ಜಾತಿ, ಧರ್ಮವನ್ನು ಇವುಗಳಲ್ಲಿ ಹುಡುಕಿ ಕೊಡಿ ಧರ್ಮದ ರಾಯಭಾರಿಗಳೇ

2 years ago

ಸೂರ್ಯನ ತಾಪದಲ್ಲಿ, ಅವನ ಬೆಳಕಿನ ಕಿರಣಗಳಲ್ಲಿ, ನಿಮ್ಮ ನಮ್ಮ ಜಾತಿಯ ಧರ್ಮದ ಕಿರಣಗಳನ್ನು ಹುಡುಕಿ ಕೊಡಿ, ಧರ್ಮದ ರಾಯಭಾರಿಗಳೇ

ಚಂದ್ರನ ಅಂಗಳದಲ್ಲಿ ,ಅವನ ಸೌಂದರ್ಯದಲ್ಲಿ, ಅವನ ತಂಪಿನಲ್ಲಿ ನಮ್ಮ, ನಿಮ್ಮ ಜಾತಿ ಧರ್ಮದ ಸೌಂದರ್ಯವನ್ನ ಹುಡುಕಿ ಕೊಡಿ, ಧರ್ಮದ ರಾಯಭಾರಿಗಳೇ

ಹರಿಯುವ ನೀರಿನ  ನಾದದಲ್ಲಿ, ನಮ್ಮ ನಿಮ್ಮ ಜಾತಿ ಧರ್ಮದ ಧ್ವನಿಗಳನ್ನ ಹುಡುಕಿ ಕೊಡಿ, ಧರ್ಮದ ರಾಯಭಾರಿಗಳೇ

ಬೀಸುವ ತಂಗಾಳಿಯಲ್ಲಿ, ಕೋಗಿಲೆಯ ಇಂಪಿನಲ್ಲಿ, ನಮ್ಮ ನಿಮ್ಮ ಜಾತಿ ಧರ್ಮಗಳನ್ನು ಹುಡುಕಿ ಕೊಡಿ, ಧರ್ಮದ ರಾಯಭಾರಿಗಳೇ

ಬೆಟ್ಟಗುಡ್ಡ, ಸಮುದ್ರ, ಪ್ರಕೃತಿಯ ಸೌಂದರ್ಯದಲ್ಲಿ ನಮ್ಮ ನಿಮ್ಮ ಜಾತಿ ಧರ್ಮದ ಕುರುಹುಗಳೆನಾದರೂ ಇದೆಯೇ ಹುಡುಕಿ ಕೊಡಿ ಧರ್ಮದ ರಾಯಭಾರಿಗಳೇ ,

ಪುಟ್ಟ ಮಕ್ಕಳ ಮುಗ್ಧ ನಗುವಿನಲ್ಲಿ, ಅವರ ತೊದಲು ಮಾತಿನಲ್ಲಿ, ಅವರ ತುಂಟಾಟದಲ್ಲಿ, ಎಲ್ಲಿಯಾದರೂ ಕಾಣಬಹುದೇ ಹುಡುಕಿಕೊಡಿ, ನಮ್ಮ ನಿಮ್ಮ ಜಾತಿ ಧರ್ಮಗಳ ಭಿನ್ನತೆಯನ್ನು ಧರ್ಮದ ರಾಯಭಾರಿಗಳೇ

ರಸ್ತೆಗಳನ್ನು ನಿರ್ಮಿಸುವ ಕಾರ್ಮಿಕರ ಬೆವರಿನಲ್ಲಿ, ಮನೆ ಮನೆಗೆ ನೀರು ನೀರು, ತಂದುಕೊಡಲು ದುಡಿಯುವ ಶ್ರಮಿಕನ ಬೆವರಿನಲ್ಲಿ ಮನೆ ಮನೆಗೆ, ರಸ್ತೆ ರಸ್ತೆಗೆ, ಬೆಳಕಿನ ದೀಪಗಳು ಹಾಕಲು ಕಂಬಗಳ ಹತ್ತಿ ದುಡಿಯುವ ಆ ದುಡಿಯುವ ಜನರ ಶ್ರಮದಲ್ಲಿ ಎಲ್ಲಿಯಾದರೂ ಕಂಡಿದ್ದೀರಾ, ಅವರ ಬೆವರಿನ ವಾಸನೆಯಲ್ಲಿ ನಮ್ಮ ನಿಮ್ಮ ಜಾತಿ ಧರ್ಮವನ್ನು ಹುಡುಕಿ ಕೊಡಿ, ಧರ್ಮದ ರಾಯಭಾರಿಗಳೇ

ತಿನ್ನುವ ಅನ್ನದಲ್ಲಿ, ಧರಿಸಿರುವ ಬಟ್ಟೆಯಲ್ಲಿ, ಸೇವಿಸುವ ಔಷಧಿಗಳಲ್ಲಿ, ಸಂಚರಿಸುವ ವಾಹನಗಳಲ್ಲಿ, ಕುಡಿಯುವ ನೀರಿನಲ್ಲಿ, ಜೇಬು ತುಂಬಿಸಿಕೊಳ್ಳುವ ನೋಟಿನಲ್ಲಿ, ಹುಡುಕಿ ಕೊಡಿ ನಮ್ಮ ನಿಮ್ಮ ಜಾತಿ ಧರ್ಮದ ಲಾಂಛನಗಳನ್ನು ಧರ್ಮದ ರಾಯಭಾರಿಗಳೇ

– ಕೆ ಎಸ್ ನಾಗರಾಜ್, ಬೆಂಗಳೂರು

One Response

Leave a Reply