕ್ಕುವುದಂತೂ ನಿಜ.
– ವೀರಣ್ಣ ಮಡಿವಾಳರ, ಕವಿ




