278 ಸಿಸಿಟಿವಿ ಕ್ಯಾಮರಾಗಳ ಸಹಾಯದಿಂದ ಲಾರಿ ಕಳ್ಳನ ಬಂಧನ

3 years ago

#Lorry #thief #arrested #help #CCTV #cameras

ಬೆಂಗಳೂರು: ಚಾಮರಾಜಪೇಟೆಯಲ್ಲಿ ನಿಲ್ಲಿಸಿದ್ದ 12 ಚಕ್ರದ ಲಾರಿ ಕಳ್ಳತನ ಮಾಡಿ ಪರಾರಿಯಾಗಿದ್ದ  ಖದೀಮನನ್ನು 278 ಸಿಸಿಟಿವಿ ಕ್ಯಾಮರಾಗಳ ಸಹಾಯದಿಂದ ತಮಿಳುನಾಡಿನಲ್ಲಿ ಪತ್ತೆ ಹಚ್ಚಿ ಬಂಧಿಸುವಲ್ಲಿ ಬೆಂಗಳೂರಿನ ವಿ.ವಿ.ಪುರಂ ಪೊಲೀಸರು ಯಶಸ್ವಿಯಾಗಿದ್ದಾರೆ. ಬಂಧಿತನನ್ನು ‌ತಮಿಳುನಾಡು ಮೂಲದ ಮುತ್ತುರಾಜ್ ಎಂದು ಗುರುತಿಸಲಾಗಿದೆ ಆತನಿಂದ 1.50 ಕೋಟಿ ರೂ. ಮೌಲ್ಯದ ಮೂರು ಲಾರಿಗಳನ್ನು ಜಪ್ತಿ ಮಾಡಲಾಗಿದೆ.

ಬೆಂಗಳೂರಿನ ಹರಿಪಾಲ ಎಂಬುವವರು ತಮ್ಮ ಲಾರಿಯನ್ನು ಜ.14 ರಂದು ರಾತ್ರಿ ಚಾಮರಾಜಪೇಟೆಯ 4ನೇ ಮುಖ್ಯರಸ್ತೆಯಲ್ಲಿ ನಿಲುಗಡೆ ಮಾಡಿದ್ದರು. ವಿಶ್ರಾಂತಿಗಾಗಿ ಮನೆಗೆ ತೆರಳಿದ್ದರು. ಬೆಳಿಗ್ಗೆ ಬಂದು ನೋಡಿದಾಗ ಲಾರಿ‌‌ ಕಣ್ಮರೆಯಾಗಿತ್ತು. ಆಘಾತಗೊಂಡ ಅವರು ಪೊಲೀಸರಿಗೆ ದೂರು ನೀಡಿದರು.

ಪ್ರಕರಣ ದಾಖಲಿಸಿಕೊಂಡ ಪೊಲೀಸರು ಕಾರ್ಯಾಚರಣೆ ನಡೆಸಿ ಕೃತ್ಯ ನಡೆದ ಸ್ಥಳದ ಸುತ್ತಮುತ್ತಲಿನ ಸಿಸಿಟಿವಿ ಕ್ಯಾಮರಾ ಪರಿಶೀಲಿಸಿದ್ದಾರೆ. ಆ ವೇಳೆ ಮುತ್ತುರಾಜ್ ಲಾರಿ ಚಲಾಯಿಸಿಕೊಂಡು ಹೊಸೂರಿನತ್ತ ತೆರಳಿರುವುದು ಕಂಡುಬಂದಿತ್ತು. ಬೆಂಗಳೂರಿನಿಂದ ಚೆನ್ನೈವರೆಗೆ ಒಟ್ಟು 278 ಸಿಸಿ ಕ್ಯಾಮರಾ ಪರಿಶೀಲಿಸಿದ ಪೊಲೀಸರು, ಮುತ್ತುರಾಜ್‌ನನ್ನು ಚೆನ್ನೈನಲ್ಲಿ ಪತ್ತೆ ಮಾಡಿ ಬಂಧಿಸಿ, ಬೆಂಗಳೂರಿಗೆ ಕರೆ ತಂದಿದ್ದಾರೆ. ಆತ ಕೊಟ್ಟ ಮಾಹಿತಿ ಆಧರಿಸಿ 1.50 ಕೋಟಿ ರೂ. ಮೌಲ್ಯದ 3 ಲಾರಿಗಳನ್ನು ವಶಕ್ಕೆ ಪಡೆದಿದ್ದಾರೆ. ಇದೇ ಮೊದಲ ಬಾರಿಗೆ ಆರೋಪಿ ಸಿಕ್ಕಿಬಿದ್ದಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾನೆ.

ತಮಿಳುನಾಡಿನಿಂದ ಲಾರಿ ಕದಿಯಲೆಂದು ಬೆಂಗಳೂರಿಗೆ ಬಂದಿದ್ದ ಮುತ್ತುರಾಜ್, ಚಾಮರಾಜಪೇಟೆಯಲ್ಲಿ ನಿಲ್ಲಿಸಿದ್ದ ಲಾರಿಯನ್ನು ಗಮನಿಸಿದ್ದಾನೆ. ಅದರ ಸುತ್ತಮುತ್ತ ಯಾರೂ ಇಲ್ಲ ಎನ್ನುವುದನ್ನು ಖಚಿತಪಡಿಸಿಕೊಂಡ ಬಳಿಕ ನಕಲಿ ಕೀ ಬಳಸಿ ಲಾರಿ ಸ್ಟಾರ್ಟ್ ಮಾಡಿ ಹೊಸೂರು ಮಾರ್ಗವಾಗಿ ಚೆನ್ನೈಗೆ ತೆರಳಿದ್ದ.

ಲಾರಿಯನ್ನು ಕದ್ದೊಯ್ದ ಮುತ್ತುರಾಜ್‌ ಬಂಧನದ ನಂತರ ಪೊಲೀಸರ ಮುಂದೆ ತನ್ನ ವೃತ್ತಾಂತ ಬಿಚ್ಚಿಟ್ಟಿದ್ದಾನೆ. ಲಾರಿ ಚಾಲಕನಾಗಿ ಕೆಲಸ ಮಾಡುತ್ತಿದ್ದ ಈತ ಐಷಾರಾಮಿ ಜೀವನ ನಡೆಸಲು ಕಳ್ಳತನಕ್ಕೆ ಇಳಿದಿದ್ದ. ತಮಿಳುನಾಡಿನಲ್ಲಿರುವ ತನ್ನ ಸಹಚರರಿಗೆ ಕದ್ದ ವಾಹನಗಳನ್ನು ಹಸ್ತಾಂತರ ಮಾಡುತ್ತಿದ್ದ. ಇದರಲ್ಲಿ ಒಬ್ಬ ಸಹಚರ ಕದ್ದ ಲಾರಿಯ ಇಂಜಿನ್ ನಂಬರ್ ಮತ್ತು ಚಾಸಿಸ್ ನಂಬರ್ ಬದಲಾಯಿಸಿದರೆ, ಮತ್ತೊಬ್ಬ ದಾಖಲಾತಿ ಸಿದ್ಧಪಡಿಸಿ ಮಾರಾಟ ಮಾಡುತ್ತಿದ್ದ. ಬಂದ ದುಡ್ಡನ್ನು ಮೂವರೂ ಹಂಚಿಕೊಳ್ಳುತ್ತಿದ್ದರು.

Leave a Reply