ಮೈಸೂರು: ಚಾಮರಾಜನಗರದಿಂದ ಮೈಸೂರಿಗೆ ಬರುತ್ತಿದ್ದ ಎಕ್ಸ್ಪ್ರೆಸ್ ರೈಲು ಗಾಡಿ ಸಂ. 06275ರ ಲೋಕೋ ಪೈಲಟ್ ನಂಜನಗೂಡು ಮತ್ತು ಕಡಕೋಳ ರೈಲ್ವೆ ನಿಲ್ದಾಣಗಳ ನಡುವಿನ ಹಳಿಯಲ್ಲಿ ಸಂಭಾವ್ಯ ಅನಾಹುತವನ್ನು ತಪ್ಪಿಸುವಲ್ಲಿ ಯಶಸ್ವಿಯಾಗಿದ್ದಾರೆ.
ರೈಲ್ವೆ ಇಂಜಿನ್ ಚಾಲಕನ ಸಮಯೋಚಿತ ನಿರ್ಧಾರದಿಂದಾಗಿ ನೂರಾರು ಪ್ರಯಾಣಿಕರ ಜೀವ ಉಳಿದಿದೆ. ದುರುದ್ದೇಶಪೂರಿತ ರೈಲು ಅವಘಡದ ಪ್ರಯತ್ನವನ್ನು ಅವರು ವಿಫಲಗೊಳಿಸಿದ್ದಾರೆ ಎಂದು ರೈಲ್ವೆ ಎಸ್ ಪಿ ಡಾ.ಸೌಮ್ಯಲತಾ ಸಂಸತ ವ್ಯಕ್ತಪಡಿಸಿದ್ದಾರೆ.
ಘಟನೆ ಸಂಬಂಧ ಒಡಿಶಾ ಮೂಲದ ಸೋಮಯ್ ಮರಾಂಡಿ (22), ಭಜನು ಮುರ್ಮು ಮತ್ತು ದಸಮತ್ ಮರಾಂಡಿ ಹೆಸರಿನ 3 ಆರೋಪಿಗಳನ್ನು ರೈಲ್ವೆ ಸಂರಕ್ಷಣಾ ಪಡೆ ಮತ್ತು ಸರ್ಕಾರಿ ರೈಲ್ವೆ ಪೊಲೀಸರು ಬಂಧಿಸಿ ಮುಂದಿನ ವಿಚಾರಣೆ ಆರಂಭಿಸಿದ್ದಾರೆ.
ಬಂಧಿತರು ಉದ್ದೇಶಪೂರ್ವಕವಾಗಿ ಕಿಲೋ ಮೀಟರ್ ನಂ. 19/200-300 ರಲ್ಲಿ ಹಳಿಗಳ ಮೇಲೆ ಕಬ್ಬಿಣದ ಸ್ಲೀಪರ್ ಮತ್ತು ಮರದ ದಿಮ್ಮಿಗಳನ್ನು ಇಟ್ಟಿದ್ದರು. ಇದರಿಂದ ರೈಲು ಗಾಡಿ ಸಂ. 06275 ಅನ್ನು ತುರ್ತಾಗಿ ನಿಲ್ಲಿಸಬೇಕಾದ ಪರಿಸ್ಥಿತಿ ನಿರ್ಮಾಣವಾಯಿತು.
ಈ ಕುರಿತು ಮಾಹಿತಿಯನ್ನು ಪಡೆದ ಮೈಸೂರಿನ ರೈಲ್ವೆ ಸಂರಕ್ಷಣಾ ದಳದ ಸಹಾಯಕ ರಕ್ಷಣಾ ಆಯುಕ್ತ ಎಂ.ಎನ್.ಎ.ಖಾನ್, ಪೋಸ್ಟ್ ಕಮಾಂಡರ್ ಆದ ಕೆ.ವಿ.ವೆಂಕಟೇಶ ಮತ್ತು ತಂಡ, ಆರ್ಪಿಎಫ್ ನ ಶ್ವಾನದಳ ಘಟನಾ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿತು. ಒಡಿಶಾದ ಮಯೂರ್ ಬಂಜ್ ನ ಬಂಗಿರಿಪೋಸಿದ ಜಲ್ದಿಹಾ ಮೂಲದ ಸೋಮಯ್ ಮರಾಂಡಿ ಎಂಬಾತ ಸ್ಥಳದಲ್ಲಿ ಪತ್ತೆಯಾದ. ಆತನನ್ನು ವಶಕ್ಕೆ ಪಡೆದು, ವಿಚಾರಣೆ ನಡೆಸಿದಾಗ, ಸಹಚರರೊಂದಿಗೆ ಕೃತ್ಯ ಎಸಗಿರುವುದಾಗಿ ಒಪ್ಪಿಕೊಂಡಿದ್ದಾನೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಆರೋಪಿಗಳನ್ನು ಹೆಚ್ಚಿನ ತನಿಖೆಗಾಗಿ ಮೈಸೂರಿನ ಸರ್ಕಾರಿ ರೈಲ್ವೆ ಪೊಲೀಸರಿಗೆ ಹಸ್ತಾಂತರಿಸಲಾಗಿದೆ. ನ.13, 2023 ರಂದು ರೈಲ್ವೆ ಕಾಯಿದೆ-1989 ರ ಅನ್ವಯ 150(1)(ಎ) ಅಡಿಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ. ತನಿಖೆಯು ನಡೆಯುತ್ತಿದ್ದು, ಜೀವಾವಧಿವರೆಗಿನ ಶಿಕ್ಷೆಗೆ ಗುರಿಯಾಗುವ ಸಾಧ್ಯತೆಯಿದೆ.
ಘಟನೆಯಿಂದಾಗಿ ರೈಲು ಸಂಖ್ಯೆ 06275 ಅನ್ನು ಸ್ವಲ್ಪ ಸಮಯದವರೆಗೆ – 18.39 ರಿಂದ 18.45 ಗಂಟೆಗಳವರೆಗೆ – ತಡೆಹಿಡಿಯಲಾಯಿತು. ಮೈಸೂರಿನ ವಿಭಾಗೀಯ ರೈಲ್ವೆ ವ್ಯವಸ್ಥಾಪಕರಾದ ಶಿಲ್ಪಿ ಅಗರ್ವಾಲ್ ಅವರು ಲೋಕೋಪೈಲಟ್ ಅವರ ಸಮಯೋಚಿತ ಕ್ರಮ ಮತ್ತು ಭದ್ರತಾ ಪಡೆಗಳ ತ್ವರಿತ ಕಾರ್ಯಾಚರಣೆ ಬಗ್ಗೆ ಶ್ಲಾಘಿಸಿ, ಪ್ರಯಾಣಿಕರ ಸುರಕ್ಷತೆ ಮತ್ತು ಯೋಗಕ್ಷೇಮವನ್ನು ವಿಚಾರಿಸಿಕೊಂಡು ಕೃತಜ್ಞತೆಯನ್ನು ಸಲ್ಲಿಸಿದ್ದಾರೆ.
ಹಳಿಗಳ ಮೇಲೆ ಇಂತಹ ಕೃತ್ಯದಲ್ಲಿ ತೊಡಗಿ ಪ್ರಯಾಣಿಕರಿಗೆ ದೊಡ್ಡ ಆಪತ್ತು ತರುವ ಮತ್ತು ಜೀವಹಾನಿ ಉಂಟುಮಾಡುವ ಚಟುವಟಿಕೆಗಳಲ್ಲಿ ಪಾಲ್ಗೊಳ್ಳದಂತೆ ಸಾರ್ವಜನಿಕರಿಗೆ ಎಚ್ಚರಿಕೆ ನೀಡಲಾಗಿದೆ. ಅಂತಹ ಚಟುವಟಿಕೆಗಳಲ್ಲಿ ಯಾರಾದರೂ ತಪ್ಪಿತಸ್ಥರೆಂದು ಕಂಡುಬಂದರೆ ಅವರ ವಿರುದ್ಧ ರೈಲ್ವೆ ಆಡಳಿತ ಅತ್ಯಂತ ಕಠಿಣ ಕ್ರಮ ತೆಗೆದುಕೊಳ್ಳುತ್ತದೆ ಎಂದು ಎಚ್ಚರಿಕೆಯನ್ನು ನೀಡಲಾಗಿದೆ.




